ಭಾರತವು ಪುಣ್ಯಭೂಮಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿ ಜೀವನದ ನಿಜವಾದ ಸತ್ಯವನ್ನು, ಆಧ್ಯಾತ್ಮವನ್ನೂ ತತ್ವಜ್ಞಾನವನ್ನೂ ಸಾರಿದ, ಪ್ರಪಂಚಕ್ಕೆ ಅಪಾರ ಜ್ಞಾನವನ್ನು ನೀಡಿದ ದಾರ್ಶನಿಕರೂ ಮಹಾಮಹಿಮರೂ ಜನಿಸಿದ್ದಾರೆ. ಹಿಂದೂ ಧರ್ಮವು ಸಂಕಷ್ಟವನ್ನು ಎದುರಿಸುತ್ತಿದ್ದಾಗ ಮಲಗಿದ್ದ ಹಿಂದುಗಳನ್ನು ಎಚ್ಚರಿಸಲು, ಹರಿದು ಹಂಚಿ ಹೋದ ಹಿಂದೂ ಧರ್ಮವನ್ನು ಒಂದುಗೂಡಿಸಲು ಅನೇಕ ಗುರುಗಳು ಜನ್ಮವೆತ್ತಿ ತಮ್ಮ ಜನ್ಮವನ್ನೂ ಅದೇ ಕಾರಣಕ್ಕಾಗಿ ಮುಡಿಪಾಗಿರಿಸಿದ್ದರು. ದೇಶವು ಪರಕೀಯರ ಆಡಳಿತದಲ್ಲಿ ನಲುಗುತ್ತಿದ್ದ ಸಂದರ್ಭದಲ್ಲಿ ತಮ್ಮ ಮಾತೃಭೂಮಿಯ ರಕ್ಷಣೆಗಾಗಿ ಅಪ್ರತಿಮ ಶೌರ್ಯವನ್ನು ಮೆರೆದು ಹುತಾತ್ಮರಾದ ವೀರರೂ ಈ ಭೂಮಿಯಲ್ಲಿ ಜನಿಸಿದ್ದಾರೆ. ಇಂತಹಾ ಪುಣ್ಯಪುರುಷರ ಮಣ್ಣಿನಲ್ಲಿ ಜನಿಸಿದ ನಾವು ಇಂದು ಏನಾಗಿದ್ದೇವೆ?
ನಮಗೇನಾಗಿದೆ ? ಚೆನ್ನಾಗಿಯೇ ಇದ್ದೇವಷ್ಟೆ, ಎನ್ನುವ ಉತ್ತರವನ್ನು ನೀಡುವ ಮುನ್ನ ಒಂದು ಬಾರಿ ಆಲೋಚಿಸಿ. ಹೌದು ಮೂರು ಹೊತ್ತು ಚೆನ್ನಾಗಿ ಉಂಡು, ರಾತ್ರಿ ಬೆಚ್ಚಗೆ ನಿದ್ರಿಸಿ ಉಳಿದ ಸಮಯದಲ್ಲಿ ಪರಸ್ಪರ ಕಚ್ಚಾಡುತ್ತಾ ಚೆನ್ನಾಗಿಯೇ ಇದ್ದೇವೆ. ಅಲ್ಲವೇ? ವೈಯಕ್ತಿಕ ನೆಲೆಯಲ್ಲಿ ನಾವೆಲ್ಲರೂ ಚೆನ್ನಾಗಿರಬಹುದು ಆದರೆ ಒಂದು ಸಮಾಜವಾಗಿ ನಾವು ಚೆನ್ನಾಗಿರುವುದು ಸತ್ಯವೇ? ವಿದೇಶದಲ್ಲಿರುವ ವ್ಯಕ್ತಿಯೊಬ್ಬ (ಮಂಗಳೂರಿನ ಬಂಟ\ಬಿಲ್ಲವ\ಬ್ರಾಹ್ಮಣ) ಹೊರದೇಶದಲ್ಲಿ ತನ್ನನ್ನು ಏನೆಂದು ಪರಿಚಯಿಸುತ್ತಾನೆ. ಹೆಸರಿನೊಂದಿಗೆ ನಾನು ಮಂಗಳೂರಿನ ವ್ಯಕ್ತಿ ಎನ್ನುತಾನೆಯೇ ಅಥವಾ ನಾನು ಭಾರತೀಯ ಎನ್ನುತ್ತಾನೆಯೇ? ನಾನು ಹಿಂದೂ ಎನ್ನುತ್ತಾನೆಯೇ ಅಥವಾ ತನ್ನ ಉಪಜಾತಿಯನ್ನು ಹೇಳುತ್ತಾನೆಯೇ? ಹೊರದೇಶದಲ್ಲಿರುವಾಗ ನಾವು ದೇಶದ ಹೆಸರಿನೊಂದಿಗೆ, ಹೊರರಾಜ್ಯದಲ್ಲಿರುವಾಗ ನಾವು ರಾಜ್ಯದ ಹೆಸರಿನೊಂದಿಗೆ, ರಾಜ್ಯದಲ್ಲಿರುವಾಗ ಜಿಲ್ಲೆಯ ಅಥವಾ ಸ್ಥಳದ ಹೆಸರಿನೊಂದಿಗೆ ನಮ್ಮ ಪರಿಚಯವನ್ನು ಹೇಳುತ್ತೇವೆ. ಅಮೆರಿಕಾದಲ್ಲಿರುವ ನನ್ನ ಪರಿಚಯದವರೊಬ್ಬರು ಹೇಳುತ್ತಿದ್ದರು ಅಮೆರಿಕಾದಲ್ಲಿರುವ “ಭಾರತೀಯರು ಅಂದ್ರೆ ನಮ್ಮವರು”. ಆದರೆ ಭಾರತದಲ್ಲಿ? ವಿವಾದ ಪ್ರಾರಂಭವಾಗಲು ಜಗಳ ಹತ್ತಿಕೊಳ್ಳಲು ಅದು ಗಲಭೆಯಾಗಿ ತಿರುಗಲು ಎಷ್ಟು ಸಮಯ ಬೇಕು? ಒಮ್ಮೆ ಆಲೋಚಿಸಿ, ನಮ್ಮ ಏಳಿಗೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾ ಪುರುಷರನ್ನು ನಾವು ಸರಿಯಾಗಿ ಗೌರವಿಸಿ ಅವರು ಹಾಕಿದ ಹಾದಿಯಲ್ಲಿ ನಡೆಯುತ್ತಿದ್ದರೆ ಈ ವಿಚಾರವನ್ನು ಚರ್ಚಿಸುವ ಅಗತ್ಯವೇ ಇರಲಿಲ್ಲ.
ಕಳೆದ ಎರಡು ದಿನಗಳಿಂದ ಅತ್ಯಂತ ಹೆಚ್ಚಿನ ಚರ್ಚೆಯಲ್ಲಿರುವ ವಿಚಾರ “ನಾರಾಯಣ ಗುರುಗಳನ್ನು ಒಳಗೊಂಡ ಸ್ತಬ್ಧಚಿತ್ರ”. ಕೇರಳ ಸರಕಾರ ಗಣರಾಜ್ಯೋತ್ಸವದ ಪರೇಡ್ನಲ್ಲಿ ನಾರಾಯಣ ಗುರುಗಳನ್ನು ಒಳಗೊಂಡ “ಜಟಾಯು ಪಾರ್ಕ್”ನ ಸ್ತಬ್ಧಚಿತ್ರವನ್ನು ಪ್ರದರ್ಶಿಸುವ ಯೋಜನೆಯನ್ನು ಕೇಂದ್ರದ ಮುಂದಿರಿಸಿತು. ಕೇಂದ್ರವು ಈ ಯೋಜನೆಯನ್ನು ತಿರಸ್ಕರಿಸಿತು. ಇದಿಷ್ಟು ನಡೆದ ವಿಚಾರ, ಆದರೆ ಚರ್ಚೆಯಾಗುತ್ತಿರುವ ವಿಚಾರ ಸಂಪೂರ್ಣವಾಗಿ ಬೇರೆಯದೇ ದಿಕ್ಕನ್ನು ಪಡೆದಿದೆ. ಕೇರಳದಲ್ಲಿ ಆಡಳಿತದಲ್ಲಿರುವ ಪಕ್ಷ, ಕರ್ನಾಟಕದಲ್ಲಿ ವಿರೋಧ ಪಕ್ಷಗಳು ಈ ವಿಚಾರಕ್ಕೆ ಜಾತಿಯ ಬಣ್ಣ ಹಚ್ಚುವ ಕಾರ್ಯದಲ್ಲಿ ನಿರತವಾಗಿರುವುದು ನಾಚಿಗೆಗೇಡಿನ ವಿಚಾರವಲ್ಲವೇ? ಯಾವ ಗುರುಗಳು ತಮ್ಮ ಜೀವನದುದ್ದಕ್ಕೋ “ಒಂದೇ ಜಾತಿ, ಒಂದೇ ಮತ, ಒಬ್ಬರೇ ದೇವರು” ಎಂಬ ಸಂದೇಶದಿಂದ ಎಲ್ಲರನ್ನೂ ಒಗ್ಗೂಡಿಸುವ ಮಹತ್ಕಾರ್ಯವನ್ನು ಮಾಡಿದ್ದರೋ, ಇಂದು ಅದೇ ಮಹಾ ಪುರುಷನನ್ನು ಜಾತಿಯ ಹೆಸರಲ್ಲಿ ವಿಂಗಡಿಸಿ ವಿವಾದವನ್ನು ಸೃಷ್ಟಿಸಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ, ಈ ವಿವಾದದಲ್ಲಿ ಜಗದ್ಗುರುಗಳಾದ ಶಂಕರಾಚಾರ್ಯರನ್ನೂ ಎಳೆದು ತರಲಾಗುತ್ತಿದೆ. ಈ ಮೂಲಕ ಹಿಂದೂಗಳ ಮಧ್ಯದಲ್ಲೇ ಜಾತಿಯ ಹೆಸರಲ್ಲಿ ವಿಂಗಡಣೆ ಮಾಡಿ ಕಂದಕವನ್ನು ಮೂಡಿಸಲಾಗುತ್ತಿದೆ. ಅಷ್ಟಕ್ಕೂ ಯಾವ ಕಮ್ಯುನಿಸ್ಟ್ ಪಕ್ಷ ಇಂದು ನಾರಾಯಣ ಗುರುಗಳ ಹೆಸರಲ್ಲಿ ರಾಜಕೀಯ ಮಾಡುತ್ತಿದೆಯೋ ಅದೇ ಪಕ್ಷದ ಕಾರ್ಯಕರ್ತರು ನಾರಾಯಣ ಗುರುಗಳ ಪ್ರತಿಮೆಯನ್ನು ಶಿಲುಬೆಗೇರಿಸಿದ ಮಾದರಿಯ ಸ್ತಬ್ಧಚಿತ್ರವನ್ನು ಪ್ರದರ್ಶಿಸಿದ್ದರು. ಮತ್ತು ರಾಜಕೀಯವಾಗಿ ಅದನ್ನು ಬಳಸಿಕೊಳ್ಳುತ್ತಿರುವ ಕರ್ನಾಟಕದ ವಿರೋಧ ಪಕ್ಷವು ಟಿಪ್ಪು ಸುಲ್ತಾನನ ಸ್ತಬ್ಧಚಿತ್ರವನ್ನು ಪ್ರದರ್ಶಿಸಿತ್ತು!
ಸರಿಯಾಗಿ ಗಮನಿಸಿದಲ್ಲಿ ಈ ರೀತಿಯ ವಿವಾದಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ ಎಂದು ಅರಿವಾಗುತ್ತದೆ. ಇತ್ತೀಚೆಗಷ್ಟೇ ನಡೆದ ಇನ್ನೊಂದು ಘಟನೆಯನ್ನು ನಾನಿಲ್ಲಿ ಉದಾಹರಿಸುತ್ತೇನೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು, ಅದಕ್ಕೆ ಪ್ರತೀಕಾರ ಎಂಬಂತೆ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಹಾನಿ ಮಾಡಲಾಯಿತು. ವಿವಾದವು ಗಲಭೆಯ ಸ್ವರೂಪವನ್ನು ಪಡೆಯಿತು. ಒಂದು ಅರೆ ಕ್ಷಣ ಆಲೋಚಿಸಿ ಸಂಗೊಳ್ಳಿ ರಾಯಣ್ಣನು ಬ್ರಿಟೀಷರ ವಿರುದ್ಧ ಹೋರಾಟ ನಡೆಸುವಾಗ, ಕೇವಲ ಕರ್ನಾಟಕದ ಜನರಿಗೆ ಮಾತ್ರ ಸ್ವಾತಂತ್ರವನ್ನು ನೀಡಿ ಎಂದು ಹೋರಾಟವನ್ನು ನಡೆಸಿದ್ದರೇ? ಛತ್ರಪತಿ ಶಿವಾಜಿ ಮಹಾರಾಜರು ಪಾಶವೀ ಮೊಘಲರ ವಿರುದ್ಧ ಹೋರಾಟವನ್ನು ನಡೆಸಿದ್ದು ಹಿಂದವೀ ಸಾಮ್ರಾಜ್ಯ ಸ್ಥಾಪನೆಗಾಗಿಯೇ ಹೊರತು ಕೇವಲ ಮಹಾರಾಷ್ಟ್ರವನ್ನು ಸ್ಥಾಪಿಸಲು ಅಲ್ಲ. ಇಬ್ಬರೂ ಮಹಾಪುರುಷರು ಹೋರಾಟ ನಡೆಸಿದ್ದು ಪರಕೀಯರಿಂದ ಸ್ವಾತಂತ್ರ ಪಡೆಯುವ ಸಲುವಾಗಿ ಎಂಬುದನ್ನು ನಾವು ಮರೆತಿದ್ದೇವೆ. ಈ ಮಹಾಪುರುಷರ ತ್ಯಾಗದ ಫಲವಾದ ಸ್ವಾತಂತ್ರವನ್ನು ನಾವು ಯಾವ ರೀತಿಯಲ್ಲಿ ಅನುಭವಿಸುತ್ತಿದ್ದೇವೆ? ಒಡೆದು ಆಳುವ ಶಕ್ತಿಗಳ ಷಡ್ಯಂತ್ರಗಳಿಗೆ ಬಲಿಯಾಗಿ, ಮಹಾ ಪುರುಷರ ಪುತ್ಥಳಿಗಳನ್ನು ಧ್ವಂಸ ಮಾಡುವ ಮೂಲಕ ಅವರನ್ನು ಅವಮಾನಿಸುತ್ತಾ???
ಇದು ಇತ್ತೀಚಿನ ಘಟನೆಗಳ ಉದಾಹರಣೆಯಷ್ಟೇ. 2018 ರಲ್ಲಿ ಕಲ್ಕತ್ತಾದಲ್ಲಿ ಜನ ಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪ್ರತಿಮೆಗೆ ಹಾನಿಯನ್ನು ಮಾಡಲಾಗಿದ್ದರೆ, ಅದರ ಬೆನ್ನಲ್ಲೇ ತಮಿಳುನಾಡಿನ ತಿರುವೊಟ್ರಿಯಾರ್ನಲ್ಲಿ ಸಂವಿಧಾನ ಕರ್ತೃ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಕಪ್ಪು ಮಸಿಯನ್ನು ಬಳಿಯಲಾಗಿತ್ತು. ಇದು ಪ್ರತಿಮೆಗಳ ವಿಚಾರವಾದರೆ, ನೀರು ಹಂಚಿಕೆ ಇನ್ನೊಂದು ಪ್ರಮುಖ ವಿಚಾರ. ನೀರು ಹಂಚಿಕೆಯ ವಿಚಾರದಲ್ಲಿ ರಾಜ್ಯವಾರು ಜನರನ್ನು ಒಡೆದು ರಾಜಕೀಯ ನಡೆಸುವುದು ಕೂಡಾ ಹಳೆಯ ವಿಚಾರ. ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಕಾವೇರಿ ನೀರಿನ ವಿಚಾರವಾಗಿ ಅನೇಕ ಗಲಭೆಗಳು, ಪ್ರತಿಭಟನೆಗಳು ನಡೆದಿವೆ. ಇದರಲ್ಲಿ ಅದೆಷ್ಟು ಅಮಾಯಕರು ಮರಣವನ್ನಪ್ಪಿದರು, ಅದೆಷ್ಟು ಸರಕಾರಿ, ಖಾಸಗಿ ಸ್ವತ್ತುಗಳಿಗೆ ಬೆಂಕಿ ಹಚ್ಚಲಾಗಿದೆ ಒಂದು ಬಾರಿ ಚಿಂತಿಸಿ ನೋಡಿ. ಇದಕ್ಕೆ ಇತ್ತೀಚಿನ ಪ್ರಮುಖ ಉದಾಹರಣೆ ಮೇಕೆ ದಾಟು ಯೋಜನೆ. ರಾವಿ ಮತ್ತು ಬಿಯಾಸ್ ನದಿ ನೀರಿನ ಹಂಚಿಕೆಯ ಕುರಿತಾಗಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳ ಮಧ್ಯೆ ಸಮಸ್ಯೆಯಿದೆ. ನರ್ಮದಾ ನದಿಯ ನೀರಿನ ಹಂಚಿಕೆಯ ಕುರಿತಾಗಿ ಗುಜರಾತ್, ಮಧ್ಯ ಪ್ರದೇಶ, ಆಂಧ್ರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ನಡುವೆ ವ್ಯಾಜ್ಯ ನಡೆಯುತ್ತಿದೆ. ಪೆರಿಯಾರ್ ನದಿಯ ನೀರಿನ ಹಂಚಿಕೆಯ ಕುರಿತಾಗಿ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮಧ್ಯ ವ್ಯಾಜ್ಯವಿದೆ. ಇದು ಕೇವಲ ಉದಾಹರಣೆಗಳಷ್ಟೇ, ಇನ್ನೂ ಕೆಲವು ನದಿಗಳ ನೀರಿನ ಹಂಚಿಕೆಯ ರಾಜ್ಯಗಳ ನಡುವಿನ ವ್ಯಾಜ್ಯಗಳು ಸರ್ವೋಚ್ಚ ನ್ಯಾಯಾಲದಲ್ಲಿದೆ.
ಭಾಷೆಯ ವಿಚಾರದಲ್ಲೂ ಈ ರೀತಿಯ ಸಂಘರ್ಷ ನಡೆಯುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ. ಸಂಸ್ಕೃತವನ್ನು ಯಾರಿಗೂ ಕಲಿಸಲಿಲ್ಲ ಎನ್ನುವವರು, ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ ಎಲ್ಲರಿಗೂ ಕಲಿಸುವುದನ್ನು ವಿರೋಧಿಸುತ್ತಾರೆ. ವಿದ್ಯೆ ವ್ಯರ್ಥವಾಗುವುದಿಲ್ಲ. ಇದನ್ನು ಜನ ಸಾಮಾನ್ಯರವರೆಗೂ ಇದರ ಪ್ರಯೋಜನ ತಲುಪುವ ಮೊದಲೇ ಈ ವಿಚಾರದಲ್ಲಿ ವಿಭಜನೆಯ ಬೀಜವನ್ನು ಬಿತ್ತಲಾಗುತ್ತಿದೆ. ಇನ್ನು ಭಾಷಾವಾರು ರಚನೆಯಾದ ರಾಜ್ಯಗಳ ಪ್ರದೇಶಗಳ ಕುರಿತಾದ ವಿವಾದಗಳ ಪಟ್ಟಿ ಬಹಳಷ್ಟು ಉದ್ದವಿದೆ. ಬೆಳಗಾವಿ ಇರಬಹುದು, ಕಾಸರಗೋಡು ಇರಬಹುದು ಭಾಷಾವಾರು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಿನ ಘರ್ಷಣೆಗಳು ಬೃಹತ್ ಸ್ವರೂಪವನ್ನು ಪಡೆದು ಗಲಭೆಗಳಾಗುವುದು ಕೆಲವು ವರ್ಷಗಳಿಂದ ಈಚೆಗೆ ಸಾಮಾನ್ಯವಾದ ವಿಚಾರವಾಗಿದೆ. ಒಡೆದು ಆಳುವ ನೀತಿಯನ್ನು ಬ್ರಿಟೀಷರು ಭಾರತಕ್ಕೆ ಪರಿಚಯಿಸಿದ್ದೇನೋ ಸರಿ, ಆದರೆ ಬ್ರಿಟೀಷರ ಆಳ್ವಿಕೆಯಿಂದ ನಾವು ಸ್ವತಂತ್ರಗೊಂಡರೂ, ಒಡೆದು ಆಳುವ ರಾಜಕೀಯದಿಂದ ನಾವು ಇನ್ನೂ ಸ್ವತಂತ್ರಗೊಂಡಿಲ್ಲ ಎಂಬುದೇ ಖೇದಕರ ವಿಚಾರ. ಎಲ್ಲಿಯವರೆಗೆ ನಾವು ಭಾಷೆ, ಜಾತಿ ಎಂದು ಪರಸ್ಪರ ಬಡಿದಾಡುತ್ತೇವೆಯೋ ಅಲ್ಲಿಯವರೆಗೂ ಒಡೆದು ಆಳುವ ರಾಜಕೀಯ ತಂತ್ರಗಾರಿಕೆ ಫಲಿಸುತ್ತದೆ. ನಾವೆಲ್ಲರೂ ಬಾಲ್ಯದಲ್ಲಿ “ಒಗ್ಗಟ್ಟಿನಲ್ಲಿ ಶಕ್ತಿಯಿದೆ” ಎಂಬ ಗಾದೆಯನ್ನೂ ಅದರ ಕುರಿತಾದ ಕಥೆಗಳನ್ನೂ ಪಾಠವನ್ನೂ ಕಲಿಯುತ್ತಾ ಬೆಳೆದವರು. ಆದರೆ ಬೆಳೆಯುತ್ತಾ ಹೋದಂತೆ ಒಗ್ಗಟ್ಟು ಮರೆಯಾಗುತ್ತಾ ಹೋಯಿತು. “ಐದು ಬೆರಳು ಸೇರಿ ಒಂದು ಮುಷ್ಠಿಯು” ಬೆರಳುಗಳ ಗಾತ್ರವು ಬೇರೆ ಬೇರೆಯಾದರೂ ಜೊತೆಯಾದಾಗ ಒಂದು ಮುಷ್ಠಿಯಾಗುತ್ತದೆ ಮತ್ತು ಮುಷ್ಠಿಯು ಬಹಳ ಬಲಶಾಲಿ ಎಂಬ ಪಾಠವನ್ನೂ ನಾವು ಮರೆತಿದ್ದೇವೆ. ಬೇರೆ ಬೇರೆ ಜಾತಿಯಾದರೂ ನಾವೆಲ್ಲರೂ ಹಿಂದೂಗಳು. ಬೇರೆ ಬೇರೆ ರಾಜ್ಯವಾದರೂ ನಾವೆಲ್ಲರೂ ಭಾರತೀಯರು ಎಂಬ ಭಾವನೆಯು ನಮ್ಮಲ್ಲಿ ಬಲವಾಗಬೇಕು. ಆಗಲೇ ಒಡೆದು ಆಳುವ ಭಂಜಕ ಶಕ್ತಿಗಳು ಪಾಠವನ್ನು ಕಲಿಯುತ್ತಾರೆ. ಸಮಾಜವೊಂದನ್ನು ಎಷ್ಟು ಹೋಳುಗಳನ್ನಾಗಿ ಒಡೆಯಲು ಸಾಧ್ಯವೋ, ಸಮಾಜವು ಅಷ್ಟು ಅಶಕ್ತವಾಗುತ್ತಾ ಹೋಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದಲೇ ಇಂತಹ ಭಂಜಕ ಶಕ್ತಿಯ ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವ ಮುನ್ನ ಚಿಂತಿಸಿ.
ಕೊನೆಯದಾಗಿ ಒಂದು ಮಾತು…
“ಗಡಿಯಲ್ಲಿ ಸುರಿಯುವ ಮಳೆ, ಕೊರೆಯುವ ಚಳಿಯಲ್ಲೂ ಶತ್ರುಗಳ ಗುಂಡಿಗೆ ಎದೆಯೊಡ್ಡಿ ನಿಂತಿರುವ ಯೋಧರು ಯಾವುದೇ ಜಾತಿ, ಯಾವುದೇ ರಾಜ್ಯವನ್ನು ಪ್ರತಿನಿಧಿಸಿ ನಿಲ್ಲುವುದಿಲ್ಲ. ಅವರು ಭಾರತದ ಮತ್ತು ಭಾರತೀಯರ ರಕ್ಷಣೆಗಾಗಿ ಎಲ್ಲಾ ಪ್ರತಿಕೂಲಗಳನ್ನು ಎದುರಿಸುತ್ತಾರೆ ಮತ್ತು ಗುಂಡುಗಳಿಗೆ ಎದೆಯೊಡ್ಡುತ್ತಾರೆ. ನಮ್ಮ ರಕ್ಷಣೆಗಾಗಿ ಅವರು ಬಲಿದಾನವನ್ನು ನೀಡುತ್ತಾರೆಯೇ ಹೊರತಾಗಿ ನಾವು ಪರಸ್ಪರ ಜಗಳವಾಡುತ್ತ ಆಂತರಿಕ ಗಲಭೆ ಮಾಡಲು ಅಲ್ಲ ಎಂಬುದು ನೆನಪಿರಲಿ.”
ಬೇರೆ ಬೇರೆ ಜಾತಿಯಾದರೂ ನಾವೆಲ್ಲರೂ ಹಿಂದೂಗಳು. ಬೇರೆ ಬೇರೆ ರಾಜ್ಯವಾದರೂ ನಾವೆಲ್ಲರೂ ಭಾರತೀಯರು ಎಂಬ ಭಾವನೆಯು ನಮ್ಮಲ್ಲಿ ಬಲವಾಗಬೇಕು. ಆಗಲೇ ಒಡೆದು ಆಳುವ ಭಂಜಕ ಶಕ್ತಿಗಳು ಪಾಠವನ್ನು ಕಲಿಯುತ್ತಾರೆ. ಸಮಾಜವೊಂದನ್ನು ಎಷ್ಟು ಹೋಳುಗಳನ್ನಾಗಿ ಒಡೆಯಲು ಸಾಧ್ಯವೋ, ಸಮಾಜವು ಅಷ್ಟು ಅಶಕ್ತವಾಗುತ್ತಾ ಹೋಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದಲೇ ಇಂತಹ ಭಂಜಕ ಶಕ್ತಿಯ ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವ ಮುನ್ನ ಚಿಂತಿಸಿ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.