
1924ರ ಫೆಬ್ರವರಿ 21ರಂದು, ಪಂಜಾಬ್ನ ಜೈತೋ ಪಟ್ಟಣ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆಧ್ಯಾತ್ಮಿಕ ಪ್ರತಿರೋಧದ ಅತ್ಯಂತ ಪ್ರಬಲ ಹೋರಾಟಕ್ಕೆ ಸಾಕ್ಷಿಯಾಯಿತು. ಅಂದು ನೂರಾರು ನಿರಸ್ತ್ರ ಸಿಖ್ ಸ್ವಯಂಸೇವಕರು ಬ್ರಿಟಿಷ್ ಬ್ಯಾರಿಕೇಡ್ಗಳತ್ತ ಶಾಂತವಾಗಿ ನಡೆಯುತ್ತಿದ್ದರಯ. ಅವರ ಉದ್ದೇಶ ಹೋರಾಟವಾಗಿರಲಿಲ್ಲ, ಪ್ರಾರ್ಥನೆ ಮಾಡುವುದಾಗಿತ್ತು. ಅವರ ಬಳಿ ಯಾವುದೇ ಶಸ್ತ್ರಗಳಿರಲಿಲ್ಲ. ಕೇವಲ ನಂಬಿಕೆ, ಶಿಸ್ತು ಮತ್ತು ತಮ್ಮ ಧಾರ್ಮಿಕ ಸಂಸ್ಥೆಗಳ ಗೌರವವನ್ನು ರಕ್ಷಿಸುವ ದೃಢ ಸಂಕಲ್ಪ ಮಾತ್ರ ಇತ್ತು. ಆದರೆ ಅಹಂಕಾರದಿಂದ ಬುದ್ಧಿ ಕಳೆದುಕೊಂಡಿದ್ದ ಬ್ರಿಟಿಷ್ ಸೈನಿಕರು ಅವರ ಮೇಲೆ ಗುಂಡಿನ ದಾಳಿ ನಡೆಸಲಾರಂಭಿಸಿದರು. ಕೆಲವೇ ನಿಮಿಷಗಳಲ್ಲಿ 100ಕ್ಕೂ ಹೆಚ್ಚು ಮಂದಿ ಕುಸಿದು ಬಿದ್ದರು, ನೂರಾರು ಮಂದಿ ಗಾಯಗೊಂಡರು. ಆದರೂ ಒಬ್ಬೇ ಒಬ್ಬ ಪ್ರತಿ ಹೋರಾಟ ನಡೆಸಲಿಲ್ಲ, ಓಡಲಿಲ್ಲ, ದಾಳಿ ಮಾಡಲಿಲ್ಲ. ಕೇವಲ ಮುಂದಕ್ಕೆ ಹೆಜ್ಜೆ ಇಟ್ಟರು.
ಇದುವೇ ಜೈತೋ ಮೋರ್ಚಾ – ನೈತಿಕ ಸ್ಥೈರ್ಯ ಸಾಮ್ರಾಜ್ಯವನ್ನೇ ಕಂಪಿಸುವಷ್ಟು ಶಕ್ತಿಯನ್ನು ಹೊಂದಿರಬಹುದು ಎಂದು ಸಾಬೀತುಪಡಿಸಿದ ಚಳವಳಿ.
ಮಹಾರಾಜರ ಬಂಧನ ಮತ್ತು ಅವಮಾನದ ಜ್ವಾಲೆ
1923ರ ಜುಲೈ 9ರಂದು ನಾಭಾ ಮಹಾರಾಜ ರಿಪುದಮನ್ ಸಿಂಗ್ ಅವರನ್ನು ಬ್ರಿಟಿಷರು ರಾಜ್ಯದಿಂದ ತೆಗೆದುಹಾಕಿದ ಘಟನೆಗೆ ಉತ್ತರವಾಗಿದೆ ಜೈತೋ ಮೋರ್ಚಾ ಹುಟ್ಟಿಕೊಂಡಿತು.
ರಿಪುದಮನ್ ಸಿಂಗ್ ಕೇವಲ ಆಡಳಿತಗಾರರಲ್ಲ; ಅವರು ಸಿಖ್ ಸುಧಾರಣಾ ಚಳವಳಿಗಳನ್ನು ಮತ್ತು ರಾಷ್ಟ್ರೀಯ ಕಾರಣಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದ ನಾಯಕ. ನಾಂಕಾಣಾ ಸಾಹಿಬ್ ಹತ್ಯಾಕಾಂಡಕ್ಕೆ ಪ್ರತಿಭಟನೆಯಾಗಿ ಕಪ್ಪು ಪಗಡಿ ಧರಿಸಿದ್ದರು.
ಅವರ ಜನಪ್ರಿಯತೆ ಮತ್ತು ರಾಷ್ಟ್ರೀಯ ಒಲವು ಬ್ರಿಟಿಷರಿಗೆ ನುಂಗಲಾರದು ತುತ್ತಾಗಿತ್ತು. ಆದ್ದರಿಂದ 1923ರ ಜುಲೈ 9ರಂದು ಬ್ರಿಟಿಷರು ಕಪಟವಾಗಿ ಅವರನ್ನು ಸಿಂಹಾಸನದಿಂದ ತೆಗೆದುಹಾಕಿದರು. ಈ ಅನ್ಯಾಯಕ್ಕೆ ಪ್ರತಿಭಟನೆಯಾಗಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ಸೆಪ್ಟೆಂಬರ್ 9, 1923ರಂದು ‘ನಾಭಾ ದಿನ’ವನ್ನು ಶಾಂತಿಯುತವಾಗಿ ಆಚರಿಸುವುದಾಗಿ ಘೋಷಿಸಿತು. SGPC ಈ ಚಳವಳಿಯ ನಾಯಕತ್ವ ವಹಿಸಿ ಪ್ರತಿ ಗ್ರಾಮದಲ್ಲಿ ಧಾರ್ಮಿಕ ಸಭೆಗಳು (ದಿವಾನ್), ನಗರ ಕೀರ್ತನಗಳು ಮತ್ತು ಪ್ರಾರ್ಥನೆಗಳು (ಅರದಾಸ್) ನಡೆಸುವಂತೆ ಕರೆ ನೀಡಿತು. ಇದರಿಂದ ಪ್ರದೇಶಾದ್ಯಂತ ಉತ್ಸಾಹಿ ಸಿದ್ಧತೆಗಳು ಆರಂಭವಾದವು.
ಅಖಂಡ ಪಾಠಕ್ಕೆ ಅವಮಾನ ಮತ್ತು ತೀವ್ರ ಪ್ರತಿಕ್ರಿಯೆ
SGPCನ ಕರೆಗೆ ಪ್ರತಿಕ್ರಿಯೆಯಾಗಿ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮಗಳು ಆರಂಭವಾದವು. ಜೈತೋ ನಗರವು ಪ್ರತಿಭಟನೆಯ ಮುಖ್ಯ ಕೇಂದ್ರವಾಯಿತು. ಈ ಚಳವಳಿಯ ಭಾಗವಾಗಿ ಗುರುದ್ವಾರಾ ಶ್ರೀ ಗಂಗಸರ್ ಸಾಹಿಬ್ದಲ್ಲಿ ಧಾರ್ಮಿಕ ಸಭೆ (ದಿವಾನ್) ಮತ್ತು ಅಖಂಡ ಪಾಠ (ನಿರಂತರ ಪ್ರಾರ್ಥನೆ) ಆಯೋಜಿಸಲಾಗಿತ್ತು. ಆದರೆ 1923ರ ಸೆಪ್ಟೆಂಬರ್ 14ರಂದು ಬ್ರಿಟಿಷ್ ಪಡೆಗಳು ಗುರುದ್ವಾರಾಕ್ಕೆ ನುಗ್ಗಿ ಸೇವಕರನ್ನು ಬಂಧಿಸಿದರು ಮತ್ತು ಪ್ರಾರ್ಥನೆ ನಡೆಸುತ್ತಿದ್ದ ಗ್ರಂಥವನ್ನು ಬಲವಂತವಾಗಿ ತೆಗೆದುಹಾಕಿದರು. ಸಿಖ್ಖರಿಗೆ ಇದು ಕೇವಲ ರಾಜಕೀಯ ದಮನವಲ್ಲ; ಅದು ಅವರ ನಂಬಿಕೆಗೆ ನೇರ ದಾಳಿಯಾಗಿತ್ತು. ಆರಂಭದಲ್ಲಿ ಅಕಾಲ್ ತಖ್ತ್ ಸಾಹಿಬ್ನಿಂದ ಪ್ರತಿದಿನ 25 ಸ್ವಯಂಸೇವಕರ ಗುಂಪುಗಳು ಜೈತೋ ಕಡೆಗೆ ಮೆರವಣಿಗೆ ನಡೆಸುತ್ತಿದ್ದವು – ಪ್ರತಿಬಾರಿಯೂ ಬಂಧನಕ್ಕೊಳಗಾಗುತ್ತಿದ್ದವು.
ಇದರಿಂದಾಗಿ ಆಳವಾದ ಚರ್ಚೆಯ ನಂತರ ಶಿರೋಮಣಿ ಸಮಿತಿಯು 25ರ ಬದಲು 500 ಸಿಖ್ಖರ ದೊಡ್ಡ ಜಥೆಗಳನ್ನು ಕಳುಹಿಸುವ ನಿರ್ಧಾರ ತೆಗೆದುಕೊಂಡಿತು. ಈ ಮಹಾ ಜಥಾ 1924ರ ಫೆಬ್ರವರಿ 9ರಂದು ಅಕಾಲ್ ತಖ್ತ್ ಸಾಹಿಬ್ನಿಂದ ಪಾದಯಾತ್ರೆಯನ್ನು ಆರಂಭಿಸಿತು ಮತ್ತು ಫೆಬ್ರವರಿ 21ರಂದು ಜೈತೋದ ಗಡಿಯನ್ನು ತಲುಪಿತು. ಏಕೈಕ ಉದ್ದೇಶ – ಅಖಂಡ ಪಾಠವನ್ನು ಮತ್ತೆ ಆರಂಭಿಸುವುದು.
ಇದು ಕೇವಲ ಪುರುಷರ ಚಳವಳಿಯಲ್ಲ. ತಾಯಂದಿರು ಮತ್ತು ಸಹೋದರಿಯರು ಲಂಗರ್ (ಅನ್ನದಾನ) ನಡೆಸಿದರು. ಗ್ರಾಮಗಳು ವಸತಿ ಮತ್ತು ವೈದ್ಯಕೀಯ ಸಹಾಯ ನೀಡಿದವು. ಮಹಿಳೆಯರು ಪುರುಷರೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು.
ಫೆಬ್ರವರಿ 21ರ ರಕ್ತಸಿಕ್ತ ಗುಂಡಿನ ದಾಳಿ
ಬ್ರಿಟಿಷರು ಗುರುದ್ವಾರಾ ಶ್ರೀ ಗಂಗಸರ್ ಸಾಹಿಬ್ಗೆ ಹೋಗುವ ರಸ್ತೆಯನ್ನು ಕಂಚಿನ ತಂತಿ, ಮೆಷಿನ್ ಗನ್ಗಳಿಂದ ಸಂಪೂರ್ಣವಾಗಿ ಮುಚ್ಚಿದ್ದರು. ಶಹೀದಿ ಜಥಾ ಶ್ರೀ ತಿಬ್ಬಿ ಸಾಹಿಬ್ದಿಂದ ಕೇವಲ 150 ಅಡಿ ದೂರದಲ್ಲಿದ್ದಾಗ ಬ್ರಿಟಿಷ್ ಅಧಿಕಾರಿ ಅವರನ್ನು ನಿಲ್ಲಿಸಲು ಪ್ರಯತ್ನಿಸಿದ. ಅವರು ನಿಲ್ಲಲಿಲ್ಲ. ಶಾಂತವಾಗಿ ಮುಂದುವರೆದರು. ಆಗ ಗುಂಡಿನ ದಾಳಿ ಆರಂಭವಾಯಿತು. 5 ನಿಮಿಷಗಳಲ್ಲಿ 100ಕ್ಕೂ ಹೆಚ್ಚು ಮಂದಿ ಹುತಾತ್ಮರಾದರು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಆದರೂ ಚಳವಳಿ ನಿಲ್ಲಲಿಲ್ಲ. ಮುಂದಿನ ಕೆಲವು ತಿಂಗಳುಗಳಲ್ಲಿ 500 ಮಂದಿಯ ಜೊತೆ ಇನ್ನೂ 13 ಶಹೀದಿ ಜಥೆಗಳು ಜೈತೋಗೆ ತಲುಪಿ ಸ್ವಯಂಪ್ರೇರಿತವಾಗಿ ಬಂಧನಕ್ಕೊಳಗಾದವು.
17 ಶಹೀದಿ ಜಥೆಗಳನ್ನು ಕಳುಹಿಸಿ ಸುಮಾರು ಒಂದು ವರ್ಷ ಹತ್ತು ತಿಂಗಳುಗಳ ಕಾಲ ನಡೆದ ಧೈರ್ಯಶಾಲಿ ಹೋರಾಟದ ನಂತರ ಬ್ರಿಟಿಷ್ ಸರ್ಕಾರವು ಕೊನೆಗೂ ಮಣಿಯಿತು. 1925ರ ಜುಲೈ 7ರಂದು ‘ಸಿಖ್ ಗುರುದ್ವಾರ ಬಿಲ್’ ಅನ್ನು ಏಕಮತದಿಂದ ಅಂಗೀಕರಿಸಲಾಯಿತು. ಇದರಿಂದ ಪಂಜಾಬ್ನ ಗುರುದ್ವಾರಗಳು ಮಹಂತರ ನಿಯಂತ್ರಣದಿಂದ ಮುಕ್ತಗೊಂಡವು ಮತ್ತು SGPC ಹಾಗೂ ಸಿಖ್ ಸಂಗತ್ನ ನಿರ್ವಹಣೆಗೆ ಬಂದವು. ಬಿಲ್ ಅಂಗೀಕಾರದ ನಂತರ 1925ರ ಆಗಸ್ಟ್ನಲ್ಲಿ ಎಲ್ಲ ಸಿಖ್ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಭಕ್ತಿ, ನಂಬಿಕೆ ಮತ್ತು ಸಮುದಾಯದ ಒಗ್ಗಟ್ಟಿನ ಜಯದೊಂದಿಗೆ ಈ ದೀರ್ಘ ಚಳವಳಿ ಮುಕ್ತಾಯಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


