“ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||”
ಯಾವ ಮಹಾತ್ಮನು, ಅಜ್ಞಾನದ ಕತ್ತಲೆಯಿಂದ ಕುರುಡಾದ ವ್ಯಕ್ತಿಗೆ ಜ್ಞಾನವೆಂಬ ಅಂಜನದ ಮೂಲಕ ಕಣ್ಣು ತೆರೆಸಿ ಹೊಸಬೆಳಕನ್ನು ಕರುಣಿಸುವನೋ, ಅಂತಹ ಗುರುಗಳಿಗೆ ನಮಸ್ಕಾರಗಳು.
ಗುರುಗಳ ಬಗೆಗಿನ ಗೌರವವನ್ನು ಸೂಚಿಸುವ ಇಂಥಹ ಹಲವಾರು ಶ್ಲೋಕಗಳು ನಮಗೆ ಎಲ್ಲ ಭಾಷೆಗಳಲ್ಲೂ ದೊರೆಯುತ್ತವೆ. ಅತ್ಯಂತ ಪ್ರಾಚೀನವಾದ ವೇದಗಳೂ “ಆಚಾರ್ಯ ದೇವೋ ಭವ” ಎಂದು ಗುರುಗಳನ್ನು ದೈವಸ್ವರೂಪರೆಂದು ಬಣ್ಣಿಸಿವೆ. ನಮಗೆ ಬದುಕಿನ ಮಾರ್ಗವನ್ನು ತೋರಿಸಿ, ಸಮಾಜದ ಒಬ್ಬ ಪ್ರಜೆಯಾಗಿ ರೂಪಿಸಿದ ಇಂತಹ ಗುರುಗಳ ಋಣವನ್ನು ನಾವು ಜನ್ಮಗಳೆತ್ತಿದರೂ ತೀರಿಸಲು ಸಾಧ್ಯವಿಲ್ಲ. ಉಪನಿಷತ್ತಿನಲ್ಲಿ “ಭೂಯಿಷ್ಟಾಂ ನಮ ಉಕ್ತಿಂ ವಿಧೇಮ” ಎಂದು ಹೇಳುವಂತೆ, ದೈವ ಪ್ರತೀಕವಾಗಿರುವ ಗುರುಗಳಿಗೆ ಭಕ್ತಿಪೂರ್ವಕವಾದ ನಮಸ್ಕಾರವೊಂದನ್ನು ಬಿಟ್ಟು ಬೇರೇನೂ ಅರ್ಪಿಸಲು ಸಾಧ್ಯವಿಲ್ಲ.
ಹೀಗೆ ಗುರುಗಳನ್ನು ಸ್ಮರಿಸಿ, ನಮಿಸುವುದಕ್ಕಾಗಿ ಭಾರತೀಯ ಸಂಸ್ಕೃತಿ ಆಯ್ದುಕೊಂಡ ದಿನವೇ “ಗುರುಪೂರ್ಣಿಮೆ”. ಆಷಾಢ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ಗುರುಪೂರ್ಣಿಮೆ ಮೂಲತಃ ಹಿಂದೂ ಮತ್ತು ಬೌದ್ಧ ಎರಡೂ ಧರ್ಮಗಳ ಹಬ್ಬವಾಗಿದೆ. ಅದರ ಕಾರಣಗಳೂ ಅಷ್ಟೇ ವಿಶಿಷ್ಟವಾಗಿವೆ. ಹಿಂದೂಗಳ ಪ್ರಕಾರ ಇದು ಮಹರ್ಷಿ ವೇದವ್ಯಾಸರು ಅವತರಿಸಿದ ದಿನ. ವೇದವ್ಯಾಸರು ಮಹರ್ಷಿ ಪರಾಶರರು ಮತ್ತು ಸತ್ಯವತೀ ದೇವಿಯರ ಮಗನಾಗಿ ಅವತರಿಸಿದರು. ವೈದಿಕ ಸಂಸ್ಕೃತಿಗೆ ವ್ಯಾಸರು ನೀಡಿದ ಕೊಡುಗೆಯಂತೂ ಅಪ್ರತಿಮ, ಅನನ್ಯ. ಇಂದಿಗೂ ಎಲ್ಲ ವೈದಿಕ ಮತಾಚಾರ್ಯರೂ, ಅನುಯಾಯಿಗಳೂ ಅವರನ್ನು ಪ್ರತಿನಿತ್ಯವೂ ಸ್ಮರಿಸಲೇಬೇಕು. ಅಷ್ಟೇ ಅಲ್ಲ, ಕೆಲವು ಪ್ರಾಚೀನ ಗ್ರಂಥಗಳ ಪ್ರಕಾರ, ಶ್ರೀವೇದವ್ಯಾಸರು ಇದೇ ದಿನ ತಾವು ಬರೆದ ಬ್ರಹ್ಮಸೂತ್ರಗಳನ್ನು ಪೂರ್ಣಗೊಳಿಸಿದರು ಎಂಬ ಮಾಹಿತಿ ಇದೆ. ಅಂದರೆ, ಆಷಾಢ ಶುದ್ಧ ಪಾಡ್ಯದಿಂದ ಪ್ರಾರಂಭವಾಗಿ ಆಷಾಢಪೌರ್ಣಿಮೆಯಂದು ಬ್ರಹ್ಮಸೂತ್ರಗಳ ರಚನೆಯನ್ನು ಮುಕ್ತಾಯಗೊಳಿಸಿದರು ಎಂಬುದು ಗ್ರಂಥಗಳ ಉಲ್ಲೇಖ. ಇಡೀ ವೇದಗಳ ಸಾರವನ್ನು ವರ್ಣಿಸುವ ಇಂತಹ ಬ್ರಹ್ಮಸೂತ್ರಗಳು ವ್ಯಾಸರಿಂದ ಜಗತ್ತಿಗೆ ನೀಡಲ್ಪಟ್ಟ ದಿನವಾದ್ದರಿಂದಲೂ ಈ ಹುಣ್ಣಿಮೆಗೆ ವಿಶಿಷ್ಟ ಸ್ಥಾನವಿದೆ.
ಬೌದ್ಧರ ಪ್ರಕಾರ ಈ ದಿನದಂದು ಬುದ್ಧನು ತನ್ನ ಮೊತ್ತ ಮೊದಲ ಉಪದೇಶವನ್ನು ನೀಡಿದನೆಂಬ ನಂಬಿಕೆಯಿದೆ. ಗೌತಮನು ಬೋಧಗಯಾದಲ್ಲಿ ಜ್ಞಾನದ ಬೆಳಕನ್ನು ಪಡೆದು ಬುದ್ಧನಾದ ಮೇಲೆ ಸಾರನಾಥಕ್ಕೆ ತೆರಳಿದನು. ಮಾರ್ಗ ಮಧ್ಯೆ ಬಂದ ಗಂಗೆಯನ್ನು ದಾಟಿ, ತನ್ನ ಐದು ಶಿಷ್ಯರನ್ನು ಕಂಡು, ಅವರಿಗೂ ತಾನು ಪಡೆದ ಜ್ಞಾನದ ಬೋಧನೆ ಮಾಡಿದನು. ಇದು “ಧರ್ಮಚಕ್ರ ಪ್ರವರ್ತನ ಸೂತ್ರ”ವೆಂದೆ ಬೌದ್ಧರ ಗ್ರಂಥಗಳಲ್ಲಿ ಉಲ್ಲೇಖವಿದೆ. ಇಂತಹ ಅದ್ಭುತ ಉಪದೇಶ ಪ್ರಥಮ ಬಾರಿಗೆ ತನ್ನ ಶಿಷ್ಯರಿಗೆ ನೀಡಿ ಅವರನ್ನೂ ಜ್ನಾನಿಗಳನ್ನಾಗಿ ಮಾಡಿದ ದಿನವೇ ಈ ಗುರುಪೂರ್ಣಿಮೆ. ಈ ಎಲ್ಲ ವಿಶೇಷಗಳಿಂದ ಈ ದಿನವು ಭಾರತೀಯರಲ್ಲಿ ಅತ್ಯಂತ ಮಹತ್ವದ ದಿನವಾಗಿ ರೂಪುಗೊಂಡಿದೆ.
ಗುರುಪೂರ್ಣಿಮೆಯು ಮೂಲತಃ ಆಧ್ಯಾತ್ಮಿಕ ಶಿಕ್ಷಣ ಕ್ರಮದಲ್ಲಿನ ಗುರುಗಳ ದಿನವಾಗಿದ್ದರೂ, ಅದು ಇಡೀ ಭಾರತದ “ಶಿಕ್ಷಕರ ದಿನಾಚರಣೆ”ಯಾಗಲು ಹೆಚ್ಚು ಸೂಕ್ತವೆನಿಸುತ್ತದೆ. ಪ್ರಸ್ತುತ ದೇಶಾದ್ಯಂತ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ ಐದರಂದು ‘ಶಿಕ್ಷಕ ದಿನಾಚರಣೆ’ಯನ್ನು ಆಚರಿಸುತ್ತಿದ್ದೇವೆ. ಆದಾಗ್ಯೂ ಅನೇಕ ಅಂಶಗಳಿಂದ ಗುರುಪೂರ್ಣಿಮೆಯ ಮಹತ್ವವು ಹೆಚ್ಚಿನದ್ದೆಂದು ಸ್ಫುಟವಾಗಿ ಗೋಚರಿಸುತ್ತದೆ. ಮೊದಲನೆಯದಾಗಿ ಇದು ವ್ಯಾಸರ ಜನ್ಮದಿನ. ವ್ಯಾಸರು ಕೇವಲ ಭಾರತಕ್ಕಷ್ಟೇ ಅಲ್ಲದೆ ಇಡೀ ಜಗತ್ತಿಗೆ ಗುರು ಸಮಾನರಾಗಿದ್ದಾರೆ. “ಮಹಾಭಾರತ” ಎಂಬ ಕೃತಿಯ ಮೂಲಕ ಅದರಲ್ಲಿನ ಭಗವದ್ಗೀತೆಯ ಸಂದೇಶಗಳ ಮೂಲಕ ಮಾನವನ ಬದುಕಿನ ಎಲ್ಲ ಆಯಾಮಗಳನ್ನು ವಿವರಿಸಿ ಬದುಕಿನ ಮಾರ್ಗಗಳನ್ನು ತಿಳಿಸಿಕೊಟ್ಟಿದ್ದಾರೆ. ಅದಕ್ಕೆಂದೇ ಮಹಾನ್ ವಿಜ್ಞಾನಿಗಳಾದ ಐನ್ಸ್ಟೀನ್, ಹೈಸನ್ಬುರ್ಗ್ ಮುಂತಾದವರೂ ಗೀತೆಯ ಸಾರ್ವಕಾಲಿಕ ಶ್ರೇಷ್ಠತೆಯನ್ನು ಪ್ರತಿಪಾದಿಸಿದ್ದಾರೆ. ಇಷ್ಟೇ ಅಲ್ಲ, ತಾವು ರಚಿಸಿದ ಅಷ್ಟಾದಶ ಪುರಾಣಗಳಲ್ಲಿ ಅನೇಕ ಘಟನೆಗಳು, ಕಥಗಳ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸಿದ್ದಾರೆ. ಭಾರತೀಯ ಬುನಾದಿಯಾದ ವೇದಗಳನ್ನು ವಿಂಗಡಿಸಿ ಅಭ್ಯಾಸಕ್ಕೆ ಅನುಕೂಲವಾಗುವಂತೆ ಮಾಡಿರುವುದೂ ಈ ವ್ಯಾಸರೇ. ಜೈಮಿನಿ, ಪೈಲ, ಮೊದಲಾದ ಶಿಷ್ಯರನ್ನು ಬೆಳೆಸಿ ಗುರು-ಶಿಷ್ಯ ಪರಂಪರೆಯನ್ನು ವ್ಯಾಪಕಗೊಳಿಸಿದ್ದೂ ವ್ಯಾಸರೇ. ಹೀಗೆ ಎಲ್ಲ ಭಾರತೀಯರಿಗೂ ಸರ್ವದಾ ಅತ್ಯಂತ ಶ್ರೇಷ್ಠ ಗುರುಗಳಾಗಿರುವ ವ್ಯಾಸರು ಅವತರಿಸಿದ ದಿನದಂದು “ಶಿಕ್ಷಕದಿನಾಚರಣೆ”ಯನ್ನು ಆಚರಿಸುವುದು ಕೂಡುತ್ತದೆ. ಅಲ್ಲದೆ, ಬುದ್ಧನು ಉಪದೇಶ ನೀಡಿ ಶಿಷ್ಯರನ್ನು ಜ್ಞಾನಿಗಳನ್ನಾಗಿಸಿದ್ದರಿಂದ, ಬೋಧನೆಯ ಸಂಕೇತವಾಗಿಯೂ ಈ ದಿನ “ಶಿಕ್ಷಕ ದಿನಾಚರಣೆ”ಗೆ ಹೆಚ್ಚು ಸೂಕ್ತವಾಗಿದೆ. ಮತ್ತು ಈ ಗುರುಪೂರ್ಣಿಮೆಯು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲೇ ಬರುತ್ತದೆ. ಶಾಲಾ-ಕಾಲೇಜುಗಳ ಶೈಕ್ಷಣಿಕ ವರ್ಷ ಆರಂಭವಾಗುವುದೂ ಬಹುತೇಕ ಇದೇ ಸಮಯದಲ್ಲೇ. ಹೀಗಾಗಿ ರಜೆ ಮುಗಿಸಿ ಬಂದ ಮಕ್ಕಳಿಗೆ ಪ್ರಾರಂಭದಲ್ಲಿಯೇ ಗುರುಗಳ ಮಹತ್ವವನ್ನು ತಿಳಿಸುವ ಇಂಥ ದಿನಾಚರಣೆಯನ್ನು ಆಚರಿಸುವುದು ಸರ್ವಥಾ ಉಚಿತವೆನಿಸುತ್ತದೆ.
ಪಾಶ್ಚಾತ್ಯ ಶಿಕ್ಷಣ ಕ್ರಮದ ಆಗಮನವಾದಾಗಿನಿಂದ, ನಮ್ಮ ಭಾರತೀಯ ಮೂಲ ಶಿಕ್ಷಣ ವ್ಯವಸ್ಥೆಯೇ ಕವಲೊಡೆದಿದೆ. ಲೌಕಿಕ ಶಿಕ್ಷಣವೇ ಬೇರೆ, ಆಧ್ಯಾತ್ಮಿಕ ಶಿಕ್ಷಣವೇ ಬೇರೆಯಾಗಿ ತಮ್ಮದೇ ಪಥದಲ್ಲಿ ಸಾಗುತ್ತಿವೆ. ವಸ್ತುತ ಬದುಕಿನ ಜೊತೆಗೆ ಆಧ್ಯಾತ್ಮವೂ ಬೆರೆಯಬೇಕಿದ್ದರೂ, ಹೀಗೆ ವಿಭಿನ್ನವಾಗಿರುವುದು ಶಿಕ್ಷಣಕ್ಕೆ ಆದ ದೊಡ್ಡಪೆಟ್ಟು. ಆದಾಗ್ಯೂ ವಿವೇಕಾನಂದ ರಂತಹವರು ಎರಡೂ ರೀತಿಯ ಶಿಕ್ಷಣಗಳಲ್ಲಿ ಸಮನ್ವಯ ತರಲು ಶ್ರಮಿಸಿದ್ದು ಪ್ರಶಂಸಾರ್ಹವೇ.
ಹೀಗಾಗಿ ಇಂದು ಮತ್ತೆ ಭಾರತೀಯತೆಯ ಪುನರುಜ್ಜೀವನದ ಕಾಲಘಟ್ಟದಲ್ಲಿ, ಮೌಲ್ಯಯುತ ಶಿಕ್ಷಣವನ್ನು ಕೇಂದ್ರೀಕರಿಸ ಬೇಕಾಗಿದೆ. ಕೇವಲ ಅಂಕ ಪಟ್ಟಿ, ನೌಕರಿಯ ಗುರಿಯನ್ನು ಹೊಂದಿರುವ ಶಿಕ್ಷಣಕ್ಕಿಂತ, ಮಾನವನ ಮೌಲ್ಯವರ್ಧನೆಯನ್ನು, ಮನೋವಿಕಾಸವನ್ನು ಗುರಿಯಾಗಿಸಿಕೊಂಡ ಶಿಕ್ಷಣವು ಅತ್ಯವಶ್ಯವಾಗಿದೆ. ಈ ದಿಶೆಯಲ್ಲಿ ವ್ಯಾಸರ ಜನ್ಮದಿನದಂದು, ಬುದ್ಧನು ಉಪದೇಶ ನೀಡಿದ ದಿನದಂದು, ಈ ಮಹಾತ್ಮರ ಶ್ರೇಷ್ಠತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ತನ್ಮೂಲಕ ಉತ್ತಮ ಸಮಾಜ-ರಾಷ್ಟ್ರವನ್ನು ನಿರ್ಮಿಸುವ ಕಾರ್ಯ ನಡೆಯಬೇಕಿದೆ.
ನಮ್ಮ ಯಶಸ್ಸಿನ ಕಾರಣಕರ್ತೃಗಳಾದ ಗುರುಗಳ ಸ್ಮರಣೆ ನಮ್ಮ ಮನಸ್ಸಿನಲ್ಲಿ ನಿರಂತರವಾಗಿರಲಿ. ನಮ್ಮ ಗುರುಗಳು ನಮ್ಮನ್ನು ಸದಾ ಹರಸಲಿ.
ವಂದೇಮಾತರಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.