
ಬೆಂಗಳೂರು: ಇದೊಂದು ಸಂಘಟನಾತ್ಮಕ ಸಭೆಯಲ್ಲ; ಆತ್ಮಮಂಥನದ ಸಭೆ ಇದಾಗಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಿವರಿಸಿದ್ದಾರೆ.
ನಗರದ ಅರಮನೆ ಮೈದಾನದ ಗೇಟ್ ನಂ.4, ಗಾಯತ್ರಿ ಗ್ರ್ಯಾಂಡ್ ನಲ್ಲಿ ಇಂದು ನಡೆದ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನರೇಂದ್ರ ಮೋದಿಜೀ ಅವರ ವಿಕಸಿತ ಭಾರತದ ವಿಚಾರಧಾರೆಯ ಮನನ ಮಾಡುವ ಸಭೆ ಇದು. ಸಂಘಟನೆ, ಭ್ರಷ್ಟ ಸರಕಾರವನ್ನು ಅಧಿಕಾರದಿಂದ ತೊಲಗಿಸಿ ಅಧಿಕಾರ ಮರಳಿ ಪಡೆಯುವ ಸಂಕಲ್ಪದ ಸಭೆ ಎಂದು ವಿಶ್ಲೇಷಿಸಿದರು. ಶಿವಾಜಿ ಮಹಾರಾಜರ ಸಂಘರ್ಷ ಇಂದಿಗೂ ನಮಗೆ ಪ್ರೇರಣಾದಾಯಿ ಎಂದು ತಿಳಿಸಿದ್ದಾರೆ.
ಬಿಜೆಪಿ, ಸಾಂಸ್ಕೃತಿಕ ರಾಷ್ಟ್ರವಾದದ ಆಂದೋಲನ ಇದು ಎಂದು ತಿಳಿಸಿದರು. ಬಿಜೆಪಿ ಪಕ್ಷ ಉದಯಿಸಿದಾಗ, ಕತ್ತಲು ದೂರ ಸರಿದು, ಕಮಲ ಅರಳಲಿದೆ ಎಂದು ಅಟಲ್ ಜೀ ಅವರು ಹೇಳಿದ್ದನ್ನು ನೆನಪಿಸಿದರು. ಅದು ವೈಚಾರಿಕ ಪುನರ್ ಜಾಗರಣದ ಶಂಖನಾದ ಎಂದು ನುಡಿದರು. ಜನಸಂಘವು ಮೂಲಕ ನಮ್ಮ ಪಕ್ಷದ ಬೀಜ ರೂಪ. ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಮುನ್ನಡೆಯುತ್ತಿದೆ ಎಂದು ಸ್ಥಾಪಕರನ್ನು, ಕಾರ್ಯಕರ್ತರ ಕೊಡುಗೆಯನ್ನು ಸ್ಮರಿಸಿದರು.
ಪಕ್ಷ ಮುನ್ನಡೆಸುವ ವಿಚಾರದಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. 2028ರಲ್ಲಿ ಕರ್ನಾಟಕದಲ್ಲಿ ಪ್ರಚಂಡ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸದಿಂದ ತಿಳಿಸಿದರು. ಪಕ್ಷದ ಆರಂಭಿಕ ದಿನಗಳಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ನಮನಗಳು ಎಂದರು. ಅವರ ಭದ್ರ ಅಡಿಪಾಯದಲ್ಲಿ ಬಿಜೆಪಿ ಇಷ್ಟೊಂದು ಬೆಳೆದುನಿಂತಿದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನಿಂದ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆಯನ್ನು ಅವರು ಖಂಡಿಸಿದರು. ವಿಪಕ್ಷಗಳ ಮುಖಂಡರನ್ನು ಜೈಲಿಗೆ ಕಳಿಸಿದ್ದನ್ನು ನೆನಪಿಸಿದರು. ಅದೇ ಮುಖಂಡರು ಇದೀಗ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. ವಿಕಸಿತ ಭಾರತವಾಗಿ ದೇಶವನ್ನು ಪರಿವರ್ತಿಸಲು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಪದವಿಗಾಗಿ ಆರಂಭದಲ್ಲೇ ಒಳಜಗಳ
ಕರ್ನಾಟಕವು ಭ್ರಷ್ಟ ರಾಜ್ಯವಾಗಿದೆ; ಆರ್ಥಿಕವಾಗಿ ದಿವಾಳಿಯಾಗಿದೆ ಎಂದ ಅವರು, ಮುಡಾ ಸೇರಿದಂತೆ ವಿವಿಧ ಹಗರಣಗಳನ್ನು ಪ್ರಸ್ತಾಪಿಸಿದರು. ಬಿಜೆಪಿ ಪಾದಯಾತ್ರೆ, ಸಂಘರ್ಷವನ್ನು ಅವರು ಅಭಿನಂದಿಸಿದರು. ರಾಜ್ಯವು ಅಸಮರ್ಥ ಆಡಳಿತದ ನಾಡಾಗಿದೆ ಎಂದು ಅವರು ಟೀಕಿಸಿದರು. ಮುಖ್ಯಮಂತ್ರಿ ಪದವಿಗಾಗಿ ಆರಂಭದಲ್ಲೇ ಒಳಜಗಳ ಇತ್ತು. ಅದು ಈಗಲೂ ಮುಂದುವರೆದಿದೆ. ಇದು ಜನಾದೇಶಕ್ಕೆ ಮಾಡುತ್ತಿರುವ ಅಪಮಾನ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜನರು ಗ್ಯಾರಂಟಿ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು ದೂರಿದರು. ಸಾಲದ ಪ್ರಮಾಣ ತೀವ್ರವಾಗಿ ಹೆಚ್ಚಾಗಿದೆ ಎಂದು ಆಕ್ಷೇಪಿಸಿದರು. ಹಿಂದೂಗಳಿಗೆ ಅಪಮಾನವನ್ನು ಅವರು ಖಂಡಿಸಿದರು. ಜನರು ಇದಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಹಾಗೂ ಜಿಬಿಎ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪ ನಮ್ಮದಾಗಬೇಕು ಎಂದು ವಿನಂತಿಸಿದರು. ಇದು ಸಫಲತೆಗೆ ಪೂರಕ ಎಂದು ತಿಳಿಸಿದರು. ಬಿಜೆಪಿಯನ್ನು ತಳಮಟ್ಟದಲ್ಲಿ ಬಲಪಡಿಸಲು ಅವರು ಸೂಚಿಸಿದರು. ಇದು ಪರೀಕ್ಷೆಯ ಕಾಲ; ಕಾರ್ಯಕರ್ತರು ಜನರ ಮನೆ ಮನೆಗೆ ತೆರಳಿ ಕಾಂಗ್ರೆಸ್ಸಿನ ವೈಫಲ್ಯಗಳನ್ನು ತಿಳಿಸಬೇಕು ಎಂದು ತಿಳಿಸಿದರು.
ಬಿಜೆಪಿ ಗೆಲುವು ಖಚಿತ- ರಾಧಾಮೋಹನ್ ದಾಸ್ ಅಗ್ರವಾಲ್
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗ್ರವಾಲ್ ಅವರು ಮಾತನಾಡಿ, 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡ ಕುರಿತು ಅವರು ಮೆಚ್ಚುಗೆ ಸೂಚಿಸಿದರು. ರಾಜ್ಯದಲ್ಲಿ ಆರೆಸ್ಸೆಸ್ ಚಟುವಟಿಕೆ ನಿಷೇಧ ಪ್ರಯತ್ನವನ್ನು ಅವರು ಆಕ್ಷೇಪಿಸಿದರು.
ವಕ್ಫ್ ಅತಿಕ್ರಮಣ ವಿರುದ್ಧ ಹೋರಾಟಕ್ಕಾಗಿ ಬಿಜೆಪಿ ರಾಜ್ಯ ಘಟಕವನ್ನು ಅಭಿನಂದಿಸಿದರು. ಪರಿಶಿಷ್ಟ ವರ್ಗದ ಬದಲಾಗಿ ಮುಸ್ಲಿಮರಿಗೆ ಹೆಚ್ಚಿನ ಸೌಕರ್ಯ ಕೊಡಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದೊಂದು ಭ್ರಷ್ಟ ಸರಕಾರ ಎಂದು ಅವರು ತಿಳಿಸಿದರು. ಇದೊಂದು ಮೊಕದ್ದಮೆಗಳ ನೇತಾರರ ಸರಕಾರ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


