ನವದೆಹಲಿ: ಈ ವರ್ಷದ ಸೆಪ್ಟೆಂಬರ್ 20ರ ವೇಳೆಗೆ ಫ್ರಾನ್ಸ್ ತನ್ನ ಮೊದಲ ರಫೆಲ್ ಫೈಟರ್ ಜೆಟ್ ಅನ್ನು ಔಪಚಾರಿಕವಾಗಿ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಇಬ್ಬರು ಭಾರತೀಯ ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಡರ್ ನೀಡಲಾದ 36 ರಫೆಲ್ ಜೆಟ್ಗಳ ಪೈಕಿ ಮೊದಲನೆಯ ಜೆಟ್ನ ಔಪಚಾರಿಕ ಸೇರ್ಪಡೆ ಸಮಾರಂಭವನ್ನು ಸೆಪ್ಟೆಂಬರ್ ಮೂರನೇ ವಾರದಲ್ಲಿ ಫ್ರಾನ್ಸ್ನಲ್ಲಿ ನಡೆಸಲಾಗುತ್ತಿದೆ ಎಂದು ವಾಯುಸೇನೆ ಫ್ರೆಂಚ್ ಸರ್ಕಾರಕ್ಕೆ ತಿಳಿಸಿದೆ ಎನ್ನಲಾಗಿದೆ.
“ಸೆಪ್ಟೆಂಬರ್ 18 ಮತ್ತು 23 ರ ನಡುವೆ ಮೊದಲ ರಫೆಲ್ ಅನ್ನು ಹಸ್ತಾಂತರ ಮಾಡಬೇಕೆಂದು ನಾವು ಫ್ರೆಂಚ್ ರಕ್ಷಣಾ ಸಚಿವಾಲಯಕ್ಕೆ ಪತ್ರದ ಮೂಲಕ ತಿಳಿಸಿದ್ದೇವೆ. ಈ ಸಮಯದ ಚೌಕಟ್ಟಿನೊಳಗೇ ಪರಸ್ಪರ ಅನುಕೂಲಕರ ದಿನಾಂಕದಂದು ಸೇರ್ಪಡೆ ಸಮಾರಂಭವನ್ನು ನಿಗದಿಪಡಿಸುವ ಸಾಧ್ಯತೆಯಿದೆ” ಎಂದು ಅಧಿಕಾರಿ ಹೇಳಿದ್ದಾರೆ.
“ಜನರಲ್ ಡೈರೆಕ್ಟರೇಟ್ ಫಾರ್ ಆರ್ಮೇಮೆಂಟ್ ಅಥವಾ ಡಿಜಿಎ ಮೂಲಕ ಫ್ರೆಂಚ್ ಅಧಿಕಾರಿಗಳಿಗೆ ಈ ವಿನಂತಿಯನ್ನು ಮಾಡಲಾಗಿದೆ. ಡಿಜಿಎ, ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ಏವಿಯೇಷನ್ ತಯಾರಿಸಿದ ರಫೆಲ್ ಫೈಟರ್ ಜೆಟ್ಗಳನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯ ಸಂಯೋಜನಾ ಸಂಸ್ಥೆಯಾಗಿದೆ” ಎಂದು ತಿಳಿಸಿದ್ದಾರೆ.
ಸೆಪ್ಟಂಬರ್ ತಿಂಗಳಲ್ಲಿ ಔಪಚಾರಿಕ ಸೇರ್ಪಡೆ ನಡೆದರೂ ಕೂಡ, ಮೊದಲ ಬ್ಯಾಚ್ನ ನಾಲ್ಕು ರಾಫೆಲ್ ಜೆಟ್ಗಳು ಭಾರತದ ತಮ್ಮ ಮೂಲ ನೆಲೆಗೆ ಹಾರಿ ಬರುವುದು ಏಪ್ರಿಲ್-ಮೇ ತಿಂಗಳಲ್ಲಿ ಮಾತ್ರ. ಎಲ್ಲಾ 36 ಯುದ್ಧ ವಿಮಾನಗಳು 2022ರ ಸೆಪ್ಟೆಂಬರ್ ವೇಳೆಗೆ ಭಾರತಕ್ಕೆ ಬರಲಿವೆ. ಬಲಿಷ್ಠ ವಾಯುಸೇನೆಯನ್ನು ನಿರ್ಮಿಸುವ ಕಾರ್ಯದಲ್ಲಿ ರಫೆಲ್ ಬಹು ಮುಖ್ಯ ಪಾತ್ರವನ್ನು ನಿಭಾಯಿಸಲಿವೆ.
2016ರ ಸೆಪ್ಟೆಂಬರ್ 23ರಂದು ಭಾರತವು ಫ್ರಾನ್ಸ್ನಿಂದ 36 ರಾಫೆಲ್ ಜೆಟ್ಗಳನ್ನು ಖರೀದಿಸಲು 59,000 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿತ್ತು.
ವಾಯುಸೇನೆಯ ಪೈಲಟ್ಗಳು ಮತ್ತು ತಂತ್ರಜ್ಞರು ಪ್ಯಾರಿಸ್ನಲ್ಲಿ ರಫೇಲ್ ಜೆಟ್ಗಳ ಬಗ್ಗೆ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಜೆಟ್ಗಳನ್ನು ಬ್ಯಾಚ್ಗಳಲ್ಲಿ ಭಾರತಕ್ಕೆ ಹಾರಿಸುವುದು ಈ ಸಿಬ್ಬಂದಿಗಳ ಜವಾಬ್ದಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.