ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಗೆಲುವು ಸಾಧಿಸಿದ ನಂತರ ಮತ್ತೊಮ್ಮೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಗೆ ರೆಕ್ಕೆ ಪುಕ್ಕ ಸಿಕ್ಕಿದೆ. ಆದರೆ ಕಾಂಗ್ರೆಸ್ ಮತ್ತು ಕೆಲವು ಪ್ರಾದೇಶಿಕ ಪಕ್ಷಗಳು ಸೇರಿದಂತೆ ವಿರೋಧ ಪಕ್ಷದ ನಾಯಕರು ಈ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಮಹತ್ವದ ಸಂಗತಿಯೆಂದೆರೆ, ಬಿಜು ಜನತಾದಳದ ನವೀನ್ ಪಟ್ನಾಯಕ್ ಅವರ ಗೆಲುವಿನ ಮೂಲಕ ತುಲನಾತ್ಮಕವಾಗಿ ಹಿಂದುಳಿದ ರಾಜ್ಯವಾಗಿರುವ ಒರಿಸ್ಸಾದ ಮತದಾರರು ಕೂಡ ರಾಜ್ಯದಲ್ಲಿ ಯಾರಿಗೆ ಮತ ಹಾಕಬೇಕು ಮತ್ತು ಕೇಂದ್ರದಲ್ಲಿ ಯಾರಿಗೆ ಮತಹಾಕಬೇಕು ಎಂಬುದನ್ನು ಗುರುತಿಸಲು ಸಮರ್ಥರಿದ್ದೇವೆ ಎಂಬುದನ್ನು ಕಳೆದ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ.
ಏಕಕಾಲದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳನ್ನು ನಡೆಸುವ ಕಲ್ಪನೆಯನ್ನು ಅನೇಕ ವಿರೋಧ ಪಕ್ಷಗಳು ವಿರೋಧಿಸಲು ಎರಡು ಕಾರಣಗಳಿವೆ. ಒಂದು ರಾಜ್ಯ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳು ಮೇಲುಗೈ ಸಾಧಿಸಬಹುದು ಎಂಬ ಭಯ; ಎರಡನೆಯದು – ಈ ಬದಲಾವಣೆಯು ಮೋದಿಯವರಿಗೆ ಮತ್ತು ಅವರ ಪಕ್ಷಕ್ಕೆ ನೇರವಾಗಿ ಪ್ರಯೋಜನವನ್ನು ನೀಡಬಲ್ಲದು ಎಂಬ ಭಯ.
ಈ ಕಲ್ಪನೆಯನ್ನು ಬೆಂಬಲಿಸುವವರು, ಏಕಕಾಲದಲ್ಲಿ ಚುನಾವಣೆ ನಡೆದರೆ ಎರಡು ಪ್ರಮುಖ ಪ್ರಯೋಜನಗಳು ಇದೆ ಎಂಬುದನ್ನು ಮಾತ್ರ ನಿರೀಕ್ಷೆ ಮಾಡುತ್ತಿದ್ದಾರೆ. ಎರಡು ಪ್ರಯೋಜನೆಗಳೆಂದರೆ,
ಮೊದಲನೆಯದು-ಎರಡು ಚುನಾವಣೆ ಒಟ್ಟಿಗೆ ನಡೆದರೆ ಖರ್ಚು ಕಡಿಮೆಯಾಗುತ್ತದೆ ಎಂಬುದು. ಆದರೆ ಪ್ರಜಾಪ್ರಭುತ್ವದಲ್ಲಿ ವೆಚ್ಚದ ಬಗೆಗಿನ ಚರ್ಚೆಯನ್ನು ನಾವು ಮುಖ್ಯವಾಗಿ ಪರಿಗಣಿಸುವಂತಿಲ್ಲ. ಯಾಕೆಂದರೆ ಇದು ಕೇವಲ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಇತರ ಲಾಭಗಳಲ್ಲಿ ಒಂದಷ್ಟೇ. ಇದು ಒಂದು ರಾಷ್ಟ್ರ, ಒಂದು ಚುನಾವಣೆಯ ಪರವಾದ ವಾದದ ಕೇಂದ್ರವಾಗಿರಲು ಸಾಧ್ಯವಿಲ್ಲ.
ಎರಡನೆಯದು- ಆಡಳಿತ ಸುಧಾರಣೆಗೊಳ್ಳುತ್ತದೆ ಎಂಬುದು. ಏಕಕಾಲದಲ್ಲಿ ಚುನಾವಣೆಗಳು ನಡೆದರೆ, ಆಡಳಿತ ಪಕ್ಷಗಳ ಗಮನವನ್ನು ಅಭಿವೃದ್ಧಿಯಿಂದ ಬೇರೆಡೆಗೆ ಸೆಳೆಯಲು ಪ್ರತಿವರ್ಷ ಯಾವುದೇ ಇತರ ಚುನಾವಣೆಗಳು ಇರುವುದಿಲ್ಲ. ಚುನಾವಣಾ ನೀತಿ ಸಂಹಿತೆಯು ಪ್ರತಿ ವರ್ಷ ಹಲವಾರು ತಿಂಗಳುಗಳವರೆಗೆ ಜಾರಿಯಲ್ಲಿರುವುದಿಲ್ಲ, ಕೇವಲ ಐದು ವರ್ಷಗಳಲ್ಲಿ ಒಮ್ಮೆ ಮಾತ್ರ ಇರುತ್ತದೆ.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಆಡಳಿತವು ಉತ್ತಮಗೊಳ್ಳುತ್ತದೆ. ಅಧಿಕಾರದಲ್ಲಿರುವ ಪಕ್ಷಗಳಿಗೆ ಪ್ರತಿ ವರ್ಷ ಚುನಾವಣೆಯ ನಂತರ ಚುನಾವಣೆಗೆ ಅಜೆಂಡಾ ಸಿದ್ಧ ಮಾಡುವ ಅಗತ್ಯ ಬೀಳುವುದಿಲ್ಲ. ಜನರನ್ನು ಓಲೈಸಲು ಅಲ್ಪಾವಧಿಯ ಜನಪ್ರಿಯ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು ಸಂಪೂರ್ಣ ಅಧಿಕಾರಾವಧಿಯಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ತಲುಪಿಸುವತ್ತ ಗಮನ ಹರಿಸಬಹುದು. ಅಧಿಕಾರಿಗಳು ಮತ್ತು ಭದ್ರತಾ ಪಡೆಗಳನ್ನು ಪ್ರತಿವರ್ಷ ಚುನಾವಣಾ ಕರ್ತವ್ಯದಿಂದ ಮುಕ್ತಗೊಳಿಸಬಹುದು.
‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ವಿರೋಧಿಸುವವರಿಗೆ ಈ ಕೆಳಗಿನ ಅಂಶಗಳು ಪ್ರಮುಖವಾಗಿರುತ್ತದೆ.
1. ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರ ಪತನಗೊಂಡರೆ ಏನು ಮಾಡುವುದು? ಯಾವುದೇ ಪಕ್ಷವು ಸರ್ಕಾರ ರಚಿಸುವ ಸ್ಥಿತಿಯಲ್ಲಿರದಿದ್ದರೆ ಅಥವಾ ಅತಂತ್ರ ವಿಧಾನಸಭೆ ರಚನೆಯಾದರೆ ಏನು ಮಾಡುವುದು?
2.ರಾಷ್ಟ್ರೀಯ ಪಕ್ಷಗಳಿಗೆ ನ್ಯಾಯಸಮ್ಮತವಲ್ಲದ ಲಾಭಗಳಾಗಬಹುದು, ಚುನಾವಣೆಯ ವೇಳೆ ಪ್ರಾದೇಶಿಕ ವಿಷಯಗಳಿಗಿಂತ ರಾಷ್ಟ್ರೀಯ ವಿಷಯಗಳೇ ಪ್ರಮುಖವಾಗಬಹುದು.
ಇದು ತಾರ್ಕಿಕ ವಿರೋಧಗಳೇ ಆಗಿವೆ. ಆದರೆ ಆಡಳಿತ ಸುಧಾರಣೆಯ ಪ್ರಮುಖ ಗುರಿ ಎಂಬುದುನ್ನು ಒಪ್ಪಿಕೊಳ್ಳುವವರೆಗೂ ಮೇಲಿನ ಅಂಶಗಳನ್ನು ನಿಭಾಯಿಸಬಹುದು.
ಪ್ರತಿ ಐದು ವರ್ಷಗಳಿಗೊಮ್ಮೆ ಎರಡು ಚುನಾವಣೆಗಳನ್ನು, ಅಂದರೆ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಒಂದು ಚುನಾವಣೆಯನ್ನು ಆಯೋಜನೆಗೊಳಿಸುವುದು ಹೆಚ್ಚು ತಾರ್ಕಿಕವಾಗಿದೆ.
ಸರ್ಕಾರ ಬಿದ್ದರೆ, ನಾವು ಕೆಲವು ತಿಂಗಳುಗಳವರೆಗೆ ರಾಷ್ಟ್ರಪತಿ ಆಳ್ವಿಕೆಯನ್ನು ಹೊಂದಬಹುದು. ಆದರೆ ಆ ಅವಧಿ ಮುಗಿದಾಗ ಮಾಡಬೇಕಾದ ತಾರ್ಕಿಕ ವಿಷಯವೆಂದರೆ, ಶಾಸಕಾಂಗಕ್ಕೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಂತೆ ಸೂಚಿಸಲು ರಾಜ್ಯಪಾಲರಿಗೆ ಮನವಿ ಮಾಡುವುದು ಮತ್ತು ಮುಂದಿನ ಸುತ್ತಿನ ಚುನಾವಣೆ ನಡೆಯುವವರೆಗೂ ಪ್ರಮುಖ ನೀತಿ ನಿರ್ಧಾರಗಳನ್ನು ಕೈಗೊಳ್ಳದೆ, ಎಲ್ಲಾ ಪಕ್ಷಗಳನ್ನು ಒಳಗೊಳ್ಳುವಂತೆ ಸರ್ಕಾರದ ಮುಖ್ಯಸ್ಥರಿಗೆ ಸೂಚಿಸುವುದು. ಮುಂದಿನ ಚುನಾವಣೆಗಳವರೆಗೆ ನಾವು ಕೇವಲ ನೀತಿ-ತಟಸ್ಥ ಸರ್ಕಾರವನ್ನು ಹೊಂದುವಂತೆ ಮಾಡುವುದು.
ಇನ್ನೊಂದು ಆಯ್ಕೆ, ನಾವು ಒಂದು ರಾಷ್ಟ್ರ ಒಂದು ಚುನಾವಣೆಗೆ ಅಂಟಿಕೊಂಡ ಬಳಿಕ ಸರ್ಕಾರ ಪತನಗೊಂಡರೆ ಕೂಡಲೇ ಚುನಾವಣೆಗಳನ್ನು ನಡೆಸುವುದು, ಆದರೆ ಚುನಾಯಿತ ಸರ್ಕಾರದ ಅವಧಿ ಮುಂದಿನ ನಿಗದಿತ ಚುನಾವಣೆಯವರೆಗೆ ಮಾತ್ರ ಇರುವಂತೆ ನೋಡಿಕೊಳ್ಳುವುದು. ಅಂದರೆ, ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್-ಮೇ 2019 ರಲ್ಲಿ ನಡೆದರೆ, ರಾಜ್ಯ ಸರ್ಕಾರವು 2019 ರ ಅಕ್ಟೋಬರ್ನಲ್ಲಿ ಪತನಗೊಂಡರೆ, ಮಧ್ಯಕಾಲೀನ ಚುನಾವಣೆಯನ್ನು ನಡೆಸುವುದು. ಈ ವೇಳೆ ಆರಿಸಿ ಬಂದ ಸರ್ಕಾರದ ಅವಧಿಯು ಮುಂಬರುವ ಸಾರ್ವತ್ರಿಕ ಚುನಾವಣೆ ಅಂದರೆ 2024 ರ ಮೇ ವರೆಗೆ ಮಾತ್ರ ಇರುವಂತೆ ಮಾಡುವುದು ಮತ್ತು ಐದು ವರ್ಷಗಳ ಪೂರ್ಣಾವಧಿಯನ್ನು ಹೊಂದುವುದಿಲ್ಲ.
ಎರಡನೆಯದಾಗಿ, ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳಿಗಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂಬ ಊಹೆಯೂ ತಪ್ಪಾಗಿದೆ. ಕಾರಣ- ಮತದಾರನು ಏಕಕಾಲದಲ್ಲಿ ಮತ ಚಲಾಯಿಸಿದರೂ ಪ್ರತ್ಯೇಕವಾಗಿಯೇ ಮತ ಚಲಾಯಿಸುತ್ತಾನೆ. ರಾಜ್ಯ ಮತ್ತು ಕೇಂದ್ರ ಏನು ಸಾಧನೆ ಮಾಡಿದೆ ಎಂಬುದರ ಸ್ಪಷ್ಟ ತಿಳುವಳಿಕೆ ಆತನಿಗಿರುತ್ತದೆ. ಹೀಗಾಗಿ ಕೇಂದ್ರದಲ್ಲಿ ಯಾರನ್ನು ಬೇಕೋ ಅವರನ್ನು, ರಾಜ್ಯದಲ್ಲಿ ಯಾರನ್ನು ಬೇಕೋ ಅವರನ್ನು ಆಯ್ಕೆ ಮಾಡುತ್ತಾನೆ. ರಾಷ್ಟ್ರೀಯ ಪಕ್ಷವೊಂದಕ್ಕೆ ಇರುವ ಏಕೈಕ ಪ್ರಯೋಜನವೆಂದರೆ, ಅದು ಕೇಂದ್ರಕ್ಕೆ ಒಂದು ರೀತಿಯ ಅಜೆಂಡಾವನ್ನು ಮತ್ತು ರಾಜ್ಯಕ್ಕೆ ಇನ್ನೊಂದು ರೀತಿಯ ಅಜೆಂಡಾವನ್ನು ರಚಿಸುವುದು. ಆದರೆ ಮತದಾರನು ಅದನ್ನು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾನೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ರಾಜ್ಯ ಮತ್ತು ಕೇಂದ್ರ ಚುನಾವಣೆಗಳಲ್ಲಿ ಮತದಾರರು ಬೇರೆ ಬೇರೆ ದೃಷ್ಟಿಕೋನ ಇಟ್ಟುಕೊಂಡೇ ಮತ ಚಲಾಯಿಸುತ್ತಾರೆ ಎಂಬುದು ದೆಹಲಿ (2014 ಮತ್ತು 2015), ಬಿಹಾರ (2014 ಮತ್ತು 2015), ಮತ್ತು ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ಕರ್ನಾಟಕ ಮತ್ತು ತೆಲಂಗಾಣ (2018 ಮತ್ತು 2019) ಗಳಲ್ಲಿ ನಿರಂತರವಾಗಿ ತಿಳಿದು ಬಂದಿದೆ.
ಮತ್ತೊಂದೆಡೆ, ಪ್ರಾದೇಶಿಕ ಪಕ್ಷಗಳು ಒಮ್ಮೆ ಚುನಾಯಿತರಾದ ನಂತರ ರಾಷ್ಟ್ರೀಯ ಪಕ್ಷಗಳ ಮಾದರಿಯ ಆಡಳಿತ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬುದನ್ನು ಹೇಳಲು ಬರುವುದಿಲ್ಲ. ಸ್ಥಳೀಯಾಡಳಿತ ಮತ್ತು ಪುರಸಭೆಯ ಚುನಾವಣೆಗಳಲ್ಲಿ ರಾಷ್ಟ್ರೀಯ ಚುನಾವಣೆಗಳ ಕುರಿತು ಮಾತನಾಡದೇ ಇರಲೂ ಆಗುವುದಿಲ್ಲ. ಪ್ರತಿ ಚುನಾವಣೆಯಲ್ಲೂ ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯ ಮುಖ್ಯವೇ ಆಗಿರುತ್ತದೆ.
ಆದರೆ ಒಂದು ರಾಷ್ಟ್ರ ಒಂದು ಚುನಾವಣೆಯನ್ನು ವಿರೋಧಿಸುವವರ ನಿಜವಾದ ಸಮಸ್ಯೆ ಅಂತಿಮವಾಗಿ ಮೋದಿಯೇ ಆಗಿದ್ದಾರೆ. ಮೋದಿಯವರ ಜನಪ್ರಿಯತೆ ಕಂಡು ಪ್ರತಿಪಕ್ಷಗಳು ಭಯಭೀತರಾಗಿದ್ದಾರೆಯೇ ಹೊರತು ಕೇವಲ ಒಂದು ರಾಷ್ಟ್ರ, ಒಂದು ಚುನಾವಣೆಯಿಂದಲ್ಲ.
ಆದರೆ ರಾಜಕೀಯದಲ್ಲಿ ಜನಪ್ರಿಯತೆ ಶಾಶ್ವತವಾಗಿರುವುದಿಲ್ಲ, ಮೋದಿಯ ಬಳಿಕ ಸನ್ನಿವೇಶಗಳು ಬದಲಾಗಬಹುದು. ಪ್ರತಿಪಕ್ಷಗಳೂ ಜನಪ್ರಿಯ ನಾಯಕನನ್ನು ಪಡೆಯಬಹುದು. ಆದರೆ ಪ್ರಸ್ತುತ ಪ್ರತಿಪಕ್ಷಗಳು ದೂರದೃಷ್ಟಿಯಿಲ್ಲದೆಯೇ ಒಂದು ರಾಷ್ಟ್ರ ಒಂದು ಚುನಾವಣೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಆಡಳಿತಕ್ಕೆ ಸಹಕಾರಿಯಾಗಬಲ್ಲ, ಆಡಳಿತವನ್ನು ಸುಧಾರಿಸಬಲ್ಲ ಪ್ರತಿ ಹೆಜ್ಜೆಯನ್ನೂ ಬೆಂಬಲಿಸಬೇಕಾದುದು ಎಲ್ಲರ ಕರ್ತವ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.