News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಜೆಪಿಯಿಂದ ನೀರಿಗಾಗಿ ಧರಣಿ

ಕಾರ್ಕಳ : ನೀರಿಗಾಗಿ ಪ್ರತಿಪಕ್ಷದ ಸದಸ್ಯರು ಕೈಯಲ್ಲಿ ಕೊಡಪಾನ ಹಿಡಿದು ನೀರು ಕೊಡಿ ಎಂದು ಆಗ್ರಹಿಸಿದ ಘಟನೆ ಶುಕ್ರವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಪ್ರತಿಪಕ್ಷದ ನಾಯಕ ಪ್ರಕಾಶ್ ರಾವ್ ಮಾತನಾಡಿ, ನಮ್ಮ ವಾರ್ಡುಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಮುಂಡ್ಲಿ ಮತ್ತು ರಾಮಸಮುದ್ರದಲ್ಲಿ ಬೇಕಾದಷ್ಟು ನೀರಿದ್ದರೂ ನೀರು ಸರಬರಾಜು ಆಗುತ್ತಿಲ್ಲ. ಜನತೆಯ ಸಂಕಷ್ಟಕ್ಕೆ ಪುರಸಭೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಬಳಿಕ ಪ್ರತಿಪಕ್ಷದ 11 ಸದಸ್ಯರು ಕೊಡಪಾನ ಹಿಡಿದುಕೊಂಡು ಅಧ್ಯಕ್ಷರ ಮುಂಭಾಗ ಧರಣಿ ಆರಂಭಿಸಿದರು.

27Karkala-Purasabe copy

ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ತಾಂತಿಕ್ರ ತೊಂದರೆ, ಅನಧೀಕೃತ ಸಂಪರ್ಕ ಹಾಗೂ ಅಸಮರ್ಪಕ ಬಳಕೆಯಿಂದಾಗಿ ಈ ತೊಂದರೆ ಎದುರಾಗಿದ್ದು, ನಮ್ಮ ಅಧಿಕಾರಿಗಳ ತಂಡ ಸಮಸ್ಯೆ ನೀಗಿಸುವಲ್ಲಿ ಪ್ರಯತ್ನ ನಡೆಸುತ್ತಿದೆ. ಒಂದು ವಾರದೊಳಗೆ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತೇವೆ ಎಂದರು.  ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ಮಾತನಾಡಿ, ಪ್ರತಿಪಕ್ಷದ ಸದಸ್ಯರ ಸಮಸ್ಯೆಗಳಿಗೆ ನಾನು ಸ್ಪಂದಿಸಿದ್ದೇನೆ. ಈ ನಡುವೆ ವಿನಾಃ ಕಾರಣ ಧರಣಿ ನಡೆಸುತ್ತಿದ್ದೀರಿ. ನೀರಿನ ಸಮಸ್ಯೆಯನ್ನು ತಕ್ಷಣ ಸರಿಪಡಿಸುತ್ತೇವೆ. ಪ್ರತಿಯೊಬ್ಬರು ತಮ್ಮಮ್ಮ ಆಸನದಲ್ಲಿ ಆಸೀನರಾಗಿ ಎಂದು ವಿನಂತಿಸಿಕೊಂಡರು. ಅಧ್ಯಕ್ಷರ ಮನವಿಗೂ ಜಗ್ಗದ ಪ್ರತಿಪಕ್ಷದ ಸದಸ್ಯರು ಧರಣಿ ಮುಂದುವರೆಸಿದರು.

ನವೀನ್ ದೇವಾಡಿಗ ಮಾತನಾಡಿ, ನೀರಿನ ಸಮಸ್ಯೆ ಪ್ರತಿ ವಾರ್ಡುನಲ್ಲೂ ಇದೆ. ಅದಕ್ಕೆ ಧರಣಿಯಿಂದ ಉತ್ತರ ಹುಡುಕುವುದಲ್ಲ, ಬದಲಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು. ಅಧ್ಯಕ್ಷರ ಮಾತಿಗೆ ಬೆಲೆ ಕೊಟ್ಟು ಸಭೆಯ ಗೌರವ ಉಳಿಸಿ ಎಂದು ಅಶ್ಪಕ್ ಅಹ್ಮದ್ ಮನವಿ ಮಾಡಿದರು. ಮೊಹಮ್ಮದ್ ಶರೀಫ್ ಮಾತನಾಡಿ, ಪ್ರಚಾರಕ್ಕಾಗಿ ಈ ಧರಣಿ ಹೊರತು, ವಾಸ್ತವಿಕತೆಯಿಂದ ಈ ಧರಣಿ ಅಲ್ಲ ಎಂದರು.

ಗಿರಿಧರ ನಾಯಕ್ ಮಾತನಾಡಿ, ನಮ್ಮ ವಾರ್ಡುನ ಜನತೆ ನಮಗೆ ಬೈಯುತ್ತಿದ್ದಾರೆ ಎಂದರು. ಸುನಿಲ್ ಕೋಟ್ಯಾನ್ ಮತ್ತು ಯೋಗೀಶ್ ದೇವಾಡಿಗ ಕುಂಟಲ್ಪಾಡಿಯಲ್ಲಿ ತಲೆದೋರಿದ ನೀರಿನ ಸಮಸ್ಯೆ ಬಗ್ಗೆ ಸಭೆಯ ಗಮನ ಸೆಳೆದರು. ಸುಭಿತ್ ಎನ್.ಆರ್ ಮಾತನಾಡಿ, ನೀರಿನ ಸಮಸ್ಯೆ ಕೇವಲ ಒಂದು ವಾರದಿಂದಿದೆ. ಅದನ್ನು ಮುಂದಿಟ್ಟುಕೊಂಡು ಕಲಾಪಕ್ಕೆ ತೊಂದರೆಪಡಿಸುವುದು ಸರಿಯಲ್ಲ ಎಂದರು. ಶುಭದ್ ರಾವ್ ಮಾತನಾಡಿ, ಇದು ಪುರಸಭೆಯಲ್ಲಿ ಕರಾಳ ದಿನ. ಅಧ್ಯಕ್ಷರ ಜತೆ ಕಾರ್ಯನಿರ್ವಹಿಸುವ ಉಪಾಧ್ಯಕ್ಷರು ಸಮಸ್ಯೆ ಬಗೆಹರಿಸಲು ಶ್ರಮಿಸುವ ಬದಲು ಪ್ರತಿಕ್ಷದ ಜತೆ ಧರಣಿ ಕುಳಿತಿರುವುದರಲ್ಲಿ ಅರ್ಥವಿಲ್ಲ ಎಂದರು. ವಿನ್ನಿಬೋಲ್ಡ್ ಮೆಂಡೋನ್ಸಾ ಮಾತನಾಡಿ, ನೀರಿ ಸಮಸ್ಯೆ ನೀಗಿಸಲು ಎಲ್ಲಾ ರೀತಿಯ ಕ್ರಮ ಕೈಗೊಂಡಿರುವಾಗ ಈ ಪ್ರತಿಭಟನೆ ಏಕೆ ? ಎಂದರು. ನಳಿನಿ ಆಚಾರ್ಯ ಮಾತನಾಡಿ, ಎಲ್ಲಾ ವಾರ್ಡುಗಳ ಸಮಸ್ಯೆಗೆ ಒಬ್ಬೊಬ್ಬರು ತಲೆಕೆಡಿಸಿಕೊಳ್ಳುವುದು ಅಗತ್ಯವಿಲ್ಲ. ಅವರವರ ವಾರ್ಡುಗಳ ಬಗ್ಗೆ ಗಮನಹರಿಸಿ ಎಂದರು. ಪ್ರತಿಮಾ ಮೋಹನ್ ಮಾತನಾಡಿ, ಗದ್ದಲದ ನಡುವೆಯೇ ಸಭೆ ಮುಂದುವರೆಸುವಂತೆ ಮನವಿ ಮಾಡಿದರು. ವಿವೇಕಾನಂದ ಶೆಣೈ ಮಾತನಾಡಿ, ಈ ಪ್ರತಿಭಟನೆ ಉದ್ದೇಶಪೂರ್ವಕ ಎಂದರು.

ಬಳಿಕ ಪ್ರತಿಪಕ್ಷ ಸದಸ್ಯರು ಪುರಸಭೆಗೆ ದಿಕ್ಕಾರ ಕೂಗಿದರೆ, ಆಡಳಿತ ಪಕ್ಷದ ಸದಸ್ಯರು ಕೂಡಾ ಪ್ರತಿಪಕ್ಷದ ಅಸಹಕಾರದ ಕುರಿತು ದಿಕ್ಕಾರ ಕೂಗಿದರು.

ಒಳಚರಂಡಿ ಯೋಜನೆ ಕಾಮಗಾರಿ ಯಾವ ಹಂತ ತಲುಪಿದೆ ಎಂದು ನಳಿನಿ ಆಚಾರ್ಯ ಪ್ರಶ್ನಿಸಿದಾಗ, ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ಕ್ಯಾಬಿನೆಟ್‌ನಲ್ಲಿ ಮಂಜೂರಾಗಿದೆ. ಬಜೆಟ್‌ನಲ್ಲಿಟ್ಟಿದ್ದಾರೆ ಎಂದರು. ೨೦೦೫-೨೦೧೫ರವರೆಗಿನ ಹಳೆ ಪರಿಕರಗಳು ಎಲ್ಲಿ ಹೋಗಿವೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಅಶ್ಪಕ್ ಅಹ್ಮದ್ ಪ್ರಶ್ನಿಸಿದರು. ಮೊಹಮ್ಮದ್ ಶರೀಫ್ ಮಾತನಾಡಿ, ಬಂಡೀಮಠದ ಬಳಿಯ ಹಳೇ ಟ್ಯಾಂಕ್ ಕೆಡಹಲಾಗಿದ್ದು, ಅದರ ಕಬ್ಬಿಣದ ಸರಳುಗಳು ದಿನದಿಂದ ದಿನಕ್ಕೆ ಮಾಯವಾಗುತ್ತಿದೆ ಎಂದು ಆರೋಪಿಸಿದರು.

Tags: , ,

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top