ಕೆಲವರಿಗೆ ಅದೃಷ್ಟ ಎಂಬುದು ಹುಟ್ಟಿನಿಂದಲೇ ಬಂದಿರುತ್ತದೆ. ಅವರು ಏನನ್ನೂ ಮಾಡದೇ ಹೋದರೂ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಆದರೆ ಇದಕ್ಕಿಂತ ಭಿನ್ನ ವ್ಯಕ್ತಿತ್ವದವರು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು. ಪರಿಶ್ರಮ ಮತ್ತು ಕಾಯಕ ನಿಷ್ಟೆಗಳೆರಡರ ಮೂಲಕವೇ ಇಂದು ದೇಶದ ಯುವಮನಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂದರೆ ಅತಿಶಯವಾಗಲಾರದು. ಶೂನ್ಯದೊಂದಿಗೆ ಬದುಕನ್ನು ಆರಂಭಿಸಿ, ಕಾಯಕದ ಮೂಲಕವೇ ಯಶಸ್ಸಿನ ಉತ್ತುಂಗಕ್ಕೇರಿದ ಮಾದರಿ ನಾಯಕ ದೀನದಯಾಳರು ಎಂದರೆ ಅದು ಉತ್ಪ್ರೇಕ್ಷೆಯಾಗಲಾರದು. ಅಂತಹ ಮೇರು ವ್ಯಕ್ತಿತ್ವ ದೀನ ದಯಾಳರದ್ದು.
ಏಕಾತ್ಮ ಮಾನವತಾವಾದದ ಪ್ರವರ್ತಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಭಾರತೀಯ ಜನಸಂಘದ ನಾಯಕರಾಗಿದ್ದವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯುಳ್ಳ ಇವರು ಜನಸಂಘಕ್ಕೆ ನಿಯುಕ್ತರಾದ ಬಳಿಕ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದವರು. ಸುಮಾರು 15 ವರ್ಷಗಳ ಕಾಲ ಭಾರತೀಯ ಜನಸಂಘವನ್ನು ಸಂಘಟಿಸಿದ ಕೀರ್ತಿ ಹೊಂದಿರುವ ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಬದುಕು ಪ್ರೇರಣೆಯೂ ಹೌದು. ಇವರು ಕೇವಲ ರಾಜಕೀಯ ವ್ಯಕ್ತಿಶಕ್ತಿಯಾಗಿ ಮಾತ್ರವೇ ನಮ್ಮ ಮುಂದಿಲ್ಲ. ಬದಲಾಗಿ ಲೇಖಕರಾಗಿಯೂ ತಮ್ಮ ಚಿಂತನೆಗಳನ್ನು ಜಗತ್ತಿಗೆ ಹಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಇದಕ್ಕೆ ಸಾಕ್ಷಿಯಾಗಿ ನಮಗೆ ಕಂಡುಬರುವುದು 1940 ರಲ್ಲಿ ಇವರು ಪ್ರಾರಂಭ ಮಾಡಿರುವ, ದೇಶಭಕ್ತಿಯ ಪತ್ರಿಕೆಗಳಾದ ರಾಷ್ಟ್ರಧರ್ಮ, ಪಾಂಚಜನ್ಯ ಮತ್ತು ಸ್ವದೇಶಿಗಳು. ಈ ಪತ್ರಿಕೆಗಳ ಸಂಪಾದಕರಾಗಿದ್ದ ದೀನದಯಾಳರು ಲೇಖಕರೂ ಹೌದು. ಚಂದ್ರಗುಪ್ತ ಮೌರ್ಯ ಎಂಬ ನಾಟಕ, ಶಂಕರಾಚಾರ್ಯರ ಜೀವನ ಚರಿತ್ರೆ ಎಂಬ ಕೃತಿಗಳೂ ಇವರಿಂದ ರಚಿತವಾಗಿದೆ. ಹಾಗೆಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾ. ಕೇಶವ ಬಲಿರಾಮ್ ಹೆಡ್ಗೆವಾರರ ಜೀವನ ಚರಿತ್ರೆಯನ್ನು ಮರಾಠಿ ಭಾಷೆಯಿಂದ ಇಂಗ್ಲೀಷ್ಗೆ ಅನುವಾದಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಜೊತೆಗೆ ಭಾರತೀಯ ಅರ್ಥನೀತಿ- ವಿಕಾಸ್ ಕಿ ಏಕ್ ದಿಶಾ, ಪೊಲಿಟಿಕಲ್ ಡೈರಿ, ರಾಷ್ಟ್ರ ಚಿಂತನ್, ಅಖಂಡ ಭಾರತ್ ಕ್ಯೂನ್?, ಏಕಾತ್ಮ ಮಾನವ್ ವಾದ್, ರಾಷ್ಟ್ರ ಜೀವನ್ ಕೀ ದಿಶಾ ಪ್ರಬಂಧಗಳನ್ನೂ ಶ್ರೀಯುತರು ಬರೆದಿದ್ದಾರೆ. ಆ ಮೂಲಕ ರಾಜಕೀಯದ ಜೊತೆಗೆ, ಬರವಣಿಗೆಯ ಮೂಲಕವೂ ಸಮಾಜಕ್ಕೆ ಚಿಂತನೆಗಳನ್ನು ತುಂಬುವ ಕಾರ್ಯ ದೀನದಯಾಳರಿಂದ ಆಗಿದೆ.
ಏಕಾತ್ಮ ಮಾನವತಾವಾದ ಎಂದರೆ ʼಮಾನವನ ಜೀವನ ಮತ್ತು ಸೃಷ್ಟಿಯ ಏಕಾತ್ಮ ಸಂಬಂಧʼ ವನ್ನು ಸೂಚಿಸುವ ಪದವಾಗಿದೆ. ಇದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜ ನಿರ್ಮಾಣದ ಪೂರಕತೆಯನ್ನು ಬೋಧಿಸುತ್ತದೆ. ಈ ತತ್ವದ ಸಾರವೇನು? ಎಂಬುದರ ಬಗ್ಗೆ ಚಿಂತಿಸುವುದಾದರೆ, ಇದರ ಕೇಂದ್ರಬಿಂದು ವ್ಯಕ್ತಿ. ವ್ಯಕ್ತಿ ಮತ್ತು ಸಮಾಜದ ನಡುವೆ ಪರಸ್ಪರ ಬಂಧವಿದೆ. ಇವೆರಡೂ ವಿರೋಧಿಗಳಲ್ಲ. ವ್ಯಕ್ತಿ, ವ್ಯಕ್ತಿಗಳ ಗುಂಪು ಸೇರಿದರೆ ಪರಿವಾರ, ಪರಿವಾರಗಳು ಸೇರಿ ಸಮಾಜ. ಈ ಸಮಾಜವೇ ರಾಷ್ಟ್ರ. ರಾಷ್ಟ್ರ ಎಂದರೆ ವಿಶ್ವದ ಪರಿಕಲ್ಪನೆಯ ಜೊತೆಗೆ ಬಂಧ ಹೊಂದಿದೆ. ಹೀಗಾಗಿ ವ್ಯಕ್ತಿಯಿಂದ ಹಿಡಿದು ಸಮಾಜ, ರಾಷ್ಟ್ರ, ವಿಶ್ವ ಇವೆಲ್ಲವುಗಳ ನಡುವೆ ಪರಸ್ಪರ ಕೊಂಡಿ ಇದೆ. ಈ ಕೊಂಡಿಯೇ ಏಕಾತ್ಮ ಮಾನವತಾವಾದದ ಕಲ್ಪನೆಯ ಸಾರ. ಸರಳವಾಗಿ ಹೇಳುವುದಾದರೆ, ವ್ಯಕ್ತಿ ಮತ್ತು ಸಮಾಜದ ನಡುವಿನ ಪರಸ್ಪರ ಸಂಬಂಧವನ್ನು ತಿಳಿಸುವುದೇ ಏಕಾತ್ಮ ಮಾನವತಾವಾದ. ಈ ವಾದದಲ್ಲಿ ಬಲವಾದ ನಂಬಿಕೆ ಇರಿಸಿದ್ದವರು, ಈ ತತ್ವವನ್ನು ಸಾರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದವರು ಪಂಡಿತ್ ದೀನದಯಾಳರು.
ಪಂಡಿತ್ ದೀನದಯಾಳರ ಬಾಲ್ಯ ಮತ್ತು ಜೀವನದ ಬಗ್ಗೆ ಹೇಳುವುದಾದರೆ, 1916 ಸೆಪ್ಟೆಂಬರ್ 25 ರಂದು ಉತ್ತರ ಪ್ರದೇಶದ ನಗ್ಲಾ ಚಂದ್ರಬಾನ್ ಹಳ್ಳಿಯಲ್ಲಿ ಜನಿಸಿದರು. ತಂದೆ ಭಗವತೀ ಪ್ರಸಾದ ಉಪಧ್ಯಾಯರು ವಿದ್ವಾಂಸರು ಮತ್ತು ಜ್ಯೋತಿಷರಾಗಿದ್ದವರು. ತಾಯಿ ರಾಮ್ ಪ್ಯಾರಿ ಗೃಹಿಣಿ. ಎಂಟು ವರ್ಷದಲ್ಲಿಯೇ ಹೆತ್ತವರನ್ನು ಕಳಕೊಂಡ ದೀನದಯಾಳರು ತಮ್ಮ ಮಾವನ ಸಹಾಯದೊಂದಿಗೆ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ರಾಜಸ್ಥಾನದ ಪಿಲಾನಿಯಲ್ಲಿ ತಮ್ಮ ಪ್ರೌಢ ಶಿಕ್ಷಣ, ಕಾನ್ಪುರದ ಸನಾತನ ಧರ್ಮ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಸ್ನಾಥಕ ಪದವಿ, ಆಗ್ರಾದ ಸೈಂಟ್ ಜೋನ್ಸ್ ಕಾಲೇಜಿನಲ್ಲಿ ಸ್ನಾಥಕೋತ್ತರ ಪದವಿ ಮುಗಿಸಿದವರು.
ಸನಾತನ ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ತಮ್ಮ ಸ್ನೇಹಿತ ಬಾಲೂಜಿ ಮಹಾಶಬ್ದೆ ಎಂಬವರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾ. ಕೇಶವ ಬಲೀರಾಮ್ ಹೆಡ್ಗೆವಾರರ ಪರಿಚಯವಾಗುತ್ತದೆ. ಆ ಬಳಿಕ ಸಂಘಕ್ಕೆ ಸೇರಿಕೊಳ್ಳುತ್ತಾರೆ. 1942 ರಿಂದ ಸಂಘದ ಪೂರ್ಣಕಾಲಿಕ ಪ್ರಚಾರಕರಾಗಿ ನಿಯುಕ್ತರಾಗುತ್ತಾರೆ. ಬಳಿಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಟ್ಟಿದ ಜನಸಂಘಕ್ಕೆ ನಿಯುಕ್ತರಾಗಿ ರಾಜಕೀಯ ಪ್ರವೇಶಿಸುತ್ತಾರೆ. ಭಾರತೀಯ ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಪಾಧ್ಯಾಯರು 1968 ರ ಫೆ. 11 ರಂದು ಇಹಲೋಕ ತ್ಯಜಿಸುತ್ತಾರೆ. ಅವರ ಸ್ಮರಣಾರ್ಥ 2017 ರಲ್ಲಿ ಉತ್ತರ ಪ್ರದೇಶದ ಸರ್ಕಾರ ಮೊಘಲ್ ಸಾರಾಯ್ ರೈಲ್ವೆ ನಿಲ್ದಾಣಕ್ಕೆ ಪಂಡಿತ್ ದೀನದಯಾಳ ಉಪಾಧ್ಯಾಯ್ ಜಂಕ್ಷನ್ ಎಂದು ಮರುನಾಮಕರಣ ಮಾಡಿತು. 2020 ರ ಫೆ. 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೀನದಯಾಳ್ ಉಪಾಧ್ಯಾಯ್ ಸ್ಮಾರಕ ಕೇಂದ್ರವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ, ದೀನ್ ದಯಾಳ್ ಉಪಾಧ್ಯಾಯರ 63 ಅಡಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಹಾಗೆಯೇ ಪಂಡಿತ್ ದೀನದಯಾಳ್ ಉಪಾಧ್ಯಾಯರ ಹೆಸರಿನಲ್ಲಿ ಭಾರತ ಸರ್ಕಾರ ಅಂಚೆ ಚೀಟಿಗಳನ್ನೂ ಬಿಡುಗಡೆ ಮಾಡುವ ಮೂಲಕ ಗೌರವ ಸೂಚಿಸಿದೆ.
ಹುಟ್ಟು – ಸಾವು ಇವೆರಡೂ ವಿಧಿಲಿಖಿತ. ಆದರೆ, ಹುಟ್ಟಿದ ಬಳಿಕ ಸ್ವಂತ ಪರಿಶ್ರಮದ ಮೂಲಕ ಜೀವನದಲ್ಲಿ ನಾಲ್ಕು ಜನರಿಗೆ ಮಾದರಿಯಾಗಿ ಬದುಕಿ ತೋರಿಸುವುದಿದೆಯಲ್ಲಾ ಅದು ನಿಜವಾದ ಸಾಧನೆ. ಇಂತಹ ಸಾಧನೆ, ಏಕಾತ್ಮ ಮಾನವತಾವಾದ ತತ್ವದ ಮೂಲಕ ಬದುಕಿ ಹಲವರಿಗೆ ಬದುಕುವ ದಾರಿಗೆ ಬೆಳಕು ನೀಡಿದ್ದಾರೆ ಪಂಡಿತ್ ದೀನದಯಾಳ್ ಉಪಾಧ್ಯಾಯರು. ಇಂತಹ ಅಪರೂಪದ ರತ್ನಕ್ಕೆ ಸಾವಿರ ಪ್ರಣಾಮಗಳು.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.