
1975ರಲ್ಲಿ ಭಾರತದ ಅಂತರಿಕ್ಷ ಯಾತ್ರೆಯ ಮೊದಲ ಹೆಜ್ಜೆಯಾಗಿ ಆರ್ಯಭಟ ಉಪಗ್ರಹವು ಆಕಾಶಕ್ಕೇರಿತು, ಆ ಕ್ಷಣವನ್ನು ಇಡೀ ದೇಶವೇ ಸಂಭ್ರವಿಸಿತು. ಆದರೆ ಈ ಸಂಭ್ರದ ಹಿಂದಿನ ಹೀರೋ ಆಗಿದ್ದವರು ಒಬ್ಬ ಸಾಮಾನ್ಯನಂತೆ ಕಾಣುವ ಆದರೆ ಅಸಾಮಾನ್ಯ ದೂರದೃಷ್ಟಿಯ ವಿಜ್ಞಾನಿ – ಪ್ರೊಫೆಸರ್ ಉಡುಪಿ ರಾಮಚಂದ್ರ ರಾವ್ (ಯು. ಆರ್. ರಾವ್). “ಭಾರತದ ಉಪಗ್ರಹ ಮನುಷ್ಯ” ಎಂದೇ ಪ್ರಪಂಚಕ್ಕೆ ಪರಿಚಯವಾದ ಈ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಮಾರ್ಚ್ 10 ರಂದು ಆಚರಿಸುತ್ತಿರುವ ಸಂದರ್ಭ ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಬಹುಮುಖ್ಯವಾಗುತ್ತದೆ.
1932ರ ಮಾರ್ಚ್ 10ರಂದು ಕರ್ನಾಟಕದ ಉಡುಪಿ ಜಿಲ್ಲೆಯ ಅದಮಾರು ಗ್ರಾಮದಲ್ಲಿ ಜನಿಸಿದ ರಾವ್ ಅವರು ಮಧ್ಯಮ ಕುಟುಂಬದಿಂದ ಬಂದವರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ., ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. ಮತ್ತು ಗುಜರಾತ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದ ಅವರು ಕಾಸ್ಮಿಕ್ ರೇಗಳ ಅಧ್ಯಯನದಲ್ಲಿ ತೊಡಗಿಸಿಕೊಂಡರು. ವಿಕ್ರಮ್ ಸಾರಾಭಾಯ್ ಅವರ ಶಿಷ್ಯರಾಗಿ, ಭಾರತದ ಅಂತರಿಕ್ಷ ಕಾರ್ಯಕ್ರಮದ ಮೊದಲ ಹಂತದಲ್ಲಿ ಭಾಗಿಯಾದರು.
1960ರ ದಶಕದಲ್ಲಿ ಭಾರತದ ಅಂತರಿಕ್ಷ ಕನಸುಗಳು ಇನ್ನೂ ಆರಂಭದ ಹಂತದಲ್ಲಿದ್ದವು. ಬೆಂಗಳೂರಿನ ಪೀಣ್ಯಾ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ಧೂಳು ತುಂಬಿದ ಎಂಟು ಟಿನ್ ಶೆಡ್ಗಳು ಭಾರತದ ಮೊದಲ ಉಪಗ್ರಹ ನಿರ್ಮಾಣದ ಕೇಂದ್ರವಾಗಿತ್ತು! ವಿಕ್ರಮ್ ಸಾರಾಭಾಯ್ ಅವರು ರಾವ್ ಅವರಿಗೆ ದೊಡ್ಡ ಜವಾಬ್ದಾರಿ ನೀಡಿದರು: ಸಂಪೂರ್ಣ ಸ್ವದೇಶಿ ಉಪಗ್ರಹವನ್ನು ನಿರ್ಮಿಸುವ ಜವಾಬ್ದಾರಿ. ಕರ್ನಾಟಕದ ಇಂಡಸ್ಟ್ರೀಸ್ ಸೆಕ್ರೆಟರಿ ಸತೀಶ್ ಚಂದ್ರನ್ ಅವರ ಸಹಾಯದಿಂದ ನಾಲ್ಕು 5,000 ಚದರ ಅಡಿ ಶೆಡ್ಗಳನ್ನು ಪಡೆದರು. ಇದರಲ್ಲಿ ಎರಡು ಎಲೆಕ್ಟ್ರಾನಿಕ್ಸ್ ಲ್ಯಾಬ್ಗಳಾದವು, ಒಂದು 1,500 ಚದರ ಅಡಿ ಕ್ಲೀನ್ ರೂಮ್ ಆಯಿತು.
1972ರ ಸೆಪ್ಟೆಂಬರ್ 11ರ ಗಣೇಶ ಚತುರ್ಥಿಯಂದು ಕೆಲಸ ಆರಂಭವಾಯಿತು. 20-30 ವರ್ಷದ ಯುವ ವಿಜ್ಞಾನಿಗಳ ಚಿಕ್ಕ ತಂಡವೊಂದು 150ಕ್ಕೆ ಬೆಳೆಯಿತು. ಅವರು ದಿನ-ರಾತ್ರಿ ದುಡಿದರು. ಆಂಟೆನಾ, ಸರ್ಕ್ಯೂಟ್ಗಳು, ಸೋಲಾರ್ ಪ್ಯಾನೆಲ್ಗಳು – ಎಲ್ಲವನ್ನೂ ಕೈಯಿಂದಲೇ ಮಾಡಿದರು. ಥರ್ಮಲ್ ಕಂಟ್ರೋಲ್, ಕಮ್ಯೂನಿಕೇಶನ್, ಪವರ್ ಸಿಸ್ಟಮ್ಗಳನ್ನು ಶೂನ್ಯದಿಂದ ಕಲಿತರು. ಕೆಲವು ಭಾಗಗಳು ಸೋವಿಯತ್ ಒಕ್ಕೂಟದಿಂದ ಬಂದವು, ಆದರೆ ಡಿಸೈನ್, ಟೆಸ್ಟಿಂಗ್ ಮತ್ತು ಅಸೆಂಬ್ಲಿ ಸಂಪೂರ್ಣ ಭಾರತೀಯರದ್ದೇ.
ಪರಿಕರಗಳನ್ನು ಪಡೆಯುವುದು ದೊಡ್ಡ ಸವಾಲಾಗಿತ್ತು. ರಾವ್ ಅವರು ಟಿ.ಎನ್. ಶೇಷನ್ ಮತ್ತು ವೈ.ಎಸ್. ರಾಜನ್ ಅವರೊಂದಿಗೆ ಯುರೋಪ್ ಮತ್ತು ಅಮೆರಿಕಾಗೆ ತೆರಳಿ, ಸ್ಪಾಟ್ ಆರ್ಡರ್ಗಳ ಮೂಲಕ ವೇಗವಾಗಿ, ಕಡಿಮೆ ಖರ್ಚಿನಲ್ಲಿ ಸಾಮಗ್ರಿಗಳನ್ನು ಖರೀದಿಸಿದರು. 1974ರ ಜುಲೈ 11ರಂದು ಪ್ರಧಾನಿ ಇಂದಿರಾ ಗಾಂಧಿಯವರು ಪೀಣ್ಯಾಕ್ಕೆ ಭೇಟಿ ನೀಡಿ, ಕ್ಲೀನ್ ರೂಮ್ನಲ್ಲಿ ಆರ್ಯಭಟ್ಟನನ್ನು ನೋಡಿ ಹೆಮ್ಮೆಪಟ್ಟರು.
ಆರ್ಯಭಟ – 358 ಕೆ.ಜಿ. ತೂಗುವ, 26 ಮುಖಗಳ ಪಾಲಿಹೆಡ್ರಲ್ ಆಕಾರದ ಉಪಗ್ರಹ. ಸೋಲಾರ್ ಪ್ಯಾನೆಲ್ಗಳು 46 ವಾಟ್ಗಳ ವಿದ್ಯುತ್ ಉತ್ಪಾದಿಸುತ್ತಿದ್ದವು. ಕೋಲ್ಡ್ ಗ್ಯಾಸ್ ಜೆಟ್ಗಳು ಸ್ಥಿರತೆ ನೀಡುತ್ತಿದ್ದವು. ಕಾಸ್ಮಿಕ್ ರೇಗಳು ಮತ್ತು ಸೌರ ವಿಕಿರಣಗಳನ್ನು ಅಳೆಯುವ ಉಪಕರಣಗಳನ್ನು ಹೊಂದಿತ್ತು.
ಭಾರತಕ್ಕೆ ರಾಕೆಟ್ ಇರಲಿಲ್ಲ. 1971ರಲ್ಲಿ ಮಾಸ್ಕೋದಲ್ಲಿ ಸೋವಿಯತ್ ಒಕ್ಕೂಟವು ಉಚಿತ ಲಾಂಚ್ ನೀಡಲು ಒಪ್ಪಂದ ಮಾಡಿತು. ಸಾರಾಭಾಯ್ ಅವರ ನಿಧನದ ನಂತರವೂ ರಾವ್ ಅವರು ಪ್ರಧಾನಿ ಇಂದಿರಾ ಗಾಂಧಿಯವರಿಗೆ ವಿವರಿಸಿದರು: “ಉಚಿತ ಲಾಂಚ್ ಸಿಕ್ಕಿದ್ದರಿಂದ ಕಡಿಮೆ ಹಣದಲ್ಲಿ ಆರಂಭಿಸಿ, ನಂತರ ಬೆಳೆಸಬಹುದು. ಸಂಕೀರ್ಣ ಉಪಗ್ರಹಗಳನ್ನು ನಿರ್ಮಿಸುವ ಸಾಮರ್ಥ್ಯ ಸಾಬೀತುಪಡಿಸದೆ ದೊಡ್ಡ ಕಾರ್ಯಕ್ರಮಗಳಿಗೆ ಹೋಗಲಾಗದು.”
1975ರ ಏಪ್ರಿಲ್ 19ರಂದು ಕಪುಸ್ಟಿನ್ ಯಾರ್ನಲ್ಲಿ ಭಾರತೀಯ ವಿಜ್ಞಾನಿಗಳು 40 ದಿನಗಳ ಕಾಲ ಕೆಲಸ ಮಾಡಿದ ನಂತರ, ಕೌಂಟ್ಡೌನ್ನಲ್ಲಿ “ಪಯ್ಯಕಲಿ!” (ರಷ್ಯನ್ನಲ್ಲಿ “ಹೋಗೋಣ!”) ಎಂಬ ಕೂಗು ಕೇಳಿತು. ಕೋಸ್ಮೋಸ್-3ಎಂ ರಾಕೆಟ್ ಆರ್ಯಭಟ್ಟನನ್ನು ಆಕಾಶಕ್ಕೆ ಕಳುಹಿಸಿತು. ಭಾರತ ಅಂತರಿಕ್ಷ ರಾಷ್ಟ್ರವಾಯಿತು! ಉಪಗ್ರಹವು ನಾಲ್ಕು ದಿನಗಳ ಕಾಲ ಕಾರ್ಯನಿರ್ವಹಿಸಿ ಮಾಹಿತಿ ಕಳುಹಿಸಿತು.
ಆರ್ಯಭಟ್ಟ ಕೇವಲ ಮೊದಲ ಹೆಜ್ಜೆಯಾಗಿತ್ತು. ಅದು ಇನ್ಸ್ಯಾಟ್ (ಸಂವಹನ), ಐಆರ್ಎಸ್ (ಭೂಮಿ ನಿರೀಕ್ಷಣೆ), ಚಂದ್ರಯಾನ್ (ಚಂದ್ರ), ಮಂಗಳಯಾನ್ (ಮಂಗಳ) ಮತ್ತು ಅದಿತ್ಯ (ಸೂರ್ಯ)ದಂತಹ ಮಹಾ ಮಿಷನ್ಗಳಿಗೆ ಮಾರ್ಗ ಸುಗಮಗೊಳಿಸಿತು. ರಾವ್ ಅವರು 1984ರಿಂದ 1994ರವರೆಗೆ ಇಸ್ರೋ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 18ಕ್ಕೂ ಹೆಚ್ಚು ಉಪಗ್ರಹಗಳನ್ನು ನಿರ್ಮಿಸಿ ಉಡಾಯಿಸಿದರು.
24 ಜುಲೈ 2017ರಂದು ನಮ್ಮನ್ನು ಅಗಲಿದ ರಾವ್ ಅವರು ಪದ್ಮ ಭೂಷಣ (1976) ಮತ್ತು ಪದ್ಮ ವಿಭೂಷಣ (2017) ಪುರಸ್ಕಾರಗಳನ್ನು ಪಡೆದರು. ಅವರ ಜೀವನವು ಸಾಬೀತುಪಡಿಸಿದೆ: ಸೀಮಿತ ಸಂಪನ್ಮೂಲಗಳೊಂದಿಗೆ, ಅಪಾರ ದೃಢತೆ ಮತ್ತು ದೂರದೃಷ್ಟಿಯಿಂದ ಏನನ್ನೂ ಸಾಧಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


