ಬಂಟ್ವಾಳ : ಸುಮಾರು 1200 ವರ್ಷಗಳ ಇತಿಹಾಸ ಹೊಂದಿರುವ ಬಂಟ್ವಾಳ ತಾಲೂಕು ಉಳಿ ಗ್ರಾಮದ ನವೀಕೃತ ಶ್ರೀ ವಿಷ್ಣುಮೂರ್ತಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪುನರ್ಪ್ರತಿಷ್ಠಾಪನೆಗೊಂಡಿರುವ ಶ್ರೀ ದೇವರಿಗೆ ಬ್ರಹ್ಮಕಲಶ ಭಾನುವಾರದಂದು ಸಂಪನ್ನಗೊಂಡಿತು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ಉಡುಪಿ ಪುತ್ತಿಗೆಮಠ ಶ್ರೀ ಸುಗುಣೇಂದ್ರ ತೀರ್ಥಪಾದರು, ಶ್ರೀ ಸುಬ್ರಹ್ಮಣ್ಯ ಮಠ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಾಗಪ್ರತಿಷ್ಠೆ , ದೈವಗಳ ಪ್ರತಿಷ್ಠೆ , ಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಮಧ್ಯಾಹ್ನ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಶ್ರೀಪಾದರಿಗೆ ಭಿಕ್ಷಾವಂದನೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಪ್ರಧಾನಅರ್ಚಕ ನಾರಾಯಣ ಮುನ್ನೂರಾಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಘುಪತಿ ಭಟ್, ಸಂಚಾಲಕ ಯೋಗೀಂದ್ರ ಭಟ್, ಪದಾಧಿಕಾರಿಗಳಾದ ರಮೇಶ್ ಬಾರಿತ್ತಾಯರು ಉಡುಪಿ, ಶ್ರೀಪತಿ ಭಟ್ ಮೂಡಬಿದಿರೆ, ವಿಠಲರಾಜ್ ಬರ್ಕಟ್ಟ , ಲಲಿತೇಶ್ ಶೆಟ್ಟಿ ಬಳ್ಳಿ , ಸಂಜೀವ ಗೌಡ ಅಗ್ಪಲ, ದಾಮೋದರ ನಾಯಕ್ ಉಳಿ, ಡೀಕಯ ಪೂಜಾರಿ, ದಿವಾಕರ ರಾವ್, ತಿವರಾಜ್, ವಿಠಲದಾಸ್ ಭಟ್, ಜಾರಪ್ಪ ಕೊಡಂಗೆ, ಅಪ್ಪಿಯಮ್ಮ, ಲಕ್ಷ್ಮಣ ಪೂಜಾರಿ, ಮೋನಪ್ಪ ಪೂಜಾರಿ, ಉಳಿ ಗ್ರಾ.ಪಂ.ಅಧ್ಯಕ್ಷ ಎ.ಚೆನ್ನಪ್ಪ ಸಾಲಿಯಾನ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಪದಾಧಿಕಾರಿಗಳಾದ ಕೆ.ಮಾಯಿಲಪ್ಪ ಸಾಲಿಯಾನ್, ಸಂಪತ್ಕುಮಾರ್ ಶೆಟ್ಟಿ , ಎಂ.ಜೆ.ರಾವ್, ಗುರುಪ್ರಕಾಶ್, ಕಾಂತಪ್ಪ ಪೂಜಾರಿ, ರಘು ಶೆಟ್ಟಿ , ಶಿವರಾಮ ಗೌಡ, ಚೆನ್ನಪ್ಪ ಪೂಜಾರಿ, ಆನುವಂಶಿಕ ಮೊಕ್ತೇಸರರ ಪ್ರತಿನಿಽ ಸುಬ್ರಹ್ಮಣ್ಯ ಭಟ್ ಮತ್ತು ವಿವಿಧ ಸಮಿತಿಗಳ ಪದಾಧಿಕಾರಿ, ಸದಸ್ಯರು ಉಪಸ್ಥಿತರಿದ್ದರು.
ಸ್ಮರಣ ಸಂಚಿಕೆ ಆನಾವರಣ: ಒಟ್ಟು ಒಂಭತ್ತು ದಿನಗಳ ಪರ್ಯಂತ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಡೆದವು. ಶಾಸ್ತ್ರೋಕ್ತವಾಗಿ ಆಗಮಶಾಸ್ತ್ರ ಪ್ರಕಾರ ಶ್ರೀ ದೇವರ ಪ್ರತಿಷ್ಠೆ ನಡೆಯಿತು. ಸಂಪೂರ್ಣ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಕೃಷ್ಣನ ಮೂರ್ತಿಯನ್ನು ಪುನರ್ ಪ್ರತಿಷ್ಠಾಪನೆ ನಡೆಸಲಾಯಿತು. ಯಕ್ಷಗಾನ ವೇಷದಲ್ಲಿರುವ ಸೊಂಟಕ್ಕೆ ಕೈಯ್ಯಿಟ್ಟು ನಿಂತಿರುವ ಅಪರೂಪದ ಶ್ರೀ ಕೃಷ್ಣನ ಮೂರ್ತಿ ಆಕರ್ಷಣೀಯವಾಗಿದೆ. ಬ್ರಹ್ಮಕಲಶದ ಸವಿನೆನಪಿಗಾಗಿ ಉಳಿದ ಕೃಷ್ಣ ಸ್ಮರಣ ಸಂಚಿಕೆ ಅನಾವರಣಗೊಳಿಸಲಾಯಿತು.
ಕಾಷ್ಠದಲ್ಲರಳಿದ ರಾಮ-ಕೃಷ್ಣಾವತಾರ : ಪ್ರವೇಶದ್ವಾರದಿಂದ ಒಳಹೋಗುವಾಗ ಮೇಲ್ಭಾಗದಲ್ಲಿ ಛಾವಣಿಯಲ್ಲಿ ಹಾಗೂ ಒಳಭಾಗದಲ್ಲಿ ಮರದ ಕೆತ್ತನೆಯಲ್ಲಿ ರಚಿಸಿದ ಶ್ರೀ ಕೃಷ್ಣಾವತಾರ ಮತ್ತು ರಾಮಾವತಾರದ ಚಿತ್ರಗಳ ದಾರಶಿಲ್ಪ ಇಲ್ಲಿ ಗಮನಸೆಳೆದಿದ್ದು ದೇವಳದ ಸೊಬಗನ್ನು ಹೆಚ್ಚಿಸಿದೆ.
ಹರಿದುಬಂದ ಭಕ್ತ ಜನಸಾಗರ: ಪ್ರತಿದಿನ ಭಕ್ತ ಜನಸಾಗರ ಹರಿದುಬಂತು. ನಿತ್ಯ ಊರ ಪರವೂರ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸ್ಥಳೀಯ ಹಾಗೂ ಪರವೂರ ವಿವಿಧ ಸಂಘ ಸಂಸ್ಥೆಗಳು, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಒಕ್ಕೂಟಗಳ ಸದಸ್ಯರು ಸ್ವಯಂಸೇವಕರಾಗಿ ಶ್ರಮಿಸಿದ್ದರು. ಯಕ್ಷಗಾನ, ಸುಗಮ ಸಂಗೀತ, ಹರಿಕಥೆ, ಭಕ್ತಿ ರಸಮಂಜರಿ, ನಾದವೈವಿಧ್ಯ , ನೃತ್ಯ ವೈಭವಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನಮೆಚ್ಚುಗೆ ಪಡೆದವು. ವಿಶೇಷವಾಗಿ ಶತಾವಧಾನಿ ವಿದ್ವಾನ್ ರಾಮನಾಥ ಆಚಾರ್ಯರ ನೇತೃತ್ವದಲ್ಲಿ ನಡೆದ ಅಷ್ಟಾವಧಾನ ಕಾರ್ಯಕ್ರಮ ಮನಸೂರೆಗೊಂಡಿತು. ನಿತ್ಯ ಧಾರ್ಮಿಕ ಸಭೆಗಳು ಭಕ್ತರಿಗೆ ಆಧ್ಯಾತ್ಮದ ಹಸಿವನ್ನು ಇಂಗಿಸಿದವು.
ನಿತ್ಯ ಅನುಷ್ಠಾನದ ಸಂಕಲ್ಪ : ಒಂದೂವರೆ ವರ್ಷದ ಹಿಂದೆ ದೇವಳದ ಜೀರ್ಣೋದ್ಧಾರದ ಮಹಾಸಂಕಲ್ಪ ಮಾಡಿ ಭಕ್ತರ, ದಾನಿಗಳ ಸಹಕಾರದಿಂದ ದೇವಾಲಯ ಪುನರ್ನಿರ್ಮಾಣಗೊಂಡಿರುವುದು ಭಗವಂತನ ಅನುಗ್ರಹ ಎನ್ನುವ ಸಮಿತಿ ಸಂಚಾಲಕ, ನ್ಯೂಜೆರ್ಸಿ ಶ್ರೀ ಕೃಷ್ಣ ವೃಂದಾವನದ ಪ್ರ.ಅರ್ಚಕ ಯೋಗೀಂದ್ರ ಭಟ್ ಅವರು ಗ್ರಾಮಸ್ಥರಿಂದ ದೇವಳದಲ್ಲಿ ನಿತ್ಯ ವಿಶೇಷ ಅನುಷ್ಠಾನದ ಸಂಕಲ್ಪ ಮಾಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.