ದೇಶದ ಭವಿಷ್ಯ ನಿರ್ಧರಿಸುವ ಮಹಾತೀರ್ಪು ಪ್ರಕಟವಾಗಿದೆ. ಈ ತೀರ್ಪು ಹೀಗೆಯೇ ಇರಬಹುದು ಎಂದು ಹಲವಾರು ಟಿವಿ ವಾಹಿನಿಗಳು ಮೊದಲೇ ತಿಳಿಸಿದ್ದವು. ಆದರೆ ಬಿಜೆಪಿ ವಿರೋಧಿಗಳು ಅದೆಲ್ಲ ಬರಿದೇ ಸಮೀಕ್ಷೆ. ಸಮೀಕ್ಷೆ ಮಾಡಿದವರೇನು ಇವಿಎಂ ಪೆಟ್ಟಿಗೆಗಳನ್ನು ಬಗೆದು ನೋಡಿದ್ದಾರಾ ? ಎಂದೆಲ್ಲ ಟೀಕಿಸಿದ್ದರು. ದೇಶದ ಬಹುಪಾಲು ಜನತೆ ಮಾತ್ರ ಈ ಸಮೀಕ್ಷೆ ಗಳು ನಿಜವಾಗಲಿವೆ ಎಂದೇ ನಂಬಿದ್ದು. ಅವರ ನಂಬಿಕೆ ನಿಜವಾಗಿದೆ.
ಮತ ಎಣಿಕೆಯ ಮೇ 23 ರಂದು ಮಧ್ಯಾಹ್ನ 1 ಗಂಟೆಯ ವೇಳೆಗೇ ದೇಶದೆಲ್ಲೆಡೆ ವಿಜಯೋತ್ಸವ. `ದೇಶ್ ಬದಲ್ ರಹಾ ಹೈ. ದೇಶ್ ಆಗೇ ಬಡ್ ರಹಾ ಹೈ’ (ದೇಶ ಬದಲಾಗುತ್ತಿದೆ, ದೇಶ ಪ್ರಗತಿಯತ್ತ ಸಾಗುತ್ತಿದೆ) ಎಂಬ ಉತ್ಸಾಹದ ಘೋಷಣೆ. ಕಳೆದ 5 ವರ್ಷಗಳಿಂದ ದೇಶದ ಚುಕ್ಕಾಣಿ ಹಿಡಿದು, ವಿರೋಧಿಗಳ ಅಸಹಾಕಾರದ ನಡುವೆಯೂ ದೇಶವನ್ನು ಪ್ರಗತಿಯತ್ತ ಕೊಂಡೊಯ್ದು, ಇಡೀ ವಿಶ್ವದಲ್ಲಿ ಮತ್ತೆ ಭಾರತದ ಕೀರ್ತಿ, ಗೌರವ ಉತ್ತುಂಗಕ್ಕೇರುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಎನ್ಡಿಎ ಭಾರೀ ಮುನ್ನಡೆಯತ್ತ ಸಾಗುತ್ತಿದ್ದಂತೆ ಮಾಡಿದ ಟ್ವೀಟ್ ಕೂಡ ಮನೋಜ್ಞ, ಅರ್ಥಪೂರ್ಣ. `ಸಬ್ ಕಾ ಸಾಥ್ + ಸಬ್ ಕಾ ವಿಕಾಸ್ + ಸಬ್ ಕಾ ವಿಶ್ವಾಸ್ = ವಿಜಯೀ ಭಾರತ್’ ಎಂಬ ಪ್ರಧಾನಿಯವರ ಆ ಟ್ವೀಟ್ನಲ್ಲಿ ತನ್ನಿಂದ ಪಕ್ಷ ಗೆದ್ದಿತೆಂಬ ಅಹಂ ಆಗಲೀ, ತನ್ನ ಪಕ್ಷವೇ ಗೆದ್ದಿದೆ ಎಂಬ ಹಮ್ಮಾಗಲೀ ಅಥವಾ ಸದಾ ಕಾಲೆಳೆಯುವ ವಿರೋಧ ಪಕ್ಷಗಳು ಈ ಚುನಾವಣೆಯಲ್ಲಿ ಧೂಳೀಪಟವಾಗಿದೆ ಎಂಬ ವ್ಯಂಗ್ಯವಾಗಲೀ ಖಂಡಿತ ಇರಲಿಲ್ಲ. ಎಲ್ಲರೊಂದಿಗೆ, ಎಲ್ಲರ ವಿಕಾಸ ಹಾಗೂ ಎಲ್ಲರ ವಿಶ್ವಾಸದಿಂದಾಗಿ ಭಾರತ ಗೆದ್ದಿದೆ ಎಂಬ ವಿನಜ್ರ ಸಂದೇಶ- ಭಾರೀ ಗೆಲುವು ದೊರೆತಿದ್ದರೂ ಮೋದಿಯವರ ತಲೆ ತಿರುಗಿಲ್ಲ. ಅವರ ಕಾಲುಗಳು ನೆಲದ ಮೇಲೆಯೇ ಇವೆ ಎಂಬುದರ ಸಂಕೇತ. ಮುತ್ಸದ್ದಿಯೊಬ್ಬನಿಗಿರಬೇಕಾದ ಗುಣ ವಿಶೇಷಗಳು ಇವೇ ಆಗಿವೆ. ಆ ದೃಷ್ಟಿಯಲ್ಲಿ ಮೋದಿ ನಿಜಕ್ಕೂ ಭಾರತ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಅಗ್ರಣಿ ಎಂದರೆ ತಪ್ಪಾಗಲಿಕ್ಕಿಲ್ಲ.
ದಕ್ಷಿಣದ ಕರ್ನಾಟಕ ಹೊರತುಪಡಿಸಿ, ಉಳಿದ ಆಂಧ್ರ, ಕೇರಳ ಮತ್ತು ತಮಿಳುನಾಡುಗಳಲ್ಲಿ ಮಾತ್ರ ಶೂನ್ಯ ಸಂಪಾದನೆ ಮಾಡಿದ ಬಿಜೆಪಿ ಈ ಬಾರಿ ಹಿಂದಿ ರಾಜ್ಯಗಳಲ್ಲಷ್ಟೇ ಅಲ್ಲದೆ ಪೂರ್ವಾಂಚಲದ ಅಸ್ಸಾಂ, ಮಣಿಪುರ, ಮೇಘಾಲಯ, ಸಿಕ್ಕಿಂ, ತ್ರಿಪುರ, ಅರುಣಾಚಲ, ಜೊತೆಗೆ ಬಿಜೆಪಿಯ ಶಕ್ತಿ ಅಷ್ಟೇನೂ ಇಲ್ಲದ ಪಶ್ಚಿಮ ಬಂಗಾಳದಲ್ಲೂ ಪ್ರಚಂಡ ಜಯ ಸಾಧಿಸಿರುವುದು ಸಾಮಾನ್ಯ ಸಂಗತಿಯಲ್ಲ. 70 ವರ್ಷ ದೇಶವಾಳಿದ ಕಾಂಗ್ರೆಸ್ 13 ರಾಜ್ಯಗಳಲ್ಲಿ ಶೂನ್ಯ ಸಂಪಾದನೆ ಮಾಡಿದ್ದಕ್ಕೆ ಹೋಲಿಸಿದರೆ ಬಿಜೆಪಿಯ ಗೆಲುವು ಅತ್ಯದ್ಭುತ.
ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಪಕ್ಷಗಳ ಘಟಬಂಧನ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ಗಳ ಮೈತ್ರಿಕೂಟ ಬಿಜೆಪಿಗೆ ಸೆಡ್ಡು ಹೊಡೆದಿದ್ದರೂ ಬಿಜೆಪಿಯ ನಾಗಾಲೋಟವನ್ನು ತಡೆಯಲಾಗಲಿಲ್ಲ. ಮೋದಿ ಅಲೆಯ ಸುನಾಮಿಯಲ್ಲಿ ಈ ಘಟಬಂಧನ ಮೈತ್ರಿ ಕೂಟಗಳಲ್ಲಿ ಮಕಾಡೆ ಮಲಗಿವೆ. ಕರ್ನಾಟಕದಲ್ಲಂತೂ ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಕೇಂದ್ರ ಮಂತ್ರಿ ಕೆ. ಎಚ್. ಮುನಿಯಪ್ಪ ಹಾಗೂ ಮಾಜಿ ಪ್ರಧಾನಿ ದೇವೇಗೌಡರಂತಹ ಘಟಾನುಘಟಿ ಸೋಲಿಲ್ಲದ ಸರದಾರ ಮುಖಂಡರೇ ಬಿಜೆಪಿ ಎದುರು ಹೀನಾಯ ಸೋಲು ಅನುಭವಿಸಿರುವುದು ಮತದಾರರಲ್ಲಿ ರಾಜಕೀಯ ಪ್ರಜ್ಞಾವಂತಿಕೆ ಹೆಚ್ಚುತ್ತಿರುವ ದ್ಯೋತಕ. ಜೊತೆಗೆ ಕುಟುಂಬ ರಾಜಕಾರಣವನ್ನು ಎಂದಿಗೂ ಸಹಿಸೆವು ಎಂಬ ಎಚ್ಚರಿಕೆಯ ಸಂದೇಶವೂ ಈ ಫಲಿತಾಂಶದಲ್ಲಿದೆ. ಕರ್ನಾಟಕದಲ್ಲಿ ಖರ್ಗೆ, ಮುನಿಯಪ್ಪ, ದೇವೇಗೌಡ ಇವರನ್ನೆಲ್ಲ ಸೋಲಿಸುವುದು ಅಸಾಧ್ಯವೆಂದೇ ಭಾವಿಸಲಾಗಿತ್ತು. ಪ್ರತಿ ಬಾರಿ ಜಾತಿಯ ಟ್ರಂಪ್ ಕಾರ್ಡ್ ಉರುಳಿಸಿ ಇವರೆಲ್ಲ ಗೆಲ್ಲುತ್ತಿದ್ದರು ರಹಸ್ಯವಾಗಿರಲಿಲ್ಲ. ಆದರೆ ಈ ಬಾರಿ ಆ ಟ್ರಂಪ್ ಕಾರ್ಡ್ ಉಪಯೋಗಕ್ಕೆ ಬಂದಿಲ್ಲ. ಹೊಸ ಪೀಳಿಗೆಯ ನವ ಮತದಾರರು ಜಾತಿಬಲ, ಹಣಬಲ ತೋಳ್ಬಲ ಇತ್ಯಾದಿ ಮಾಮೂಲಿ ಚುನಾವಣಾ ವರಸೆಗಳಿಗೆ ತಮ್ಮ ಅಮೂಲ್ಯ ಮತವನ್ನು ಮಾರಿಕೊಳ್ಳದೆ ನವಭಾರತದ ಭವಿಷ್ಯ ಬರೆಯುವವರಿಗಾಗಿ ಮತ ಚಲಾಯಿಸಿದ್ದಾರೆ.
ಕರ್ನಾಟಕದಲ್ಲಿ ಹಾಗೂ ಇಡೀ ದೇಶದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಹಿಂದೆಂದೂ ಈಗ ದೊರಕಿದ ಪ್ರಚಂಡ ಬಹುಮತ ಸಿಕ್ಕಿರಲಿಲ್ಲ. ಬಿಜೆಪಿ ಪಾಲಿಗೆ ಇದೊಂದು ಅಮೃತಗಳಿಗೆ. ಕೇಂದ್ರದಲ್ಲಿ ಎನ್ಡಿಎ ಮೈತ್ರಿಕೂಟದ ಆಡಳಿತ ಇದುವರೆಗೆ ಇತ್ತು. ಆದರೆ ಈ ಬಾರಿ ಬಿಜೆಪಿಯೊಂದೇ ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವಷ್ಟು ಸಂಖ್ಯಾಬಲ ಗಳಿಸಿಕೊಂಡಿದೆ. ಎನ್ಡಿಎ ಕಳೆದ ಬಾರಿಗಿಂತಲೂ ಹೆಚ್ಚು ಸಂಖ್ಯೆ ಗಳಿಸಿ, ಮೂರನೇ ಎರಡರಷ್ಟು ಬಹುಮತ ಪಡೆದಿರುವುದು ಕೇಂದ್ರದಲ್ಲಿ ದೃಢ ಹಾಗೂ ಸುಸ್ಥಿರ ಸರಕಾರ ಇದ್ದರೆ ಮಾತ್ರ ದೇಶದ ಪ್ರಗತಿ ಹಾಗೂ ಅಭಿವೃದ್ಧಿ ಸಾಧ್ಯ ಎಂದು ಮತದಾರರು ತೀರ್ಮಾನಿಸಿದಂತಿದೆ.
ಬಿಜೆಪಿ ಈ ಬಾರಿ ಪ್ರಚಂಡ ಜಯ ಸಾಧಿಸಿರುವುದಕ್ಕೆ ಪಕ್ಷದ ವ್ಯವಸ್ಥಿತ ಸಂಘಟನೆ, ಯೋಜನಾಬದ್ಧ ಪ್ರಚಾರ ಕಾರ್ಯ ಇತ್ಯಾದಿಗಳು ಕಾರಣ ಎನ್ನಬಹುದಾದರೂ ಅದಕ್ಕಿಂತಲೂ ಮಿಗಿಲಾದ ಹಲವು ಕಾರಣಗಳಿವೆ. ಈಗ ಗೆದ್ದಿರುವ ಬಿಜೆಪಿ ಎಂಪಿಗಳೆಲ್ಲರೂ ಸರ್ವ ರೀತಿಯಲ್ಲೂ ಯೋಗ್ಯರು, ಎಂಪಿ ಆಗಲು ಅರ್ಹರು ಎಂದು ಜನರು ತೀರ್ಮಾನಿಸಿದ್ದಲ್ಲ. ಆದರೆ ದೇಶವನ್ನು ಮುನ್ನಡೆಸಲು ಸಮರ್ಥ ನಾಯಕನೊಬ್ಬನ ಹುಡುಕಾಟದಲ್ಲಿ ಮತದಾರರು ಇದುವರೆಗೆ ತೊಡಗಿದ್ದರು. ಕಳೆದ 65 ವರ್ಷಗಳಲ್ಲಿ ಕಾಣದ ಆ ಸಮರ್ಥ ನಾಯಕ, ಕಳೆದ ಐದು ವರ್ಷಗಳಲ್ಲಿ ಅವರ ಕಣ್ಣಿಗೆ ಗೋಚರಿಸಿದ. ಆ ವ್ಯಕ್ತಿಯೇ ನರೇಂದ್ರ ಮೋದಿ. ಮೋದಿ ಎಂಬ ವ್ಯಕ್ತಿಗೆ ವೈಯಕ್ತಿಕ ಸ್ವಾರ್ಥದ ಲವಲೇಶವೂ ಇಲ್ಲ. ಆತ ತನಗಾಗಿ ಏನನ್ನೂ ಮಾಡೋಲ್ಲ. ದೇಶಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಸಾಹಸಿ, ತ್ಯಾಗಿ. ದೇಶದ ಮಾನ ಮರ್ಯಾದೆ, ಘನತೆ ಗೌರವಗಳನ್ನು ಬಾನೆತ್ತರಕ್ಕೆ ಎತ್ತಿ ಹಿಡಿಯಬಲ್ಲ ರಣಧೀರ ಎಂಬ ಭಾವನೆ ಮತದಾರರಲ್ಲಿ ಸಾರ್ವತ್ರಿಕವಾಗಿ ಹುದುಗಿತ್ತು. ಹಾಗಾಗಿಯೇ ಬಿಜೆಪಿಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳ ಅರ್ಹತೆ, ಯೋಗ್ಯತೆ ಮತದಾರರಿಗೆ ಗೌಣವಾಗಿತ್ತು. ಮೋದಿ ಮತ್ತೆ ಪ್ರಧಾನಿಯಾಗಬೇಕಾದರೆ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು. ಹಾಗಾಗಿ ಜಾತಿ, ಮತ, ಪಂಥ, ಅರ್ಹತೆ ಇವಾವುದನ್ನು ಪರಿಗಣಿಸದೆ ಮೋದಿಗೆ ಮತದಾರರು ಕಮಲದ ಚಿಹ್ನೆಗೆ ಮತ ಚಲಾಯಿಸಿದರು. ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಬಲ್ಲ ಛಾತಿ ಇದ್ದರೆ ಅದು ಮೋದಿಗೆ ಮಾತ್ರ ಎಂಬ ಜನರ ದೃಢ ನಂಬಿಕೆಯ ಪರಿಣಾಮವಾಗಿ ಬಿಜೆಪಿ ಅದ್ಭುತ ಗೆಲುವು ದಾಖಲಿಸಿದೆ.
ಮೋದಿಯವರನ್ನು ಚೋರ್, ನೀಚ, ಚಾಯ್ವಾಲಾ, ಪತ್ನಿ ತ್ಯಜಿಸಿದ ಅಯೋಗ್ಯ ಎಂದೆಲ್ಲ ಬಾಯಿಗೆ ಬಂದಂತೆ ತುಚ್ಛವಾಗಿ ನಿಂದಿಸಿದವರು ಈಗ ಮೌನಕ್ಕೆ ಶರಣಾಗದೆ ವಿಧಿಯೇ ಇಲ್ಲ. ಮೋದಿಯೆಂಬ ಸರ್ವಾಧಿಕಾರಿ ಗೆದ್ದರೆ ತಾನು, ತನ್ನ ಪತ್ನಿ ಈ ದೇಶದಲ್ಲಿರುವುದಿಲ್ಲ ಎಂದು ಹಿಂದಿಯ ಖ್ಯಾತ ಕವಿ ಜಾವೇದ್ ಅಖ್ತರ್ ಮತ್ತು ಆತನ ತಾರಾ ಪತ್ನಿ ಶಬಾನಾ ಆಜ್ಮಿ ಘೋಷಿಸಿದ್ದರು. ತಮ್ಮ ಹೇಳಿಕೆಯಂತೆ ಪ್ರಾಮಾಣಿಕವಾಗಿ ಅವರು ನಡೆದುಕೊಳ್ಳುವವರೇ ಆಗಿದ್ದರೆ ಕೂಡಲೇ ವಿಮಾನದ ಟಿಕೆಟ್ ಬುಕ್ ಮಾಡುವುದೊಳಿತು. ಅವರಂಥವರು ಭಾರತಕ್ಕೂ ಅಷ್ಟೇನೂ ಅಗತ್ಯವಿಲ್ಲ! ಮೋದಿಯ ನಿಂದಕರಿಗೆ ಈ ಫಲಿತಾಂಶ ಪ್ರಕಟವಾದ ಬಳಿಕ ನಾನಾ ಬಗೆಯ ಶಾರೀರಿಕ, ಮಾನಸಿಕ ಕಾಯಿಲೆಗಳು ಕಾಡಿರುವುದು ಸಹಜ.
ಅದೇನೇ ಇರಲಿ, ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಪದ್ಧತಿಯ ದೇಶವಾಗಿರುವ ಭಾರತದಲ್ಲಿ ಶಾಂತಿಯುತ ಚುನಾವಣೆ ನಡೆದು ಭಾರತ ಗೆದ್ದಿದೆ. ಉತ್ತಮ ಆಡಳಿತ, ಪಾರದರ್ಶಕತೆ, ಭ್ರಷ್ಟಾಚಾರ ಮುಕ್ತ ರಾಜಕಾರಣಕ್ಕೆ ಜನರು ಮನ್ನಣೆ ನೀಡಿದ್ದಾರೆ. ಮತದಾರರು ಮತ್ತೊಮ್ಮೆ ಮೋದಿ ಆಡಳಿತಕ್ಕೆ ಜೈ ಎಂದಿದ್ದಾರೆ. ಆ ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಗುರುತರ ಹೊಣೆ ಮಾತ್ರ ಎರಡನೇ ಬಾರಿಗೆ ಅಧಿಕಾರಕ್ಕೇರಿರುವ ಮೋದಿ ಸರ್ಕಾರದ್ದು.
✍ ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.