
19ನೇ ಶತಮಾನದ ಮಧ್ಯಭಾಗದಲ್ಲಿ, ಭಾರತದ ಈಶಾನ್ಯದ ದಟ್ಟ ಅರಣ್ಯಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಸೈನ್ಯವನ್ನು ವಿಸ್ತರಿಸಲು ಪ್ರಯತ್ನಿಸುತ್ತಿತ್ತು. ಅಸ್ಸಾಂ ಮತ್ತು ಮಣಿಪುರವನ್ನು ಆಕ್ರಮಿಸಿಕೊಂಡ ನಂತರ, ಬ್ರಿಟಿಷರು ರಸ್ತೆಗಳನ್ನು ನಿರ್ಮಿಸಲು ಮತ್ತು ಚಹಾ ತೋಟಗಳ ವ್ಯಾಪಾರಕ್ಕಾಗಿ ನಾಗಾ ಬೆಟ್ಟಗಳನ್ನು ಪ್ರವೇಶಿಸಿದ್ದರು. ಆದರೆ ನಾಗಾ ಜನಾಂಗದವರು – ವಿಶೇಷವಾಗಿ ಈಗಿನ ಚಖೆಸಾಂಗ್ (ಈಸ್ಟರ್ನ್ ಅಂಗಾಮಿ) ಗುಂಪಿನವರು – ತಮ್ಮ ಸ್ವಾತಂತ್ರ್ಯ ಮತ್ತು ಭೂಮಿಯನ್ನು ರಕ್ಷಿಸಲು ಪಣತೊಟ್ಟು ಬ್ರಿಟಿಷರೊಂದಿಗೆ ಕಾದಾಟಕ್ಕಿಳಿದರು.
ಈ ಕಾದಾಟದಲ್ಲಿ ಅತ್ಯಂತ ರಕ್ತಪಾತದ ಮತ್ತು ಐತಿಹಾಸಿಕ ಘಟನೆಯಾಗಿ ಕಿಕ್ರುಮಾ ಯುದ್ಧ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದು 1851ರ ಫೆಬ್ರವರಿ 11 ಮತ್ತು 12ರ ನಡುವೆ ನಡೆದ ಘಟನೆ. ಇಂದಿನ ನಾಗಾಲ್ಯಾಂಡ್ನ ಪ್ಹೆಕ್ ಜಿಲ್ಲೆಯಲ್ಲಿರುವ ಕಿಕ್ರುಮಾ ಹಳ್ಳಿಯ ಯೋಧರು ಬ್ರಿಟಿಷ್ ಸೈನ್ಯಕ್ಕೆ ನೇರ ಸವಾಲು ಹಾಕಿ ತೊಡೆತಟ್ಟಿ ಯುದ್ಧ ಸನ್ನದ್ಧರಾಗಿ ನಿಂತಿದ್ದರು.
ಕಿಕ್ರುಮಾ ಹಳ್ಳಿ ಆಗ ಶಕ್ತಿಶಾಲಿಯಾಗಿದ್ದರೂ ಭಯಭೀತವಾಗಿತ್ತು . ಆ ಹಳ್ಳಿಯಲ್ಲಿ ಸುಮಾರು 1,000 ಮನೆಗಳು ಮತ್ತು 2,000ಕ್ಕೂ ಹೆಚ್ಚು ಯೋಧರಿದ್ದರು ಎಂದು ಬ್ರಿಟಿಷ್ ದಾಖಲೆಗಳು ತಿಳಿಸುತ್ತವೆ. ನೆರೆಹೊರೆಯ ಹಳ್ಳಿಗಳ ಮೇಲೂ ಕಿಕ್ರುಮಾ ಪ್ರಭಾವ ಬೀರಿತ್ತು. ಅಧಿಕಾರ ಚಲಾಯಿಸಿತ್ತು. ಹೀಗಾಗಿಯೇ ಅನೇಕ ಹಳ್ಳಿಗಳು ಕಿಕ್ರುಮಾ ಜನರ ವಿರುದ್ಧ ದ್ವೇಷ ಭಾವ ಹೊಂದಿದ್ದವು.
1850ರ ದಶಕದಲ್ಲಿ ಬ್ರಿಟಿಷರು ಮೆಜೋಮಾ ಹಳ್ಳಿಯನ್ನು ಆಕ್ರಮಿಸಿಕೊಂಡ ಸುದ್ದಿ ಎಲ್ಲೆಡೆ ತಲುಪಿತ್ತು. ಇದು ಕಿಕ್ರುಮಾದವರನ್ನು ಕೆಣಕಿತ್ತು. ಹೀಗಾಗಿ ಇವರು ನೇರವಾಗಿ ಬ್ರಿಟಿಷರಿಗೆ ಸಂದೇಶ ಕಳುಹಿಸಿದರು: “ಬ್ರಿಟಿಷ್ ಸಿಪಾಯಿಗಳೇ ಏಕೆ ಬಂದು ನೀವು ನಮ್ಮೊಂದಿಗೆ ಹೋರಾಡುವುದಿಲ್ಲ?” ಇದು ನೇರ ಸವಾಲಾಗಿತ್ತು. ಸವಾಲು ಸ್ವೀಕರಿಸಿದ್ದ ಬ್ರಿಟಿಷ್ ಅಧಿಕಾರಿಗಳಾದ ಕ್ಯಾಪ್ಟನ್ ರೀಡ್ ಮತ್ತು ಲೆಫ್ಟಿನೆಂಟ್ ವಿನ್ಸೆಂಟ್ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯ – 1ನೇ ಮತ್ತು 2ನೇ ಅಸ್ಸಾಂ ಲೈಟ್ ಇನ್ಫಂಟ್ರಿ, ಎರಡು 3-ಪೌಂಡರ್ ಗನ್ಗಳು, ಎರಡು ಮಾರ್ಟಾರ್ಗಳು ಮತ್ತು ಸುಮಾರು 100 ಸೈನಿಕರನ್ನು ಹೊತ್ತು 1851ರ ಫೆಬ್ರವರಿ 3ರಂದು ಕಿಕ್ರುಮಾ ಕಡೆಗೆ ಹೊರಟಿತು.
ದಾರಿಯಲ್ಲಿ ಅವರು ದಕ್ಷಿಣ ಅಂಗಾಮಿ ಮತ್ತು ಮಾವೋ ಗುಂಪಿನ ಹಳ್ಳಿಗಳ ಮೇಲೆ ದಾಳಿ ನಡೆಸಿ ಜಯಿಸಿದರು, ಈ ವೇಳೆ 800ಕ್ಕೂ ಹೆಚ್ಚು ನಾಗಾ ಮಿತ್ರ ಸೈನಿಕರನ್ನು ತಮ್ಮ ಪಡೆಗೆ ಸೇರಿಸಿಕೊಂಡರು. ಕಿಕ್ರುಮಾದ ಹಿಂದಿನ ದಾಳಿಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇವರು ಬ್ರಿಟಿಷ್ ಪಡೆ ಸೇರಿಕೊಂಡರು ಎನ್ನಲಾಗಿದೆ.
ಹೀಗೆ ಬ್ರಿಟಿಷರು ಕಿಕ್ರುಮಾದ ಮೇಲೆ ದಾಳಿಗೆ ಸನ್ನದ್ಧರಾದರು. ಕಿಕ್ರುಮಾ ಯೋಧರು ಪಶ್ಚಿಮ ಭಾಗವನ್ನು ಬಲಪಡಿಸಿಕೊಂಡಿದ್ದಾರೆ ಎಂದು ಭಾವಿಸಿದ ಬ್ರಿಟಿಷರು ಉತ್ತರ ಭಾಗದಿಂದ ಆಕ್ರಮಣ ಮಾಡಿದರು. ಇದು ಹಳ್ಳಿಯವರಿಗೆ ಅನಿರೀಕ್ಷಿತವಾಗಿತ್ತು. ಫೆಬ್ರವರಿ 11ರ ಬೆಳಿಗ್ಗೆ ಯುದ್ಧ ಆರಂಭವಾಯಿತು.
ನಾಗಾ ಯೋಧರು ಈಟಿ, ಬಿಲ್ಲು-ಬಾಣಗಳೊಂದಿಗೆ ಹೋರಾಡಿದರು. ಬ್ರಿಟಿಷರು ರೈಫಲ್ಗಳು, ಗನ್ಗಳು ಮತ್ತು ಮಾರ್ಟಾರ್ಗಳನ್ನು ಬಳಸಿದರು. ಆದರೂ ಕಿಕ್ರುಮಾದವರ ಹೋರಾಟ ಅತ್ಯಂತ ಧೈರ್ಯದಿಂದ ಕೂಡಿತ್ತು. ಇದು ಈಶಾನ್ಯ ಭಾರತದ ಇತಿಹಾಸದಲ್ಲಿ ಅತ್ಯಂತ ರಕ್ತಪಾತದ ಯುದ್ಧ ಎಂದು ಕರೆಯಲ್ಪಡುತ್ತದೆ.
ಎರಡೂ ಪಕ್ಷಗಳಿಗೂ ಭಾರೀ ನಷ್ಟವಾಯಿತು. ಕಿಕ್ರುಮಾ ಕಡೆಯಲ್ಲಿ ಸುಮಾರು 300 ಯೋಧರು ಸತ್ತರು ಅಥವಾ ಗಾಯಗೊಂಡರು ಎಂದು ಅಂದಾಜಿಸಲಾಗಿದೆ. ಬ್ರಿಟಿಷರಿಗೂ ಈ ಯುದ್ಧದಿಂದ ಗಣನೀಯ ಸಾವುನೋವು ಸಂಭವಿಸಿದೆ ಎಂದು ಹೇಳಲಾಗಿದೆ.
ಫೆಬ್ರವರಿ 12ರಂದು ಬ್ರಿಟಿಷರು ಯುದ್ಧವನ್ನು ಗೆದ್ದರು ಎಂದು ಘೋಷಿಸಲಾಯಿತು, ಆದರೆ ನಾಗಾ ಯೋಧರ ಧೈರ್ಯ ಮತ್ತು ಪ್ರತಿರೋಧದಿಂದಾಗಿ ಬ್ರಿಟಿಷರು ನಾಗಾ ಬೆಟ್ಟಗಳಲ್ಲಿ ತಮ್ಮ ವಸಾಹತನ್ನು ಮುಂದುವರಿಸಲು ಹಿಂಜರಿದರು. ಇದು ನಾಗಾ ಬೆಟ್ಟಗಳಲ್ಲಿ ಬ್ರಿಟಿಷರ 10ನೇ ಮತ್ತು ಕೊನೆಯ ದಂಡಯಾತ್ರೆಯಾಗಿತ್ತು. ಈ ಯುದ್ಧದ ನಂತರ ಬ್ರಿಟಿಷರು “ನಾನ್-ಇಂಟರ್ಫಿಯರೆನ್ಸ್” ನೀತಿಯನ್ನು ಅಳವಡಿಸಿಕೊಂಡರು – ಅಂದರೆ ಹಳ್ಳಿಗಳಲ್ಲಿ ಹೆಚ್ಚು ಹಸ್ತಕ್ಷೇಪ ಮಾಡದಿರುವುದು.
ಕಿಕ್ರುಮಾ ಸೋತರೂ, ಈ ಯುದ್ಧವು ನಾಗಾ ಜನರ ಸ್ವಾಭಿಮಾನ, ಧೈರ್ಯ ಮತ್ತು ಏಕತೆಯ ಸಂಕೇತವಾಯಿತು. ಇದು ಸಾಮ್ರಾಜ್ಯಶಾಹಿ ಶಕ್ತಿಗೆ ಎದುರಾದ ಸಣ್ಣ ಹಳ್ಳಿಯ ಅತ್ಯಂತ ಧೈರ್ಯದ ಹೋರಾಟ.
2022ರಲ್ಲಿ ಕಿಕ್ರುಮಾ ಹಳ್ಳಿಯವರು ರೂನ್ಯಿತು ಎಂಬ ಯುದ್ಧಸ್ಥಳದಲ್ಲಿ ಒಂದು ಮೊನೊಲಿಥ್ (ಸ್ಮಾರಕ ಶಿಲೆ) ನಿರ್ಮಿಸಿದರು. ಇದರ ಮೇಲೆ “1851ರ ಯುದ್ಧದ ಸ್ಮರಣಾರ್ಥ – ಈಶಾನ್ಯ ಫ್ರಂಟಿಯರ್ ಬೆಟ್ಟಗಳಲ್ಲಿ ನಡೆದ ಅತ್ಯಂತ ರಕ್ತಪಾತದ ಯುದ್ಧ” ಎಂದು ಬರೆಯಲಾಗಿದೆ.ಈ ಯುದ್ಧದ ಸ್ಪೂರ್ತಿ ಇಂದಿಗೂ ಕಿಕ್ರುಮಾ ಮತ್ತು ಚಖೆಸಾಂಗ್ ನಾಗಾ ಸಮುದಾಯದಲ್ಲಿ ಜೀವಂತವಾಗಿದೆ. ಇದು ಕೇವಲ ಯುದ್ಧವಲ್ಲ, ಸ್ವಾತಂತ್ರ್ಯದ ಹೋರಾಟದ ಪ್ರತೀಕವಾಗಿದೆ. ಒಂದು ಸಣ್ಣ ಹಳ್ಳಿಯ ಯೋಧರು ಬ್ರಿಟಿಷ್ ಸಾಮ್ರಾಜ್ಯವನ್ನು ಧೈರ್ಯದಿಂದ ಎದುರಿಸಿದ್ದ ಈ ಕಥೆ ಇಂದಿಗೂ ಪ್ರೇರಣೆಯಾಗಿದೆ. ಜಯ್ ಹಿಂದ್, ಜಯ್ ನಾಗಾಲ್ಯಾಂಡ್!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


