ತಿರುವನಂತಪುರಂ: ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಂದಳಂನಲ್ಲಿ ಸೋಮವಾರ ಶಬರಿಮಲೆ ಸಂರಕ್ಷಣಾ ಸಂಗಮವನ್ನು ಉದ್ಘಾಟಿಸಿದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸನಾತನ ಧರ್ಮವನ್ನು ವಿರೋಧಿಸುವ ಇಬ್ಬರೂ ನಾಯಕರು ದೇವಾಲಯ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.
ಎಡ ಸರ್ಕಾರದ ಗ್ಲೋಬಲ್ ಅಯ್ಯಪ್ಪ ಸಂಗಮ್ ಮತ್ತು ತಮಿಳುನಾಡಿನ ಗ್ಲೋಬಲ್ ಮುರುಗ ಸಮ್ಮೇಳನವನ್ನು ಟೀಕಿಸಿದ ಅವರು, “ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡಿದವರು ಸ್ಟಾಲಿನ್ ಮತ್ತು ಅವರ ಮಗ ಉದಯನಿಧಿ. ಸ್ಟಾಲಿನ್ ಅವರನ್ನು ಅಯ್ಯಪ್ಪ ಸಂಗಮ್ಗೆ ಆಹ್ವಾನಿಸಿದವರು ಪಿಣರಾಯಿ ವಿಜಯನ್. ಮುರುಗ ಸಮ್ಮೇಳನವು ಮಧುರೈನಲ್ಲಿ ನಡೆಯಿತು ಮತ್ತು ಪಿಣರಾಯಿ ಅದನ್ನು ಇಲ್ಲಿ ಕೇರಳದಲ್ಲಿ ಪುನರಾವರ್ತಿಸಿದರು” ಎಂದಿದ್ದಾರೆ.
ಪಿಣರಾಯಿ ವಿಜಯನ್ ಅವರ ಹಿಂದೂ ಧರ್ಮಗ್ರಂಥಗಳ ಸಾರ್ವಜನಿಕ ಉಲ್ಲೇಖಗಳನ್ನು ನೇರವಾಗಿ ಟೀಕಿಸಿದ ಅವರು, “ದೇವರು ಇಲ್ಲ ಎಂದು ಹೇಳುವವರು ಈಗ ಭಗವದ್ಗೀತೆಯ ಬಗ್ಗೆ ಕ್ಲಾಸ್ ನೀಡುತ್ತಿದ್ದಾರೆ. ಅಧ್ಯಾಯ 12 ನ್ನು ಅವರು ಉಲ್ಲೇಖಿಸಿದ್ದಾರೆ, ಕನಿಷ್ಠ ಅದರಾಚೆಗೂ ಅಧ್ಯಾಯಗಳಿವೆ ಎಂದು ಅವರು ತಿಳಿದುಕೊಳ್ಳಲಿ” ಎಂದಿದ್ದಾರೆ.
ತಿರುವಳ್ಳುವರ್ ಅವರ ಬರಹಗಳನ್ನು ಉಲ್ಲೇಖಿಸಿ, ನಾಗರಿಕರಿಗೆ ದ್ರೋಹ ಮಾಡುವುದು ಮತ್ತು ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವುದು ಕೊಲೆಗಿಂತ ಗಂಭೀರ ಅಪರಾಧ ಎಂದು ಅಣ್ಣಾಮಲೈ ಹೇಳಿದ್ದಾರೆ.
ಶಬರಿಮಲೆ ಸಂರಕ್ಷಣಾ ಸಂಗಮ ಕಾರ್ಯಕ್ರಮವು ದೊಡ್ಡ ಜನಸಮೂಹವನ್ನು ಸೆಳೆಯಿತು ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವ ಮತ್ತು ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್, ಹಿರಿಯ ನಾಯಕ ಕುಮ್ಮನಂ ರಾಜಶೇಖರನ್ ಮತ್ತು ಹಿಂದೂ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.
ಸಂಘ ಪರಿವಾರದ ಅಂಗಸಂಸ್ಥೆಗಳ ಬೆಂಬಲದೊಂದಿಗೆ ಆಯೋಜಿಸಲಾದ ಇದನ್ನು ಎರಡು ದಿನಗಳ ಹಿಂದೆ ಪಂಪಾದಲ್ಲಿ ನಡೆದ ತಿರುವಾಂಕೂರು ದೇವಸ್ವಂ ಮಂಡಳಿಯ ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಪ್ರತಿಯಾಗಿ ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.