ಬೆಳ್ತಂಗಡಿ: ಬಸದಿಗಳ ಜೀರ್ಣೋದ್ದಾರ ಕಾರ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಬಸದಿಯನ್ನು ಶ್ರಾವಕರು ಶುಚಿಯಾಗಿಟ್ಟರೆ ಸಾನಿಧ್ಯ ಸ್ಥಿರವಾಗಿರುತ್ತದೆ. ಇದರಿಂದ, ಹಿಂದಿನ ಕಾಲದ ಪರಂಪರೆಯನ್ನುಕಾಣಲು ಸಾಧ್ಯ ಎಂದು ಎಸ್ಸಿಡಿಸಿಸಿ ಬ್ಯಾಂಕ್ ಇದರ ಅಧ್ಯಕ್ಷರಾದ ಡಾ. ಎಂ. ಎನ್.ರಾಜೇಂದ್ರಕುಮಾರ್ ಹೇಳಿದರು.
ಅವರು ಶುಕ್ರವಾರ ರಾತ್ರಿ ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಹೊಸಮೊಗ್ರು ಬಿದ್ದುಕಲ್ಲು ಬಸದಿ ಭಗವಾನ್ ೧೦೦೮ ಶ್ರೀ ಆದಿನಾಥ ಸ್ವಾಮಿ ಜನಚೈತನ್ಯಾಲಯದ ಧಾಮ ಸಂಪ್ರೋಕ್ಷಣೆ ಮತ್ತು ಪ್ರತಿಷ್ಠಾ ಮಹೋತ್ಸವದ ಮೊದಲ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಬಸದಿಗಳನ್ನು ನಿರ್ಮಿಸುವುದನ್ನು ಕಲ್ಪಿಸಿಕೊಂಡರೆ ಇಂದಿನ ದಿನಗಳಲ್ಲಿ ಬಸದಿಗಳನ್ನು ಕಷ್ಟದ ಕೆಲಸವಲ್ಲ. ಒಂದು ಬಸದಿಯ ಜೀರ್ಣೋದ್ಧಾರ ಮಾಡಿದರೆ ೧೦೦ ಹೊಸ ಬಸದಿಗಳನ್ನು ನಿರ್ಮಿಸಿದ ಪುಣ್ಯವಿದೆ. ಸಮಾಜದ ಎಲ್ಲಾ ಧರ್ಮೀಯರನ್ನು ಒಂದುಗೂಡಿಸಿಕೊಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಮೇಲಕ್ಕೆತ್ತುವ ಧರ್ಮವೊಂದಿದ್ದರೆ ಅದು ಜೈನ ಧರ್ಮ ಎನ್ನುವುದು ಗಮನಾರ್ಹ ಎಂದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಭಾರತ ಭೂಷಣ ಸ್ವಸ್ತಿ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಜೈನಮಠ, ಮೂಡಬಿದಿರೆ ಇವರು ಆಶೀರ್ವಚನ ನೀಡಿದರು. ಅವರು ಭವಿಷ್ಯವು ಉತ್ತಮವಾಗಿರಬೇಕಾದರೆ ಮುಂದಿನ ತಲೆಮಾರುಗಳಾದ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ನೀಡಿ ಅವರನ್ನು ಬೆಳೆಸಬೇಕೆಂದು ನುಡಿದರು.
ಅಹಿಂಸೆ ಎಂಬ ಶಬ್ದವು ಎಲ್ಲಾ ಧರ್ಮದಲ್ಲಿಯು ಅಡಕವಾಗಿದೆ. ಆದರೆ ಜೈನಧರ್ಮದಲ್ಲಿ ಮಾತ್ರ ಅದರ ವ್ಯಾಪ್ತಿ ತುಂಬಾ ವಿಸ್ತಾರವಾಗಿದೆ. ಮನೆಗಳಲ್ಲಿ ದಿನನಿತ್ಯದ ಕರ್ಮಗಳನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ನಿರ್ವಹಿಸಿದರೆ ಅದನ್ನು ತಮ್ಮ ಮಕ್ಕಳು ನೋಡಿ ಅನುಸರಿಸುತ್ತಾರೆ. ಅದಕ್ಕಾಗಿ ನಾವು ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡರೆ ತಮ್ಮ ಮಕ್ಕಳು ಕೂಡ ಅದನ್ನು ಅನುಕರಣೆಯ ಮೂಲಕ ಕಲಿತು ಉತ್ತಮ ಸಂಸ್ಕಾರಯುತರನ್ನಾಗಿ ರೂಪಿಸಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ರತ್ನತ್ರಯ ಜೈನತೀರ್ಥ ಬೆಳ್ತಂಗಡಿ ಇದರ ಆನುವಂಶಿಕ ಆಡಳಿತ ಮೊಕ್ತೇಸರರಾದ ಕೆ.ಜಯವರ್ಮರಾಜ ಬಳ್ಳಾಲ್, ನಿವೃತ್ತ ಮುಖ್ಯೋಪಾಧ್ಯಾಯ ರಘುನಾಥ ರೈ ಭಾಗವಹಿಸಿದ್ದರು. ವೇದಿಕೆಯಲ್ಲಿ ಜಯರಾಜ ಪುತ್ತಿಲ, ಪ್ರಶಾಂತ್ ಬಾರ್ಯ, ನಾಭಿರಾಜ್ ಜೈನ್ ಉಪಸ್ಥಿತರಿದ್ದರು.
ಧವಳಾ ಕಾಲೇಜು ಮೂಡಬಿದಿರೆ ಇದರ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಸುದರ್ಶನ್ ಕುಮಾರ್ ಇಂದ್ರ ಪಾದೂರು, ಪ್ರೋ.ವೃಷಭರಾಜ ಜೈನ್ ಉಪನ್ಯಾಸ ನೀಡಿದರು. ಇವರು ಧಾರ್ಮಿಕ ಉಪನ್ಯಾಸಗಳನ್ನು ನೀಡುವ ಮೂಲಕ ಜೈನ ಧರ್ಮದ ವಾಸ್ತವಿಕ ವಿಚಾರಗಳ ಬಗ್ಗೆ ವಿವರಣೆ ನೀಡಿದರು.
’ನೃತ್ಯೋಪಾಸನಂ’ ನಾಟ್ಯ ನಿಲಯಂ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯ ವೃಂದದವರಿಂದ ನೃತ್ಯ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಪ್ರಮೋದ್ ಕುಮಾರ್ ಸ್ವಾಗತಿಸಿದರು, ಕಾರ್ಯಕ್ರಮ ನಿರೂಪಣೆಯನ್ನು ಅಜಿತ್ಕುಮಾರ್, ಧನ್ಯವಾದವನ್ನು ರಾಜೇಶ್ ಮಂಗಳೂರು ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.