ಮಂಗಳೂರು : ಎಲ್ಲರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಇದಕ್ಕೆ ಸೂಕ್ತವಾದ ಪ್ರೋತ್ಸಾಹ ಮತ್ತು ವೇದಿಕೆ ದೊರಕಿದಾಗ ಅದು ವಿಕಸನಗೊಳ್ಳುತ್ತದೆ. ವಿದ್ಯಾಲಯಗಳಲ್ಲಿ ಅಧ್ಯಾಪಕರು ಅಂತಹ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಿದಾಗ ಮಾತ್ರ ಪ್ರತಿಭಾ ವಿಕಾಸ ಸಾಧ್ಯ. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಿಂತಿರದೆ ಕ್ರೀಯಾಶೀಲತೆ, ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ತುಳು ನಾಟಕರಂಗ, ಚಿತ್ರರಂಗದ ಪ್ರಖ್ಯಾತ ನಟ, ರಂಗ ನಿರ್ದೇಶಕ, ಚಲನಚಿತ್ರ ನಿರ್ಮಾಪಕ, ತೆಲಿಕೆದ ಬೊಳ್ಳಿ ಶ್ರೀ ದೇವದಾಸ್ ಕಾಪಿಕಾಡ್ ಅಭಿಪ್ರಾಯವಿತ್ತರು. ನಗರದ ಶಾರದಾ ವಿದ್ಯಾಲಯದಲ್ಲಿ ರಂಗಸ್ಪಂದನ ಮಂಗಳೂರು ಸಾದರಪಡಿಸಿದ ‘ಮುಂಗಾರು ರಂಗಸಿರಿ’ ಎಂಬ ಸರಣಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡರು. ಶಾರದಾ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಇಲ್ಲಿ ಸಿಗುವ ಸಂಸ್ಕಾರ ಅತ್ಯುತ್ತಮ ಮಟ್ಟದಲ್ಲಿದೆ ಎಂದ ಜತೆಗೆ ಗುರುಬಲವಿದ್ದರೆ ಏನನ್ನೂ ಸಾಧಿಸಬಹುದು ಎಂದು ವಿದ್ಯಾಲಯದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ನಾವು ಪ್ರಕೃತಿಯ ಜತೆ ಬೆಳೆಯುವವರು. ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಈ ಸುಂದರ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬೇಕಾದ ನಾವೆಲ್ಲಾ ಪ್ರತಿರಕ್ಷಣೆ ಕಾರ್ಯಕ್ಕೆ ತೊಡಗಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಪ್ರಕೃತಿ ರಕ್ಷಣೆಯ ಹೊಣೆಗಾರಿಕೆಯನ್ನು ಅರಿವನ್ನು ಮೂಡಿಸುವ ಶಾರದಾ ವಿದ್ಯಾಲಯದ ಕಾರ್ಯ ಸಂಯೋಜನೆ ಶ್ಲಾಘನೀಯ ಎಂಬುದಾಗಿ ಕಾರ್ಯಕ್ರಮದ ಇನ್ನೊರ್ವ ಅತಿಥಿ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿಯವರು ಶುಭ ಹಾರೈಸುತ್ತಾ ನುಡಿದರು.
ಪ್ರಕೃತಿಗೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ಶಾರದಾ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಮಾತ್ರ ಮಹತ್ವವನ್ನು ನೀಡಿಲ್ಲ. ಬದಲಾಗಿ ಅವರಿಗೆ ಉತ್ತಮ ಸಂಸ್ಕಾರಭರಿತ ಶಿಕ್ಷಣವನ್ನು ಒದಗಿಸುವುದರ ಜತೆಗೆ ನಮ್ಮ ಸಂಸ್ಕೃತಿಯ ವಿಚಾರಗಳನ್ನು ಪ್ರಕೃತಿ-ಪರಿಸರ ರಕ್ಷಣೆಯ ಮಹತ್ವದ ಅರಿವನ್ನು ಒದಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಭಾಧ್ಯಕ್ಷರು ಹಾಗೂ ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕರು ಈ ಸಂದರ್ಭದಲ್ಲಿ ನುಡಿದರು.
ಸಭಾ ವೇದಿಕೆಯಲ್ಲಿ ಎಸ್.ಕೆ.ಡಿ.ಬಿ. ಅಸೋಶಿಯೇಶನ್ನಿನ ಕಾರ್ಯದರ್ಶಿ ಶ್ರೀ ಸುಧಾಕರ ರಾವ್ ಪೇಜಾವರ, ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿ, ಉಪಸ್ಥಿತರಿದ್ದರು. ರಂಗಸ್ಪಂದನದ ಸಂಚಾಲಕ, ಚಲನಚಿತ್ರ ಹಾಗೂ ನಾಟಕ ರಂಗದ ಹಿರಿಯ ಕಲಾವಿದ ಶ್ರೀ ವಿ.ಜಿ.ಪಾಲ್ ಸ್ವಾಗತಿಸಿದರು. ವಿದ್ಯಾಲಯದ ವಿದ್ಯಾರ್ಥಿನಿ ಕು| ಆವನಿ ಮತ್ತು ಮಾ| ಅನೀಷ್ ಸಭಾ ಕಾರ್ಯಕ್ರಮ ನಿರ್ವಹಣೆಗೈದರು. ವಿದ್ಯಾಲಯದ ಉಪ-ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಧನ್ಯವಾದ ಸಮರ್ಪಣೆಗೈದರು. ಈ ಸಂದರ್ಭದಲ್ಲಿ ಶ್ರೀ ವಿ.ಜಿ.ಪಾಲರನ್ನು ಸನ್ಮಾನಿಸಲಾಯಿತು. ಅದೇ ರೀತಿ ನಾಸಾ ಯಾತ್ರೆಗೆ ತೆರಳಿದ ವಿದ್ಯಾಲಯದ ಪ್ರಾಂಶುಪಾಲೆ, ಉಪ-ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಸ್ಮರಣಿಕೆಗಳನ್ನು ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.