ದೇಶದ ಆಂತರಿಕ ಸುರಕ್ಷತೆಗೆ ದಕ್ಕೆ ತಂದಿರುವ ನಕ್ಸಲ್ ವಾದ ಮತ್ತು ಮಾವೋವಾದವನ್ನು ಬುಡ ಸಹಿತ ಕಿತ್ತು ಹಾಕುವ ಕಾಲ ಸನ್ನಿಹಿತವಾಗಿದೆ. ದೇಶವನ್ನು ಸುಮಾರು ಐದು ದಶಕದಿಂದ ಕಾಡಿರುವ ನಕ್ಸಲ್ ವಾದ ಇನ್ನೂ ದೇಶದ ಕೆಲವೆಡೆ ತನ್ನ ಕಬಂಧಬಾಹುಗಳಿಂದ ಜನಸಾಮಾನ್ಯರು ಸಹಿತ ಸಮಾಜಕ್ಕೆ ಅಪಾಯವೊಡ್ಡುವುದು ಮಾತ್ರವಲ್ಲದೆ ದೇಶದ ಸೈನಿಕರು, ಪೋಲಿಸರನ್ನು ಗುರಿಯಾಗಿಸಿ ಜೀವಹಾನಿ ಮಾಡುವ ಕಾರ್ಯಕ್ಕೆ ಆಗಿಂದಾಗ್ಗೆ ಕೈ ಹಾಕುತ್ತಿದೆ.
ಕಮ್ಯೂನಿಸ್ಟ್ ಇತಿಹಾಸದ ಹಿಂದಿನ ನೆರಳಿನಲ್ಲಿ ಬೆಳೆದ ಈ ವಾದಗಳು ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಬಂದೂಕಿನ ಮೂಲಕ ಉತ್ತರ ಹುಡುಕುವ ಕಾರ್ಯದಲ್ಲಿ ತೊಡಗಿ ಹಲವು ವರ್ಷಗಳೇ ಕಳೆದಿದ್ದು, ಇದರಿಂದ ಬಹಳಷ್ಟು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ರಕ್ಷಕ ದಳದ ಹಲವು ಮಂದಿಯ ಜೀವಹಾನಿಗೂ ಕಾರಣವಾಗಿದೆ. ಹಲವು ಸಾವಿರದಷ್ಟು ಮಂದಿ ಯೋಧರು, ಪೋಲಿಸರು ನಕ್ಸಲ್ ವಿರುದ್ಧ ನಡೆದ ಕಾರ್ಯಾಚರಣೆಗಳಲ್ಲಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದ ನಕ್ಸಲ್ ಬಾರಿಯಲ್ಲಿ ಹುಟ್ಟಿದ ಕ್ರೂರ ಕ್ರಿಮಿ ದೇಶದ ಹಿಂದುಳಿದ ವರ್ಗ, ವನವಾಸಿಗಳಿಗೆ ಸಾಮಾಜಿಕ ನ್ಯಾಯ ಎಂಬ ದನಿಯನ್ನು ಮೊಳಗಿಸಿ, ಇಂತಹ ಅಮಾಯಕ ಮಂದಿಯನ್ನೇ ಅಸಮಾನತೆ, ದೌರ್ಜನ್ಯದ ಕೂಪಕ್ಕೆ ತಳ್ಳಿದೆ. ದಶಕಗಳ ಹಿಂದೆ ದೊಡ್ಡ ದೊಡ್ಡ ಅಡವಿಗಳನ್ನೆ ತನ್ನ ಗೂಢಾಲೋಚನೆಯ ಕೇಂದ್ರವಾಗಿಸಿದ್ದ ನಕ್ಸಲರು, ಸಮೀಪವಿರುವ ಸಣ್ಣ ಪುಟ್ಟ ಗ್ರಾಮಗಳಿಗೆ ನುಗ್ಗಿ, ಗ್ರಾಮಸ್ಥರನ್ನು ಬೆದರಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಬಂದೂಕಿನ ಸದ್ದು ಮೊಳಗಿಸುವ ಮೂಲಕ ಆಧುನಿಕ, ಶಾಂತಿ ಬಯಸುವ ಸಮಾಜಕ್ಕೆ ಪಾಠ ಕಲಿಸುತ್ತೇವೆ ಎಂದು ನಕ್ಸಲರು ಬೊಬ್ಬಿರಿಯುತ್ತಿದ್ದರು. ಆದರೆ ಸ್ಥಳೀಯ ಸರಕಾರಗಳು ಕೇಂದ್ರದ ಸರಕಾರದೊಂದಿಗೆ ನಕ್ಸಲರ ಆಟಾಟೋಪವನ್ನು ಒಂದು ಹಂತಕ್ಕೆ ನಿಯಂತ್ರಿಸಲು ಸಫಲವಾಗಿವೆ.
ಆದರೆ 23 ಮಾರ್ಚ್ 2021 ರಂದು ಛತ್ತೀಸ್ಗಢದ ನಾರಾಯಣಪುರದಲ್ಲಿ ಸ್ಪೋಟಗೊಂಡ ನೆಲಸಿಡಿಯಿಂದ ಐವರು ಮಂದಿ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಡಿಸ್ಟ್ರಿಕ್ಟ್ ರಿಸರ್ವ್ಗಾರ್ಡ್ ತಂಡದ ಒಟ್ಟು 14 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಇವರಲ್ಲಿ ಈರ್ವರ ಸ್ಥಿತಿ ಚಿಂತಾಜನಕವಾಗಿದೆ. ನಕ್ಸಲ್ ಶೋಧ ಕಾರ್ಯಾಚರಣೆ ಮುಗಿಸಿ ಹಿಂತುರುಗುತ್ತಿದ್ದ ವಾಹನವು ಐಇಡಿ ಸ್ಪೋಟಕ್ಕೆ ತುತ್ತಾದ ಪರಿಣಾಮ ಅಪಾಯ ಎದುರಾಗಿದ್ದು, ರಕ್ಷಕರು ಜೀವ ಕಳೆದುಕೊಂಡಿದ್ದಾರೆ. 2018 ರ ವರದಿ ಪ್ರಕಾರ ನಕ್ಸಲ್ ಮತ್ತು ಮಾವೋವಾದಿ ಹೋರಾಟದಲ್ಲಿ ಒಟ್ಟು 12 ಸಾವಿರಕ್ಕಿಂತಲೂ ಹೆಚ್ಚು ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 2700 ಮಂದಿ ಪೋಲಿಸರು ನಕ್ಸಲರ ವಿರುದ್ಧ ಹೋರಾಡಿ ತಮ್ಮ ಜೀವ ಕಳಕೊಂಡಿದ್ದಾರೆ. ಜನಸಾಮಾನ್ಯರು ಮತ್ತು ಗ್ರಾಮಸ್ಥರು ಪೋಲಿಸರ ಮಾಹಿತಿದಾರರು ಎಂಬ ಆರೋಪ ಹೊರಿಸಿ 9300 ಮಂದಿ ಅಮಾಯಕರನ್ನು ನಕ್ಸಲರು ಹತ್ಯೆಗೈದ ಕರಾಳತೆ ನಮ್ಮ ಮುಂದಿದೆ. ಕೇಂದ್ರ ಗೃಹ ಇಲಾಖೆ ಅಂಕಿಅಂಶ ಮಾಹಿತಿ ಆಧಾರದಲ್ಲಿ ದೇಶದ 35 ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿವೆ, ಹತ್ತು ವಿವಿಧ ರಾಜ್ಯಗಳ 68 ಜಿಲ್ಲೆಗಳಲ್ಲಿ ನಕ್ಸಲ್ ಪರ ಚಟುವಟಿಕೆಗಳು ನಡೆಯುತ್ತಿವೆ. ಇದರೊಂದಿಗೆ ನಕ್ಸಲ್ ಚಟುವಟಿಕೆಯನ್ನು ಹತ್ತಿಕ್ಕುವ ಕಾರ್ಯವು ಮುಂದುವರಿದಿದ್ದು, ಸಂಘಟನೆಯಲ್ಲಿ ಬೇಸತ್ತ ಹಲವು ಮಂದಿ ಶರಣಾಗತರಾಗಿ ಸಾಮಾಜಿಕ ಮುಖ್ಯ ವಾಹಿನಿಗೆ ಬಂದು ಉತ್ತಮ ಜೀವನವನ್ನು ಮುನ್ನಡೆಸಲು ಬಯಸುತ್ತಿದ್ದಾರೆ.
ಇಂತಹ ಎಡಪಂಥೀಯ ಉಗ್ರವಾದಿ ಚಟುವಟಿಕೆಯನ್ನು ಸಂಪೂರ್ಣ ಇಲ್ಲವಾಗಿಸಲು ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯನ್ನು ಸರಕಾರ ಈ ಹಿಂದೆಯೇ ಜಾರಿಗೆ ತಂದಿದೆ. ನಕ್ಸಲ್ ಚಟುವಟಿಕೆ ಹೆಚ್ಚಿರುವ ಪ್ರದೇಶಗಳಲ್ಲಿ ಪೋಲಿಸ್ ಪಡೆ ಮತ್ತು ಒಟ್ಟು 307 ಪೊಲೀಸ್ ಠಾಣೆಗಳನ್ನು ನಿರ್ಮಿಸಿದೆ. ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ, ಒಟ್ಟು 5412 ಕಿ.ಮೀ ರಸ್ತೆ ನಿರ್ಮಾಣ ಮಾಡುವ ಮೂಲಕ ಅಲ್ಲಿನ ಗ್ರಾಮಸ್ಥರು ಹಿಂದುಳಿದ ಕುಟುಂಬಗಳಿಗೆ ಸಮಾಜಿಕ ಸ್ತರದಲ್ಲಿ ಬದಲಾವಣೆಯ ಆಶಾವಾದ ಬರುವಂತೆ ಮಾಡಲಾಗಿದೆ.
ಕೆಲ ವರ್ಷಗಳಲ್ಲಿ ಛತ್ತೀಸ್ಗಢ ರಾಜ್ಯದಲ್ಲಿ ನಕ್ಸಲ್ಚಟುವಟಿಕೆ ನಿಧಾನವಾಗಿ ಕ್ಷೀಣಿಸುತ್ತಾ ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ – ದೇಶದಲ್ಲಿ ನಕ್ಸಲರ ಅಕ್ರಮ ಮತ್ತು ಹಿಂಸಾತ್ಮಕ ಚಟುವಟಿಕೆಗಳು ಸಾಕಷ್ಟು ಇಳಿಮುಖವಾಗಿದೆ, ದೇಶದ 60 ಜಿಲ್ಲೆಗಳಲ್ಲಷ್ಟೇ ನಕ್ಸಲ ಪ್ರಭಾವವಿದ್ದು, 10 ಜಿಲ್ಲೆಗಳಲ್ಲಿ ನಕ್ಸಲರು ಕಾರ್ಯಚಟುವಟಿಕೆ ಇರುವುದಾಗಿ ತಿಳಿಸಿದ್ದರು. ಆದರೆ ನಾರಾಯಣಪುರದಲ್ಲಿ ನಡೆದ ಘಟನೆ ಇಂತಹ ನಕ್ಸಲ್ ಕ್ರೌರ್ಯವನ್ನು ಪುನಃ ನೆನಪಿಸಿದ್ದು, ತನ್ನ ಅಸ್ತಿತ್ವ ಇದೇ ಎಂದು ಸ್ಪಷ್ಟಪಡಿಸುವಂತಿದೆ. ಪ್ರಸ್ತುತ ದೇಶದ ಆಂತರಿಕ ಶಾಂತಿ, ಸುಭದ್ರತೆಗೆ ಮಾರಕವಾಗಿರುವ ಪೊಳ್ಳುವಾದ ಮತ್ತು ನಕ್ಸಲ ಅಸ್ತಿತ್ವವನ್ನು ಬುಡಸಹಿತ ಕಿತ್ತುಹಾಕುವ ಕಾರ್ಯವಾಗಬೇಕಿದೆ. ಸಂಘಟನೆಯಲ್ಲಿ ಬೇಸತ್ತ ಹಲವು ಮಂದಿ ಮುಖ್ಯಧಾರೆಗೆ ಬಂದಿದ್ದು, ಇದೇ ಸಂಘಟನೆಯಲ್ಲಿ ಸಕ್ರಿಯರಾಗಿರುವ ಕೆಲ ಕ್ರಿಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ. ಆಧುನಿಕ ಸಮಾಜವು ಜಾಗತಿಕ ಮಟ್ಟದಲ್ಲಿ ಹಲವು ಆಯಾಮಗಳಲ್ಲಿ ಅಬಿವೃದ್ಧಿಪರ ದೃಷ್ಟಿ ನೆಟ್ಟಿದ್ದರೆ, ಇಂದಿಗೂ ಬಂದೂಕು ಹಿಡಿದು ಸಲ್ಲದ ಕಾರ್ಯದಲ್ಲಿ ತೊಡಗಿರುವ ಮಂದಿ ಮತ್ತು ಅವರ ಅಸ್ತಿತ್ವವನ್ನು ಇಲ್ಲವಾಗಿಸಬೇಕಿದೆ.
ಈ ಹಿಂದೆಯೂ ನಡೆದಿದ್ದವು ಛತ್ತೀಸ್ಗಢದಲ್ಲಿ ನಕ್ಸಲರ ಭೀಕರ ಕೃತ್ಯಗಳು
ಜೂನ್ 29, 2010 ರಲ್ಲಿ ಛತ್ತೀಸ್ಗಢದ ನಾರಾಯಣಪುರದಲ್ಲಿ ನಡೆದ ಭೀಕರ ದಾಳಿಯಲ್ಲಿ 26 ಮಂದಿ ಸಿಆರ್ಪಿಎಫ್ಯೋಧರು ಪ್ರಾಣತೆತ್ತಿದ್ದರು.
ಮೇ 25, 2013 ರಲ್ಲಿ ದರ್ಬಾದಲ್ಲಿ ನಡೆದ ದಾಳಿಯಲ್ಲಿ ಕಾಂಗ್ರೆಸ್ ನಾಯಕರು ಸೇರಿದಂತೆ 25 ಮಂದಿ ಸಾವನ್ನಪ್ಪಿದ್ದರು. ಕಾಂಗ್ರೆಸ್ ಕೇಂದ್ರ ಸಚಿವ ವಿದ್ಯಾಚರಣ್ ಶುಕ್ಲಾ, ನಂದಕುಮಾರ್ ಸಾವನ್ನಪ್ಪಿದ್ದರು.
ಅಮೋನಿಯಂ ನೈಟ್ರೇಟ್ಬಳಸಿದ ನೆಲ ಬಾಂಬ್ ಸ್ಪೋಟಗೊಂಡು ಇವರ ಜೀವವನ್ನು ಕಸಿದಿತ್ತು.
ಮಾರ್ಚ್ 11, 2014 – ಸುಕ್ಮಾ ಜಿಲ್ಲೆಯಲ್ಲಿ ನಡೆದ ಮಾವೋ ದಾಳಿಯಲ್ಲಿ 11 ಮಂದಿ ಭದ್ರತಾ ಪಡೆ ಸಿಬ್ಬಂದಿ ಪ್ರಾಣ ಕಳೆಎದುಕೊಂಡಿದ್ದರು.
ಎಪ್ರಿಲ್ 21, 2017 ರಲ್ಲಿ ಸುಕ್ಮಾ ಜಿಲ್ಲೆಯಲ್ಲಿ ನಡೆದ ಭೀಕರ ಆಕ್ರಮಣದಲ್ಲಿ 25 ಮಂದಿ ಸಿಆರ್ಪಿಎಫ್ ಯೋಧರು ವೀರಮರಣವನ್ನಪ್ಪಿದ್ದರು. ಈ ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದರು.
ಮಾರ್ಚ್ 13, 2018 – ಸುಧಾರಿತ ಸ್ಪೋಟಕ ಐಇಡಿ ಬಳಸಿ ನಡೆಸಿದ ದಾಳಿಯಲ್ಲಿ ಸುಕ್ಮಾದಲ್ಲಿ 9 ಮಂದಿ ಸಿಆರ್ಪಿಎಫ್ಯೋಧರು ಹುತಾತ್ಮರಾದರು.
ಅಕ್ಟೋಬರ್ 31, 2018 ಛತ್ತಿಸಗಡದ ಬಿಜಾಪುರ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಡಿಡಿ ವಾಹಿನಿ ವಿಡಿಯೋ ಜರ್ನಲಿಸ್ಟ್ ಹಾಗೂ ಇಬ್ಬರು ಪೋಲಿಸ್ ಸಿಬ್ಬಂದಿ ಸಾವನ್ನಪ್ಪಿದ್ದರು.
ಎಪ್ರಿಲ್ 18, 2019 ರಲ್ಲಿ ಬಸ್ತಾರ್ ಕ್ಷೇತ್ರದ ಬಿಜೆಪಿ ಶಾಸಕ ಭೀಮಾ ಮಾಂಡವಿ ಮತ್ತು ನಾಲ್ವರು ಪೋಲಿಸರು ಬಸ್ತಾರ್ಸಮೀಪ ನಡೆದ ದಾಳಿಯಲ್ಲಿ ಮೃತಪಟ್ಟಿದ್ದರು. ಕಳೆದ ಲೋಕಸಭಾ ಚುನಾವಣೆಯ ಮುನ್ನುಡಿಯಾಗಿ ಈ ಘಟನೆ ನಡೆದಿತ್ತು.
ಮಾರ್ಚ್ 23, 2021 – ನಾರಾಯಣಪುರದಲ್ಲಿ ನಡೆದ ಐಇಡಿ ನೆಲಬಾಂಬ್ಸ್ಪೋಟದ ಪರಿಣಾಮ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡು, 14 ಮಂದಿ ಗಾಯಗೊಂಡಿದ್ದಾರೆ. ಡಿಆರ್ಜಿಯ 27 ಯೋಧರನ್ನು ಕೊಂಡೊಯ್ಯುತ್ತಿದ್ದ ಬಸ್ ನಕ್ಸಲರು ಹೂತಿಟ್ಟಿದ್ದ ಐಇಡಿ ಸ್ಪೋಟಕ್ಕೆ ತುತ್ತಾಗಿದೆ.
ಎಂತಹ ವಿಷಮ ಪರಿಸ್ಥಿತಿಯಲ್ಲೂ ಧೃತಿಗೆಡದೆ ನಕ್ಸಲರ ವಿರುದ್ಧದ ಹೋರಾಟದಲ್ಲಿ ತೊಡಗಿರುವ ರಾಜ್ಯ ಪೋಲಿಸರು, ಅರೆ ಸೈನಿಕ ಪಡೆ, ಕೇಂದ್ರೀಯ ಪೊಲೀಸ್ ತುಕಡಿಯ ಹೋರಾಟ ಎಂದಿಗೂ ವ್ಯರ್ಥವಾಗದು. ಆದರೆ ಇಂತಹ ಹೇಯ ಕೃತ್ಯವೆಸಗುವ ನಕ್ಸಲ್ ಹಾಗೂ ಮಾವೋ ಉಗ್ರರ ಮೂಲೋತ್ಪಾಟನೆಗೆ ಅಂತಿಮ ಶರ ಹಾಕಬೇಕಿದೆ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.