
ಬಾಲಕೋಟ್ನ ಇತಿಹಾಸ ನಮಗೆ 19 ನೇ ಶತಮಾನದ “ಜಿಹಾದ್” ಮತ್ತು 21 ನೇ ಶತಮಾನದ “ಫಿದಾಯೀನ್ ಕಾರ್ಖಾನೆ”ಯ ಘೋಷಣೆಗಳು ಒಂದೇ ಬೆಟ್ಟಗಳು ಮತ್ತು ಕಣಿವೆಗಳಲ್ಲಿ ಮೊಳಗಿದ್ದನ್ನು ನಮಗೆ ತೋರಿಸಿಕೊಡುತ್ತದೆ. ಒಂದು ಕಾಲದಲ್ಲಿ ಸೈಯದ್ ಅಹ್ಮದ್ ಬರೇಲ್ವಿಯ ಅನುಯಾಯಿಗಳಿಗೆ ಧಾರ್ಮಿಕ ಯುದ್ಧಕ್ಕೆ ವೇದಿಕೆಯಾಗಿದ್ದ ಈ ಪ್ರದೇಶವು ನಂತರ ಜೈಶ್-ಎ-ಮೊಹಮ್ಮದ್ (ಜೆಇಎಂ) ನಂತಹ ಧಾರ್ಮಿಕ ಭಯೋತ್ಪಾದಕರಿಗೆ ತರಬೇತಿ ಮೈದಾನ ಮತ್ತು ಉಗ್ರರನ್ನು ಬೆಳೆಸುವ ನೆಲವಾಯಿತು. ಪಾಕಿಸ್ತಾನದಲ್ಲಿರುವ ಬಾಲಕೋಟ್, ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಮನ್ಸೆಹ್ರಾ ಜಿಲ್ಲೆಯ ಕುನ್ಹಾರ್ ನದಿಯ (ಕಘನ್ ಕಣಿವೆ) ದಡದಲ್ಲಿರುವ ಒಂದು ನಗರವಾಗಿದೆ.
19ನೇ ಶತಮಾನದಲ್ಲಿ ಬಾಲಕೋಟ್ ಜಿಹಾದಿನ ಜನ್ಮಸ್ಥಳವಾಯಿತು
19 ನೇ ಶತಮಾನದ ಆರಂಭದಲ್ಲಿ, ಸಿಖ್ ಸಾಮ್ರಾಜ್ಯವು ಪಂಜಾಬ್ ಮತ್ತು ವಾಯುವ್ಯದಲ್ಲಿ ದೃಢವಾಗಿತ್ತು, ಈ ಸಂದರ್ಭದಲ್ಲಿ ದೆಹಲಿ ಮತ್ತು ಲಕ್ನೋದ ಇಸ್ಲಾಮಿಕ್ ಧಾರ್ಮಿಕ ಸಮುದಾಯಗಳಲ್ಲಿ ಒಂದು ಹೊಸ ಕಲ್ಪನೆ ಹೊರಹೊಮ್ಮಿತ್ತು. ಅದುವೇ ಕಟ್ಟರ್ ಇಸ್ಲಾಮಿಕ್ ಆಡಳಿತದ ಸ್ಥಾಪನೆ ಮಾಡುವುದು, ಶರಿಯಾ ಆಧಾರಿತ ಆಡಳಿತ ಜಾರಿಗೊಳಿಸುವುದು ಮತ್ತು ಮುಸ್ಲಿಮೇತರ ಆಡಳಿತದ ವಿರುದ್ಧ ಜಿಹಾದ್ ನಡೆಸುವುದು. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಜನಿಸಿದ ಸೈಯದ್ ಅಹ್ಮದ್ ಬರೇಲ್ವಿ ಈ ಸಿದ್ಧಾಂತದ ಆಧಾರದ ಮೇಲೆ ತನ್ನ ಚಳುವಳಿಯನ್ನು ಸ್ಥಾಪಿಸಿದ. ಅವನು 1826 ರಲ್ಲಿ ಪೇಶಾವರಕ್ಕೆ ತೆರಳಿ ಮೌಲಾನಾ ಇಸ್ಮಾಯಿಲ್ ದೆಹ್ಲ್ವಿ ಅವರೊಂದಿಗೆ ಜಿಹಾದಿ ಅಭಿಯಾನವನ್ನು ಪ್ರಾರಂಭಿಸಿದ. ಒಟ್ಟಾಗಿ ಅವರು “ಮುಜಾಹಿದ್ದೀನ್” ಸೈನ್ಯವನ್ನು ರಚಿಸಿದರು.
ಸೈಯದ್ ಅಹ್ಮದ್ ಬ್ರಿಟಿಷರು ಮತ್ತು ಮರಾಠರೊಂದಿಗೆ ಹೋರಾಟ ನಡೆಸುವ ಬದಲು, ಆ ಸಮಯದಲ್ಲಿ ದುರ್ಬಲರೆಂದು ಪರಿಗಣಿಸಲ್ಪಟ್ಟ ಸಿಖ್ಖರನ್ನು ಗುರಿಯಾಗಿಸಿಕೊಂಡ. ಆದಾಗ್ಯೂ, ರಂಜಿತ್ ಸಿಂಗ್ ಅವರ ಸಿಖ್ ಸಾಮ್ರಾಜ್ಯವು ಅವನ ಮುಜಾಹಿದ್ದೀನ್ ಸೈನ್ಯವನ್ನು ಸೋಲಿಸಿತು. ಬರೇಲ್ವಿ ಸಿಖ್ಖರ ವಿರುದ್ಧ ಹಲವಾರು ಯುದ್ಧಗಳನ್ನು ಮಾಡಿದ, ಆದರೆ ಮಹಾರಾಜ ರಂಜಿತ್ ಸಿಂಗ್ ಅವರ ಸೈನ್ಯವು ಪ್ರತಿ ಬಾರಿಯೂ ಅವರನ್ನು ಹಿಮ್ಮೆಟ್ಟಿಸಿತು. ಇದರ ನಂತರ, ಬರೇಲ್ವಿ ಕಾಶ್ಮೀರಕ್ಕೆ ತೆರಳಿ 1830 ರಲ್ಲಿ ಬಾಲಕೋಟ್ನಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿದ. ಬಾಲಕೋಟ್ ಪರ್ವತಗಳಲ್ಲಿ ಸಿಖ್ಖರ ವಿರುದ್ಧ ಹೋರಾಡುವುದು, ಅವರನ್ನು ಸೋಲಿಸುವುದು ಮತ್ತು ಕಾಶ್ಮೀರವನ್ನು ವಶಪಡಿಸಿಕೊಳ್ಳುವುದು ಅವನ ತಂತ್ರವಾಗಿತ್ತು. ಆದರೆ ಇತಿಹಾಸ ಬೇರೆಯೇ ತೀರ್ಪು ನೀಡಿತು.
ಮೇ 6, 1831 ರಂದು ನಡೆದ ಬಾಲಕೋಟ್ ಕದನದಲ್ಲಿ, ಸಿಖ್ ಸೈನ್ಯವು ಸೈಯದ್ ಅಹ್ಮದ್ ಅವರ ಮುಜಾಹಿದ್ದೀನ್ಗಳನ್ನು ನಿರ್ಣಾಯಕವಾಗಿ ಸೋಲಿಸಿತು. ಸೈಯದ್ ಅಹ್ಮದ್ ಮತ್ತು ಶಾ ಇಸ್ಮಾಯಿಲ್ ಅಲ್ಲಿ ಕೊಲ್ಲಲ್ಪಟ್ಟರು. ಈ ಯುದ್ಧವು ಬಾಲಕೋಟ್ ಸಾಂಕೇತಿಕ ಮಹತ್ವವನ್ನು ನೀಡಿತು. ಈ ಸ್ಥಳವು ಮುಜಾಹಿದ್ದೀನ್ಗಳಿಗೆ “ಜಿಹಾದ್ನ ಭೂಮಿ”ಯಾಯಿತು. ಹೀಗಾಗಿ, ಬಾಲಕೋಟ್ ಕೇವಲ ಭೌಗೋಳಿಕ ಹೆಗ್ಗುರುತಾಗಿರಲಿಲ್ಲ, ಬದಲಾಗಿ ಜಿಹಾದಿಗಳ ಮಾನಸಿಕ ನಕ್ಷೆಯಲ್ಲಿ ಕೆತ್ತಿದ ಸಂಕೇತವಾಯಿತು – ಜಿಹಾದ್ನ ಕಥೆಗಳು ಪ್ರಾರಂಭವಾಗುವ ಮತ್ತು ಭವಿಷ್ಯದ ಪೀಳಿಗೆಗಳು “ಸ್ಫೂರ್ತಿ ಪಡೆಯುವ” ಕಣಿವೆಯಾಯಿತು.
21 ನೇ ಶತಮಾನದ ಆರಂಭದಲ್ಲಿ, ವಿವಿಧ ಜಿಹಾದಿ ಸಂಘಟನೆಗಳು ಪಾಕಿಸ್ತಾನದಲ್ಲಿ ತಮ್ಮ ಜಾಲವನ್ನು ವಿಸ್ತರಿಸುತ್ತಿದ್ದಂತೆ, ಜೈಶ್-ಎ-ಮೊಹಮ್ಮದ್ನಂತಹ ಗುಂಪುಗಳು ಬಾಲಕೋಟ್ ಅನ್ನು ಪ್ರಮುಖ ನೆಲೆಯಾಗಿ ಆಯ್ಕೆ ಮಾಡಿಕೊಂಡವು. ದೂರದ ಬೆಟ್ಟಗಳು, ನದಿ, ಅರಣ್ಯ, ಧಾರ್ಮಿಕ ವಾತಾವರಣ ಮತ್ತು ಐತಿಹಾಸಿಕ ಜಿಹಾದಿ ಸಂಕೇತಗಳು ಎಲ್ಲವೂ ಸೇರಿ ಅದನ್ನು ಸೂಕ್ತ ಶಿಬಿರ ಸ್ಥಳವನ್ನಾಗಿ ಮಾಡಿತು.
2000 ರ ಸುಮಾರಿಗೆ, ಬಾಲಕೋಟ್ ಬಳಿಯ ಜಬಾ ಟಾಪ್ ಎಂಬ ಬೆಟ್ಟದ ಮೇಲೆ ಒಂದು ದೊಡ್ಡ ತರಬೇತಿ ಶಿಬಿರವನ್ನು ಸ್ಥಾಪಿಸಲಾಯಿತು, ಇದನ್ನು ಮೇಲಿನಿಂದ ಮದರಸಾ ಮತ್ತು “ತಲೀಮ್-ಉಲ್-ಕುರಾನ್” ಎಂಬ ಧಾರ್ಮಿಕ ಸಂಕೀರ್ಣವಾಗಿ ಪ್ರದರ್ಶಿಸಲಾಯಿತು. ಆದರೆ ಒಳಗಿನ ಕೆಲಸವು ಆತ್ಮಹತ್ಯಾ ದಾಳಿಗಳಿಗೆ ತರಬೇತಿ, ಶಸ್ತ್ರಾಸ್ತ್ರ ಬಳಕೆ, ನಕ್ಷೆಗಳಲ್ಲಿ ಗುರಿಗಳನ್ನು ಕಲಿಯುವುದು ಮತ್ತು “ಹುತಾತ್ಮತೆ” ಕುರಿತು ಸೈದ್ಧಾಂತಿಕ ಪಾಠಗಳನ್ನು ಹೇಳಿಕೊಡುವುದನ್ನು ಒಳಗೊಂಡಿತ್ತು.
ಫೆಬ್ರವರಿ 26, 2019ರಲ್ಲಿ ಮತ್ತೆ ಸದ್ದು ಮಾಡಿತು ಬಾಲಾಕೋಟ್: ಆಕಾಶದಿಂದ ಬಂದಿತ್ತು ಪ್ರತಿಕ್ರಿಯೆ
ಫೆಬ್ರವರಿ 14, 2019 ರಂದು, ಜೈಶ್-ಎ-ಮೊಹಮ್ಮದ್ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆಸಿತು. ಈ ದಾಳಿಯಲ್ಲಿ 40 ಭಾರತೀಯ ಸೈನಿಕರು ಬಲಿಯಾದ ನಂತರ, ಭಾರತ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿತು. ಈ ಬಾರಿ, ನಿಯಂತ್ರಣ ರೇಖೆಯ ಬಳಿಯ ಪೋಸ್ಟ್ ಮೇಲೆ ಗುಂಡು ಹಾರಿಸುವ ಮೂಲಕ ಮಾತ್ರವಲ್ಲ, ಪಾಕಿಸ್ತಾನ ಮತ್ತು ಜೈಶ್ಗೆ ಹೆಚ್ಚಿನ ಭದ್ರತಾ ಪ್ರಜ್ಞೆ ಇದ್ದ ಬಾಲಕೋಟ್ನಲ್ಲಿರುವ ಜಬಾ ಟಾಪ್ ಕ್ಯಾಂಪ್ ಮೇಲೆ ದಾಳಿ ಮಾಡುವ ಮೂಲಕ.
ಫೆಬ್ರವರಿ 26 ರಂದು ಬೆಳಗಿನ ಜಾವ 3:30 ರ ಸುಮಾರಿಗೆ, ಭಾರತೀಯ ವಾಯುಪಡೆಯ ಮಿರಾಜ್ -2000 ವಿಮಾನಗಳು ಖೈಬರ್ ಪಖ್ತುನ್ಖ್ವಾದ ಗಡಿಯನ್ನು ದಾಟಿ ಜಿಪಿಎಸ್/ಇಮೇಜ್-ಗೈಡೆಡ್ ಸ್ಪೈಸ್ -2000 ಸ್ಮಾರ್ಟ್ ಬಾಂಬ್ಗಳೊಂದಿಗೆ ಶಿಬಿರದ ಕಟ್ಟಡಗಳನ್ನು ಗುರಿಯಾಗಿಸಿಕೊಂಡವು. 1971 ರ ನಂತರ ಭಾರತೀಯ ವಿಮಾನಗಳು ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಪಾಕಿಸ್ತಾನದ ನೆಲದಲ್ಲಿರುವ ಗುರಿಯ ಮೇಲೆ ವೈಮಾನಿಕ ದಾಳಿ ನಡೆಸಿದ್ದು ಇದೇ ಮೊದಲು.
ಜಗತ್ತಿಗೆ, ಇದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾಗಿತ್ತು, ಆದರೆ ಬಾಲಕೋಟ್ನ ದೀರ್ಘ ಇತಿಹಾಸವನ್ನು ಪರಿಗಣಿಸಿದರೆ, ಅದೇ ಬೆಟ್ಟದ ಮೇಲಿನ ಪಟ್ಟಣದ ಮೇಲೆ ಇದು ಎರಡನೇ ನಿರ್ಣಾಯಕ ದಾಳಿಯಾಗಿತ್ತು. ಮೊದಲ ಬಾರಿಗೆ, 1831 ರಲ್ಲಿ, ಸಿಖ್ ಸೈನ್ಯವು ಅಲ್ಲಿ ಸೈಯದ್ ಅಹ್ಮದ್ ಅವರ ಜಿಹಾದಿ ಚಳುವಳಿಯ ಬೆನ್ನೆಲುಬನ್ನು ಮುರಿದಿತ್ತು. ಎರಡನೇ ಬಾರಿಗೆ, ಸುಮಾರು 190 ವರ್ಷಗಳ ನಂತರ, 2019 ರಲ್ಲಿ, ಭಾರತೀಯ ವಾಯುಪಡೆಯು ಆಧುನಿಕ ಜಿಹಾದಿ ಜಾಲದ ಬೆನ್ನೆಲುಬಾಗಿ ಪರಿಗಣಿಸಲಾದ ತರಬೇತಿ ಸೌಲಭ್ಯವನ್ನು ವಾಯುದಾಳಿಯೊಂದಿಗೆ ನಾಶಪಡಿಸಿತು.
ಈ ಮಾದರಿಗೆ ಮೊದಲ ಬಾರಿಗೆ ವಾಯುದಾಳಿಯು ಹೊಸ ತಿರುವು ನೀಡಿತು: ನಗರದ ಬೆಟ್ಟಗಳು ಪದೇ ಪದೇ ಭಯೋತ್ಪಾದಕ ಹಿಂಸಾಚಾರದ ಪ್ರಯೋಗಾಲಯವಾದರೆ, ಪ್ರತಿಕ್ರಿಯೆ ಈಗ ಅಲ್ಲಿಗೆಯೇ ತಲುಪುತ್ತದೆ ಎಂಬ ಸಂದೇಶ ನೀಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


