News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗೋತಳಿ ಸಂರಕ್ಷಣೆಯ ಬಜಕೂಡ್ಲು ‘ಅಮೃತಧಾರಾ ಗೋಶಾಲೆ’ ಉದ್ಘಾಟನೆಗೆ ಸಜ್ಜು

ಪೆರ್ಲ: ಕಾಸರಗೋಡು ತಳಿಯ ಗೋವುಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಬೋಧನೆಯ ಗುರಿಯೊಂದಿಗೆ 2004 ನವೆಂಬರ್ 6 ರಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಮೂಲಕ ಪೆರ್ಲದ ಬಜಕೂಡ್ಲಿನ ಪ್ರಶಾಂತ ಪರಿಸರದಲ್ಲಿ ಆರಂಭವಾದ ‘ಅಮೃತಧಾರಾ ಗೋಶಾಲೆ’ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ನೂತನ ನಿವೇಶನದಲ್ಲಿ ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ.
Report_Bajakudlu Goushala 05 copy
ಕೇವಲ 48 ದನಗಳು ಮತ್ತು 5 ಹೋರಿಗಳ ಸಾಕಣಿಕೆಯ ಮೂಲಕ ಆರಂಭವಾದ ಈ ಗೋಶಾಲೆಯಲ್ಲಿ ಪ್ರಸ್ತುತ 200ಕ್ಕೂ ಮಿಕ್ಕಿ ದೇಸೀ ಜಾನುವಾರುಗಳಿಗೆ ಆಶ್ರಯ ನೀಡಲಾಗುತ್ತಿದ್ದು ದೇಶ, ವಿದೇಶಗಳಲ್ಲಿ ಗೋಪ್ರೇಮಿಗಳ ಗಮನವನ್ನು ಸೆಳೆದಿದೆ. ಈ ಗೋಶಾಲೆಯಲ್ಲಿರುವ ಕಾಸರಗೋಡು ತಳಿಯ ಗಿಡ್ಡ ದನ ‘ಬಂಗಾರಿ’ ಈಗಾಗಲೇ ‘ಲಿಮ್ಕಾ ಬುಕ್ ಓಫ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಗಳಿಸಿದೆ. ನವದೆಹಲಿಯ ‘ಎನ್.ಬಿ.ಎ.ಜಿ.ಆರ್.ಡಿ’ ಸಂಸ್ಥೆಯು ದೇಶೀ ತಳಿ ಜಾನುವಾರುಗಳ ಸಂರಕ್ಷಣೆಗಾಗಿ ಕೊಡಮಾಡುವ ‘ಬ್ರೀಡ್ ಸೇವಿಯರ್-2012’ ಪ್ರಶಸ್ತಿಗೆ ಈ ಗೋಶಾಲೆ ಮತ್ತು ಕಾಸರಗೋಡು ತಳಿ ಸಂರಕ್ಷಣೆಯ ಯೋಜನೆ ಗುರುತಿಸಲ್ಪಟ್ಟಿರುವುದು ಅಲ್ಪ ಕಾಲಾವಧಿಯಲ್ಲಿ ದೇಶೀ ಗೋತಳಿಯ ಸಂರಕ್ಷಣೆಯ ಪ್ರಯತ್ನಕ್ಕೆ ಸಂದ ಗೌರವವಾಗಿದೆ. ಇಂತಹ ಸಾಧನೆಗಳ ಮೂಲಕ ಹಾದು ಬಂದ ಗೋಶಾಲೆಯು ಬಜಕೂಡ್ಲಿನಿಂದ ಅನತಿ ದೂರದ ಪಳ್ಳಕಾನದಲ್ಲಿ 2010ರಲ್ಲಿ ಖರೀದಿಸಿದ 8.12ಎಕ್ರೆ ಜಮೀನಿನ ನಿವೇಶನದಲ್ಲಿ ನೂತನ ಗೋಶಾಲೆ ಮತ್ತು ಉಪಕಟ್ಟಡಗಳೊಂದಿಗೆ ಉದ್ಘಾಟನೆಗೆ ಸಜ್ಜುಗೊಂಡಿದೆ.
Report_Bajakudlu Goushala 03 copy
ಕಾಸರಗೋಡು ಜಿಲ್ಲೆಯಲ್ಲಿ ಹಿಂದೆ ಬಹುದೊಡ್ಡ ಸಂಖ್ಯೆಯಲ್ಲಿದ್ದ, ಈಗ ವಿನಾಶದಂಚಿಗೆ ಸರಿಯುತ್ತಿರುವ ಕಾಸರಗೋಡು ತಳಿಯ ಹಸುಗಳು ಶೂನ್ಯ ಬಂಡವಾಳದ ಕೃಷಿಗೆ ಹೆಚ್ಚು ಯೋಗ್ಯವಾದವುಗಳು. ಅತಿ ಕಡಿಮೆ ಆಹಾರ ಸೇವನೆ ಮಾಡುವ ಈ ಗೋವುಗಳ ಹಾಲು, ಮೂತ್ರ, ಸೆಗಣಿ ಅತ್ಯಂತ ಶ್ರೇಷ್ಟವಾದವುಗಳು. ಮನೆಮನೆಗಳಲ್ಲೂ ದೇಸೀ ಹಸುಗಳನ್ನು ಸಾಕಲು ಅನುಕೂಲವಾಗುವಂತೆ ಭಾರತೀಯ ಗೋಬ್ಯಾಂಕಿನ ಮುಖಾಂತರ 1200ಕ್ಕೂ ಮಿಕ್ಕಿ ಆಸಕ್ತ ಸಾಕಣಿಕೆದಾರರಿಗೆ ಕಾಸರಗೋಡು ಗೋವುಗಳನ್ನು ಅಮೃತಧಾರಾ ಗೋಶಾಲೆ ಈಗಾಗಲೇ ವಿತರಿಸಿದೆ. ಶಮನ ತೈಲ, ಹಿಮಗಿರಿ ಕೇಶ ತೈಲ, ಶೋಡಷಿ ದಂತ ಮಂಜನ, ಕ್ಲೀನ್ ನೈಲ್(ಉಗುರು ಶುಚಿಕಾರಕ), ಗೋಸಾರವಟಿ, ವೈಶ್ವಾನರಚೂರ್ಣ, ಜ್ವರಾಮೃತ, ವಾತ್ಸಲ್ಯ ನೇತ್ರಸಾರ ಇತ್ಯಾದಿ ವಿಶೇಷ ಪಂಚಗವ್ಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ನಬಾರ್ಡ್ ಸಂಸ್ಥೆಯ ಅನುದಾನದಲ್ಲಿ 4 ಪಂಚಾಯತುಗಳಲ್ಲಿ ಕಾಸರಗೋಡು ಗೋವುಗಳ ಗಣತಿ ಹಾಗೂ ಉತ್ತಮ ಗೋವುಗಳ ಮಾಹಿತಿ ಸಂಗ್ರಹ ಕಾರ್ಯ ನಡೆಸಿ 200 ಉತ್ಕೃಷ್ಟ ಗೋವುಗಳನ್ನು ಆಯ್ಕೆ ಮಾಡಲಾಗಿದೆ. ರಕ್ತ ಪರೀಕ್ಷೆಯ ಮುಖಾಂತರ ತಳಿ ಶುದ್ಧತೆಯ ಬಗ್ಗೆ ಸಂಶೋಧನೆ, ಕಾಸರಗೋಡು ಗೋ ಆಧಾರಿತ ಕೃಷಿಯ ಬಗ್ಗೆ ಆಸಕ್ತರಿಗೆ ಉಚಿತ ತರಬೇತಿ ಶಿಬಿರಗಳನ್ನೂ ಗೋಶಾಲೆಯು ಆಯೋಜಿಸಿದೆ.
Report_Bajakudlu Goushala 04 copy
ಈಗಾಗಲೇ ಅಮೃತಧಾರಾ ಗೋಶಾಲೆಯಲ್ಲಿ ಎ2 ಹಾಲಿನ ಬಗ್ಗೆ ಸಂಶೋಧನೆಗೆ ಚಾಲನೆ ನೀಡಲಾಗಿದೆ. ಕಾಸರಗೋಡು ಗೋವಿನ ಪ್ರಚಾರಕ್ಕಾಗಿ ಭಾರತೀಯ ಗೋಯಾತ್ರೆ, ಗೋಸಂಸತ್ತು, ಗೋಮಾತಾ ತುಲಾಭಾರ, ‘ಜನಜನನೀ’, ಇತ್ಯಾದಿ ಕಾರ್ಯಕ್ರಮಗಳನ್ನು ‘ಕಾಮದುಘಾ’ ಯೋಜನೆಯು ಯಶಸ್ವಿಯಾಗಿ ಆಯೋಜಿಸಿದೆ. ಕೇರಳದ ವಿವಿಧೆಡೆಗಳಲ್ಲಿ ದೇಶೀ ಗೋತಳಿಯ ಪ್ರಚಾರಕ್ಕಾಗಿ ಕಾಸರಗೋಡು ತಳಿ ಗೋವುಗಳ ಪ್ರದರ್ಶನ ಮತ್ತು ಕೇರಳದ ಉತ್ತರ ತುದಿಯ ಅನಂತಪುರದಿಂದ ದಕ್ಷಿಣ ತುದಿಯ ತಿರುವನಂತಪುರದ ತನಕ 2013 ಅಕ್ಟೋಬರ್ 14ರಿಂದ 18 ರ ತನಕ ‘ಅನಂತ ಗೋ ಯಾತ್ರೆ’ಯನ್ನೂ ಆಯೋಜಿಸಿ ಜನಸಾಮಾನ್ಯರಲ್ಲಿ ದೇಸೀ ಗೋ ತಳಿಯ ಮಹತ್ವದ ಕುರಿತಾದ ಅರಿವನ್ನು ಮೂಡಿಸಲಾಗಿದೆ. ಈ ಸಂದರ್ಭದಲ್ಲಿ ತಿರುವನಂತಪುರದ ಅನಂತಪದ್ಮನಾಭ ಸ್ವಾಮೀ ಕ್ಷೇತ್ರದಲ್ಲಿ ದೇಸೀ ತಳಿಯ ಗೋಶಾಲೆಯನ್ನೂ ಆರಂಭಿಸಲಾಗಿತ್ತು.
ನೂತನ ಸಮುಚ್ಚಯ ನಿರ್ಮಾಣಕ್ಕಾಗಿ 15.07.2013ರಂದು ಭೂಮಿಪೂಜೆ ಮತ್ತು ಶಿಲಾನ್ಯಾಸ ಜರಗಿದ್ದು ಅತ್ಯಂತ ಶೀಘ್ರವಾಗಿ ಪ್ರಾಥಮಿಕ ಹಂತದ ಕಾಮಗಾರಿಗಳು ಪೂರ್ಣಗೊಂಡಿವೆ. ಕಾರ್ಯಕರ್ತರ ನಿರಂತರ ಶ್ರಮದಾನ ಮತ್ತು ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಯಡಿಯಲ್ಲಿ ಕೇರಳ ಸರಕಾರದ ‘ಆತ್ಮಾ ಪ್ಲಸ್’ ಯೋಜನೆಯನ್ವಯ ವೈಜ್ಞಾನಿಕವಾಗಿ ನಡೆಸಿದ ಕಾಸರಗೋಡು ತಳಿ ಅಭಿವೃದ್ಧಿಗೆ ದೊರೆತ ಧನಸಹಾಯ ಮತ್ತು ಕರ್ನಾಟಕ ಬ್ಯಾಂಕಿನಿಂದ ದೊರೆತ ಧನಸಹಾಯಗಳ ಸಹಕಾರದಿಂದ ನಿರ್ಮಾಣ ಕಾಮಗಾರಿಗಳು ಕ್ಷಿಪ್ರವಾಗಿ ಪೂರೈಸಲ್ಪಟ್ಟಿವೆ. ಕಾಮದುಘಾ ಯೋಜನೆಯ ಮೂಲಕ ಆರೋಗ್ಯ, ಆಹಾರ, ಔಷಧಿ ಕ್ಷೇತ್ರಗಳಲ್ಲಿ ದೇಸೀ ಗೋತಳಿಯ ಬಳಕೆಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ‘ಅಮೃತಧಾರಾ ಗೋಶಾಲೆ’ ಪ್ರಯತ್ನಿಸುತ್ತಿದೆ. ದೇಶದ ಬೆನ್ನೆಲುಬು ಎಂದು ಪರಿಗಣಿತವಾಗಿರುವ ಕೃಷಿಯಲ್ಲಿ ದೇಸೀ ಗೋವುಗಳ ಬಳಕೆಯ ಮೂಲಕ ಕೃಷಿಯನ್ನು ಇನ್ನಷ್ಟು ಸುಸ್ಥಿರಗೊಳಿಸುವ ಪ್ರಯತ್ನವನ್ನು ಗೋಶಾಲೆ ನಡೆಸುತ್ತಿದೆ.
ಖ್ಯಾತ ಮಲಯಾಳಂ ಚಿತ್ರ ನಟ ಸುರೇಶ್ ಗೋಪಿ ದೇಸೀ ತಳಿಯ ಹಸುಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿ ಬಜಕೂಡ್ಲು ಗೋಶಾಲೆಗೆ ಸಂದರ್ಶನವನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜಮುಖಿಯಾಗಿ ವಿಸ್ತರಿಸಲ್ಪಟ್ಟ ಗೋಶಾಲೆಯ ನೂತನ ನಿವೇಶನದಲ್ಲಿ ಗವ್ಯೋತ್ಪನ್ನ ಘಟಕ, ಸ್ಲರಿ ನೀರಾವರಿ, ಬಯೋಗ್ಯಾಸ್ ಉತ್ಪಾದನೆಯ ಘಟಕ, ಶೂನ್ಯ ಬಂಡವಾಳದ ಕೃಷಿ ಇತ್ಯಾದಿಯನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಸುಮಾರು 60 ಲಕ್ಷ ರೂಪಾಯಿಗಳ ವೆಚ್ಚ ಅಂದಾಜಿಸಲಾಗಿದೆ. ಪ್ರಸ್ತುತ 200 ಗೋವುಗಳಿಗೆ ಸ್ಥಳಾವಕಾಶವಿರುವ ಸುಸಜ್ಜಿತ ಗೋಶಾಲೆ, ತಾತ್ಕಾಲಿಕ ಅತಿಥಿ ಗೃಹ, ನೀರಾವರಿ ಸೌಕರ್ಯಗಳನ್ನು ಏರ್ಪಾಡು ಮಾಡಲಾಗಿದ್ದು, ಇದೇ ತಿಂಗಳ ಮೇ 23 ರಂದು ‘ಸುರಭಿ ಸಮರ್ಪಣಮ್’ ಎಂಬ ಕಾರ್ಯಕ್ರಮದ ಮೂಲಕ ನೂತನ ಗೋಶಾಲೆಯ ಪ್ರಾಥಮಿಕ ಹಂತದ ಕಟ್ಟಡವನ್ನು ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಲೋಕಾರ್ಪಣೆ ಮಾಡಲಿದ್ದಾರೆ.
ಮೇ ತಿಂಗಳ 21 ರಿಂದ ಆರಂಭವಾಗುವ ಗೋಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಜೊತೆಯಲ್ಲಿ ಗೋಮಯ ಜ್ಯೋತಿಯಿಂದ ಅನಂತ ನೀರಾಜನ ಕಾರ್ಯಕ್ರಮವನ್ನು 22 ರಂದು ರಾತ್ರಿ ಗೋಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಪವಿತ್ರವಾದ ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಲಂಕೃತವಾದ ‘ಗೋ ಜ್ಯೋತಿ’ ರಥವು ಕುಂಬಳೆ ಸೀಮೆಯಾದ್ಯಂತ ದೇಸೀ ತಳಿಯ ಹಸುಗಳ ಮಹತ್ವವನ್ನು ಸಾರುತ್ತಾ ಸಾಗುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top