ಬಂಟ್ವಾಳ : ಒಂದೆಡೆ ಸಿಬ್ಬಂದಿ ಕೊರತೆ, ಇನ್ನೊಂದೆಡೆ ಇರುವ ಸಿಬ್ಬಂದಿಗಳಲ್ಲೂ ಗುಂಪುಗಾರಿಕೆ. ಆತ ಸರಿಯಾಗಿ ಕೆಲಸ ಮಾಡುತ್ತಿಲ್ಲ… ಈತ ಕಚೇರಿಗೆ ಬರುವುದಿಲ್ಲ ಎನ್ನುವ ಆರೋಪ, ಪ್ರತ್ಯಾರೋಪ. ಹೊಂದಾಣಿಕೆಯ ಕೊರತೆ, ಭಿನ್ನಾಭಿಪ್ರಾಯ, ಕೆಲಸಗಳ್ಳತನ… ಬಿ.ಸಿ.ರೋಡಿನ ಕೈಕಂಬದಲ್ಲಿರುವ ಸಂಚಾರಿ ಆರೋಗ್ಯ ಘಟಕದಲ್ಲಿ ಕಂಡು ಬಂದ ದೃಶ್ಯಗಳಿವು.
ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ ನೇತೃತ್ವದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ತಾ.ಪಂ.ಸದಸ್ಯರಾದ ದಿನೇಶ್ ಅಮ್ಟೂರು, ಪದ್ಮಶೇಖರ ಜೈನ್, ಮಾಧವ ಮಾವೆ, ಆನಂದ ಶಂಭೂರು ಹಾಜರಿದ್ದ ನಿಯೋಗ ಸಾರ್ವಜನಿಕ ದೂರಿನ ಮೇರೆಗೆ ಇಲ್ಲಿಗೆ ಧಿಡೀರ್ ಭೇಟಿ ನೀಡಿದಾಗ ಇಲ್ಲಿನ ಅವ್ಯವಸ್ಥೆ ಬೆಳಕಿಗೆ ಬಂದಿದೆ.
ಪೂರ್ಣ ಪ್ರಮಾಣದಲ್ಲಿ ವೈದ್ಯಾಧಿಕಾರಿಯಿಲ್ಲ : ಇಡೀ ತಾಲೂಕಿಗೆ ಒಂದು ಸಂಚಾರಿ ಘಟಕವಿದ್ದರೂ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯಾಧಿಕಾರಿ ಇಲ್ಲ ಎನ್ನುವ ಅಂಶ ಭೇಟಿಯ ವೇಳೆ ಬೆಳಕಿಗೆ ಬಂತು.ನಿಯೋಜನೆಯ ಮೇಲೆ ಕರ್ತವ್ಯ ನಿರ್ವಹಿಸುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯಾಧಿಕಾರಿ ತಿಂಗಳಿನಲ್ಲಿ ಬೆರಳೆಣಿಕೆಯ ದಿನಗಳು ಮಾತ್ರ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ತಿಳಿದು ಬಂತು. ಕಾರ್ಯಕ್ಷೇತ್ರಕ್ಕೆ ವೈದ್ಯರು ಹೋಗಬೇಕೆನ್ನುವ ನಿಯಮವಿದ್ದರೂ ವೈದ್ಯರ ಕೊರತೆಯಿಂದಾಗಿ ಹಿರಿಯ ಆರೋಗ್ಯ ಸಹಾಯಕಿ, ಪಾರ್ಮಸಿಸ್ಟ್ ಹಾಗೂ ಚಾಲಕ ಮಾತ್ರ ಕಾರ್ಯಕ್ಷೇತ್ರಕ್ಕೆ ಹೋಗುತ್ತಿರುವ ಮಾಹಿತಿ ಸಿಬ್ಬಂದಿಗಳಿಂದಲೇ ಹೊರಬಿತ್ತು.
ಸಿಬ್ಬಂದಿಗಳಲ್ಲಿ ಹೊಂದಾಣಿಕೆ ಕೊರತೆ: ಇರುವ ನಾಲ್ಕು ಮಂದಿ ಸಿಬ್ಬಂದಿಗಳ ನಡುವೆ ಹೊಂದಾಣಿಯ ಕೊರತೆ ಇರುವುದು ಭೇಟಿಯ ವೇಳೆ ಅನಾವರಣಗೊಂಡಿತು.ಜನಪ್ರತಿನಿಧಿಗಳ ಮುಂದೆಯೇ ಪರಸ್ಪರ ಆರೋಪ ಪ್ರತ್ಯರೋಪ ಮಾಡಿಕೊಳ್ಳುವ ಮೂಲಕ ತಮ್ಮೊಳಗಿನ ವೈಷಮ್ಯವನ್ನು ಬಹಿರಂಗಪಡಿಸಿದರು. ಡಿ ದರ್ಜೆಯ ಗುಮಾಸ್ತ ಕಾರ್ಯಕ್ಷೇತ್ರ ಬರುವುದಿಲ್ಲ. ಆತ ಮಾಡುವ ಕೆಲಸವನ್ನು ನಾವೇ ಮಾಡಬೇಕು, ಪಾರ್ಮಸಿಸ್ಟ್ ಒಂದು ವರ್ಷದಿಂದ ಸಿರಿಯಾಗಿ ಡ್ಯೂಟಿ ಮಾಡುತ್ತಿಲ್ಲ, ಕಾರ್ಯಕ್ಷೇತ್ರದಲ್ಲಿ ಔಷಧಿ ವಿತರಿಸುತ್ತಿಲ್ಲ ಎಂದು ಹಿರಿಯ ಆರೋಗ್ಯ ಸಹಾಯಕಿ ದೂರಿಕೊಂಡರೆ, ಇಲ್ಲಿನ ಸಿಬ್ಬಂದಿಗಳು ಸರಿ ಇಲ್ಲ, ವೈದ್ಯರಿಲ್ಲದೆ ನನಗೆ ಔಷಧಿ ನೀಡುವ ಅಧಿಕಾರವಿಲ್ಲ ಎಂದು ಫಾರ್ಮಸಿಸ್ಟ್ ತನ್ನ ಆಳಲು ತೋಡಿಕೊಂಡರು. ಹಿರಿಯ ಆರೋಗ್ಯ ಸಹಾಯಕಿ ಹಾಗೂ ಚಾಲಕರಿ ಫೀಲ್ಡ್ಗೆ ಹೋದರೂ ಅಲ್ಲಿ ಕ್ಯಾಂಪ್ ಮಾಡುವುದಿಲ್ಲ.
ಕೇವಲ ಗ್ರಾಮಗಳಿಗೆ ಭೇಟಿ ಕೊಟ್ಟು ವಾಪಸ್ಸು ಬರುತ್ತಾರೆ, ಸರ್ಕಾರಿ ವಾಹನವನ್ನು ಖಾಸಗಿ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ ಎಂದು ಡಿ ಗೂಪ್ ನೌಕರ ದೂರಿಕೊಂಡರು. ಕಚೇರಿಯಲ್ಲಿಟ್ಟಿದ್ದ ಕೊಳವೆ ಬಾವಿಯ ಪೈಪ್ ನಾಪತ್ತೆಯಾಗಿದ್ದು ಚಾಲಕ ಇದನ್ನು ಮನೆಗೆ ಸಾಗಿಸಿರುವುದಾಗಿ ಜನಪ್ರತಿನಿಧಿಗಳ ಮುಂದ ಡಿ ಗ್ರೂಫ್ ನೌಕರ ಗಂಭೀರವಾಗಿ ಆರೋಪಿಸಿದರು. ಈ ಸಂದರ್ಭ ಸಮಸ್ಯೆಯನ್ನು ತೋಡಿಕೊಳ್ಳತ್ತಾ ಫಾರ್ಮಸಿಸ್ಟ್ ಜನಪ್ರತಿನಿಧಿಗಳ ಮುಂದೆ ಗಳಗಳನೆ ಅತ್ತರು.
ನೀರಿಲ್ಲ, ಪೋನ್ ಇಲ್ಲ, ವಸತಿಗೃಹ ಸರಿ ಇಲ್ಲ :ಸಂಚಾರಿ ಘಟಕದ ಕಚೇರಿಗೆ ನೀರಿನ ಸಂಪರ್ಕ ಇಲ್ಲ, ಸ್ಥಿರ ದೂರವಾಣಿವಾಣಿ ಸಂಪರ್ಕ ವ್ಯವಸ್ಥೆ ಇಲ್ಲ, ಶೆಡ್ಗೆ ಬೀಗ ಇಲ್ಲ, ಸಿಬ್ಬಂದಿಗಳಿಗೆ ಒದಗಿಸಲಾಗಿರುವ ವಸತಿಗೃಹ ವ್ಯವಸ್ಥಿತವಾಗಿಲ್ಲ ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತದೆ. ಇಲಾಖೆಗೆ ಸಂಬಂಧಪಟ್ಟಂತೆ ದೂರವಾಣಿ ಕರೆ ಮಾಡಬೇಕಿದ್ದರೆ ಸ್ವಂತ ಮೊಬೈಲ್ ಪೋನನ್ನು ಬಳಸಿಕೊಳ್ಳಬೇಕು ಎಂದರು. ನಿಯೋಗದಲ್ಲಿದ್ದ ಸದಸ್ಯರು ವಸತಿಗೃಹವನ್ನು ವೀಕ್ಷಿಸಿದರು.
ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಿ : ಸಿಬ್ಬಂದಿಗಳ ಕೊರತೆ ಎಲ್ಲಾ ಇಲಾಖೆಗಳಲ್ಲೂ ಇದೆ. ಆದರೆ ಇರುವ ಸಿಬ್ಬಂದಿಗಳು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಿಕೊಂಡು ಹೋಗುವಂತೆ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಸಿಬ್ಬಂದಿಗಳಿಗೆ ಸೂಚಿಸಿದರು. ಪೂರ್ಣಕಾಲಿಕ ವೈದ್ಯಾಧಿಕಾರಿ ಹಾಗೂ ಫಾರ್ಮಸಿಸ್ಟ್ ನೇಮಕಕ್ಕೆ ಜಿಲ್ಲಾ ಆರೋಗ್ಯಧಾರಿಯವರೊಂದಿಗೆ ಮಾತುಕತೆ ನಡೆಸುತ್ತೇನೆ, ಸಿಬ್ಬಂದಿಗಳ ನಡುವಿನ ಹೊಂದಾಣಿಕೆ ಕೊರತೆಯನ್ನು ಸರಿಪಡಿಸಲು ಶೀಘ್ರತಾಲೂಕು ಆರೋಗ್ಯಧಿಕಾರಿಯವರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.