ಬಂಟ್ವಾಳ: ರಾಜ್ಯ ಸರಕಾರ ಜಾತ್ಯಾತೀತ ನಿಲುವುಗಳನ್ನು ಹತ್ತಿಕ್ಕುವ ಪ್ರಯತ್ನಗಳು ಕೋಮುವಾದಿ ಶಕ್ತಿಗಳಿಂದ ನಡೆಯುತ್ತಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಇದಕ್ಕೆಲ್ಲಾ ಬಗ್ಗುವುದಿಲ್ಲ. ರಾಜ್ಯಾಂಗದ ಮೂಲಭೂತ ಆಶಯಗಳನ್ನು ಗೌರವಿಸುತ್ತಾ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸುತ್ತದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಬಂಟ್ವಾಳದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪರಿಸರ ಸ್ನೇಹಿ ನಿರೀಕ್ಷಣಾ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ 165 ಭರವಸೆಗಳ ಪೈಕಿ 100 ಭರವಸೆಗಳನ್ನು ಸಿದ್ದರಾಮಯ್ಯ ಸರಕಾರ ಎರಡು ವರ್ಷ ತುಂಬುವ ಮುನ್ನವೇ ಈಡೇರಿಸಿದೆ ಎಂದ ಅವರು, ಜಾತಿಗಣತಿಯಂತಹ ದಿಟ್ಟ ಹೆಜ್ಜೆ ಇರಿಸಿರುವುದೂ ನಮ್ಮ ಸರಕಾರದ ದೊಡ್ಡ ಹೆಗ್ಗಳಿಕೆ ಎಂದರು. ಕಳೆದ ಅವಧಿಯ ರಾಜ್ಯ ಸರಕಾರದ ಅವಧಿಯಲ್ಲಿ ಎಲ್ಲಾ ಜನರಿಗೆ ಸೌಲಭ್ಯಗಳು ದೊರಕುತ್ತಿರಲಿಲ್ಲ. ಆದರೆ ನಮ್ಮ ಸರಕಾರ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಪ್ರಜಾಪ್ರಭುತ್ವದ ನಿಜಾರ್ಥವನ್ನು ಸಾಕಾರಗೊಳಿಸುತ್ತಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಸೌಹಾರ್ದಕ್ಕೆ ಒತ್ತು ನೀಡುವ ಸಂಕೇತವಾಗಿ ಅಜಿಲಮೊಗರು ದರ್ಗಾ ಹಾಗೂ ಕಡೇಶ್ವಾಲ್ಯ ದೇವಳ ಸಂಪರ್ಕಕ್ಕೆ 31 ಕೋಟಿ ರೂ. ವೆಚ್ಚದ ಸಂಪರ್ಕ ಸೇತುವೆ ಹಾಗೂ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಪೆಂಡಿಕ್ಸ್ ಸಿ ಯೋಜನೆಯಲ್ಲಿ ದ.ಕ.ಜಿಲ್ಲೆಗೆ 141 ಕೋಟಿ ಹಾಗೂ ಉಡುಪಿ ಜಿಲ್ಲೆಗೆ 138 ಕೋಟಿ ಬಿಡುಗಡೆಯಾಗಿದೆ ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಎಲ್ಲಾ ರಸ್ತೆಗಳನ್ನು ಶೀಘ್ರದಲ್ಲೇ ಅಭಿವೃದ್ಧಿಗೊಳಿಸುವುದಾಗಿ ತಿಳಿಸಿದರು. ಆದ್ಯತೆಯ ನೆಲೆಯಲ್ಲಿ ಜಿ.ಪಂ.ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು. ಶಿರಾಡಿ ಘಾಟಿ ರಸ್ತೆ ಮುಂದಿನ ಮೇ ಅಂತ್ಯದಲ್ಲಿ ಪ್ರಯಾಣಕ್ಕೆ ತೆರೆದುಕೊಳ್ಳಲಿದೆ ಎಂದ ಅವರು, ಸೆಂಟ್ರಲ್ ರೋಡ್ ಫಂಡ್ ಒಂದು ಸಾವಿರ ಕೋಟಿ ಅನುದಾನದಿಂದ ರಾಜ್ಯದ 12 ಸಾವಿರ ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ ಎಂದರು.
ಆರ್ಐಎಸ್ ದೇಶದಲ್ಲೇ ಪ್ರಥಮ: ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಸರಕಾರದ ಸುತ್ತೋಲೆಯನ್ನು ಉಲ್ಲಂಘಿಸಿದರೆ ಅದಕ್ಕೆ ಇಂಜಿನಿಯರ್ಗಳೇ ಜವಬ್ದಾರರು. ಈ ದಿಸೆಯಲ್ಲಿ ದೇಶದಲ್ಲೇ ಮೊದಲಬಾರಿಗೆ ಆರ್ಐಎಸ್(ರೋಡ್ ಇನ್ಫರ್ಮೇಶನ್ ಸಿಸ್ಟಮ್) ಎಂಬ ಸಾಫ್ಟ್ವೇರ್ನ್ನು ಕರ್ನಾಟಕದಲ್ಲಿ ಅಳವಡಿಸಲಾಗಿದೆ. ಈ ಮೂಲಕ ಸಾರ್ವಜನಿಕರೂ ರಸ್ತೆಯ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಬಹುದಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಪುರಸಭಾ ವ್ಯಾಪ್ತಿಯಲ್ಲಿ 61 ಕೋಟಿ ವೆಚ್ಚದಲ್ಲಿ ಒಳಚರಂಡಿ ಯೋಜನೆಗೆ ಬೋರ್ಡ್ ಮಂಜೂರಾತಿ ನೀಡಿದ್ದು, ಆಡಳಿತಾತ್ಮಕ ಮಂಜೂರಾತಿ ದೊರಕಬೇಕಿದೆ ಎಂದರು. ಬಿ.ಸಿ.ರೋಡ್ನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಿಸಲು ಅನುದಾನ ಮಂಜೂರಾಗಿದ್ದು, ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮೀನ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ರೊಡ್ರಿಗಸ್, ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಸಂತೋಷ್ ಕುಮಾರ್ ಬೋಳಿಯಾರ್, ತಾ.ಪಂ.ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಕಾಂಗ್ರೆಸ್ ಮುಖಂಡ ಬಿ.ಎಚ್.ಖಾದರ್, ಇ.ಇ. ಎ.ಜಿ. ಧರ್ಮರಾಜ್ ಪ್ರಸ್ತಾವನೆಗೈದರು.
ಪಿಡಬ್ಲ್ಯೂಡಿ ಎಸ್.ಇ. ಕಾಂತರಾಜ್ ಸ್ವಾಗತಿಸಿದರು. ಬಂಟ್ವಾಳ ಎ.ಇ.ಇ. ಉಮೇಶ್ ಭಟ್ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಹಾಗೂ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.