
ವಿಶ್ವ ಸೀರೆ ದಿನದ ಸಂದರ್ಭದಲ್ಲಿ ದಕ್ಷಿಣ ಏಷ್ಯಾದ ಅತ್ಯಂತ ಪ್ರತಿಷ್ಠಿತ ವಸ್ತ್ರ ಪರಂಪರೆಯ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಆಸಕ್ತಿ ಹೆಚ್ಚಿನವರಿಗೆ ಇದ್ದೇ ಇರುತ್ತದೆ. ಅದರಲ್ಲೂ ತನ್ನದೇ ಆದ ಮಿತಿ, ನಿಖರತೆ ಮತ್ತು ರಾಜಕೀಯ ಪೋಷಣೆಯಲ್ಲಿ ಸುತ್ತಿಕೊಂಡ ನೇಯ್ಗೆಯಾಗಿ ಪ್ರತ್ಯೇಕವಾಗಿ ನಿಲ್ಲುವ ಪಟೋಲಾ ಸೀರೆಯ ಬಗೆಗೆ ಒಂದಿಷ್ಟು ಮಾಹಿತಿ ನೀಡುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಲಾಗಿದೆ. ಪಟೋಲ ಸೀರೆಯು ಸಿಂಧೂ ಕಣಿವೆ ನಾಗರಿಕತೆಯಷ್ಟು ಹಿಂದಿನದು. ಪಟಾನ್ ಪಟೋಲಾ ಸೀರೆಯನ್ನು ಭಾರತಕ್ಕೆ ನೀಡಿದ್ದು ಗುಜರಾತ್ನ ಜವಳಿ ಪರಂಪರೆಯ ಅತ್ಯಂತ ಅಸಾಧಾರಣ ಕೊಡುಗೆಗಳಲ್ಲಿ ಒಂದು ಎಂದೇ ಹೇಳಲಾಗಿದೆ. ಗುಜರಾತ್ ಸಾವಿರಾರು ವರ್ಷಗಳಿಂದ ಈ ಸೀರೆಯ ನೇಯ್ಗೆ ಕೇಂದ್ರವಾಗಿದ್ದು, ಅದರ ಅತ್ಯಂತ ಮೌಲ್ಯಯುತ ಕಲೆಗಳಲ್ಲಿ ಈ ಡಬಲ್ ಇಕತ್ ರೇಷ್ಮೆ ಸೀರೆಯು ತಲೆಮಾರುಗಳವರೆಗೆ ಉಳಿಯುವ ಮಾದರಿ ಸೀರೆಯಾಗಿದೆ. ಹಾಗಾದರೆ ಪಟೋಲಾ ಸೀರೆ ಪಟಾನ್ಗೆ ಹೇಗೆ ಬಂದಿತು ಎಂಬ ಕಥೆ ಕೇವಲ ಸಾಂಸ್ಕೃತಿಕ ಕಥೆಯಲ್ಲ, ಬದಲಿಗೆ ಒಬ್ಬ ರಾಜನ ಭಕ್ತಿ ಮತ್ತು ಸಮುದಾಯದ ಕೌಶಲ್ಯದಿಂದ ರೂಪಿತವಾದ ಕ್ಷಣವಾಗಿದೆ.
ಕ್ರಿಸ್ತಶಕ 1175 ಸುಮಾರಿಗೆ, ಗುಜರಾತ್ನ ಜೈನ ರಾಜ ಕುಮಾರಪಾಲ, ಪ್ರತಿದಿನ ಪೂಜೆಗೆ ಹೊಸ ಹೊಸ ಪಟೋಲಾ ಸೀರೆಯನ್ನು ಬಳಸುತ್ತಿದ್ದ, ರೇಷ್ಮೆ ಪಟೋಲಾವನ್ನು ಜೈನ ಸಂಪ್ರದಾಯದಲ್ಲಿ ಪವಿತ್ರವೆಂದು ಪರಿಗಣಿಸಲಾಗಿತ್ತು. ಆ ಕಾಲದಲ್ಲಿ, ಪಟೋಲಾಗಳು ಮಹಾರಾಷ್ಟ್ರದ ಜಲ್ನಾ ಬಳಿಯ ಮುಂಗಿ ಪೈಟಾನದಿಂದ ಆಮದಾಗುತ್ತಿದ್ದವು, ಅಲ್ಲಿ ಅವುಗಳನ್ನು ಸಾಮಾನ್ಯ ಬಟ್ಟೆಯಂತೆ ಪರಿಗಣಿಸಲಾಗಿತ್ತು ಮತ್ತು ರಾಜ ಕುಟುಂಬದವರು ಹಾಸಿಗೆಗೆ ಹಾಸಲು ಅದನ್ನು ಬಳಸುತ್ತಿದ್ದರು ಮತ್ತು ವಿದೇಶಕ್ಕೆ ರಫ್ತು ಮಾಡುತ್ತಿದ್ದರು. ಕುಮಾರಪಾಲನಿಗೆ, ಇಂತಹ ಪವಿತ್ರ ಜವಳಿಯು ಈ ರೀತಿಯಾಗಿ ಅಪವಿತ್ರಗೊಳ್ಳುತ್ತಿರುವುದನ್ನು ನೋಡುವುದು ಅಸಹ್ಯವಾಗಿತ್ತು. ಹೀಗಾಗಿ ಆತ ದಕ್ಷಿಣದಿಂದ ಪಟೋಲಾ ಕಲೆಯಲ್ಲಿ ಮೇಧಾವಿಗಳಾದ 700 ಸಾಲ್ವಿ ನೇಕಾರರನ್ನು ಪಟಾನ್ಗೆ ಕರೆ ತಂದನು, ಅವರನ್ನು ದಿಗಂಬರದಿಂದ ಶ್ವೇತಾಂಬರ ಜೈನ ಧರ್ಮಕ್ಕೆ ಮತಾಂತರಗೊಳಿಸಿ, ತನ್ನ ರಾಜ್ಯದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿದನು. ಈ ವಲಸೆಯು ಗುಜರಾತ್ನಲ್ಲಿ ಪಟೋಲಾ ವಸ್ತ್ರಗಳ ಹೊಸ ಗುರುತಿನ ಆರಂಭಕ್ಕೆ ಸಾಕ್ಷಿಯಾಯಿತು.
ಹಲವು ಮೌಖಿಕ ಪರಂಪರೆಗಳು ಕುಮಾರಪಾಲನು ಕಲಾವಿದರನ್ನು ಏಕೆ ಸ್ಥಳಾಂತರಿಸಿದನು ಎಂಬುದನ್ನು ನಾನಾ ಬಗೆಯಲ್ಲಿ ವಿವರಿಸುತ್ತವೆ. ಕೆಲವವರು ಹೇಳುವಂತೆ ಆತ ಜಲ್ನಾದಲ್ಲಿ ಪಟೋಲಾಗಳ ಅಪವಿತ್ರ ಬಳಕೆಯಿಂದ ಕೋಪಗೊಂಡಿದ್ದ. ಆಚರಣಾ ವಸ್ತ್ರಗಳಿಗಾಗಿ ಮತ್ತೊಂದು ರಾಜ್ಯದ ಮೇಲೆ ಅವಲಂಬಿತವಾಗಿರುವುದನ್ನು ತಪ್ಪಿಸಲು ಬಯಸಿದ್ದ, ಇನ್ನು ಕೆಲವು ಮೌಖಿಕ ಮಾಹಿತಿಗಳ ಪ್ರಕಾರ ಜಲ್ನಾ ಯುದ್ಧ ವಿಜಯದ ಸಮಯದಲ್ಲಿ ಆತ ಅದನ್ನು ಲೂಟಿ ಮಾಡಿ ಪಟಾನ್ಗೆ ತಂದಿದ್ದ. ಅದೇನೆಯಿರಲಿ, ಪಟೋಲಾ ಉತ್ಪಾದನೆಯು ಅದರ ಹಿಂದಿನ ಕೇಂದ್ರಗಳಿಗಿಂತ ಹೆಚ್ಚಾಗಿ ಪಟಾನ್ನಲ್ಲಿ ಅಭಿವೃದ್ಧಿ ಹೊಂದಿತು. ಪೈಟಾನಿ ಸೀರೆಗಳು ಜಲ್ನಾದಿಂದ 76 ಕಿ.ಮೀ. ದೂರದಲ್ಲಿ ನೇಯ್ಗೆಯನ್ನು ಮುಂದುವರಿಸಿದರೂ, ಪಟೋಲಾ ಗುಜರಾತ್ನ ವಿಶಿಷ್ಟ ಮಾಸ್ಟರ್ಪೀಸ್ ಆಗಿ ವಿಕಸನಗೊಂಡಿತು, ಜೈನರು, ಬೋಹ್ರಾ ಮುಸ್ಲಿಮರು, ನಗರ ಬ್ರಾಹ್ಮಣರು ಮತ್ತು ಕಚ್ ಭಾಟಿಯಾಗಳಲ್ಲಿ ಧಾರ್ಮಿಕ ಮಹತ್ವವನ್ನು ಪಡೆಯಿತು. ಆನೆ ಮತ್ತು ಗಿಳಿ ವಿನ್ಯಾಸಗಳು ಹಿಂದೂ ಮದುವೆ ಆಚರಣೆಗಳಲ್ಲಿ ಸಾಂಪ್ರದಾಯಿಕವಾಗಿ, ಸಮೃದ್ಧಿಯನ್ನು ಸಂಕೇತಿಸುತ್ತವೆ.
ಪಟೋಲಾದ ಮೂಲವು ಸಂಸ್ಕೃತ ಪದ ಪಟ್ಟಕುಲ್ಲಾದಲ್ಲಿದೆ, ಅಂದರೆ “ರೇಷ್ಮೆ ಬಟ್ಟೆ”, ಮತ್ತು ಅದರ ಪ್ರಾರಂಭಿಕ ಉಲ್ಲೇಖಗಳು ನರಸಿಂಹ ಪುರಾಣದಂತಹ ಗ್ರಂಥಗಳಲ್ಲಿ ಕಾಣಿಸುತ್ತವೆ, ಇದು ದಕ್ಷಿಣ ಭಾರತೀಯ ಆಚರಣೆಗಳೊಂದಿಗೂ ಸಂಬಂಧ ಹೊಂದಿದೆ. ಶತಮಾನಗಳಲ್ಲಿ, ಪಟೋಲಾ ಸಂಪತ್ತು ಮತ್ತು ಶುದ್ಧತೆಯ ಸಂಕೇತವಾಯಿತು, ಶ್ರೀಮಂತ ಕುಟುಂಬಗಳು ಮಾತ್ರ ಇದನ್ನು ಧರಿಸುತ್ತಿದ್ದರು ಅಥವಾ ಪವಿತ್ರ ಸಮಾರಂಭಗಳಲ್ಲಿ ಕೊಡುಗೆಯಾಗಿ ನೀಡುತ್ತಿದ್ದರು. ವ್ಯಾಪಾರಿ ಸಮುದಾಯಗಳಿಗೆ ಪಟೋಲಾ ಪರಂಪರೆಯನ್ನು ಸಂರಕ್ಷಿಸಲು ವಿಶೇಷ ಸವಲತ್ತುಗಳನ್ನು ನೀಡಲಾಗಿತ್ತು. ಅದರ ಸಾಂಸ್ಕೃತಿಕ ಪ್ರಭಾವ ಹರಡುತ್ತಿದ್ದಂತೆ, ಪಟೋಲಾ ಗುಜರಾತಿ ಕುಟುಂಬಗಳಲ್ಲಿ ಮೌಲ್ಯಯುತ ಸ್ವತ್ತಾಯಿತು. ಕೇವಲ ಉಡುಪಲ್ಲ, ಬದಲಿಗೆ ಭಕ್ತಿ, ಗುರುತು ಮತ್ತು ವಂಶಾವಳಿಯನ್ನು ಮೂರ್ತಗೊಳಿಸುವ ಪಾರಂಪರಿಕ ವಸ್ತುವಾಯಿತು.
ಪಟೋಲಾದ ಪ್ರತಿಷ್ಠೆಯು ಅದರ ಅದ್ಭುತ ತಾಂತ್ರಿಕ ಸಂಕೀರ್ಣತೆಯಲ್ಲಿ ಬೇರೂರಿದೆ. ಡಬಲ್ ಇಕತ್ ವಿಧಾನದಲ್ಲಿ ಇದು ನೇಯಲ್ಪಟ್ಟಿದೆ. ಒಂದು ಸೀರೆಯ ನೇಯ್ಗೆಗೆ 18–19 ಹಂತಗಳು ಬೇಕು, 4–5 ಬಣ್ಣಗಳು ಬಳಸಲಾಗುತ್ತವೆ, 4–5 ನೇಕಾರರು ಒಂದು ಸೀರೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಆರು ತಿಂಗಳುಗಳವರೆಗೆ ಇದು ತೆಗೆದುಕೊಳ್ಳುತ್ತದೆ. ಸಾಲ್ವಿ ಕುಟುಂಬಗಳು ಈಗಲೂ ನೈಸರ್ಗಿಕ ಬಣ್ಣ ವಿಧಾನಗಳನ್ನೇ ಬಳಸಿ ಸೀರೆ ತಯಾರಿಸುತ್ತವೆ. ಹೂವಿನ ತೊಗಟೆ, ಗುಲಾಲ್ ಮತ್ತು ಹಣ್ಣುಗಳನ್ನು ಬಳಸಿ ಬಣ್ಣ ತಯಾರು ಮಾಡುತ್ತಾರೆ. ಅವರ ವಿನ್ಯಾಸಗಳು ಎಷ್ಟೊಂದು ದೃಢವೆಂದರೆ ಗುಜರಾತ್ನಲ್ಲಿ ಪ್ರಸಿದ್ಧ ಗಾದೆಯೇ ಇದೆ “ಫಾಟೆ ಪನ್ ಫೀಟೆ ನಹಿ” ಎಂದು. ಅಂದರೆ ಬಟ್ಟೆ ಹರಿದರೂ ಅದರ ವಿನ್ಯಾಸ ಎಂದಿಗೂ ಮಾಸುವುದಿಲ್ಲ ಎಂಬುದು ಇದರ ಅರ್ಥ. 2013ರಲ್ಲಿ ಪಟಾನ್ ಪಟೋಲಾಕ್ಕೆ ಜಿಐ ಟ್ಯಾಗ್ ದೊರಕಿದೆ, ಈ ಅಸಾಧಾರಣ ಕಲೆಗೆ ಜಾಗತಿಕ ಮನ್ನಣೆಯನ್ನು ಇದು ಭದ್ರಪಡಿಸಿದೆ.
ಇಂದು ಪಟಾನ್ನಲ್ಲಿ ಪಟೋಲಾ ಸೀರೆ ನೇಯುವ ನೇಕಾರರ ಸಂಖ್ಯೆ ಸುಮಾರು 300 ಇರಬಹುದು. ಫತಿಪಾಲ್ ಗೇಟ್ ಬಳಿಯ ಪಟೋಲಾ ಹೌಸ್ ಉತ್ಪಾದನೆಯ ಪ್ರಾಥಮಿಕ ಕೇಂದ್ರವಾಗಿ ಸೇವೆ ಸಲ್ಲಿಸುತ್ತದೆ. ಆದರೆ ಈ ನೇಕಾರರ ಜೀವನೋಪಾಯವು ದುರ್ಬಲವಾಗಿದೆ. ಪಟೋಲ ಸೀರೆ ನೇಯುವುದು ಅತ್ಯಂತ ಶ್ರಮದಾಯಕ , ಸಮಯ ತೆಗೆದುಕೊಳ್ಳುವ ಮತ್ತು ಯಾಂತ್ರೀಕರಣಕ್ಕೆ ಅಸಾಧ್ಯವಾದ ಕೆಲಸ. ಒರಿಜಿನಲ್ ಪಟೋಲಾಗಳು ರೂ 1.5 ಲಕ್ಷದಿಂದ ರೂ 6 ಲಕ್ಷದವರೆಗೆ ಇರುತ್ತವೆ. ದುಬಾರಿತನಕ್ಕೆ ಈ ಬೆಲೆಯಲ್ಲ, ಬದಲಿಗೆ ಶುದ್ಧ ಕೈಯ ನಿಖರತೆ, ತಿಂಗಳುಗಳ ಶ್ರಮ ಮತ್ತು ಅಪರೂಪದ ಡಬಲ್ ಇಕತ್ ತಜ್ಞತೆಗೆಗಾಗಿ ಈ ಬೆಲೆ. 28ನೇ ತಲೆಮಾರಿನ ನೇಕಾರ ರಾಹುಲ್ ಸಾಲ್ವಿ ಹೇಳುವಂತೆ, “ಯಾವುದೇ ಯಂತ್ರಕ್ಕೂ ಅಸಲಿ ಪಟೋಲ ಸೀರೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಅಗ್ಗದ ನಕಲುಗಳು ಮಾರುಕಟ್ಟೆಯನ್ನು ತುಂಬಿವೆ, ಆದರೆ ಅವು ಕಲಾಕೌಶಲ್ಯ ಅಥವಾ ನಿಜವಾದ ಪಟೋಲಾದ ಸಾಂಸ್ಕೃತಿಕ ತೂಕವನ್ನು ಪುನರುತ್ಪಾದಿಸಲಾರವು. ಪಟೋಲಾ ಕೇವಲ ಸೀರೆಯಲ್ಲ — ಅದೊಂದು ಜೀವಂತ ಪರಂಪರೆ. ಕುಶಲಕರ್ಮಿ ತಮ್ಮ ಕೈಯಾರೆ ಒಂದು ಮಾಸ್ಟರ್ಪೀಸ್ ಸೀರೆಯನ್ನು ಸೃಷ್ಟಿಸಲು ಅರ್ಧ ವರ್ಷವನ್ನು ಮುಡಿಪಾಗಿಡುತ್ತಾರೆ ಎಂದರೆ ಅರ್ಥ ಮಾಡಿಕೊಳ್ಳಿ ಆ ಸೀರೆಯ ಮಹತ್ವ ಎಷ್ಟಿರಬಹುದೆಂದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



