
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅನೇಕ ಅಮರ ವೀರರು ತಮ್ಮ ಧೈರ್ಯ, ತ್ಯಾಗ ಮತ್ತು ಅಚಲ ನಿಷ್ಠೆಯಿಂದ ದೇಶದ ಹೆಮ್ಮೆಯಾಗಿದ್ದಾರೆ. ಅಂತಹವರಲ್ಲಿ ಒಬ್ಬರು ಮಹಾರಾಣಾ ಭಕ್ತಾವರ್ ಸಿಂಗ್. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಅಮ್ಜೆರಾ ರಾಜ್ಯದ ರಾಜ. ಇಂದಿನ ಉಜ್ಜಯಿನಿ, ಇಂದೋರ್ ಸುತ್ತಮುತ್ತಲ 200 ಚ.ಕಿ.ಮೀ. ವಿಸ್ತೀರ್ಣದ ಮಾಲ್ವಾ ಪ್ರದೇಶದಲ್ಲಿ ಆಡಳಿತ ನಡೆಸಿದ ಅವರು 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ನಡುಗಿಸಿದವರು. ಕೇವಲ 34 ವರ್ಷ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಈ ವೀರನ ಕಥೆ ಧೈರ್ಯದ ಪ್ರತೀಕವಾಗಿದೆ.
ಕ್ರಿ.ಶ. 1824ರ ಡಿಸೆಂಬರ್ 14ರಂದು ಅಮ್ಜೆರಾದಲ್ಲಿ ರಾವ್ ಅಜಿತ್ ಸಿಂಗ್ರವರ ಪುತ್ರನಾಗಿ ಜನಿಸಿದ ಭಕ್ತಾವರ್ ಸಿಂಗ್ 1854ರಲ್ಲಿ ಅಮ್ಜೆರಾ ರಾಜ್ಯದ ಆಡಳಿತವನ್ನು ವಹಿಸಿಕೊಂಡರು. ರಜಪೂತ ಸಂಪ್ರದಾಯದಲ್ಲಿ ಬೆಳೆದ ಅವರು ಬ್ರಿಟಿಷ್ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದರು. ಇತರ ಅನೇಕ ರಾಜರು ಬ್ರಿಟಿಷರೊಂದಿಗೆ ಸಹಕರಿಸುವುದು ಉತ್ತಮ ಎಂದು ಭಾವಿಸಿದಾಗಲೂ, ಭಕ್ತಾವರ್ ಸಿಂಗ್ ಧೈರ್ಯದಿಂದ ಎದ್ದು ನಿಂತಿದ್ದರು.1857ರ ಸಂಗ್ರಾಮದಲ್ಲಿ ಅಮರ ಹೋರಾಟ ನಡೆಸಿದರು.
1857ರ ಮೇ-ಜೂನ್ನಲ್ಲಿ ಸಿಪಾಯಿ ದಂಗೆ ಆರಂಭವಾದ ನಂತರ, ಮಧ್ಯಪ್ರದೇಶದಲ್ಲಿ ಅಮ್ಜೆರಾ ಒಂದು ಪ್ರಮುಖ ಕೇಂದ್ರವಾಯಿತು. ಜುಲೈ 3, 1857ರಂದು ಭೋಪವರ್ ಕಂಟೋನ್ಮೆಂಟ್ ಮೇಲೆ ದಾಳಿ ನಡೆಸಿ ಬ್ರಿಟಿಷ್ ಧ್ವಜವನ್ನು ಭಕ್ತಾವರ್ ನೇತೃತ್ವದಲ್ಲಿ ಕೆಳಗಿಳಿಸಲಾಗಿತ್ತು. ಕ್ಯಾಪ್ಟನ್ ಹಚಿನ್ಸನ್ ಭಯಭೀತನಾಗಿ ತನ್ನ ಕುಟುಂಬದೊಂದಿಗೆ ಝಾಬುವಾ ಕಡೆಗೆ ಓಡಿದನು.
ಆಗಸ್ಟ್ 1857 ರಂದು ಇಂದೋರ್ನ ರಾಜ ತುಕೋಜಿರಾವ್ ಹೋಳ್ಕರ್ ಸಹಾಯದಿಂದ ಬ್ರಿಟಿಷರು ಭೋಪವರ್ ಮರಳಿ ವಶಪಡಿಸಿಕೊಂಡರು.
ಅಕ್ಟೋಬರ್ 10, 1857 ರಂದು ಮೂರು ಗಂಟೆಗಳ ಭೀಕರ ಯುದ್ಧದ ನಂತರ ಭಕ್ತಾವರ್ ಸಿಂಗ್ ಮತ್ತೊಮ್ಮೆ ಭೋಪವರ್ ಅನ್ನು ಗೆದ್ದರು.
ಅಕ್ಟೋಬರ್ 16, 1857 ರಂದು ಮನ್ಪುರ್-ಗುಜ್ರಿ ಕಂಟೋನ್ಮೆಂಟ್ ಮೇಲೆ ದಾಳಿ ನಡೆಸಿ ಬ್ರಿಟಿಷ್ ಸೈನಿಕರನ್ನು ಸೋಲಿಸಿದರು. ಇದಲ್ಲದೆ ಮಂಡ್ಲೇಶ್ವರ್ ಮತ್ತು ಇತರ ಬ್ರಿಟಿಷ್ ಗ್ಯಾರಿಸನ್ಗಳ ಮೇಲೂ ಯಶಸ್ವಿ ದಾಳಿಗಳು ನಡೆದವು.
ಭಕ್ತಾವರ್ ಸಿಂಗ್ರ ಚಟುವಟಿಕೆಗಳು ಬ್ರಿಟಿಷರಿಗೆ ದೊಡ್ಡ ಬೆದರಿಕೆಯಾದವು. ಅಕ್ಟೋಬರ್ 31, 1857ರಂದು ದೊಡ್ಡ ಸೈನ್ಯದೊಂದಿಗೆ ಧಾರ್ ಕೋಟೆ ಮೇಲೆ ದಾಳಿ ಮಾಡಿದರು. ಆದರೆ ನೇರ ಯುದ್ಧದಲ್ಲಿ ಗೆಲ್ಲಲಾಗದ ಬ್ರಿಟಿಷರು ‘ಒಡೆದು ಆಳುವ’ ನೀತಿಯನ್ನು ಅನುಸರಿಸಿದರು.
ನವೆಂಬರ್ 11, 1857ರಂದು ಅಮ್ಜೆರಾ ರಾಜ್ಯದ ಕೆಲವು ಭೂಮಾಲೀಕರಿಗೆ ಲಂಚ ನೀಡಿ ದ್ರೋಹ ಮಾಡಿಸಿದ ಬ್ರಿಟಿಷರು ಸುಳ್ಳು ಶಾಂತಿ ಮಾತುಕತೆಗಳಿಗೆ ಭಕ್ತಾವರ್ ಸಿಂಗ್ರನ್ನು ಬರುವಂತೆ ಮಾಡಿದರು. ನಿಷ್ಠಾವಂತ ಅನುಯಾಯಿಗಳ ಸಲಹೆಯನ್ನು ಕಿವಿಗೆ ಹಾಕದೆ ಧಾರ್ಗೆ ಹೊರಟ ಅವರನ್ನು ಹೈದರಾಬಾದ್ ಅಶ್ವಸೈನಿಕರು ತಡೆದು ಬಂಧಿಸಿದರು. ರಾಘೋಗಢದ ಠಾಕೂರ್ ದೌಲತ್ ಸಿಂಗ್ ಮಾವ್ ಕಂಟೋನ್ಮೆಂಟ್ ಮೇಲೆ ದಾಳಿ ಮಾಡಿ ಮುಕ್ತಗೊಳಿಸಲು ಪ್ರಯತ್ನಿಸಿದರೂ ವಿಫಲರಾದರು. ನಂತರ ಇಂದೋರ್ಗೆ ಅವರನ್ನು ಕರೆದೊಯ್ಯಲಾಯಿತು.
ಡಿಸೆಂಬರ್ 21, 1857ರಂದು ಇಂದೋರ್ ರೆಸಿಡೆನ್ಸಿಯಲ್ಲಿ ವಿಚಾರಣೆ ನಡೆಯಿತು. ಬ್ರಿಟಿಷ್ ಸರ್ಕಾರವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಅವರು ಯಾವುದೇ ರಕ್ಷಣೆಯನ್ನೂ ಕೇಳಲಿಲ್ಲ.ಅವರ ಸಹಚರರಾದ ಕಾಮದಾರ್ ಗುಲಾಬ್ರಾಜ್ ಪಟ್ವಾರಿ, ಮೋಹನ್ ಲಾಲ್ ಠಾಕೂರ್, ಭವಾನಿ ಸಿಂಗ್ ಸಂಧ್ಲಾ ಮುಂತಾದವರನ್ನು ಅವರ ಮುಂದೆಯೇ ಗಲ್ಲಿಗೇರಿಸಲಾಯಿತು. ಆದರೂ ಭಕ್ತಾವರ್ ಸಿಂಗ್ ಧೈರ್ಯದಿಂದ ನಿಂತರು.
ಫೆಬ್ರವರಿ 10, 1858ರಂದು ಇಂದೋರ್ನ MTH ಕಾಂಪೌಂಡ್ನಲ್ಲಿ (ಇಂದಿನ ಮಹಾರಾಜ ಯಶವಂತರಾವ್ ಆಸ್ಪತ್ರೆ ಸಮೀಪ) ಗಲ್ಲಿಗೇರಿಸಲು ಅವರನ್ನು ತರಲಾಯಿತು. ಮೊದಲ ಪ್ರಯತ್ನದಲ್ಲಿ ಹಗ್ಗ ಮುರಿದುಹೋಯಿತು – ಅವರ ದೇಹದ ತೂಕದಿಂದಾಗಿ! ನಿಯಮಗಳ ಪ್ರಕಾರ ಶಿಕ್ಷೆ ಸ್ಥಗಿತಗೊಳಿಸಬೇಕಿತ್ತು. ಆದರೆ ಭಕ್ತಾವರ್ ಸಿಂಗ್ರ ಭಯದಿಂದ ಬ್ರಿಟಿಷರು ತಮ್ಮದೇ ಕಾನೂನುಗಳನ್ನು ಬದಲಾಯಿಸಿ ಎರಡನೇ ಬಾರಿ ಅವರನ್ನು ಗಲ್ಲಿಗೇರಿಸಿದರು. ಕೇವಲ 34 ವರ್ಷ ವಯಸ್ಸಿನಲ್ಲಿ ದೇಶಕ್ಕಾಗಿ ಭಕ್ತಾವರ್ ಪ್ರಾಣಾರ್ಪಣೆ ಮಾಡಿದರು.
ಸ್ವಾತಂತ್ರ್ಯದ ನಂತರ ಧಾರ್ನಲ್ಲಿ ಅವರ ಪ್ರತಿಮೆ ಸ್ಥಾಪಿಸಲಾಯಿತು. ಅಮ್ಜೆರಾದಲ್ಲಿ ಪ್ರತಿ ವರ್ಷ ಫೆಬ್ರವರಿ 10ರಂದು ಶಹೀದ್ ದಿನಾಚರಣೆ ನಡೆಯುತ್ತದೆ. ಭಕ್ತಾವರ್ ಸಿಂಗ್ರ ಹೋರಾಟವು ಮಧ್ಯಪ್ರದೇಶದ 1857ರ ಸಂಗ್ರಾಮದ ಪ್ರಮುಖ ಅಧ್ಯಾಯವಾಗಿದೆ – ಅಮ್ಜೆರಾ, ಧಾರ್, ಭೋಪವರ್, ಮನ್ಪುರ್ಗಳಲ್ಲಿ ಬ್ರಿಟಿಷರನ್ನು ಸೋಲಿಸಿ ಭಕ್ತಾವರ್ ಸ್ವಾಭಿಮಾನದ ಜ್ಯೋತಿಯನ್ನು ಬೆಳಗಿದರು. ಈ ವೀರನ ಕಥೆ ನಮಗೆ ಧೈರ್ಯ ಇದ್ದರೆ ʼಒಬ್ಬ ವ್ಯಕ್ತಿಯೂ ಸಾಮ್ರಾಜ್ಯವನ್ನೇ ನಡುಗಿಸಬಲ್ಲʼ ಎಂಬುದನ್ನು ಸಾರಿ ಹೇಳುತ್ತದೆ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


