ಪ್ರತಿ ವರ್ಷದಂತೆಯೇ ಈ ಬಾರಿಯೂ ಜೂ. 5 ಪರಿಸರ ದಿನ ಬಂದಿದೆ. ನಮ್ಮ ಸ್ವಸ್ಥ ಮತ್ತು ಸ್ವಚ್ಛ ಬದುಕಿನ ತಳಪಾಯ ಪರಿಸರ. ಅದು ನಮಗೆ ಎಲ್ಲವನ್ನೂ ಉಚಿತವಾಗಿ ನೀಡುತ್ತದೆ. ನಮ್ಮಿಂದ ಯಾವುದನ್ನು ಸಹ ಬಯಸದೆ, ನಮಗೆ ಬದುಕಲು ಅಗತ್ಯವಾದ ಎಲ್ಲವನ್ನೂ ನೀಡುವ ಕೆಲಸವನ್ನು ಪ್ರಕೃತಿ ಮಾಡುತ್ತದೆ. ಅಂತಹ ಪರಿಸರದ ರಕ್ಷಣೆ ನಮ್ಮೆಲ್ಲರ ಆದ್ಯತೆಯಾಗಬೇಕಿದೆ.
ಹಿಂದೆಲ್ಲಾ ಒಂದು ಮನೆಯ ಸುತ್ತ ಹಚ್ಚ ಹಸುರಿನ ಪ್ರಪಂಚ. ಮಳೆ, ಗಾಳಿಗಳು ಎಲ್ಲವೂ ಸಹಜ ಎಂಬಂತೆ ಸುರಿಯುತ್ತಿದ್ದವು. ಮನುಷ್ಯ ಸಹ ಪ್ರಕೃತಿಗೆ ಯಾವುದೇ ನೋವು ನೀಡದೆ, ತನ್ನ ಬದುಕಿಗೆ ಅಗತ್ಯವಾದಷ್ಟನ್ನು ಗಳಿಸುವ ಮೂಲಕ ನೆಮ್ಮದಿಯ ಬದುಕು ಸಾಗಿಸುತ್ತಿದ್ದ. ಆದರೆ ಬರುಬರುತ್ತಾ ನಮ್ಮಲ್ಲಿ ಸ್ವಾರ್ಥ ಲಾಲಸೆಗಳು ಹೆಚ್ಚಿದಂತೆ ಪ್ರಕೃತಿಯ ಮೇಲೆ ನಮ್ಮ ಸವಾರಿ ಮಿತಿ ಮೀರಿತು. ಇದರ ಪರಿಣಾಮ ಮರ, ಗಿಡಗಳ ನಾಶ, ಜೀವರಾಶಿಗಳ ಮೇಲೆ ಆಕ್ರಮಣ, ಜಲ, ವಾಯು ಮಾಲಿನ್ಯ ಹೀಗೆ ಹತ್ತು ಹಲವು ವಿಧಗಳಲ್ಲಿ ಪರಿಸರ ತನ್ನ ಹಿಂದಿನ ವೈಭವ ಕಳೆದುಕೊಂಡಿತು. ಅವುಗಳ ಜಾಗದಲ್ಲಿ ಕಾಂಕ್ರೀಟ್ ಕಾಡುಗಳು, ಕಾರ್ಖಾನೆಗಳು, ವಾಹನಗಳು ಹೀಗೆ ಹಲವಾರು ವಸ್ತು ವಿಚಾರಗಳು ಸ್ಥಾನ ಪಡೆದವು. ಪರಿಸರವಾದರೂ ಎಷ್ಟು ತಡೆದುಕೊಳ್ಳಲು ಸಾಧ್ಯ. ಅದರ ತಾಳ್ಮೆಯ ಮಿತಿ ಮೀರಿದ ಪರಿಣಾಮ ಇಂದು ನಾವು ಕಣ್ಣಿಗೆ ಕಾಣದ ವೈರಾಣುಗಳಿಂದ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಸೇರಿದಂತೆ ಅದೆಷ್ಟು ಸಂಕಷ್ಟಗಳಿಗೆ ತುತ್ತಾಗಿದ್ದೇವೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಇತ್ತೀಚಿನ ದಿನಗಳಲ್ಲಿ ಇಡೀ ಜಗತ್ತನ್ನು ತಲ್ಲಣ ಮಾಡಿರುವ ಕೊರೋನಾ ಸೋಂಕು ನಮಗೆ ಪರಿಸರದ ಮಹತ್ವವನ್ನು ಚೆನ್ನಾಗಿ ತಿಳಿಸಿದೆ ಎನ್ನುವುದು ನಿರ್ವಿವಾದ. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ನಮ್ಮಲ್ಲಿ ಅದೆಷ್ಟೋ ಜನರು ಆಕ್ಸಿಜನ್ಗಾಗಿ ಪರದಾಡುವ ಪರಿಸ್ಥಿತಿ ಬಂದೊದಗಿತು. ಕೊರೋನಾ ಸ್ವಚ್ಛತೆಯ ಪಾಠವನ್ನು ನಮಗೆ ತಿಳಿಸಿಕೊಟ್ಟಿತು. ಪ್ರಕೃತಿ ನಮಗೆ ಉಚಿತವಾಗಿ ಕೊಡುತ್ತಿದ್ದ ಎಲ್ಲವನ್ನೂ ಇಂದು ನಾವು ಹಣ ಕೊಟ್ಟರೂ ಪಡೆಯಲಾರದಷ್ಟು ಶೋಚನೀಯ ಸ್ಥಿತಿಗೆ ತಲುಪಿದ್ದೇವೆ. ಇದಕ್ಕೆ ಕಾರಣ ಮತ್ತೇನಲ್ಲ. ಪ್ರಕೃತಿಯ ಮೇಲೆ ನಾವು ಮಾಡಿದ್ದ ಸವಾರಿ, ಪ್ರಕೃತಿ ನಾಶ. ನಮ್ಮ ಸ್ವಾರ್ಥಕ್ಕಾಗಿ ನಾವು ಪರಿಸರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿ ಎಸಗಿದ್ದೇವೆ. ಸಹಿಸಿಕೊಳ್ಳುವಷ್ಟು ಸಹಿಸಿಕೊಂಡ ಪರಿಸರ, ಇನ್ನು ಅಸಾಧ್ಯ ಎಂಬಷ್ಟರ ಮಟ್ಟಿಗೆ ಮಾನವನ ದೌರ್ಜನ್ಯ ಮುಂದುವರಿದಾಗ ಒಮ್ಮೆ ಸೆಟೆದು ನಿಂತು ಪ್ರತಿಕ್ರಿಯೆ ನೀಡಿದೆ. ಈಗಲೂ ನಾವು ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮುಂದೊಮ್ಮೆ ಇದಕ್ಕಿಂತಲೂ ಘೋರವಾದ ಪರಿಣಾಮಕ್ಕೆ ನಾವು ಸಾಕ್ಷಿಯಾಗಬೇಕಾಗುತ್ತದೆ. ಆ ಪರಿಣಾಮಕ್ಕೆ ಸಿಲುಕಿ ನಾವು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ನಾಳೆ ನಮ್ಮ ಅಂತ್ಯದ ಸಂದರ್ಭದಲ್ಲಿ ನಮಗೆ ಅಂತಿಮ ಸಂಸ್ಕಾರ ಒದಗಿಸುವುದಕ್ಕೂ ಗತಿ ಇಲ್ಲದ ಸ್ಥಿತಿ ಬಂದರೂ ಅದಕ್ಕೆ ಅಚ್ಚರಿ ಪಡಬೇಕಿಲ್ಲ. ಆ ಪರಿಸ್ಥಿತಿಗೆ ಸಂಪೂರ್ಣ ಕಾರಣೀಕರ್ತರು ಸಹ ನಾವೇ ಆಗಿರುತ್ತೇವೆ.
ಈ ದಿನದಂದು ನಾವೆಲ್ಲರೂ ‘ಪರಿಸರ ಸಂರಕ್ಷಣೆ, ನಮ್ಮೆಲ್ಲರ ಹೊಣೆ’ ಎಂದು ಘೋಷಿಸುತ್ತಾ, ಪರಿಸರದ ಬಗ್ಗೆ ಭಾಷಣ ಮಾಡುತ್ತಾ, ಪರಿಸರ ಉಳಿಸುವ ಧ್ಯೇಯವನ್ನು ಮನಸ್ಸಿನಲ್ಲಿ ಸ್ಥಾಪಿಸುವುದಾಗಿ ಪ್ರತಿಜ್ಞೆಗಳನ್ನು ಸಹ ಕೈಗೊಳ್ಳುತ್ತೇವೆ. ಗಿಡ ನೆಡುವುದು ಮಾಡುತ್ತೇವೆ. ಆದರೆ ಪರಿಸರ ದಿನ ಕಳೆದ ಮೇಲೆ ಪರಿಸರ ಉಳಿಸುವ ಬಗ್ಗೆ ನಮ್ಮ ಜಾಗೃತಿ ಕಡಿಮೆಯಾಗುತ್ತಾ ಹೋಗುತ್ತದೆ. ಮರ, ಗಿಡಗಳನ್ನು ಕಡಿಯುವುದು, ಮಾಲಿನ್ಯ ಮಾಡುವುದು ಮೊದಲಾದ ಕಾಯಕದಲ್ಲಿ ತೊಡಗಿಕೊಳ್ಳುವ ಮೂಲಕ ನಾವೇ ಮಾಡಿದ್ದ ಪ್ರತಿಜ್ಞೆ ಮುರಿಯುತ್ತೇವೆ. ಈ ನಮ್ಮ ಜಾಣ ಮರೆವು ನಮಗೇ ಕುತ್ತಾಗಿ ಪರಿಣಮಿಸಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಮುಂದಿನ ಪರಿಸ್ಥಿತಿಗಳು ಘನಘೋರ ಗಂಭೀರವಾಗಿರಬಹುದು. ಇದರಲ್ಲಿ ಸಂದೇಹ ಬೇಡ.
ಈ ಬಾರಿಯ ಪರಿಸರ ದಿನವನ್ನು ಈ ಬಾರಿ ‘ಪರಿಸರ ವ್ಯವಸ್ಥೆ, ಪುನರ್ ಸ್ಥಾಪನೆ’ ಎಂಬ ಧ್ಯೇಯವಾಕ್ಯದ ಜೊತೆಗೆ ಆಚರಿಸಲಾಗುತ್ತಿದೆ. ಆ ಮೂಲಕ ಜಾಗತಿಕ ತಾಪಮಾನ ಏರಿಕೆ ಕಡಿಮೆ ಮಾಡುವುದೂ, ಮರ-ಗಿಡಗಳನ್ನು ಬೆಳೆಸುವ ಮೂಲಕ ಅರಣ್ಯ, ಜೀವರಾಶಿಗಳ ಸಂರಕ್ಷಣೆ, ಜಲ, ಗಾಳಿ, ಮಣ್ಣು ಒಟ್ಟಾರೆ ನಿಸರ್ಗವನ್ನೇ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆ ಮುಂದಾಗಿದೆ. ಪರಿಸರ ಪುನರ್ಸ್ಥಾಪನೆಯಾದಲ್ಲಿ ಮಾತ್ರವೇ ಮುಂದಿನ ಜನಾಂಗದ ಜೀವನ ಸಾಧ್ಯ.
ಈ ನಿಟ್ಟಿನಲ್ಲಿ ಇನ್ನಾದರೂ ನಾವೆಲ್ಲರೂ ಎಚ್ಚರಗೊಳ್ಳೋಣ. ಆರೋಗ್ಯಪೂರ್ಣ ಬದುಕಿಗೆ ಪರಿಸರಕ್ಕಿಂತ ಬೇರೆ ಪರಿಹಾರ ನಮ್ಮ ಮುಂದಿಲ್ಲ. ಪರಿಸರ ಸಂರಕ್ಷಣೆಯ ಕಾರ್ಯಕ್ರಮವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಆ ಕಾಯಕವನ್ನು ನಿತ್ಯ, ನಿರಂತರ ಎಂಬಂತೆ ಜೀವನದ ಭಾಗವಾಗಿ ಮುಂದುವರೆಸಿಕೊಂಡು ಹೋಗೋಣ. ಆ ನಿಟ್ಟಿನಲ್ಲಿ ನಾವು ಸಂಕಲ್ಪ ಮಾಡೋಣ. ಇಂದು ನೆಟ್ಟ ಗಿಡದ ಕಾಳಜಿಯನ್ನು ಮುಂದೆಯೂ ವಹಿಸಿಕೊಳ್ಳೋಣ. ಹಾಗಾದಲ್ಲಿ ಮಾತ್ರ ‘ಪರಿಸರ ಸಂರಕ್ಷಣೆ’ ಗೂ ಅರ್ಥ ಬರುತ್ತದೆ. ಇಲ್ಲವಾದರೆ ಒಂದು ದಿನದ ಆಚರಣೆ ಅರ್ಥಹೀನವಾಗುತ್ತದೆ.
✍️ ಭುವನ ಬಾಬು
ಪರಿಸರ ಸಂರಕ್ಷಣೆಯ ಕಾರ್ಯಕ್ರಮವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಆ ಕಾಯಕವನ್ನು ನಿತ್ಯ, ನಿರಂತರ ಎಂಬಂತೆ ಜೀವನದ ಭಾಗವಾಗಿ ಮುಂದುವರೆಸಿಕೊಂಡು ಹೋಗೋಣ. ಆ ನಿಟ್ಟಿನಲ್ಲಿ ನಾವು ಸಂಕಲ್ಪ ಮಾಡೋಣ. ಇಂದು ನೆಟ್ಟ ಗಿಡದ ಕಾಳಜಿಯನ್ನು ಮುಂದೆಯೂ ವಹಿಸಿಕೊಳ್ಳೋಣ. ಹಾಗಾದಲ್ಲಿ ಮಾತ್ರ ‘ಪರಿಸರ ಸಂರಕ್ಷಣೆ’ ಗೂ ಅರ್ಥ ಬರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.