
ಬೆಂಗಳೂರು: ಜಲಜೀವನ್ ಮಿಷನ್ (ಜೆಜೆಎಂ) ಸ್ಟಾಂಪ್ ಪೇಪರ್ ವಿಚಾರದಲ್ಲಿ ಕ್ರಿಮಿನಲ್ ಚಟುವಟಿಕೆ ನಡೆದಿದ್ದು, ಸರಕಾರವು ಇದರ ಸಿಬಿಐ ತನಿಖೆ ಮಾಡಿಸಬೇಕೆಂದು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರು ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಶೃಂಗೇರಿ ಕ್ಷೇತ್ರದಲ್ಲಿ ಜೆಜೆಎಂ ಎಂಬುದು ಜಲಜೀವನ್ ಕಮಿಷನ್ ಆಗಿದೆ ಎಂದು ದಾಖಲೆಗಳ ಜೊತೆ ಆರೋಪಿಸಿದರು. 150 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕೇಂದ್ರ ಸರಕಾರ ಕೊಟ್ಟಿದೆ. ಆದರೆ, ಒಂದೇ ಒಂದು ಮನೆಗೆ ನೀರು ಲಭಿಸಿಲ್ಲ ಎಂದು ದೂರಿದರು.
ಹಿಂದೆ ಕರೀಂಲಾಲ್ ತೆಲಗಿ ಮೂಲಕ ಸ್ಟಾಂಪ್ ಪೇಪರ್ ಹಗರಣ ನಡೆದಿತ್ತು. ಹಿಂದೆ ಸ್ಟಾಂಪ್ ಪೇಪರ್ ಮೇಲ್ಭಾಗದಲ್ಲಿ ನೋಟಿನಂತೆ ಮಾತ್ರ ಇರುತ್ತಿತ್ತು. ನಕಲಿ ಸ್ಟಾಂಪ್ ಪೇಪರ್ ಮಾಡುವುದು ಸುಲಭವಿತ್ತು. ಸರಕಾರವು ಬಳಿಕ ಅದನ್ನು ಬದಲಿಸಿ, ನಂಬರ್, ಕ್ಯೂಆರ್ ಕೋಡ್ ಕೊಟ್ಟು ಇಸ್ಟಾಂಪಿಂಗ್ ಆ್ಯಪ್ ಬಿಡುಗಡೆ ಮಾಡಿದೆ. ಅದರಲ್ಲಿ ಸ್ಕ್ಯಾನ್ ಮಾಡಿದಾಗ ಖರೀದಿಸಿದವರ ಮಾಹಿತಿ, ನಂಬರ್ ಬರಬೇಕು. ಈ ಜೆಜೆಎಂನಡಿ ಕರೀಂಲಾಲ್ ಬುದ್ಧಿವಂತಿಕೆಗೆ ಮೀರಿದ ಹಗರಣ ನಡೆದಿದೆ ಎಂದು ಆರೋಪಿಸಿದರು.
ಇದು ಜೆಜೆಎಂ ಸಂಬಂಧ ಸರಕಾರದ ಜೊತೆ ಅಂದರೆ ಜಿಲ್ಲಾ ಪಂಚಾಯಿತಿ ಜೊತೆ ಆದ ಒಪ್ಪಂದದ ಸ್ಟಾಂಪ್ ಪೇಪರನ್ನು ಪ್ರದರ್ಶಿಸಿದರು. ‘ಐಎನ್ಕೆಎ 76845429815984 ಡಬ್ಲ್ಯೂ ನಂಬರಿನಲ್ಲಿ 2024ರಲ್ಲಿ ಒಂದೇ ದಿನ ಒಂದೇ ಸಮಯಕ್ಕೆ ಸ್ಟಾಂಪ್ ಪೇಪರ್ ಪಡೆದಂತೆ ಕಾಣುತ್ತಿದ್ದು, ಎನ್.ಆರ್.ಪುರ, ಕೊಪ್ಪ ತಾಲ್ಲೂಕಿನಲ್ಲಿ 9 ಒಪ್ಪಂದಗಳು ಆಗಿವೆ. ಇನ್ನೊಂದು ಸಂಖ್ಯೆಯ ಸ್ಟಾಂಪ್ ಪೇಪರಿನಲ್ಲಿ ಬೋರ್ವೆಲ್ ಕೊರೆಸಲು 11 ಒಪ್ಪಂದಗಳಾಗಿವೆ. ಇದು ಸರಕಾರದ ಜೊತೆಗಿನ ಒಪ್ಪಂದ. ಪ್ರಿಯಾಂಕ್ ಖರ್ಗೆಯವರ ಖಾತೆಯ ಕೆಳಗೆ ಬರುವ ಇಲಾಖೆ ಇದು ಎಂದು ವಿವರ ನೀಡಿದರು.
ನಾವು ಪಡೆದ 30 ಒಪ್ಪಂದಗಳಲ್ಲಿ ಇದಿಷ್ಟು ಹಗರಣಗಳು ಪತ್ತೆಯಾಗಿದೆ. ಸ್ಟಾಂಪ್ ಪೇಪರ್ ನಕಲಿ ಆಗಿದೆ. ಸರಕಾರದ ಬೊಕ್ಕಸಕ್ಕೆ ಮೋಸ ಎನ್ನುವುದಕ್ಕಿಂತ ಇದು ಶೇ 100ರಷ್ಟು ಕ್ರಿಮಿನಲ್ ಚಟುವಟಿಕೆ ಎಂದು ಆರೋಪಿಸಿದರು. ಇದರ ಹಿಂದೆ ಶೃಂಗೇರಿ ಶಾಸಕರ ಎಡ- ಬಲ- ಹಾರ್ಟ್ ಎಲ್ಲರೂ ಇದ್ದಾರೆ. ಇದರಲ್ಲಿ ಶಾಸಕರ ಕೃಪಾಶೀರ್ವಾದದೊಂದಿಗೆ ಇಂಥ ಘಟನೆ ನಡೆದಿದೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದು ದೂರಿದರು.
ಇನ್ನೊಂದು ಸ್ಟಾಂಪ್ ಪೇಪರ್ ಸ್ಕ್ಯಾನ್ ಮಾಡಿದರೆ ಇದು ಅಸಲಿ ಅಲ್ಲ ಎಂಬ ಅರ್ಥದ ಮಾಹಿತಿ ಬರುತ್ತಿದೆ. ಇದು ನಕಲಿಯೇ ಅಥವಾ ಅಸಲಿಯೇ ಎಂದು ತಿಳಿದಿಲ್ಲ ಎಂದು ಗಮನ ಸೆಳೆದರು. ಸ್ಥಳೀಯವಾಗಿ ತನಿಖೆ ನಡೆಸಿದರೆ ಇದನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ ಎಂದು ಹೇಳಿದರು.
ಕೊರೆಸಿದ ಬೋರ್ವೆಲ್ ಆಳದ ಕುರಿತು ತಿಳಿಯಲು ಮುಂದಾಗಿದ್ದೆ. ಇದಕ್ಕಾಗಿ ಕ್ಯಾಮರಾ ಒಳಬಿಟ್ಟು ಆಳ ತಿಳಿಯಲು ಸಾಧ್ಯವಿದೆ. ಸ್ವಂತ ಖರ್ಚಿನಲ್ಲಿ 10 ಕೊಳವೆಬಾವಿ ಪರಿಶೀಲಿಸಿದ್ದು, ಕೊಪ್ಪ ತಾಲ್ಲೂಕು ಕಡೇಗದ್ದೆ ತಳಮಕ್ಕಿಯಲ್ಲಿ 228 ಅಡಿಯ ಆಳವಿರುವ ಕೊಳವೆಬಾವಿಗೆ 587 ಅಡಿಗೆ ಬಿಲ್ ಮಾಡಿದ್ದಾರೆ ಎಂದು ಟೀಕಿಸಿದರು. ಇನ್ನೊಂದು 260 ಅಡಿಯ ಕೊಳವೆಬಾವಿಗೆ 587 ಅಡಿಗೆ ಬಿಲ್ ಮಾಡಿದ್ದಾಗಿ ವಿವರಿಸಿದರು. ಇವುಗಳ ಹಣ ಪಾವತಿ ಆಗಿದೆ ಎಂದರು.
ಬಲಗಾರು ಗ್ರಾಮ ಪಂಚಾಯಿತಿಯಲ್ಲಿ 1.49 ಲಕ್ಷ ರೂ. ಬಿಲ್ ಆಗಿದೆ. ಆದರೆ ಬೋರ್ವೆಲ್ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗೌರಿಹಳ್ಳದಲ್ಲಿ ಬೋರ್ವೆಲ್ ಇಲ್ಲ; 1.38 ಲಕ್ಷ ಬಿಲ್ ಮಾಡಿದ್ದಾರೆ ಎಂದು ವಿವರ ನೀಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಕಾಡಾದ ಅಧ್ಯಕ್ಷ ಅಂಶುಮಂತ್ ಅವರು ಕೆಡಿಪಿ ಸಭೆಯಲ್ಲಿ ಜೆಜೆಎಂ ಅಡಿ ಮೋಸ ನಡೆಯುತ್ತಿದೆ. ಶಾಸಕರೇ ಇದನ್ನು ಗಮನಿಸಿ ಎಂದು ಗಮನ ಸೆಳೆದಿದ್ದ ವರದಿಯ ಪೇಪರ್ ತುಣುಕನ್ನೂ ಅವರು ಪ್ರದರ್ಶಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎಂ.ಸತೀಶ್ ಅವರು ಸಾರ್ವಜನಿಕ ಸಭೆಯಲ್ಲಿ ಜೆಜೆಎಂ ಅಡಿ ನೂರಾರು ಕೋಟಿಯ ಹಗರಣ ನಡೆದಿದೆ ಎಂದಿದ್ದರು ಎಂದು ಹೇಳಿದರು.
ಓವರ್ ಹೆಡ್ ಟ್ಯಾಂಕ್ ವಿಚಾರದಲ್ಲೂ ಅವ್ಯವಹಾರ ಆಗಿದೆ. ಪೈಪ್ ಹಾಕಲು ನಿಗದಿತ ಆಳದ ಕಾಲುವೆ ತೋಡಿಲ್ಲ. ನಿಗದಿತ ಗುಣಮಟ್ಟದ ಪೈಪ್ ಉಪಯೋಗಿಸದೇ ಇರುವುದು ಕಂಡುಬಂದಿದೆ. ಶೃಂಗೇರಿ ಕ್ಷೇತ್ರದಲ್ಲಿ ಜೆಜೆಎಂ, ಜೆಜೆ ಕಮಿಷನ್ ಆಗಿದೆ ಎಂದು ದೂರಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮೂಡಿಗೆರೆಯ ಮುಖಂಡ ದೀಪಕ್ ದೊಡ್ಡಯ್ಯ ಅವರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


