ಕಳೆದ ವಾರ ಭಾರತದ ಪಾಲಿಗೆ ಮಹತ್ವದ ವಾರವಾಗಿದೆ, ಬಹುನಿರೀಕ್ಷಿತ ಅಯೋಧ್ಯೆ ತೀರ್ಪು ಮತ್ತು ಕರ್ತಾರ್ಪುರ ಕಾರಿಡಾರ್ ಎರಡೂ ಕನಸುಗಳು ವಾಸ್ತವವಾಯಿತು. ರಾಷ್ಟ್ರವು ಸಂತೋಷದಲ್ಲಿ ತೇಲಿತು ಮತ್ತು ಭಾರತವು ತನ್ನ ಏಕತೆ ಮತ್ತು ವೈವಿಧ್ಯತೆಯನ್ನು ಆಚರಿಸಿತು. ಕಾಶ್ಮೀರ ಮತ್ತು ಅಯೋಧ್ಯೆಯ ಸಮಸ್ಯೆಯನ್ನು ಮುನ್ನೆಲೆಗೆ ತಂದು ಭಾರತವನ್ನು ಧಾರ್ಮಿಕವಾಗಿ ಇಬ್ಭಾಗಗೊಳಿಸುವ ಪಾಕಿಸ್ಥಾನದ ಪ್ರಯತ್ನಗಳು ಈಗ ನುಚ್ಚು ನೂರಾಗಿವೆ.
ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅದರ ವಿದೇಶಾಂಗ ಸಚಿವ ಖುರೇಷಿ ಇಬ್ಬರೂ ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಯ ಸಂದರ್ಭದಲ್ಲಿ ತಮ್ಮ ಭಾಷಣಗಳಲ್ಲಿ ಭಾರತವನ್ನು ದೂಷಿಸಲು ಪ್ರಯತ್ನಿಸಿದ್ದರು, ಆದರೆ ಭಾರತವು ತನ್ನ ಕಾರ್ಯದ ಮೂಲಕವೇ ಅವರಿಗೆ ತಿರುಗೇಟನ್ನು ನೀಡಿದೆ.
ಕರ್ತಾರ್ಪುರ ಕಾರಿಡಾರ್ ತೆರೆಯಲು ಅವಕಾಶ ನೀಡುವ ಮೂಲಕ ಭಾರತೀಯರ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಇಮ್ರಾನ್ ಖಾನ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದರು. ಆದರೆ ಇಮ್ರಾನ್ ಖಾನ್ ಮತ್ತೊಮ್ಮೆ ಕಾಶ್ಮೀರ ವಿಷಯವನ್ನು ಎತ್ತಿದರು, ಖುರೇಷಿ ಅವರನ್ನು ಕುರುಡನಂತೆ ಹಿಂಬಾಲಿಸಿದರು ಮತ್ತು ಕಾಶ್ಮೀರದೊಂದಿಗೆ ಅಯೋಧ್ಯೆಯ ತೀರ್ಪನ್ನೂ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಅಯೋಧ್ಯಾ ತೀರ್ಪನ್ನು ಕರ್ತಾರ್ಪುರ ಉದ್ಘಾಟನೆಯ ಸಮಯದಲ್ಲಿ ಬೇಕಂತಲೇ ಇರಿಸಲಾಗಿದೆ, ಅಯೋಧ್ಯೆಯ ತೀರ್ಪು ನ್ಯಾಯದ ಬೇಡಿಕೆಗಳನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿದೆ ಎಂದಿದ್ದರು. ಮುಸ್ಲಿಮರ ಜೀವ ಮತ್ತು ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಭಾರತಕ್ಕೇ ಕಿವಿ ಮಾತು ಹೇಳಿದ್ದಾರೆ. ಪಾಕಿಸ್ಥಾನದ ರಾಷ್ಟ್ರಪತಿ ಅಲ್ವಿ ಕೂಡ ಸುಪ್ರೀಂಕೋರ್ಟ್ ತೀರ್ಪನ್ನು ದುರಾದೃಷ್ಟಕರ ತೀರ್ಪು ಎಂದು ಕರೆದಿದ್ದಾರೆ.
ಟ್ವಿಟ್ ಮಾಡಿರುವ ಅವರು, “ಅಯೋಧ್ಯಾದ ಬಾಬ್ರಿ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದು ಭಾರತದ ಸುಪ್ರೀಂಕೋರ್ಟ್ ಹೇಳಿದೆ. ಇದು ಬಿಜೆಪಿಯ ಉಗ್ರ ನಿಯಮ ಮತ್ತು ಹಿಂದುತ್ವ ಸಿದ್ಧಾಂತವನ್ನು ತೋರಿಸುತ್ತದೆ” ಎಂದಿದ್ದಾರೆ.
ತನ್ನ ನೆಲದೊಳಗಿನ ಅಲ್ಪಸಂಖ್ಯಾತರನ್ನು ತುಚ್ಛವಾಗಿ ಕಾಣುವ ರಾಷ್ಟ್ರದ ನಾಯಕರುಗಳು ಇನ್ನೊಂದು ರಾಷ್ಟ್ರಕ್ಕೆ ನೀಡುತ್ತಿರುವ ಸಂದೇಶ ನಿಜಕ್ಕೂ ದಿಗ್ಬ್ರಾಂತಿ ಹುಟ್ಟಿಸುತ್ತದೆ.
ಪಾಕ್ ಹೇಳಿಕೆಯನ್ನು ಖಂಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಅವರು, “ಭಾರತದ ಸಂಪೂರ್ಣ ಆಂತರಿಕವಾದ ನಾಗರಿಕ ವಿಷಯದ ಬಗ್ಗೆ ಭಾರತದ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಪಾಕಿಸ್ಥಾನ ಮಾಡಿರುವ ಅನಗತ್ಯ ಮತ್ತು ಅನಪೇಕ್ಷಿತ ಪ್ರತಿಕ್ರಿಯೆಯನ್ನು ನಾವು ತಿರಸ್ಕರಿಸುತ್ತೇವೆ. ಸುಪ್ರೀಂ ನೀಡಿರುವ ತೀರ್ಪು ಕಾನೂನಿನ ನಿಯಮಕ್ಕೆ ಸಂಬಂಧಿಸಿದೆ ಮತ್ತು ಎಲ್ಲಾ ನಂಬಿಕೆಗಳಿಗೆ ಸಮಾನ ಗೌರವವನ್ನು ನೀಡಲಾಗಿದೆ. ಇದು ಅವರ ನೀತಿಯ ಭಾಗವಲ್ಲದ ಪರಿಕಲ್ಪನೆಗಳು. ಆದ್ದರಿಂದ, ಪಾಕಿಸ್ಥಾನದ ಗ್ರಹಿಕೆಯ ಕೊರತೆಯು ಆಶ್ಚರ್ಯಕರವಲ್ಲವಾದರೂ, ದ್ವೇಷವನ್ನು ಹರಡುವ ಸ್ಪಷ್ಟ ಉದ್ದೇಶದಿಂದ ಕೂಡಿದೆ ಎಂಬುದು ನಮಗೆ ತಿಳಿದಿದೆ. ನಮ್ಮ ಆಂತರಿಕ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸುವ ಅವರ ರೋಗಗ್ರಸ್ಥ ಮನಸ್ಥಿತಿಗೆ ನಮ್ಮ ಖಂಡನೆ ಇದೆ” ಎಂದಿದ್ದಾರೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ಥಾನದ ಸಂಪೂರ್ಣ ಅಸ್ತಿತ್ವವು ಭಾರತ ಮತ್ತು ಅದರ ಸಮಸ್ಯೆಗಳ ಸುತ್ತಲೇ ಸುತ್ತುತ್ತಿರುತ್ತದೆ. ಆ ವಿಫಲ ರಾಷ್ಟ್ರಕ್ಕೆ ತನ್ನೊಳಗಿನ ಸಮಸ್ಯೆಯನ್ನು ಕೇಂದ್ರೀಕರಿಸಲು, ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಅದರ ಆರ್ಥಿಕತೆ ಅಧಃಪತನದತ್ತ ಸಾಗುತ್ತಿದೆ, ಭಾರಿ ಪ್ರಮಾಣದ ಸಾಲ ಅದರ ಮೇಲಿದೆ. ಸದಾ ಭಾರತದ ಆಂತರಿಕ ವಿಚಾರಗಳ ಬಗ್ಗೆ ಗಮನ ಹರಿಸುವ ಪಾಕಿಸ್ಥಾನಕ್ಕೆ ತನ್ನೊಳಗಿನ ಸಮಸ್ಯೆಯನ್ನು ಬಗೆಹರಿಸಲು ಇದುವರೆಗೆ ಸಾಧ್ಯವಾಗಿಲ್ಲ. ಆ ದೇಶದಲ್ಲಿ ಅಲ್ಪಸಂಖ್ಯಾತ ಹೆಣ್ಣು ಮಕ್ಕಳನ್ನು ಅಪಹರಿಸಿ ಬಲವಂತವಾಗಿ ಮತಾಂತ ಮಾಡಲಾಗುತ್ತದೆ. ಆ ದೇಶದ ರಾಜಕಾರಣಿಗಳು ಸಂವಿಧಾನಕ್ಕಿಂತ ಹೆಚ್ಚಾಗಿ ಖುರಾನಿಗೆ ಬದ್ಧರಾಗಿರುತ್ತಾರೆ. ಇಂತಹ ದೇಶ ಭಾರತದ ಆಂತರಿಕ ವಿಷಯದ ಬಗ್ಗೆ, ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಬಗ್ಗೆ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.