
ಫೆ.13 ಆರೆಸ್ಸೆಸ್ನ ಸರಸಂಘಚಾಲಕರಾದ ಶ್ರೀಗುರೂಜಿಯವರ ಜನ್ಮದಿನದ ಶುಭ ಸಂದರ್ಭದಲ್ಲಿ ಅವರ ಬಗ್ಗೆ ನಾವು ಮಹತ್ವದ ಸಂಗತಿಯೊಂದನ್ನು ತಿಳಿಯುವುದು ಅತ್ಯವಶ್ಯಕವಾಗಿದೆ. ಅದೇನೆಂದರೆ ಹನ್ನೊಂದು ವರ್ಷಗಳ ಮೊದಲೇ ಶ್ರೀ ಗುರೂಜಿಯವರು ಭಾರತದ ಮೇಲೆ ಚೀನಾ ಆಕ್ರಮಣ ಮಾಡುತ್ತದೆ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಹೌದು.. ಅದು 1951ರ ಸಮಯ. ಶ್ರೀಗುರೂಜಿಯವರು ಕರ್ನಾಟಕದ ಶಿವಮೊಗ್ಗದಲ್ಲಿ ತಮ್ಮ ಪ್ರವಾಸದಲ್ಲಿದ್ದರು. ಅಲ್ಲಿ ಪತ್ರಕರ್ತರ ಜೊತೆ ಮಾತನಾಡುವ ವೇಳೆ, ಚೀನಾ ಸ್ವಭಾವತಃ ವಿಸ್ತರಣಾವಾದಿಯಾಗಿದ್ದು, ಮುಂದಿನ ದಿನಗಳಲ್ಲಿ ಭಾರತದ ಮೇಲೆ ಆಕ್ರಮಣ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಿದ್ದರು. ಆ ಸಮಯದಲ್ಲಿ ಕಮ್ಯುನಿಸ್ಟ್ ಚೀನಾ ಟಿಬೆಟ್ನ ಮೇಲೆ ಆಕ್ರಮಣ ಮಾಡಿತ್ತು. ಇದಾದ ಬಳಿಕವೂ ಶ್ರೀಗುರೂಜಿಯವರು ಚೀನಾ ವಿಸ್ತರಣಾವಾದದ ಕುರಿತು ಭಾರತ ಸರಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಇದ್ದರು. ಆದರೆ ಸರಕಾರ ಎಚ್ಚೆತ್ತುಕೊಳ್ಳಲೇ ಇಲ್ಲ. ಹಿಂದಿ ಚೀನೀ ಭಾಯೀ ಭಾಯೀ ಎನ್ನುತ್ತಾ ಚೀನಾದ ಜೊತೆಗೆ ಪಂಚಶೀಲ ಒಪ್ಪಂದವನ್ನು ಮಾಡಿಕೊಳ್ಳಲು ಆಗಿನ ಪ್ರಧಾನಿ ನೆಹರೂ ಅವರು ಇನ್ನಿಲ್ಲದ ಉತ್ಸಾಹ ತೋರಿಸುತ್ತಿದ್ದರು. ಕೊನೆಗೂ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿಯೇ ಬಿಟ್ಟಿತು. ಕಮ್ಯುನಿಸ್ಟ್ ಚೀನಾವು ಭಾರತದ ಮೇಲೆ ಆಕ್ರಮಣ ಮಾಡಿದೆ ಎಂಬ ಸಮಾಚಾರವನ್ನು 1962ರ ಅಕ್ಟೋಬರ್ 20ರಂದು ಕೇಂದ್ರ ಸರಕಾರವು ಯಾವುದೇ ಮುಚ್ಚುಮರೆಯಿಲ್ಲದೆ ಆಲ್ ಇಂಡಿಯಾ ರೇಡಿಯೋದಲ್ಲಿ ಘೋಷಣೆ ಮಾಡಿತು.
ಆ ದಿನಗಳಲ್ಲಿ ಶ್ರೀಗುರೂಜಿಯವರು ಹದಿನಾಲ್ಕು ದಿನಗಳ ಕಾಲ ರಾಜಸ್ಥಾನದ ಪ್ರವಾಸದಲ್ಲಿದ್ದರು. ಚೀನಾ ಭಾರತದ ಮೇಲೆ ಆಕ್ರಮಣ ಮಾಡಲಿದೆ ಎಂದು ಆಕ್ರಮಣ ಮಾಡುವ ನಾಲ್ಕು ದಿನಗಳ ಮೊದಲು ಅಂದರೆ ಅಕ್ಟೋಬರ್ 16ರಂದು ಚಿತ್ತೋಡದಲ್ಲಿ ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದ್ದರು. ಆನಂತರ ಅಕ್ಟೋಬರ್ 18ರಂದು ಕೂಡ ಆಳ್ವಾರ್ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲೂ ಇದನ್ನು ಪುನಃ ಉಲ್ಲೇಖ ಮಾಡಿದ್ದರು. ಆ ಸಂದರ್ಭದಲ್ಲಿ ಕೆಲವು ಪ್ರಗತಿಪರ ಲೇಖಕರು ಇವರೆಂಥಹ ಬೇಜವಾಬ್ದಾರಿಯ ನಾಯಕರು ಎಂದು ಟೀಕೆ ಮಾಡಿದ್ದರು. ಒಬ್ಬರಂತೂ ಗೋಲ್ವಲ್ಕರ್ ಅವರದು ಕಪೋಲಕಲ್ಪಿತ ಗಾಳಿ ಸುದ್ದಿ ಎಂದು ಬರೆದಿದ್ದರು. ಆದರೆ ಅಕ್ಟೋಬರ್ 20ರಂದು ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದ್ದ ಅಧಿಕೃತ ಸುದ್ದಿ ಪ್ರಕಟ ಆಗುತ್ತಿದ್ದಂತೆ, ಎಲ್ಲರೂ ದಿಗ್ಭ್ರಾಂತಿಗೆ ಒಳಗಾದರು. ಶ್ರೀಗುರೂಜಿಯವರು ಇಷ್ಟು ಕರಾರುವಕ್ಕಾಗಿ ಹೇಗೆ ಹೇಳಿದರು ಎಂದು ಆಶ್ಚರ್ಯ ಪಟ್ಟರು.
ರಾಜಸ್ಥಾನ ಪ್ರವಾಸ ಮುಗಿಸಿ ಅಕ್ಟೋಬರ್ 24ರಂದು ಗುರೂಜಿಯವರು ದೆಹಲಿಗೆ ತಲುಪಿ, ಅಲ್ಲಿನ ಸಂಘಚಾಲಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿ ಆಡಳಿತ ಪಕ್ಷದ 7-8 ನಾಯಕರು ಪ್ರತ್ಯೇಕ ಪ್ರತ್ಯೇಕವಾಗಿ ಬಂದು ಗುರೂಜಿಯವರನ್ನು ಭೇಟಿಯಾದರು. ಅಲ್ಲಿ ಎಲ್ಲರ ಪ್ರಶ್ನೆ ಇದ್ದಿದ್ದು ಒಂದೇ: “ಚೀನಾ ಆಕ್ರಮಣವೆಸಗಲಿದೆ ಎಂಬ ಮಾಹಿತಿ ನಿಮಗೆ ಲಭಿಸಿದ್ದುದು ಹೇಗೆ? ಯಾರಿಂದ?” ಎಂಬುವುದೇ ಆಗಿತ್ತು. ಮನದಲ್ಲಿ ನೋವಿದ್ದರೂ, ಶಾಂತಭಾವದಿಂದಲೇ ಗುರೂಜಿಯವರು ನೀಡಿದ ಉತ್ತರ ಹೀಗಿತ್ತು. “ಯಾರು ಪ್ರಾಮಾಣಿಕವಾಗಿ ಎಲ್ಲವನ್ನೂ ಗಮನಿಸುವರೋ ಅವರಿಗೆ ಮಾತ್ರ ವಾಸ್ತವವಾದುದೆಲ್ಲವೂ ಕಾಣಿಸುತ್ತದೆ. ನಾನಂತೂ ರಾಜಕೀಯದ ಕನ್ನಡಕ ಇಟ್ಟುಕೊಂಡು ದೇಶವನ್ನು ನೋಡುವುದಿಲ್ಲ. ಹೀಗಾಗಿ ನನಗೆ ಈ ಸತ್ಯ ಸಂಗತಿ ಗೋಚರಿಸಿತು. ದೇಶದ ನಾಯಕರಿಗೂ ಇದು ಕಾಣಿಸುವುದಿಲ್ಲವೆಂದಲ್ಲ. ಆದರೆ ಅವರು ರಾಜಕೀಯದ ಕಾರಣಕ್ಕಾಗಿ ಇದನ್ನು ಹೇಳುವುದಿಲ್ಲ”. ಇದನ್ನು ಕೇಳಿದ ಎಲ್ಲರೂ ಸುಮ್ಮನಾದರು.
ಶ್ರೀಗುರೂಜಿಯವರಿಗೆ ಚೀನಾದ ಈ ವಿಸ್ತರಣಾವಾದ, ಭಾರತದ ಮೇಲೆ ಆಕ್ರಮಣ ಮಾಡಬಹುದು ಎಂದು ಗೊತ್ತಾಗಿದ್ದು ಹೇಗೆ?
1950ರಲ್ಲಿ ಚೀನಾ ಟಿಬೆಟ್ ಮೇಲೆ ಆಕ್ರಮಣ ಮಾಡಿದಾಗಲೇ ಭಾರತದ ಮೇಲೂ ಒಂದಲ್ಲ ಒಂದು ದಿನ ಆಕ್ರಮಣ ಮಾಡಿಯೇ ಮಾಡುತ್ತದೆ ಎಂಬ ಸ್ಪಷ್ಟತೆ ಶ್ರೀಗುರೂಜಿಯವರಿಗೆ ಬಂದಿತ್ತು. ವಾಸ್ತವವಾಗಿ ಚೀನಾ 1962ಕ್ಕಿಂತ ಸಾಕಷ್ಟು ಮೊದಲೇ ಅತಿಕ್ರಮಣವನ್ನು ಆರಂಭಿಸಿತ್ತು. ಕೈಲಾಸ ಮತ್ತು ಮಾನಸರೋವರಗಳಲ್ಲಿ ಚೀನಾದ ಚೌಕಿಗಳು ಅಲ್ಲಲ್ಲಿ ಕಾಣಸಿಕ್ಕಿತ್ತು ಮತ್ತು ಯಾತ್ರಿಕರನ್ನು ತಪಾಸಣೆ ಮಾಡಿದ ನಂತರವೇ ಬಿಡುತ್ತಿದ್ದರು ಎಂದು ಕಲ್ಯಾಣ ಎಂಬ ಮಾಸಿಕ ಪತ್ರಿಕೆಯ ಲೇಖನವೊಂದರಲ್ಲಿ ಶ್ರೀ ಮೀರಜ್ಜರ್ ಎಂಬುವವರು ಬರೆದಿದ್ದರು. ಇದೆಲ್ಲವನ್ನೂ ಶ್ರೀಗುರೂಜಿಯವರು ಸೂಕ್ಷ್ಮವಾಗಿ ಗಮನಿಸಿದ್ದರು. ಅಲ್ಲದೇ ಚೀನಾದ ಆಕ್ರಮಣದ ಬಗ್ಗೆ ಅವರಿಗೆ ಮೊದಲೇ ಸುಳಿವಿತ್ತು ಎಂಬುದನ್ನು ಅವರು ಭಾಷಣದಲ್ಲಿ ಹೇಳಿದ ಮಾತುಗಳೇ ಸಾಬೀತು ಪಡಿಸುತ್ತವೆ.
ಭಾಷಣವೊಂದರಲ್ಲಿ ಹೀಗೆ ಹೇಳಿದ್ದರು ಗುರೂಜಿ
“ಕಳೆದ ಎರಡು ತಿಂಗಳುಗಳಿಂದ, ಚೀನಾ ನಮ್ಮ ದೇಶದ ಮೇಲೆ ದಾಳಿ ಮಾಡಲು ಪ್ರಾರಂಭಿಸಿದೆ. ನಿಜ ಹೇಳಬೇಕೆಂದರೆ ನಮ್ಮ ಸರ್ಕಾರ ಕಳೆದ ಎರಡು ತಿಂಗಳುಗಳಿಂದ ಇದನ್ನು ದಾಳಿ ಎಂದು “ಒಪ್ಪಿಕೊಳ್ಳುವ” ಇಚ್ಛೆಯನ್ನು ತೋರಿಸಿದೆ. ವಾಸ್ತವವಾಗಿ, ಈ ದಾಳಿಯು 10-12 ವರ್ಷಗಳ ಹಿಂದಿನದು. ನನ್ನಂತಹ ಸಾಮಾನ್ಯ ವ್ಯಕ್ತಿಯು ಸುಮಾರು 10 ವರ್ಷಗಳ ಹಿಂದೆ ಭಾರತದ ಭೂಪ್ರದೇಶದ ಮೇಲೆ ಚೀನಾದ ಆಕ್ರಮಣ ಮತ್ತು ಭಾರತದಲ್ ಲಿಅದು ತನ್ನ ಸ್ಥಾನವನ್ನು ಬಲಪಡಿಸುವ ಪ್ರಯತ್ನಗಳನ್ನು ಗಮನಿಸಿದ್ದಾನೆ. ಇತರ ಅನೇಕ ಜ್ಞಾನವುಳ್ಳ ಜನರು ಈ ವಿಷಯದ ಬಗ್ಗೆ ಎಚ್ಚರಿಕೆಗಳನ್ನು ಸಹ ನೀಡಿದ್ದರು. ಆದರೆ ಇದರ ಬಗ್ಗೆ ಆಡಳಿತ ನಡೆಸುವವರು ಗಮನ ಹರಿಸುವ ಬಗ್ಗೆ ಯೋಚಿಸಲಿಲ್ಲ. ಇತ್ತೀಚಿನ ದಿನಗಳಲ್ಲಿ ಚೀನಾ ನಮಗೆ “ದ್ರೋಹ” ಮಾಡಿದೆ, “ಮೋಸ” ಮಾಡಿದೆ ಎಂದು ಕೇಳುತ್ತಿದ್ದೇವೆ. ಆದರೆ ಚೀನಾದ ಕಮ್ಯುನಿಸ್ಟ್ ಆಡಳಿತದ ಸಂಪೂರ್ಣ ಇತಿಹಾಸವನ್ನು ನೋಡಿದರೆ, ಅದು ನಮ್ಮ ಮೇಲೆ ದಾಳಿ ಮಾಡುವುದಿಲ್ಲ ಎಂದು ಎಂದಿಗೂ ಭರವಸೆ ನೀಡಲಿಲ್ಲ. ಅದರ ನಡವಳಿಕೆಯು ಪ್ರತಿ ಸಲ ವಿರುದ್ಧವಾಗಿರುತ್ತದೆ. ಉದಾಹರಣೆಗೆ, “ಟಿಬೆಟಿಯನ್ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳಬೇಕು” ಎಂದು ಒಪ್ಪಿಕೊಂಡ ನಂತರವೂ ಚೀನಾ ತಕ್ಷಣವೇ ತನ್ನ ಸೈನ್ಯವನ್ನು ಟಿಬೆಟ್ಗೆ ಕಳುಹಿಸಿ ಅದನ್ನು ಕಬಳಿಸಲು ಪ್ರಾರಂಭಿಸಿತು. ಚೀನಾ ನಮಗೂ ದ್ರೋಹ ಮಾಡುವುದರಲ್ಲಿ ವಿಶೇಷವಿಲ್ಲ”. ಈ ಮಾತುಗಳು ಅವರು ಚೀನಾ ಆಕ್ರಮಣವನ್ನು ಮೊದಲೇ ಊಹಿಸಿದ್ದರು ಎಂಬುದನ್ನು ಸಾಬೀತುಪಡಿಸುತ್ತವೆ.
ಆದರೆ ಆಡಳಿತದ ಚುಕ್ಕಾಣಿ ಹಿಡಿದವರು ಚೀನಾದೊಂದಿಗೆ ಸಂಬಂಧ ಗಟ್ಟಿಗೊಳಿಸುವ ಸಂದರ್ಭದಲ್ಲೇ, ಅದು ಭಾರತದ ಮೇಲೆ ಅತಿಕ್ರಮಣ ಮಾಡಿಯೇ ಬಿಟ್ಟಿತು. ಯಾವುದೇ ಸಿದ್ಧತೆಯಿಲ್ಲದೆ ಭಾರತೀಯ ಮಿಲಿಟರಿ ಪಡೆಗಳು ಯುದ್ಧದ ಅಖಾಡಕ್ಕೆ ಇಳಿಯಬೇಕಾಯಿತು. ಅಕ್ಟೋಬರ್ 30ರಂದು ಪ್ರಧಾನಿಯವರಿಗೆ ಪತ್ರ ಬರೆದ ಶ್ರೀಗುರೂಜಿಯವರು “ಈ ಸಂಕಟಮಯ ಸಮಯದಲ್ಲಿ ದೇಶವನ್ನು ಭಯಮುಕ್ತಗೊಳಿಸಲು ಸರಕಾರವು ಕೈಗೊಳ್ಳಲಿರುವ ಸರ್ವ ರೀತಿಯ ಕ್ರಮಗಳಿಗೂ ಸಂಘ ಪೂರ್ಣ ಶಕ್ತಿಯೊಂದಿಗೆ ಸಹಕರಿಸಲಿದೆ. ಇದರಲ್ಲಿ ಯಾವುದೇ ಕೊರತೆ ಆಗದಂತೆ ಸ್ವಯಂಸೇವಕರು ನೋಡಿಕೊಳ್ಳಲಿದ್ದಾರೆ ಎಂದು ಪ್ರಧಾನಿಗಳಿಗೆ ಹೇಳಿದ್ದರು. ಅದರಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಪೂರ್ಣಪ್ರಮಾಣದಲ್ಲಿ ಭಾರತೀಯ ಸೈನಿಕರಿಗೆ ಸಹಾಯವನ್ನು ಮಾಡಿದರು. ಶಸ್ತ್ರಾಸ್ತ್ರಗಳ ರವಾನೆಯಿಂದ ಹಿಡಿದು, ರಕ್ತದಾನದವರೆಗೆ ಸ್ವಯಂಸೇವಕರು ತಮ್ಮ ಕೈಯಲ್ಲಿ ಏನೆಲ್ಲಾ ಸಾಧ್ಯವಾಗುತ್ತೋ ಅದನ್ನೆಲ್ಲವನ್ನೂ ಜೀವದ ಹಂಗು ತೊರೆದು ಮಾಡಿದ್ದರು. ಈ ಕಾರಣಕ್ಕಾಗಿ 1963ರ ಜನವರಿ 26ರಂದು ಗಣರಾಜ್ಯೋತ್ಸವ ಪರೇಡ್ನಲ್ಲಿ ಸಂಘದ ಸ್ವಯಂಸೇವಕರಿಗೆ ಭಾಗವಹಿಸಲು ಪ್ರಧಾನಿ ನೆಹರೂ ಅವರು ಆಹ್ವಾನ ನೀಡಿದರು.
ಆಗಿನ ಕೇಂದ್ರ ಸರಕಾರವು ಶ್ರೀಗುರೂಜಿಯವರ ಮಾತುಗಳನ್ನು ಕೇಳಿದ್ದರೆ, ಗಂಭೀರವಾಗಿ ಪರಿಗಣಿಸಿದ್ದರೆ, ಭಾರತವು 38,000 ಚದರ ಕಿ.ಮೀ ಭೂಭಾಗವನ್ನು ಕಳೆದುಕೊಳ್ಳುತ್ತಿರಲಿಲ್ಲವೇನೋ? ಹಿಂದಿ ಚೀನೀ ಭಾಯೀ ಭಾಯೀ ಎಂದು ಭಾರತವಷ್ಟೇ ಹೇಳಿತು. ಚೀನಾ ಭಾರತದ ಕಪಾಳಕ್ಕೆ (ಅರುಣಾಚಲ ಪ್ರದೇಶ) ಹೊಡೆಯಿತು. ಇದರಿಂದ ಕಳೆದುಕೊಂಡಿದ್ದು ಭೂಭಾಗ ಮಾತ್ರವಲ್ಲ. ನೂರಾರು ಸೈನಿಕರು, ನಾಗರಿಕರು ಜೊತೆಗೆ ಭಾರತದ ಆತ್ಮಸ್ಥೈರ್ಯವನ್ನು ಕೂಡ ಕಳೆದುಕೊಳ್ಳಬೇಕಾಯಿತು. ಇಂದು ಭಾರತೀಯ ಪಂಚಾಂಗದ ಪ್ರಕಾರ ಮಾಘ ಬಹುಳ ಏಕಾದಶಿ(ಫೆಬ್ರವರಿ 13). ಶ್ರೀಗುರೂಜಿಯವರ ಜನ್ಮದಿನ. ಅವರ ಧ್ಯೇಯನಿಷ್ಠ ಜೀವನ ನಮಗೆಲ್ಲರಿಗೂ ಪ್ರೇರಣೆಯಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


