ಹೊಸ ವರ್ಷದಂದು ನಾನು ಹೊಸ ಸಂಕಲ್ಪವನ್ನು ಮಾಡಿದ್ದೆ. ಅಮ್ಮಾ ಯಾವಾಗಲೂ ಹೇಳುತ್ತಿದ್ದಳು, ಜೀವನದಲ್ಲಿ ವಿದ್ಯೆಗಿಂತ ದೊಡ್ಡದಾದದೂ ಏನೂ ಇಲ್ಲ. ನನಗಂತೂ ಆಗಿನ ಬಡತನ ಮಧ್ಯೆ ಓದಲಾಗಲಿಲ್ಲ. ಆದರೆ ನೀನು ಚೆನ್ನಾಗಿ ಓದು, ನೀನು ಸುತ್ತುತ್ತಿರುವ ಗೆಳೆಯ-ಗೆಳತಿಯರ ಬಳಗ ಅಷ್ಟೊಂದು ಒಳ್ಳೆಯದಿಲ್ಲ ಎಂದು ಎಷ್ಟೇ ಹೇಳಿದ್ದರೂ, ಅಲ್ಲಿಯವರೆಗೆ ಆ ಮಾತನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ನಾನು ಹೊಸ ವರ್ಷದಂದು ಅಮ್ಮನ ಮಾತನ್ನು ನೆರವೇರಿಸುವ ಸಂಕಲ್ಪ ಮಾಡಿದೆ. ಅಮ್ಮನ ಆಸೆಯಂತೆಯೇ ನಾನು ಚೆನ್ನಾಗಿ ಓದಿ ಏನೊ ಅಂಕ ಪಡೆದುಕೊಂಡು ಒಳ್ಳೆಯ ಕಾಲೇಜ್ ಸೇರಿದೆ.
ಮೊದಮೊದಲು ಅಮ್ಮನ ಮಾತೆನೋ ಮತ್ತೆ- ಮತ್ತೆ ನೆನಪಾಗುತ್ತಲೆ ಇತ್ತು. ಆದರೆ ಕ್ರಮೇಣ ಹೇಗಿದ್ದರೂ ಹಾಸ್ಟೆಲ್ ನಲ್ಲಿದ್ದೇನೆ. ಅಮ್ಮನಿಗೆ ಗೊತ್ತಾಗುವುದಿಲ್ಲವೆಂದು ಓದುವುದನ್ನು ಕಡಿಮೆ ಮಾಡಿಬಿಟ್ಟೆ. ಹಲವು ಬಾರಿ ಮಿಸ್ ನನ್ನನ್ನು ಕರೆದು ನೀನು ಮಾಡುತ್ತಿರುವುದು ತಪ್ಪು ಎಂದು ಬುದ್ದಿ ಹೇಳಿದ್ದರು. ಅದನ್ನು ನಾನು ಅವಮಾನವೆಂದು ತಿಳಿದು ದ್ವೇಷ ಸಾಧಿಸುತ್ತಲೇ ಬಂದೆ. ಕಡಿಮೆ ಅಂಕ ಪಡೆದಾಗ, ಕೀಟಲೆ ಮಾಡಿದಾಗಲೆಲ್ಲ ಪಾಲಕರನ್ನು ಕರೆದುಕೊಂಡು ಬರಬೇಕೆಂದು ಆಜ್ಞೆ ಮಾಡಿದಾಗಲೆಲ್ಲ ನಮ್ಮ ಹಾಸ್ಟೆಲ್ ವಾರ್ಡನ್ ಆಂಟಿಯನ್ನು ಅಮ್ಮ ಎಂದು ಕರೆದುಕೊಂಡು ಹೋಗುತ್ತಿದ್ದೆ. ಆದರೆ ಒಮ್ಮೆ ಮಿಸ್ ಗೆ ಅದು ತಿಳಿದು ಎಲ್ಲರೆದುರು ಬೈದರು. ಅದಕ್ಕಾಗಿ ಅವರನ್ನು ಕಂಡರೆ ನಾನು ಕಾಣದ ಹಾಗೆ ಹೋಗುವುದು, ಕ್ಲಾಸಿನಲ್ಲಿ ಗಲಾಟೆ ಮಾಡುವುದು, ಮಿಸ್ ಗೆ ತಿರುಗಿ ಉತ್ತರ ಹೇಳುವುದು ಎಲ್ಲ ಮಾಡಿದ್ದೆ. ಆಗೆಲ್ಲ ನಾನು ಮಾಡಿದ್ದು ತಪ್ಪು ಎಂದು ಕೇಳಿದಾಗಲೆಲ್ಲ, ಇಲ್ಲ ನೀನು ಮಾಡಿದ್ದೆ ಸರಿ, ವಿದ್ಯಾರ್ಥಿ ಜೀವನದಲ್ಲಿ ಇಷ್ಟಾದರೂ ಮಜಾ ಮಾಡದಿದ್ದರೆ ಹೇಗೆಂದು ಕೆಲವು ಸ್ನೇಹಿತರು ನನ್ನನು ಹುರಿದುಂಬಿಸಿದ್ದುಂಟು. ಆಗೆಲ್ಲ ನಾನು ತಪ್ಪು ಮಾಡಿಲ್ಲವೆಂದೇ ಸಮರ್ಥಿಸಿಕೊಂಡೆ.
ಪದವಿಗೆ ಬಂದಾಕ್ಷಣ ನನ್ನ ಅಣ್ಣ ಆರಂಭದಲ್ಲಿ ನಾನು ಅವನೊಂದಿಗೆ ಹಂಚಿಕೊಂಡಿದ್ದ ಕನಸುಗಳನ್ನು ನೆನಪಿಸಲು ಬಹಳ ಪ್ರಯತ್ನ ಪಟ್ಟ. ತಪ್ಪು ದಾರಿ ತುಳಿಯುತ್ತಿದ್ದಿಯಾ ಕಣೆ ಎಂದು ಕಂಡಾಗಲೆಲ್ಲ ಹೇಳುತ್ತಿದ್ದ. ಯಾವುದು ತಪ್ಪು ಯಾವುದು ಸರಿ ಎಂದು ಯೋಚಿಸದೆ ನಾನು ಅವನನ್ನು ಸತಾಯಿಸಿದೆ. ಅದರಿಂದಾಗಿ ಒಳ್ಳೆಯ ಸ್ನೇಹಿತ ಮತ್ತು ಅಣ್ಣ ಎರಡೂ ಆದ ಅವನಿಗೆ ಬೇಸರ ಮಾಡಿದೆ. ಹಾಗಂತ ಇವೆಲ್ಲವನ್ನು ಯಾಕಾಗಿ ಮಾಡಿದೆ ಎಂದು ಯೋಚಿಸಿದರೆ ನನಗೆ ಉತ್ತರ ಗೊತ್ತಿಲ್ಲ. ಆದರೂ ಅಣ್ಣ ಬೇಸರಗೊಳ್ಳದೆ ಮತ್ತೆ ಮತ್ತೆ ನನ್ನನ್ನು ಎಚ್ಚರಿಸುತ್ತಿದ್ದ.
ಈ ದಿನ ಎಲ್ಲವೂ ಕಾಡುತ್ತಿದೆ. ಈ ಕರೋನಾ ಸಂದರ್ಭದಲ್ಲಿ ಕಾಲೇಜಿಗೂ ಹೋಗಲಾಗದೆ ಮನೆಯಲ್ಲಿ ಕುಳಿತಾಗ ನಾನು ಪದವಿ ಪೂರ್ವ ಮತ್ತು ಪದವಿಯಲ್ಲಿ ಕಾಲೇಜ್ಗೆ ಹೋದರು ಏನು ಕಲಿಯದೆ ಕಾಲಹರಣ ಮಾಡಿದ ಸಂದರ್ಭ ಮತ್ತೆ ಮತೆ ನೆನಪಾಗಿ ಕಾಡುತ್ತದೆ. ಈಗ ಕಲಿಯುವ ಹಂಬಲ ಇದೆ ಆದರೆ ಏನು ಮಾಡೊದು ಕಾಲೇಜ್ಗೆ ಹೋಗೋಕೆ ಆಗಲ್ಲ. ಪುಣ್ಯ ಆನ್ ಲೈನ್ ತರಗತಿ ಆದರು ಇದೆ ಅನ್ನೊ ಸಣ್ಣ ಸಮಾಧಾನ.
ಒಂದು ವರ್ಷದಲ್ಲಿ ಮಾಡಿದ ತಪ್ಪುಗಳು ಅನೇಕ ನಿನಗೆ ಆಗ ಇವರೆಲ್ಲ ಮಜಾ ಮಾಡಲು ಪ್ರೇರೇಪಿಸಿರಬಹುದು. ಆದರೆ ಅವರ್ಯಾರಿಗೂ ಓದಿ, ದೊಡ್ಡ ಹುದ್ದೆ ಸೇರುವ ಗುರಿಯಿಲ್ಲ. ಮಜಾ ಮಾಡುವುದೆ ಅವನ ಜೀವನದ ಗುರಿ. ಈ ಸತ್ಯ ಮುಂದೊಂದು ದಿನ ಗೊತ್ತಾಗುತ್ತದೆ ಎಂದು ಎಚ್ಚರಿಸಿದ್ದ ಅಣ್ಣನ ಮಾತು ಈಗಲೂ ಕಿವಿಯಲ್ಲಿ ಗುಯ್ ಗುಡುತ್ತಿದೆ. ಹೊಸ ವರ್ಷದ ಹೊಸ್ತಿಲಲ್ಲಿ ಮಾಡಿದ ತಪ್ಪುಗಳೆಲ್ಲ ಒಟ್ಟಾಗಿ ನೆನಪಾಗುತ್ತಿವೆ. ಅಮ್ಮ ನಿನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ನೀನಿಟ್ಟ ನಂಬಿಕೆಗೆ ಮಮತೆಗೆ ಮೋಸ ಮಾಡಿಬಿಟ್ಟೆ. ದಯವಿಟ್ಟು ಕ್ಷಮಿಸಿ, ವಿದ್ಯಾರ್ಥಿಗಳ ಬಾಳಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಈ ಪಾತ್ರವನ್ನು ನೀವು ನಿಭಾಯಿಸಿದ್ದರೂ, ನಿಮ್ಮನ್ನು ನಾನು ಅರ್ಥಮಾಡಿಕೊಳ್ಳಲಿಲ್ಲ. ಕ್ಷಮೆ ಇರಲಿ ಮಿಸ್. ಈ ವರ್ಷದಲ್ಲಿ ನಿಮ್ಮಿಚ್ಛೆಯಂತೆ ಉತ್ತಮ ವ್ಯಕ್ತಿಯಾಗಿ ಬದುಕಲು ಪ್ರಯತ್ನ ಪಡುತ್ತೇನೆ.
ಅಂಕಿತಾ ಭಟ್ಟ
ಎಸ್.ಡಿ.ಎಮ್. ಕಾಲೇಜು, ಉಜಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.