ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಬಲಗೊಳ್ಳುತ್ತಿದೆ. ತಂತ್ರಜ್ಞಾನದ ವಿಷಯದಲ್ಲಿ ಭಾರತಕ್ಕೆ ಸಾಕಷ್ಟು ಸಹಾಯಗಳನ್ನು ಮಾಡಿರುವ ಇಸ್ರೇಲ್, ಈಗ ಭಾರತದ ನೀರಿನ ಸಮಸ್ಯೆಯನ್ನು ಹೋಗಲಾಡಿಸಲೂ ಸಹಾಯ ಮಾಡುತ್ತಿದೆ. ಬರಪೀಡಿತ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿರುವ ನೀರಿನ ಸಮಸ್ಯೆಗಳನ್ನು ನಿಭಾಯಿಸಲು ಇಸ್ರೇಲ್ ಸಹಾಯ ಹಸ್ತ ಚಾಚಿದೆ ಎಂದು ವರದಿಗಳು ತಿಳಿಸಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಳೆದ ವರ್ಷ ಮಹಾರಾಷ್ಟ್ರಕ್ಕೆ ಭೇಟಿ ನೀಡಿ ಅಲ್ಲಿನ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಮಹಾರಾಷ್ಟ್ರ ಜೀವನ್ ಪ್ರಾಧಿಕರಣ್(ಎಂಜೆಪಿ) ಮತ್ತು ಇಸ್ರೇಲ್ನ ರಾಷ್ಟ್ರೀಯ ಜಲವಾಹಕ ನೌಕೆಯಾದ ಮೆಕೊರೊಟ್ ಅನ್ನು ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ರೂ.1000 ಕೋಟಿ ವೆಚ್ಚದ ವಾಟರ್ ಗ್ರಿಡ್ ವ್ಯವಸ್ಥೆ ವಿನ್ಯಾಸಪಡಿಸಲು ನಿಯೋಜನೆಗೊಳಿಸಲಾಯಿತು. ಮೆಕೊರೊಟ್ನ ಭಾರತೀಯ ಪ್ರತಿನಿಧಿ ರೊಮಿಯಲ್ ಸ್ಯಾಮ್ಯುಯೆಲ್ ಹೇಳುವಂತೆ “ಈ ಯೋಜನೆ ಪೂರ್ಣಗೊಂಡ ನಂತರ, 2050 ರ ವೇಳೆಗೆ 30 ದಶಲಕ್ಷ ಜನಸಂಖ್ಯೆಗೆ ನೀರನ್ನು ಒದಗಿಸಲಿದೆ.” ಇದು ಭಾರತದ ಅತಿದೊಡ್ಡ ರಕ್ಷಣೇತರ ಇಸ್ರೇಲಿ ಯೋಜನೆಯಾಗಿದೆ.
ಇಸ್ರೇಲ್ ಕಾನ್ಸುಲ್ ಜನರಲ್ ಯಾಕೋವ್ ಫಿಂಕೆಲ್ಸ್ಟೈನ್ ಅವರು, “ಮಹಾರಾಷ್ಟ್ರ ಸರ್ಕಾರವು ಈಗಾಗಲೇ ವಾಟರ್ ಗ್ರಿಡ್ ಅನ್ನು ಹೊಂದಿದೆ ಆದರೆ ಅದಕ್ಕೆ ಅದನ್ನು ವಿನ್ಯಾಸಗೊಳಿಸುವ ಜ್ಞಾನ ಗೊತ್ತಿಲ್ಲ. ಹೀಗಾಗಿ ಇಸ್ರೇಲಿ ರಾಯಭಾರಿ ಡೇನಿಯಲ್ ಕಾರ್ಮನ್ ಅವರು, ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ಮೆಕೊರೊಟ್ ಸಂಪರ್ಕದಲ್ಲಿರುವಂತೆ ಮಾಡುವಂತೆ ಮುಂಬಯಿಯಲ್ಲಿರುವ ಕಾನ್ಸುಲ್ ಜನರಲ್ ಕಚೇರಿಗೆ ಸೂಚಿಸಿದರು. 65,000 ಚದರ ಕಿ.ಮೀ ಇರುವ ಮರಾಠವಾಡ 22,000 ಚದರ ಕಿಮೀ ಇರುವ ಇಸ್ರೇಲ್ಗಿಂತ ಮೂರು ಪಟ್ಟು ದೊಡ್ಡದಾಗಿದೆ. ಹೀಗಾಗಿ ಈ ನಿರ್ಣಾಯಕ ಯೋಜನೆಗೆ ಸರ್ಕಾರ ನಮ್ಮನ್ನು ಪಾಲುದಾರನನ್ನಾಗಿ ಮಾಡಿದಕ್ಕೆ ನಾವು ವಿನೀತರಾಗಿದ್ದೇವೆ” ಎಂದಿದ್ದಾರೆ.
ಮರಳುಗಾರಿಕೆ ಮತ್ತು ನೀರಿನ ನಿರ್ವಹಣೆಯ ಸಮಸ್ಯೆಗಳನ್ನು ಭಾರತದೊಂದಿಗೆ ಸೇರಿ ನಿಭಾಯಿಸುವಲ್ಲಿ ಇಸ್ರೇಲ್ ತನ್ನ ಪರಿಣತಿಯನ್ನು ಹಂಚಿಕೊಳ್ಳಲು ಉತ್ಸಾಹವನ್ನು ವ್ಯಕ್ತಪಡಿಸಿದೆ. ಇಂತಹ ಸಮಸ್ಯೆಗಳನ್ನು ನಿಭಾಯಿಸುವ ತಂತ್ರಜ್ಞಾನವನ್ನು ಹೊಂದುವುದರಲ್ಲಿ ಇಸ್ರೇಲ್ ವಿಶ್ವ ನಾಯಕನಾಗಿದೆ. ಭಾರತದ ಇಸ್ರೇಲ್ ರಾಯಭಾರಿಯಾಗಿರುವ ರಾನ್ ಮಲ್ಕಾ ಅವರು, “ಭಾರತದೊಂದಿಗೆ ವೃದ್ಧಿಯಾಗುತ್ತಿರುವ ನಮ್ಮ ಸಹಭಾಗಿತ್ವದ ಭಾಗವಾಗಿ, ಇಸ್ರೇಲ್ ಒಟ್ಟಾಗಿ ಕಾರ್ಯನಿರ್ವಹಿಸಲು ಮತ್ತು ಮರಳುಗಾರಿಕೆಯ ವಿರುದ್ಧದ ಜಂಟಿ ಹೋರಾಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು, ಎಲ್ಲಾ ಅನುಭವಗಳನ್ನು ಹಂಚಿಕೊಳ್ಳಲು ಉತ್ಸುಕವಾಗಿದೆ. ನೀರಿನ ನಿರ್ವಹಣೆ ಮತ್ತು ನೀರಿನ ಸುರಕ್ಷತೆಯ ವಿಷಯದಲ್ಲೂ ತಂತ್ರಜ್ಞಾನ, ಅನುಭವವನ್ನು ಹಂಚಿಕೊಳ್ಳಲಿದೆ” ಎಂದಿದ್ದಾರೆ. ಭಾರತದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟವು ಶೇ.22ರಷ್ಟು ಇಳಿದಿದ್ದು, ಇದರಿಂದ ಭಾರತವು ಪ್ರಸ್ತುತ ತೀವ್ರ ನೀರಿನ ಕೊರತೆ ಮತ್ತು ತೀವ್ರ ಬರಗಾಲದೊಂದಿಗೆ ಹೋರಾಡುವಂತೆ ಆಗಿದೆ. ಈ ಹಿನ್ನಲೆಯಲ್ಲಿ ರಾನ್ ಮಲ್ಕಾ ಅವರು ನೀಡಿರುವ ಹೇಳಿಕೆಯು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಇಸ್ರೇಲ್ ಭಾರತಕ್ಕೆ ತನ್ನ ನೀರಿನ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುವ ಉತ್ಸಾಹವನ್ನು ತೋರಿಸಿದೆ, ಮರಾಠವಾಡ ಪ್ರದೇಶಕ್ಕೆ ಸಂಬಂಧಿಸಿದಂತೆ ಇದು ದೊಡ್ಡ ರೀತಿಯ ಸಹಾಯವೇ ಆಗಿದೆ. ಉಭಯ ದೇಶಗಳು ಎಷ್ಟರ ಮಟ್ಟಿಗೆ ಬಾಂಧವ್ಯವನ್ನು ಹಂಚಿಕೊಂಡಿವೆ ಎಂಬುದನ್ನು ಈ ಬೆಳವಣಿಗೆ ತೋರಿಸುತ್ತದೆ. ಇದುವರೆಗೆ, ಇಸ್ರೇಲ್ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಪ್ರಮುಖ ಮಿತ್ರನಾಗಿ ಕಾಣಿಸಿಕೊಂಡಿದೆ. ಅಲ್ಲದೇ ಅಭಿವೃದ್ಧಿ ಸೇರಿದಂತೆ ರಕ್ಷಣೇತರ ಕ್ಷೇತ್ರದಲ್ಲೂ ಉಭಯ ದೇಶಗಳು ಸಹಕಾರವನ್ನು ಹೊಂದಿವೆ. ಕಳೆದ ವರ್ಷ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು, ಪ್ರಧಾನಿ ನರೇಂದ್ರ ಮೋದಿಯವರಿಗೆ ದಿ ಗ್ಯಾಲ್ ಮೊಬೈಲ್ ವಾಟರ್ ಡೆಸಿಲಿನೇಶನ್ ಆ್ಯಂಡ್ ಪ್ಯೂರಿಫಿಕೇಶನ್ ಜೀಪ್ ಎಂದು ಕರೆಯಲ್ಪಡುವ ನೀರು ಶುದ್ಧೀಕರಿಸುವ ಜೀಪ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದಕ್ಕಿಂತಲೂ ಉತ್ತಮವಾದ ಉಡುಗೊರೆ ಭಾರತಕ್ಕೆ ಬೇರೆ ಏನಿರಲು ಸಾಧ್ಯ.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ, ಶುದ್ಧ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ದೇಶದ ವಿವಿಧ ಭಾಗಗಳಲ್ಲಿ ಅಳವಡಿಸಬಹುದಾದ ಪರಿಪೂರ್ಣ ಸಂಚಾರಿ ನೀರು ಸಂಸ್ಕರಣಾ ವ್ಯವಸ್ಥೆಯಾಗಿದೆ ಈ ಡೆಸಿಲಿನೇಶನ್ ಜೀಪ್. ಅಹಮದಾಬಾದ್ನಲ್ಲಿ ನಡೆದ ಸಮಾರಂಭದಲ್ಲಿ ಇಸ್ರೇಲಿ ಪ್ರಧಾನಿ ನೇತನ್ಯಾಹು ಅವರ ಸಮ್ಮುಖದಲ್ಲಿ ಈ ಜೀಪನ್ನು ಪ್ರಧಾನಿ ಮೋದಿಯವರು ಸುಯಿಗಂ ಗ್ರಾಮದ ಜನರಿಗೆ ಕೊಡುಗೆಯಾಗಿ ಅರ್ಪಿಸಿದ್ದರು.
ಡೆಸಿಲೇಶನ್ ಅನ್ನುವುದು ಸಮುದ್ರದ ನೀರನ್ನು ಕುಡಿಯುವ ಶುದ್ಧ ನೀರಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಲ್ಲಿ ಸಮುದ್ರದ ನೀರಿನಿಂದ ಲವಣಗಳನ್ನು ಮತ್ತು ಖನಿಜಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಇದು ಮಾನವನ ಬಳಕೆಗೆ ಸರಿಹೊಂದುವಂತೆ ಮಾಡಲಾಗುತ್ತದೆ. ಭಾರತವು 7,800 ಕಿಲೋಮೀಟರ್ ಬೃಹತ್ ಕರಾವಳಿಯನ್ನು ಹೊಂದಿರುವ ದ್ವೀಪವಾಗಿದೆ ಎಂಬುದನ್ನು ಇಲ್ಲಿ ಗಮನಿಸುವುದು ಮುಖ್ಯ. ಆದರೂ, ಇಷ್ಟು ದೊಡ್ಡ ಕರಾವಳಿ ಪ್ರದೇಶವನ್ನು ಹೊಂದಿದ್ದರೂ ಕೂಡ, ಪ್ರತಿವರ್ಷ ಮಳೆಗಾಲದಲ್ಲಿ ಮಳೆಯಾಗುತ್ತಿದ್ದರೂ ಕೂಡ, ಭಾರತವು ನೀರಿನ ಕೊರತೆಯ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದು ವಿಪರ್ಯಾಸ. ಹೀಗಾಗಿ ಡೆಸಿಲಿನೇಶನ್ ದೇಶವನ್ನು ನೀರಿನಿಂದ ಕೊರತೆಯಿಂದ ಮೇಲೆತ್ತಲು ಖಂಡಿತ ಸಹಾಯ ಮಾಡಬಲ್ಲದು.
ಭಾರತದ ವಿಶಾಲ ಕರಾವಳಿಯ ಸಂಪನ್ಮೂಲಗಳನ್ನು ಸದ್ಭಳಕೆ ಮಾಡುವ ಯೋಜನೆಯಲ್ಲಿ ನೀತಿ ಆಯೋಗ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಭಾರತದ ನೇತೃತ್ವದಲ್ಲಿ ಸಮುದ್ರದ ತೀರದಲ್ಲಿ ಡೆಸಲೀನೇಶನ್ ಘಟಕಗಳನ್ನು ಸ್ಥಾಪಿಸಲು ದೇಶದ ಥಿಂಕ್ ಟ್ಯಾಂಕ್ ಯೋಜಿಸುತ್ತಿದೆ. ಕಳೆದ ವರ್ಷ, ನೀತಿ ಆಯೋಗವು ನೀರಿನ ಬಗ್ಗೆ ವರದಿಯನ್ನು ಪ್ರಕಟಿಸಿತ್ತು, ಇದರಲ್ಲಿ ನಮ್ಮ ದೇಶ ಪ್ರಸ್ತುತ ತನ್ನ ಇತಿಹಾಸದಲ್ಲೇ ಅತ್ಯಂತ ಭೀಕರ ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿದೆ ಎಂದು ಹೇಳಿತ್ತು. ನೀರಿನ ಗುಣಮಟ್ಟದ ವಿಷಯದಲ್ಲಿ 122 ದೇಶಗಳ ಪೈಕಿ ನಮ್ಮ ದೇಶವು 120 ನೇ ಸ್ಥಾನದಲ್ಲಿದೆ.
ಇಸ್ರೇಲ್ ತನ್ನ ಆದ್ಯತೆಯ ಪಟ್ಟಿಯಲ್ಲಿ ಭಾರತವನ್ನು ಅತ್ಯಂತ ಉನ್ನತ ಸ್ಥಾನದಲ್ಲಿರಿಸಿದೆ ಮತ್ತು ಭಾರತದ ನೀರಿನ ಕೊರತೆಯ ಸಮಸ್ಯೆಗಳ ಬಗ್ಗೆ ತೀವ್ರ ಆಸಕ್ತಿ ವಹಿಸುತ್ತಿದೆ ಎಂಬುದು ಸ್ಪಷ್ಟ. ಈ ವಲಯದಲ್ಲಿ ಭಾರತಕ್ಕೆ ಸಹಾಯ ಮಾಡುವ ಇಸ್ರೇಲ್ ಸೂಚನೆಯು ಒಂದು ದೊಡ್ಡ ಹೆಗ್ಗುರುತಾಗಿದೆ, ಅದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.