ಸುಳ್ಯ : ಸುಳ್ಯ ಪೊಲೀಸ್ ಠಾಣೆಗೆ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಬೇಕು ಎಂಬ ಹಲವು ದಶಕಗಳ ಬೇಡಿಕೆ ಈಡೇರಿದೆ. ಸುಳ್ಯ ಪೊಲೀಸ್ ಠಾಣೆಗೆ ಸುಸಜ್ಜಿತ ಮತ್ತು ಸುಂದರ ಕಟ್ಟಡ ತಲೆ ಎತ್ತಿ ನಿಂತಿದೆ. ಸುಳ್ಯ ನಗರದ ಹೃದಯ ಭಾಗದಲ್ಲಿರುವ ಈಗಿನ ಪೊಲೀಸ್ ಠಾಣೆಯ ಹಿಂಬದಿಯಲ್ಲಿ ಆಧುನಿಕ ವಿನ್ಯಾಸದೊಂದಿಗೆ ಹೊಸ ಕಟ್ಟಡ ನಿರ್ಮಾಣಗೊಂಡಿದೆ.
ಹಳೆಯದಾದ ಮತ್ತು ಹಂಚಿನ ಮಾಡಿನ ಕಟ್ಟಡದಲ್ಲಿ ಕಳೆದ ಹಲವು ದಶಕಗಳಿಂದ ಪೊಲೀಸ್ ಠಾಣೆ ಕಾರ್ಯಾಚರಿಸುತ್ತಿತ್ತು. ಅತೀ ಕಡಿಮೆ ಸ್ಥಳಾವಕಾಶ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಹಳೆಯ ಪೊಲೀಸ್ ಠಾಣೆಗೆ ತೀವ್ರ ಸಮಸ್ಯೆಯಾಗಿತ್ತು. ಇದೀಗ ಹೊಸ ಕಟ್ಟಡ ಸಿದ್ಧಗೊಂಡಿದ್ದು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಕಟ್ಟಡದ ಕಾಮಗಾರಿ ಪೂರ್ತಿಗೊಂಡಿದ್ದು ಅಂತಿಮ ಹಂತದ ಸಣ್ಣಪುಟ್ಟ ಕೆಲಸಗಳು ಬಿರುಸಿನಿಂದ ನಡೆಯುತಿದೆ.
88.5 ಲಕ್ಷ ವೆಚ್ಚದ ನೂತನ ಕಟ್ಟಡ : 2012-13ನೇ ನೇ ಆರ್ಥಿಕ ವರ್ಷದಲ್ಲಿ ಸರ್ಕಾರ ಪೊಲೀಸ್ ಠಾಣೆಯ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿತ್ತು. ೮೮.೫ ಲಕ್ಷ ರೂ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. ಎರಡು ಅಂತಸ್ಥಿನ ಕಟ್ಟಡ ೨೮೦೦ ಚದರ ಅಡಿ ವಿಸ್ತಾರವಿದೆ. ನೆಲ ಅಂತಸ್ತು ೧೪೦೦ ಚದರ ಅಡಿ ವಿಸ್ತೀರ್ಣವಿದ್ದು ಇನ್ಸ್ಪೆಕ್ಟರ್ ಕಚೇರಿ, ಕಂಪ್ಯೂಟರ್ ಕೊಠಡಿ, ಶಸ್ತ್ರಾಗಾರ ಕೊಠಡಿ, ಪುರುಷ ಮತ್ತು ಮಹಿಳಾ ಲಾಕಪ್ಗಳು ಇದೆ. ಎರಡನೇ ಮಹಡಿಯೂ ೧೪೦೦ ಚದರ ಅಡಿ ವಿಸ್ತಾರವಾಗಿದ್ದು ಎರಡು ಎಸ್ಐ ಕಚೇರಿ ಕೊಠಡಿ, ಕಂಪ್ಯೂಟರ್ ಮತ್ತು ವಯರ್ಲೆಸ್ ಕೊಠಡಿ, ಪೊಲೀಸ್ ಸಿಬ್ಬಂದಿ ಕಚೇರಿಗಳು ಒಳಗೊಂಡಿದೆ. ಪುರುಷರಿಗೆ, ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಗಳು ಕಟ್ಟಡದಲ್ಲಿದೆ. ಕಟ್ಟಡದ ಹೊರಗಡೆ ಇಂಟರ್ಲಾಕ್ ಅಳವಡಿಸಲಾಗುತಿದೆ. ಮತ್ತು ಕಂಪೌಂಡ್ ನಿರ್ಮಿಸಲಾಗಿದೆ.
ಹಳೆಯ ಕಟ್ಟಡ ಬ್ರಿಟೀಷರ ಕೊಡುಗೆ : ಸುಮಾರು 90 ವರ್ಷಗಳಷ್ಟು ಹಳೆಯದಾದ ಈಗಿನ ಪೊಲೀಸ್ ಠಾಣಾ ಕಟ್ಟಡವನ್ನು ಬೃಟೀಷರು ಕಟ್ಟಿದ್ದರು. ಸುಮಾರು 100 ವರ್ಷಗಳಿಗೂ ಮುನ್ನವೇ ಬ್ರಿಟೀಷರು ಸುಳ್ಯದಲ್ಲಿ ಪೊಲೀಸ್ ಠಾಣೆಯನ್ನು ಸ್ಥಾಪಿಸಿದ್ದರು. ೧೯೨೭ ರಲ್ಲಿ ಈಗಿರುವ ಪೊಲೀಸ್ ಠಾಣಾ ಕಟ್ಟಡವನ್ನು ನಿರ್ಮಿಸಲಾಗಿತ್ತು. ಅದಕ್ಕಿಂತಲೂ ಮುನ್ನ ಹಳೆಗೇಟಿನಲ್ಲಿ ಪೊಲೀಸ್ ಠಾಣೆ ಕಾರ್ಯಾಚರಿಸುತ್ತಿತ್ತು ಎಂದು ಹಿರಿಯರು ನೆನಪಿಸುತಾರೆ. ಹಿಂದೆಲ್ಲ ಇಡೀ ಸುಳ್ಯ ತಾಲೂಕು ವ್ಯಾಪ್ತಿಯನ್ನು ಪೊಲೀಸ್ ಠಾಣೆ ಹೊಂದಿತ್ತು. ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಸ್ಥಾಪನೆಯಾಯಿತು. ತೊಂಭತ್ತರ ದಶಕದವರೆಗೂ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ಅಧೀನದಲ್ಲಿ ಸುಳ್ಯ ಪೊಲೀಸ್ ಠಾಣೆ ಕಾರ್ಯಾಚರಿಸುತ್ತಿತ್ತು. 1993 ರಲ್ಲಿ ಸುಳ್ಯ ಪೊಲೀಸ್ ವೃತ್ತ ಮಂಜೂರಾಯಿತು. ಆರಂಭದಲ್ಲಿ ವೃತ್ತ ನಿರೀಕ್ಷಕರ ಕಚೇರಿಯೂ ಈಗಿನ ಪೊಲೀಸ್ ಠಾಣೆಯಲ್ಲಿಯೇ ಕಾರ್ಯಾಚರಿಸುತ್ತಿತ್ತು. 2003 ರಲ್ಲಿ ವೃತ್ತ ನಿರೀಕ್ಷಕರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣವಾಯಿತು.
ಹಲವು ದಶಕಗಳ ಬೇಡಿಕೆ : ಸುಳ್ಯ ಪೊಲೀಸ್ ಠಾಣೆಗೆ ಸುಸಜ್ಜಿತ ಪೊಲೀಸ್ ಠಾಣೆ ನಿರ್ಮಾಣವಾಗಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿದೆ. ಬೇಡಿಕೆ ತೀವ್ರಗೊಂಡ ಹಿನ್ನಲೆಯಲ್ಲಿ ವಿ.ಎಸ್.ಆಚಾರ್ಯ ಗೃಹ ಸಚಿವರಾಗಿದ್ದಾಗ ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಮತ್ತು ಹೊಸ ಠಾಣೆ ನಿರ್ಮಾಣ ಮಾಡುವುದಕ್ಕೆ ಸ್ಥಳವನ್ನು ಪರಿಶೀಲಿಸಿ ಹೊಸ ಕಟ್ಟಡಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದರು. ಬಳಿಕದ ವರ್ಷಗಳಲ್ಲಿ ಠಾಣಾ ಕಟ್ಟಡಕ್ಕೆ ಅನುದಾನ ನೀಡುವ ಪ್ರಕ್ರಿಯೆಗಳು ಬಿರುಸುಗೊಂಡಿತು. 2012-13ನೇ ಸಾಲಿನಲ್ಲಿ ಸರ್ಕಾರ ಠಾಣೆಯ ಕಟ್ಟಡಕ್ಕೆ ಅನುದಾನ ಘೋಷಿಸಿ ನಿರ್ಮಾಣ ಕಾರ್ಯ ಆರಂಭವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.