‘ಆಯುಷ್ಮಾನ್ ಭವ’ ಎಂಬ ಆಶೀರ್ವಚನವನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಯಾರಾದರೂ ಮಾಡಿದ್ದರೆ, ಬಹುಶಃ ಅದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಇರಬಹುದೇನೋ. ಕಳೆದ 4 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಚಯಿಸಿದ್ದು, ಕೋಟ್ಯಂತರ ಜನರು ಇದರ ಫಲಾನುಭವಿಗಳಾಗಿದ್ದಾರೆ.
ಆಯುಷ್ಮಾನ್ ಭಾರತ
ಆರ್ಥಿಕ ಸಮಸ್ಯೆಯ ಕಾರಣದಿಂದ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೇ, ಹಣಕ್ಕಾಗಿ ಬೇರೆಯವರ ಸಹಾಯವನ್ನು ಎದುರು ನೋಡುವ, ಅಂತಹ ಸಹಾಯ ಸಮಯಕ್ಕೆ ಸರಿಯಾಗಿ ಸಿಗದೇ ಜೀವ ಕಳೆದುಕೊಂಡ ಹಲವಾರು ಉದಾಹರಣೆಗಳನ್ನು ಕಳೆದ 6 ದಶಕದಲ್ಲಿ ಕಂಡಿದ್ದೇವೆ. ಈ ಕೊರತೆಯನ್ನು ನೀಗಿಸುವ, ಬಡವರ ಪಾಲಿಗೆ ಸಂಜೀವಿನಿಯಾಗಿ ಒದಗಿರುವ ಕೇಂದ್ರ ಸರ್ಕಾರವು ವಿಶ್ವದ ಅತಿದೊಡ್ಡ ವಿಮಾ ಯೋಜನೆಯೆಂದೇ ಹೆಸರಾಗಿರುವ ಆಯುಷ್ಮಾನ್ ಭಾರತವನ್ನು ಜಾರಿಗೊಳಿಸಿದ್ದು, 10 ಕೋಟಿ ಕುಟುಂಬಗಳ ಒಟ್ಟು 50 ಕೋಟಿ ಜನರನ್ನು ಇದರ ವ್ಯಾಪ್ತಿಗೆ ತರುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ. ವಾರ್ಷಿಕ ರೂ. 5 ಲಕ್ಷದವರೆಗಿನ ಆಸ್ಪತ್ರೆ ಖರ್ಚನ್ನು ಈ ವಿಮೆಯಡಿಯಲ್ಲಿ ಕೇಂದ್ರ ಸರ್ಕಾರವೇ ಭರಿಸಲಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 14,000 ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಆಯುಷ್ಮಾನ್ ಭಾರತ ಯೋಜನೆಯ ವಿಶೇಷತೆಯೆಂದರೆ, ವಿಮೆಯ ವ್ಯಾಪ್ತಿಗೆ ಬರುವ ಯಾವುದೇ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ಕ್ಯಾನ್ಸರ್, ಹೃದಯ ಸಮಸ್ಯೆ ಮೊದಲಾದ 1,354 ತರಹದ ಚಿಕಿತ್ಸೆಗಳು ಇದರಲ್ಲಿ ಸೇರಿವೆ. ಯೋಜನೆ ಜಾರಿಯಾದ ಮೊದಲ 100 ದಿನಗಳಲ್ಲಿ 6.85 ಲಕ್ಷ ಜನರು ಇದರ ಫಲಾನುಭವಿಗಳಾಗಿದ್ದಾರೆ. ಇದುವರೆಗೆ 62 ಲಕ್ಷ ಕುಟುಂಬಗಳಿಗೆ ವಿಮೆಯ ಕಾರ್ಡನ್ನೂ ವಿತರಿಸಲಾಗಿದ್ದು, 8.5 ಲಕ್ಷ ಜನ ಇದರ ಲಾಭ ಪಡೆದಿದ್ದಾರೆ.
ಸ್ಟೆಂಟ್ ಮತ್ತು ಕೃತಕ ಮಂಡಿ ಚಿಪ್ಪು
ಹೃದಯಾಘಾತಕ್ಕೆ ಒಳಗಾಗಿರುವ ರೋಗಿಗಳಿಗೆ ಅಳವಡಿಸುವ ಸ್ಟೆಂಟ್ಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಒಂದು ಔಷಧ ಸೂಸುವ ಸ್ಟೆಂಟ್, ಇನ್ನೊಂದು ಬೇರ್ ಮೆಟಲ್ ಸ್ಟೆಂಟ್.
• ಈ ಹಿಂದೆ ಔಷಧ ಸೂಸುವ ಸ್ಟೆಂಟ್ಗಳ ಬೆಲೆಯು ರೂ. 1,58,000 ಇತ್ತು. ಕೇಂದ್ರ ಸರ್ಕಾರವು ಇದರ ಬೆಲೆಯನ್ನು ರೂ. 29,285 ಕ್ಕೆ ಇಳಿಕೆ ಮಾಡಿಸಿದೆ.
• ಈ ಹಿಂದೆ ಬೇರ್ ಮೆಟಲ್ ಸ್ಟೆಂಟಿನ ಬೆಲೆಯು ರೂ. 75,000/- ಇತ್ತು. ಇದರ ಬೆಲೆಯನ್ನು ರೂ. 7,923/- ಕ್ಕೆ ಇಳಿಕೆ ಮಾಡಿದೆ.
• ವೃದ್ಧಾಪ್ಯದಲ್ಲಿ ಉಂಟಾಗುವ ಮಂಡಿ ಚಿಪ್ಪಿನ ಸಮಸ್ಯೆಗೆ ಅಳವಡಿಸುವ ಕೃತಕ ಮಂಡಿ ಚಿಪ್ಪಿನ ಬೆಲೆಯು ರೂ. 1,14,000 ದಿಂದ ರೂ. 54,720 ಕ್ಕೆ ಇಳಿದಿದೆ. ಕೇಂದ್ರ ಸರ್ಕಾರದ ಬೆಲೆ ನಿಯಂತ್ರಣದಿಂದ ಹಲವಾರು ವಯೋವೃದ್ಧರು ಇದರ ಫಲಾನುಭವಿಗಳಾಗಿದ್ದಾರೆ.
ಜನೌಷಧ ಕೇಂದ್ರ – ಕೈಗೆಟಕುವ ದರದಲ್ಲಿ ಔಷಧ
ಔಷಧ ಕಂಪನಿಗಳು ಮಾರಾಟ ಮಾಡುವ ಔಷಧದ ಬೆಲೆಯನ್ನು ನಿಯಂತ್ರಿಸಲು ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಜಾರಿ ಗೊಳಿಸಿದೆ. ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಔಷಧಗಳನ್ನು ಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ಜನೌಷಧ ಕೇಂದ್ರಗಳನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸ್ಥಾಪಿಸಿದೆ. ಇದರ ಅಂಗವಾಗಿ 1,054 ಔಷಧಗಳನ್ನು ಬೆಲೆ ನಿಯಂತ್ರಣದ ವ್ಯಾಪ್ತಿಗೆ ತಂದಿದ್ದು, ಕೋಟ್ಯಂತರ ಜನರು ಇದರ ಲಾಭ ಪಡೆದಿದ್ದಾರೆ.
ದೇಶದಲ್ಲಿ 4,600 ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳಲ್ಲಿ ಔಷಧಗಳು ಶೇ. 50 ರಿಂದ ಶೇ. 85 ರಷ್ಟು ರಿಯಾಯಿತಿ ದರದಲ್ಲಿ ದೊರೆಯುತ್ತಿವೆ. ಕರ್ನಾಟಕದಲ್ಲಿಯೂ 400 ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ತೆರೆಯಲಾಗಿದ್ದು ಬಡವರ ಪಾಲಿಗೆ ಇವು ಸಂಜೀವಿನಿಯಂತಾಗಿವೆ.
ಕೇಂದ್ರ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆಯಾದ ಅಮೃತ್ ಔಷಧ ಅಂಗಡಿಗಳ ಮೂಲಕ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಔಷಧಗಳು ಶೇ. 60 ರಿಂದ ಶೇ. 90 ರಷ್ಟು ರಿಯಾಯಿತಿ ದರದಲ್ಲಿ ಜನರಿಗೆ ಲಭ್ಯವಾಗುತ್ತಿವೆ.
ಮಿಷನ್ ಇಂದ್ರಧನುಷ್
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಿಷನ್ ಇಂದ್ರಧನುಷ್ ಯೋಜನೆಯಡಿಯಲ್ಲಿ ದೇಶದ 528 ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಲ್ಕು ಹಂತಗಳಲ್ಲಿ ರೋಗನಿರೋಧಕ ಲಸಿಕೆ ನೀಡುತ್ತಿರುವ ಕೇಂದ್ರ ಸರ್ಕಾರ ಇದುವರೆಗೆ 80.63 ಲಕ್ಷ ಗರ್ಭಿಣಿ ಮಹಿಳೆಯರಿಗೆ ಮತ್ತು 31.5 ಕೋಟಿ ಮಕ್ಕಳಿಗೆ ರೋಗನಿರೋಧಕ ರಕ್ಷಣೆ ನೀಡಿದೆ. 2020 ರ ಹೊತ್ತಿಗೆ ದಡಾರ, 2025ರ ವೇಳೆಗೆ ಕ್ಷಯರೋಗವನ್ನು ತೊಡೆದುಹಾಕುವ ಯೋಜನೆಗಳನ್ನೂ ಕೇಂದ್ರ ಸರ್ಕಾರ ಜಾರಿಮಾಡಿದೆ. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿಯಲ್ಲಿ ಕರ್ನಾಟಕದ 3 ಲಕ್ಷಕ್ಕೂ ಅಧಿಕ ಗರ್ಭಿಣಿ ಮಹಿಳೆಯರಿಗೆ ರೂ. 6,000 ಸಹಾಯ ಧನ ನೀಡಿದೆ. ಈ ಹಿಂದೆ ಗರ್ಭಿಣಿ ಸ್ತ್ರೀಯರಿಗಿದ್ದ 12 ವಾರಗಳ ವೇತನ ಸಹಿತ ರಜೆಯನ್ನು, 26 ವಾರಕ್ಕೆ ಏರಿಸಿದೆ.
ಅಂತರರಾಷ್ಟ್ರೀಯ ಯೋಗದಿನ
ರೋಗ ಬಂದ ಮೇಲೆ ಗುಣಪಡಿಸುವ ವೈದ್ಯಕೀಯ ವಿಜ್ಞಾನ ಇಂದು ಬಹಳ ಮುಂದುವರಿದಿಗೆ. ಆದರೆ, ರೋಗವೇ ಬರದಂತೆ ಜೀವನ ನಡೆಸುವುದು ಬುದ್ಧಿವಂತರ ಲಕ್ಷಣವಲ್ಲವೇ? ಯೋಗದ ಮಹತ್ತ್ವವಿರುವುದು ಇಲ್ಲಿಯೇ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜೀವನದ ಭಾಗವಾಗಿದ್ದ ಯೋಗಕ್ಕೆ ವಿಶ್ವ ಮಾನ್ಯತೆ ಸಿಕ್ಕಿದ್ದು ಜೂನ್ 21 ನ್ನು ಅಂತರರಾಷ್ಟ್ರೀಯ ಯೋಗದಿನ ಎಂದು ಘೋಷಿಸಿದ ಮೇಲೆಯೇ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಯೋಗ ದಿನದ ಆಚರಣೆಯ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಮುಂದಿಟ್ಟಾಗ, 170 ಕ್ಕೂ ಹೆಚ್ಚು ದೇಶಗಳು ಇದನ್ನು ಹರ್ಷದಿಂದ ಒಪ್ಪಿಕೊಂಡವು. ಹಾಗಾಗಿ, ಇಂದು ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲೂ ಕೂಡ ಯೋಗದಿನದ ಆಚರಣೆ ನಡೆಯುತ್ತಿದೆ.
ಭಾರತದಲ್ಲಂತೂ ಯೋಗದ ಬಗ್ಗೆ ಜನಜಾಗೃತಿ ಹೆಚ್ಚಾಗುತ್ತಿದೆ. ಹೊಸ ಹೊಸ ಯೋಗಕೇಂದ್ರಗಳು, ಪ್ರಕೃತಿ ಚಿಕಿತ್ಸಾ ಕೇಂದ್ರಗಳೂ ಪ್ರಾರಂಭವಾಗುತ್ತಿವೆ. ಶಾಲೆಗಳಲ್ಲಿ ಯೋಗ ತರಗತಿಗಳು ನಡೆಯುತ್ತಿವೆ. ಮುಂದೆ ಆರೋಗ್ಯಯುತ ಜೀವನಶೈಲಿ ನಡೆಸಲು ಮಕ್ಕಳಿಗೆ ಶಾಲೆಗಳಲ್ಲೇ ಭದ್ರ ತಳಪಾಯ ಸಿಗುವಂತಾಗಿದೆ. ಮಧ್ಯ ವಯಸ್ಸಿನಲ್ಲೇ ರೋಗಗಳಿಗೆ ತುತ್ತಾಗುತ್ತಿರುವ ಇಂದಿನ ದಿನಗಳಲ್ಲಿ ಯೋಗವು ಸಮಾಜಕ್ಕೆ ಒಂದು ವರವಾಗಿ ಪರಿಣಮಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಆಸ್ಪತ್ರೆ ನಡೆಸುವುದನ್ನು ಒಂದು ವಹಿವಾಟಾಗಿಯೇ ಕಾಣುವ ಕಂಪನಿಗಳ ನೀತಿಯನ್ನು ಛಿದ್ರಗೊಳಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಈ ಹಿಂದೆ ಚಿಕಿತ್ಸೆ ಎಂದೊಡನೆ ಕಾಡುತ್ತಿದ್ದ ಮೊದಲ ಪ್ರಶ್ನೆ ಹಣ ಹೇಗೆ ಹೊಂದಿಸುವುದು ಎಂದು, ಆದರೆ ಈಗ ಆಯುಷ್ಮಾನ್ ಭಾರತದಂತಹ ಯೋಜನೆಗಳಿಂದಾಗಿ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಎನ್ನುವಷ್ಟು ಮಾನಸಿಕ ಮತ್ತು ಆರ್ಥಿಕ ಬದಲಾವಣೆಯನ್ನು ತರುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಬಹಳ ದೊಡ್ಡದು. ಈ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಗುರಿಯಿಂದ ಸರ್ಕಾರದ ಇಲಾಖೆಗಳು ಮುನ್ನಡೆಯುತ್ತಿರುವುದು ಸಂತೋಷದಾಯಕ ಸಂಗತಿ. ಸಮಾಜದ ಜವಾಬ್ದಾರಿಯುತ ಪ್ರಜೆಗಳಾಗಿರುವ ನಾವು ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಇಂತಹ ಜನೋಪಕಾರಿ ಯೋಜನೆಗಳು ಹೆಚ್ಚು ಹೆಚ್ಚು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕೆಲಸ ಮಾಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.