ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಿಯಾಳು ಎಂಬುದಕ್ಕೆ ಜ್ವಲಂತ ಉದಾಹರಣೆ ಸುಷ್ಮಾ ಸ್ವರಾಜ್. ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಅದೆಷ್ಟೋ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ 2019 ಆಗಸ್ಟ್ 6 ರಂದು ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಸುಷ್ಮಾ ಸ್ವರಾಜ್ ಅವರ ಜನ್ಮದಿನ ಇಂದು. ಮೋದಿ ಆಡಳಿತದಲ್ಲಿ ಕೇಂದ್ರ ವಿದೇಶಾಂಗ ಸಚಿವೆಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಮತ್ತು ವಿದೇಶಗಳಲ್ಲಿ ತೊಂದರೆಗೊಳಗಾದ ಭಾರತೀಯರಿಗೆ ಮೈಕ್ರೋ ಬ್ಲಾಗಿಂಗ್ ಟ್ವೀಟರ್ ಮೂಲಕವೇ ನೆರವಿನ ಹಸ್ತ ಚಾಚಿ ಅವರಿವರೆನ್ನದೆ ಎಲ್ಲರ ಮನಸ್ಸಿನೊಳಗೂ ಸ್ಥಾನ ಪಡೆದಿದ್ದಾರೆ ಸುಷ್ಮಾ ಸ್ವರಾಜ್ ಎನ್ನಬಹುದು.
ಅಪಾರ ಪಾಂಡಿತ್ಯ ಮತ್ತು ಅಪ್ರತಿಮ ದೇಶಭಕ್ತಿಯನ್ನು ಹೊಂದಿದ್ದ ಮಹಿಳೆಯಾಗಿದ್ದರು ಸುಷ್ಮಾ. ಮಾತೃ ಹೃದಯಿಯಾಗಿದ್ದ ಅವರು ಅತ್ಯುನ್ನತ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ತಮ್ಮ ಕೊನೆಯವರೆಗೂ ಇತರರಿಗೆ ಮಾದರಿಯಾಗಿ ಬದುಕಿದವರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಮೂಲಕ ರಾಜಕೀಯ ಜೀವನವನ್ನು ಆರಂಭಿಸಿದ ಸುಷ್ಮಾ, ಜಯಪ್ರಕಾಶ್ ನಾರಾಯಣ್ ಅವರ ಚಳುವಳಿಯಲ್ಲಿಯೂ ಸಕ್ರಿಯರಾಗಿ ಭಾಗವಹಿಸಿದ್ದವರು. ಇವರ ಪತಿ ಸ್ವರಾಜ್ ಕೌಶಲ್ ಅವರು ಜಾರ್ಜ್ ಫೆರ್ನಾಂಡಿಸ್ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದವರು. ಮೂಲತಃ ವಕೀಲರಾಗಿದ್ದ ಸುಷ್ಮಾ ಸ್ವರಾಜ್ ಭಾರತದ ತುರ್ತು ಪರಿಸ್ಥಿತಿಯ ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರಿ, ಹರಿಯಾಣ ವಿಧಾನಸಭೆಯ ಸದಸ್ಯರಾಗಿ, ಮಂತ್ರಿಯಾಗಿ, ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ, ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಶಿಷ್ಯೆಯೂ ಆಗಿರುವ ಅವರು ಅವರ ಸರ್ಕಾರ ಆಡಳಿತದಲ್ಲಿದ್ದಾಗಲೂ ಸಚಿವ ಸ್ಥಾನವನ್ನು ಅಲಂಕರಿಸಿದ್ದರು. ಕಳೆದ ಬಾರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ವಿದೇಶಗಳೊಂದಿಗಿನ ಭಾರತದ ಸಂಬಂಧವನ್ನು ಎತ್ತರಕ್ಕೇರಿಸುವಲ್ಲಿ ಮತ್ತು ಉತ್ತಮ ಬಾಂಧವ್ಯ ವೃದ್ಧಿಸುವಲ್ಲಿಯೂ ಇವರ ಕೊಡುಗೆಗಳನ್ನು ನಾವು ಮರೆಯುವಂತಿಲ್ಲ.
ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತದ ಅತ್ಯಾಪ್ತ ರಾಜಕಾರಣಿ ಎಂಬ ಕೀರ್ತಿಯನ್ನು ಪಡೆದಿರುವ ಸುಷ್ಮಾ ವಿದೇಶಾಂಗ ಸಚಿವರಾಗಿದ್ದಾಗ ಶಾಂತಿ ಮಾತುಕತೆಗಳ ಮೂಲಕವೇ ಭಾರತ ಮತ್ತು ಹೊರ ದೇಶಗಳ ನಡುವಿನ ಸ್ನೇಹ ವೃದ್ಧಿಸಿದ್ದಾರೆ. ವಿದೇಶದಲ್ಲಿ ಸಂಕಷ್ಟ ಅನುಭವಿಸುತ್ತಿದ್ದ ಅನಿವಾಸಿ ಭಾರತೀಯರಿಗೆ ಸಹಾಯ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಇದ್ದರೆ ಇವರಂತಿರಬೇಕು ಎಂಬುದನ್ನು ತಮ್ಮ ಕಾರ್ಯವೈಖರಿ ಮತ್ತು ಮಾತೃ ಹೃದಯದ ಮೂಲಕವೇ ತೋರಿಸಿಕೊಟ್ಟು ಮಾದರಿಯಾದವರು ಎಂದರೂ ತಪ್ಪಾಗಲಾರದು. ಇದಕ್ಕೆ ಸಾಕ್ಷಿ ಭಾರತದ ಅಜನ್ಮ ಶತ್ರು ಎಂದೇ ಬಿಂಬಿತವಾದ ಪಾಕಿಸ್ಥಾನದ ಜನರಿಗೆ ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ಭಾರತದಲ್ಲಿ ಚಿಕಿತ್ಸೆ ನೀಡಲು ಪೂರಕ ಕ್ರಮ ಕೈಗೊಂಡಿರುವುದು.
ಸುಷ್ಮಾ ಹಿನ್ನೆಲೆಯ ಬಗ್ಗೆ ನೋಡುವುದಾದರೆ ಅವರು ಆರೆಸ್ಸೆಸ್ ಕಾರ್ಯಕರ್ತರೊಬ್ಬರ ಪುತ್ರಿ. ಹೀಗಿರುವಾಗ ಸೇವೆಯೇ ಪರಮೋಚ್ಚ ಸಾಧನೆ, ಅದೇ ಬದುಕಿನ ಗುರಿ ಎಂಬಂತೆ ಸುಷ್ಮಾ ಬದುಕಿದ್ದರಲ್ಲಿ ಅಚ್ಚರಿ ಇಲ್ಲ. ಇನ್ನು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಪ್ರಿಯ ಶಿಷ್ಯೆ. ಏಳು ಬಾರಿ ಸಂಸದೆ, ಮೂರು ಬಾರಿ ಶಾಸಕಿ ಮತ್ತು 25 ನೇ ವರ್ಷದಲ್ಲೇ ಹರಿಯಾಣ ಸರ್ಕಾರದಲ್ಲಿ ಸಚಿವೆಯಾಗಿರುವ ಇವರು ರಾಜಕೀಯವಾಗಿ ಹೆಚ್ಚು ಪ್ರಭಾವಶಾಲಿ ಮಹಿಳೆ. ಸ್ವದೇಶೀ ಆಲೋಚನೆ, ಚಿಂತನೆಯ ಸುಷ್ಮಾ ವಿದೇಶಗಳ ಜೊತೆಗೆ ಸಮರ್ಥವಾಗಿ ವ್ಯವಹಾರ ಮಾಡುವ ನಿಪುಣೆಯೂ ಹೌದು. ಇದಕ್ಕೆ ಸಾಕ್ಷಿ ಅಮೆರಿಕದ ಪ್ರತಿಷ್ಠಿತ ದಿನಪತ್ರಿಕೆ ವಾಷಿಂಗ್ಟನ್ ಟೈಮ್ಸ್ ಅವರನ್ನು ಭಾರತದ ಸೂಪರ್ ಮಾಮ್ ಎಂದೇ ಕರೆದಿರುವುದು.
ಸುಷ್ಮಾ ಮತ್ತು ಕರ್ನಾಟಕಕ್ಕೂ ನಂಟಿದೆ. 1999 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸುಷ್ಮಾ ಅವರು ರಾಜ್ಯದ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫೆರ್ನಾಂಡಿಸ್ ಅವರ ಸಮ್ಮುಖದಲ್ಲಿ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕನ್ನಡ ಕಲಿತು ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ರಾಜ್ಯದ ಮೇಲಿನ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದರು. ಅಂದಿನ ಕಾಲದಲ್ಲಿಯೇ ತಾವು ಎಲ್ಲ ರಾಜಕೀಯ ನಾಯಕರಂತಲ್ಲ. ಬದಲಾಗಿ ತಮ್ಮಲ್ಲೇನೋ ವಿಭಿನ್ನತೆ ಇದೆ ಎಂಬುದನ್ನು ಜನತೆಯ ಎದುರು ತೆರೆದಿಡುವ ಕೆಲಸವನ್ನು ಮಾಡಿದ್ದರು.
ಮಹಿಳೆ ಕೇವಲ ನಾಲ್ಕು ಗೋಡೆಗಳ ನಡುವೆ ಕೆಲಸ ಮಾಡಲು ಮಾತ್ರವೇ ಸೀಮಿತಳು ಎಂದು ತಿಳಿದುಕೊಂಡಿದ್ದ ಅಂದಿನ ಕಾಲದಲ್ಲೇ ರಾಜಕೀಯಕ್ಕೆ ಧುಮುಕಿ ಮಹಿಳೆ ಯಾವುದರಲ್ಲೂ ಕಡಿಮೆ ಇಲ್ಲ, ಕಡಿಮೆಯಲ್ಲ ಎಂಬುದನ್ನು ತಮ್ಮ ಕಾರ್ಯದ ಮೂಲಕವೇ ಸಾಧಿಸಿ ತೋರಿಸಿದ ಬಿಜೆಪಿಯ ಧೀಮಂತ ಮಹಿಳಾ ಶಕ್ತಿ, ಮಾತೃ ಸ್ವರೂಪಿ ಸುಷ್ಮಾ ಸ್ವರಾಜ್ ಅವರು ರಾಜಕೀಯ ಮತ್ತು ರಾಜಕೀಯೇತರವಾಗಿಯೂ ಸ್ಫೂರ್ತಿ ಎಂದರೆ ಅತಿಶಯವಾಗಲಾರದು. ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ನೆನಪಿನಾಳದಲ್ಲಿ, ಮನಸಿನ ಆಗಸದಲ್ಲಿ ಮಿನುಗುತ್ತಿರುವ ದಿವ್ಯ ನಕ್ಷತ್ರ ‘ಸುಷ್ಮಾ ಸ್ವರಾಜ್’ ಅವರಿಗೆ ನಮನಗಳು.
✍ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.