ಯಾವ ನಾಡಿನಲ್ಲಿ ಬಂಕಿಮ ಚಂದ್ರ ಚಟರ್ಜಿಯವರಿಂದ ವಂದೇ ಮಾತರಂ ರಾಷ್ಟ್ರಗೀತೆಯ ರಚನೆಯಾಯಿತೋ, ಯಾವ ನಾಡಿನಲ್ಲಿ ಈಶ್ವರಚಂದ್ರ ವಿದ್ಯಾಸಾಗರರಂತಹ ಸಮಾಜ ಸುಧಾರಕರು ಪ್ರಯತ್ನಶೀಲರಾದರೋ, ಯಾವ ನಾಡಿನಲ್ಲಿ ರಾಮಕೃಷ್ಣ ಪರಮಹಂಸ ವಿವೇಕಾನಂದರಂತಹ ಅಧ್ಯಾತ್ಮ ಮಕುಟ ಮಣಿಗಳು ಉದಯಿಸಿದರೋ, ಯಾವ ನಾಡಿನಲ್ಲಿ ರವೀಂದ್ರನಾಥ ಠಾಗೋರರಂತಹ ಕವಿ ವರೇಣ್ಯರು ಹುಟ್ಟಿಕೊಂಡರೋ, ಅದೇ ನಾಡಿನಲ್ಲಿ ಇಂದು ಹಿಂಸೆ, ರಕ್ತಪಾತ ತಾಂಡವವಾಡುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಇಂದು ಜನರ ಆರೋಗ್ಯ ರಕ್ಷಣೆ ಮಾಡುವ, ಜೀವ ರಕ್ಷಣೆ ಮಾಡುವ ವೈದ್ಯರುಗಳ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆಯಾಗಿದೆ. ವೈದ್ಯರುಗಳಿಗೆ ರಕ್ಷಣೆ ಕೊಡುವ ಬದಲು, ವೈದ್ಯರುಗಳ ಮೇಲೆ ಹಲ್ಲೆ ಮಾಡುವ ವ್ಯಕ್ತಿಗಳಿಗೆ ರಕ್ಷಣೆ ಕೊಡುವ ಸಿದ್ಧತೆಯನ್ನು, ಮನಸ್ಥಿತಿಯನ್ನು ಮಮತಾ ಸರಕಾರ ಹೊಂದಿತ್ತು.
ಇಷ್ಟಕ್ಕೂ ಮಮತಾಬ್ಯಾನರ್ಜಿ ತಾನು ಮುಖ್ಯಮಂತ್ರಿ ಜವಾಬ್ದಾರಿಯನ್ನು ಮರೆತು ತನ್ನ ಮನಃಸ್ಥಿತಿಯಲ್ಲಿ ಹಾಗೂ ನಡವಳಿಕೆಯಲ್ಲಿ ಸಮತೋಲನವನ್ನು ಕಳೆದುಕೊಳ್ಳುವುದಕ್ಕೆ ಪ್ರಮುಖ ಕಾರಣವೇನು? ಅವಳಿಗೆ ಬಿದ್ದ ಅನಿರೀಕ್ಷಿತ ಪೆಟ್ಟುಗಳಿಂದ ಉಂಟಾದ ಹತಾಶೆ ಯಿಂದಾಗಿ ಹೀಗೆ ಆಗುತ್ತಿರಬಹುದೇ? ಒಮ್ಮೆ ಸಿಂಹಾವಲೋಕನ ಮಾಡೋಣವೇ? ಲೋಕಸಭೆಯ ಚುನಾವಣಾ ಪೂರ್ವದ ಆಗುಹೋಗುಗಳನ್ನು ಮನಸ್ಸಿಗೆ ತಂದುಕೊಂಡರೆ ಒಂದಷ್ಟು ಸತ್ಯಗಳು ತೆರೆದುಕೊಳ್ಳಬಹುದು.
ಸಮಾಜದ ಅಭಿಪ್ರಾಯ ಸಮಾಜವಾದಿ ಪಾರ್ಟಿಯ ಬಗ್ಗೆ ಹೇಗಿದೆಯೆಂದರೆ ಅದೊಂದು ದೊಡ್ಡ ಪ್ರಮಾಣದಲ್ಲಿ ಕಾನೂನಿಗೆ ಬೆಲೆಕೊಡದ ಹಾಗೂ ಗುಂಡಾಗಿರಿ ನಡೆಸುವ ಪಕ್ಷ ಎಂಬ ಅಭಿಪ್ರಾಯ ಅಲ್ಲಿನ ಜನತೆಯಲ್ಲಿ ಹಾಗೂ ಭಾರತದ ಸಮಸ್ತ ನಾಗರಿಕರಲ್ಲಿ ಮನೆಮಾಡಿದೆ. ಅದು ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಅಸಮಾಧಾನಗಳ ಆಗರವಾಗಿತ್ತು. ಇಂದು ಅದು ಬಿಜೆಪಿಯು ಅದರ ಮೂಲ ಮತಗಳ ಮುಖ್ಯ ಬಂಡವಾಳವನ್ನು ಕಳೆದುಕೊಂಡಿರುವುದಕ್ಕೆ ಅತ್ಯಂತ ತಳಮಳ ಹಾಗೂ ಕಳವಳಕ್ಕೆ ಈಡಾಗಿದೆ ಎಂಬುದಕ್ಕೆ ಅಲ್ಲಿನ ಮುಖ್ಯಮಂತ್ರಿ ಎಂಬುದನ್ನು ಕೂಡ ವಿವೇಚಿಸದೆ, ಮಮತಾ ಬ್ಯಾನರ್ಜಿ ಯ ಆಂಗಿಕ ಅಭಿವ್ಯಕ್ತಿಗಳಲ್ಲಿ ಹಾಗೂ ಸ್ಥಿಮಿತ ಕಳೆದುಕೊಂಡು ರೇಗುವ, ಆಕ್ರೋಶ ಗೊಳ್ಳುವ ವರ್ತನೆಗಳಲ್ಲಿ ಪ್ರಕಟವಾಗುತ್ತಿದೆ. ಬಿಜೆಪಿಯ ಯೋಜನೆಗಳ ಪಲಾನುಭವಿಗಳಲ್ಲಿ ಅವರ ಮೂಲ ಮತದಾರರು ಅಧಿಕ ಸಂಖ್ಯೆಯಲ್ಲಿದ್ದರು.
ಸಾಮಾನ್ಯ ಮನುಷ್ಯ ಕೂಡ, ದೇಶಕ್ಕೋಸ್ಕರ ಆಯ್ಕೆ ಮಾಡುವುದೆಂದು ತೀರ್ಮಾನ ಮಾಡಿದ ಪ್ರಥಮ ಚುನಾವಣೆ ಇದು ಆಗಿತ್ತು ಎನ್ನಬಹುದು. ಪ್ರಧಾನಿ ಮಟ್ಟಿಗೆ ಮೋದಿಯೇ ಪ್ರಥಮ ಆಯ್ಕೆಯಾದ ಚುನಾವಣೆ ಇದು ಆಗಿತ್ತು. ಈ ಬಾರಿ ಜಾತಿ ಮತ ಭಾಷೆ ಪ್ರಾದೇಶಿಕತೆ ಗಳೆಲ್ಲವನ್ನೂ ಮೀರಿ ನಾಯಕತ್ವಕ್ಕೆ, ಉದ್ದೇಶದಲ್ಲಿನ ಸ್ಪಷ್ಟತೆಗೆ, ಮತ್ತು ಪ್ರಾಮಾಣಿಕತೆಗೆ ಗುರುತಿಸಲ್ಪಟ್ಟಿದ್ದ ಮುಖ ಮೋದಿಯವರದ್ದು ಆಗಿತ್ತು. ಬೇರಾವ ಪಾರ್ಟಿಯಲ್ಲಿ ಕೂಡ ನಾಯಕನ ಹೆಸರು ಹೇಳಿ ಮತ ಕೇಳುವಂತಹ ರಾಷ್ಟ್ರ ಮಟ್ಟದ ನಾಯಕತ್ವ ಇರಲಿಲ್ಲ. ಬಿಜೆಪಿ ಹಾಗೂ ಸಹ ಪಕ್ಷಗಳು ಮೋದಿ ಅವರ ಹೆಸರಲ್ಲಿ ಮತ ಕೇಳಿ ಯಶಸ್ವಿಯಾಗುತ್ತೆ ವೆಂದು ವಿಶ್ವಾಸ ವ್ಯಕ್ತಪಡಿಸಿದ್ದರು ಆದಿತ್ಯನಾಥ್.
ಸಂಘಟನೆಯ ಕಲೆಗಾರಿಕೆ, ತಂತ್ರ ಹಾಗೂ ಯೋಜನೆಗಳು ಬಿಜೆಪಿಯ ನಿಜವಾದ ಶಕ್ತಿ ಆಗಿತ್ತು. ಅಮಿತ್ ಶಾ ಸಂಘಟಿಸುವುದರಲ್ಲಿ ಶಕ್ತಿಯನ್ನು ಒಗ್ಗೂಡಿಸಿದರು. ಹಾಗೂ ಅದನ್ನು ದೃಢಗೊಳಿಸಿ ಬಾಳಿಕೆ ಬರುವಂತೆ ಮಾಡಿದರು. ಚುನಾವಣೆಗೆ ಬಹಳಷ್ಟು ದೀರ್ಘಕಾಲ ಮೊದಲೇ ಈ ಪ್ರಕ್ರಿಯೆಯನ್ನು ಚಾಲನೆಗೊಳಿಸಿದರು. ಎಷ್ಟರಮಟ್ಟಿಗೆ ಎಂದರೆ ರಾಷ್ಟ್ರಾದ್ಯಂತ ಸಶಕ್ತ ಬಿಜೆಪಿ ಕಾರ್ಯಕರ್ತರು ಇಲ್ಲದ ಒಂದೇ ಒಂದು ಬೂತ್ ಕೂಡ ಬಂಗಾಳದಲ್ಲಿ ಇರಲಿಲ್ಲ ಎಂದರೆ ಸಂಘಟನೆಯ ಸಮಷ್ಟಿ ಕ್ರಿಯಾಶೀಲತೆ ಯಾವ ಮಟ್ಟದಲ್ಲಿ ಇದ್ದಿರಬಹುದು ಎಂಬುದನ್ನು ನೀವು ಊಹಿಸಿ.
ಬಂಗಾಳ ಹಾಗೂ ಕೇರಳ ನಿಜಕ್ಕೂ ಬಿಜೆಪಿಗೆ ಬಹು ದೊಡ್ಡ ಸವಾಲೇ ಆಗಿತ್ತು. ಕೇಂದ್ರದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದುದರ ಫಲವಾಗಿ ಜನರಲ್ಲಿ ಬಿಜೆಪಿ ಬಗ್ಗೆ ಋಣಾತ್ಮಕ ಎನ್ನುವಂತಹ ಅಭಿಪ್ರಾಯಗಳು ಅಲ್ಲಿ ಕಂಡು ಬರುವುದಕ್ಕೆ ಅವಕಾಶವಾಗಲಿಲ್ಲ. ಆತ್ಮವಿಶ್ವಾಸ, ಪ್ರಾಮಾಣಿಕತೆ ಶ್ರದ್ಧೆ ಹಾಗೂ ಶಕ್ತಿಗಳೇ ಈ ಚುನಾವಣೆಯಲ್ಲಿ ಬಿಜೆಪಿಯ ಪ್ರಶಸ್ತಿ ಫಲಕವಾಗಿ ಪರಿಣಮಿಸಿತು.
ಮಹಾಘಟಬಂಧನ ಎನ್ನುವ ನಾಮಕರಣದಲ್ಲಿ ಬಂಧನ ಅಥವಾ ಜೈಲು ಇರುವುದು ಅವರಿಗೆ ಗೊತ್ತಾಗಲಿಲ್ಲ. ಪಾಪ! ಆದರೆ ಈ ದುಷ್ಟಕೂಟ ಬಿಡುಗಡೆಯಾಗದೆ ಇರಲಿ ಎಂದು ಜನರು ಆಶಿಸಿರುವುದಕ್ಕೆ ಚುನಾವಣಾ ಪಲಿತಾಂಶ ಇತಿಹಾಸದ ಸಾಕ್ಷಿಯಾಯಿತು. ಪೆಟ್ಟಾದ ಹುಲಿಗಳು ಹೊರಗೆ ಬಂದರೆ “ಮತ್ತು “ಮತ್ತೂ ಅಪಾಯಕಾರಿ ಅಲ್ಲವೇ!? ಏಕೆಂದರೆ ಈ” ಮತ್ತು” ಅವರನ್ನು ಎಂದಿಗೂ ಬಿಡುವುದಿಲ್ಲವಲ್ಲ! ಎಂದರೆ ನೋಟ್ ಅಮಾನ್ಯೀಕರಣ ಸಂದರ್ಭದಲ್ಲಿ ಪೆಟ್ಟಾದ ಹುಲಿಗಳೇ ಘಟಬಂಧನವನ್ನು ರಚಿಸಿದ್ದವು. ಆದರೆ ಈಗ ಅವುಗಳು ತಮ್ಮ ಮುಖವನ್ನು ತಾವೇ ಪರಚಿಕೊಳ್ಳುವಂತಾಯಿತು. ಘಾಜಿಪುರ್ ಎಂಬಲ್ಲಿ ಈ ಘಟಬಂಧನ ಮಾಡಿಕೊಂಡ ಪಕ್ಷಗಳು ಹಾಗೂ ಅವುಗಳ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದರು. ಅದು ಚುನಾವಣಾ ಸಂದರ್ಭದಲ್ಲಿ. ಫಲಿತಾಂಶಕ್ಕೆ ಮೊದಲೇ “ಯಾದವೀ ಕಲಹ “ಆರಂಭಗೊಂಡಿತ್ತು, ಬಂಗಾರದಂತಹ ನಾಡಿನಲ್ಲಿ.! ಪರಸ್ಪರ ಮಂಡೆ ಒಡೆದುಕೊಳ್ಳುವುದಕ್ಕೆ ಆಗಲೇ ಪೂರ್ವತಯಾರಿ ನಡೆಸಿದ್ದವು!
ಗೋ ರಕ್ಷಣೆಯ ಹೆಸರಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿಯುತ್ತಾರೆ ಎಂದು ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಮಾಡಿದ ಕಿರುಚಾಟಗಳು ಯಾವುದೇ ರೀತಿಯಲ್ಲೂ ಬಿಜೆಪಿಗೆ ಮುಳುವಾಗಲಿಲ್ಲ. ಏಕೆಂದರೆ ಅಸ್ತ್ರಕ್ಕೆ ತಕ್ಕ ಪ್ರತಿ ಅಸ್ತ್ರಗಳು ಅದಾಗಲೇ ಬಿಜೆಪಿಯ ಬತ್ತಳಿಕೆಯಲ್ಲಿ ಸಿದ್ಧವಾಗಿದ್ದವು. ಆಗ್ನೇಯಾಸ್ತ್ರವೂ ವರುಣಾಸ್ತ್ರವು ಒಂದೇ ಕಡೆ ಇತ್ತು. ಅಗತ್ಯವಿದ್ದರೆ ಬ್ರಹ್ಮಾಸ್ತ್ರ ಕೂಡ.
ಗೋರಕ್ಷಣೆಯ ಕಾರ್ಯಪ್ರಣಾಳಿಕೆಗಳು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲಿಲ್ಲ ಹಾಗೂ ಗಲಭೆಗಳು ಆಗಲಿಲ್ಲ ಎಂಬುದನ್ನು ಬಿಜೆಪಿಯ ನಾಯಕರು ಅಲ್ಲಿನ ಪ್ರತಿಯೊಬ್ಬ ಪ್ರಜೆಗೂ ಮನವರಿಕೆ ಮಾಡಿಕೊಟ್ಟರು. ಚುನಾವಣೆಯ ಸಂದರ್ಭದಲ್ಲಿ ಉತ್ತರಪ್ರದೇಶದಲ್ಲಿ ಆರು ಹಂತದಲ್ಲೂ ಒಂದೇ ಒಂದು ಗಲಭೆ ನಡೆದಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಪ್ರತಿಹಂತದಲ್ಲೂ ಹಿಂಸಾಚಾರ ನಡೆಯುತ್ತಿತ್ತು. ಬಂಗಾಳದ ಜನತೆ ಇದನ್ನು ಸ್ಪಷ್ಟವಾಗಿ ಗಮನಿಸಹತ್ತಿತು.
ರಾಮಮಂದಿರ ಕಟ್ಟುವ ತೀರ್ಮಾನವನ್ನು ಸಡಿಲಿಸದೆ, ಕೋರ್ಟಿನ ತೀರ್ಪಿಗೆ ಗೌರವ ಕೊಡುತ್ತೇವೆ ಎಂಬ ಆತುರವಿಲ್ಲದ ಬಿಜೆಪಿಯ ನಿಲುವು ಜನರ ಹೃದಯವನ್ನು ಗೆದ್ದಿತ್ತು. ಅಷ್ಟೇ ಅಲ್ಲ, ಕೆಲವೊಬ್ಬರು ವಿರೋಧಿಗಳನ್ನು ಕೂಡ ಗೆದ್ದಿತ್ತು.
ವ್ಯತ್ಯಾಸವಿದ್ದುದು ಎಲ್ಲಿ ಎಂದರೆ, ಎರಡೂ ಸ್ಪರ್ಧಿಗಳ ನಂಬಿಕೆಗಳಲ್ಲಿ ಮಾತ್ರ. ಬಿಜೆಪಿಯವರು ಕೇಂದ್ರ ಸರಕಾರದ ಯೋಜನೆಗಳು ಮತದಾರರನ್ನು ಸೆಳೆಯುತ್ತದೆ ಎಂದು ನಂಬಿದ್ದರೆ, ಘಟ ಬಂಧನದ ಕೂಟವು ಜಾತಿಯ ಲೆಕ್ಕಾಚಾರಗಳು ತಮ್ಮನ್ನು ಪೊರೆಯುತ್ತವೆ ಎಂದು ನಂಬಿದ್ದರು.
ನಿರುದ್ಯೋಗ, ಅನಾವೃಷ್ಟಿಯಿಂದ ಉಂಟಾದ ರೈತರ ಕಷ್ಟ, ಸ್ಥಳೀಯ ವ್ಯಾಪಾರಗಳು ಸೋಲುತ್ತಿದ್ದದ್ದು , ವಾಣಿಜ್ಯ ತೆರಿಗೆಯನ್ನು ಜನರು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದದ್ದು,- ಇದೆಲ್ಲವನ್ನೂ ಮೀರಿ ರಾಷ್ಟ್ರೀಯ ಭಾವನೆಯ ಕಾವು ಹೆಚ್ಚಿತ್ತು ಹಾಗೂ “ಮೋದಿಯವರು ಒಳ್ಳೆಯವರು, ಅವರನ್ನು ನಂಬಬಹುದು ಮತ್ತು ಅವರು ಮತ್ತೊಮ್ಮೆ ಗೆದ್ದು ಬರಬೇಕು. ಆಗ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಅವಕಾಶ ಸಿಗುತ್ತದೆ” ಎಂಬ ಮಾತು ದೇಶದಾದ್ಯಂತ ಪ್ರತಿಯೊಬ್ಬ ನಾಗರಿಕನ ಅಂತರಾಳದಲ್ಲಿ ರಾಷ್ಟ್ರ ಪ್ರೇಮದೊಂದಿಗೆ ಅನುರಣಿಸುತ್ತಿತ್ತು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿ ಹೇಗೆ ಸಂಭವಿಸಿತು? ಆಕೆಯ ಪಕ್ಷ ಹೇಗೆ ಬೆಂದು ಹೋಯಿತು? ಅಲ್ಲಿ ಬಿಜೆಪಿಯ ಅಲೆ ಹೇಗೆ ಸೃಷ್ಟಿಯಾಯಿತು? 1873 ರಲ್ಲಿ ಕಿರಣ್ ಚಂದ್ರ ಬ್ಯಾನರ್ಜಿಯವರ ನಾಟಕ ಬಂಗಾರದಲ್ಲಿ ಭಾರತಮಾತೆಯ ಅದ್ಭುತ ಪರಿಕಲ್ಪನೆಯನ್ನು ಬೆಳೆಸಿತು. ಶತಮಾನಗಳ ನಂತರವೂ ಅದು ಜೀವಂತವಾಗಿದೆ ಮತ್ತು ಎಂದೆಂದಿಗೂ ಜೀವಂತವಾಗಿರುತ್ತದೆ ಎಂಬ ಸತ್ಯವನ್ನು ಈ ಸಲದ ಚುನಾವಣೆ ಸಾಬೀತುಗೊಳಿಸಿತು. ಆ ನಾಟಕದಲ್ಲಿ ಒಬ್ಬಳು ಮಹಿಳೆ ಮತ್ತು ಆಕೆಯ ಪತಿ ಭಾರತಮಾತೆಯಿಂದ ಪ್ರೇರಿತರಾಗಿ ಬ್ರಿಟಿಷ್ ಸರಕಾರದ ವಿರುದ್ಧ ಸಿಡಿದೆದ್ದ ಕಥೆಯನ್ನು ಹೃದಯಕ್ಕೆ ಹೋಗುವಂತೆ ಆಡಿ ತೋರಿಸುತ್ತದೆ. ನಮ್ಮ ನರನಾಡಿಗಳಲ್ಲೂ ಸಂಚರಿಸುತ್ತದೆ. ಮತ್ತು ನಮ್ಮ ಮನಸ್ಸನ್ನು ನಿರಂತರವೂ ಕಾಡುತ್ತಿರುತ್ತದೆ, ಎಚ್ಚರಿಸುತ್ತಾ ಇರುತ್ತದೆ. ಈ ನಾಟಕದಿಂದ ಸ್ಪೂರ್ತಿ ಪಡೆದ ಮಿಡ್ನಾಪುರದಲ್ಲಿನ ನಿವೃತ್ತ ನ್ಯಾಯಾಧೀಶರಾಗಿದ್ದ ಬಂಕಿಮ ಚಂದ್ರ ಚಟರ್ಜಿ “ಆನಂದಮಠ” ಎಂಬ ಕಾದಂಬರಿಯನ್ನು ಬರೆಯುತ್ತಾರೆ. ಅದರಲ್ಲಿ ಭಾರತ್ ಮಾತಾ “ವಂದೇ ಮಾತರಂ” ಹಾಡುತ್ತಾಳೆ. ಬ್ರಿಟಿಷರು ಆ ಪುಸ್ತಕಕ್ಕೆ ನಿಷೇಧ ಹೇರುತ್ತಾರೆ. ಅಷ್ಟೇ ಅಲ್ಲ, ಬ್ರಿಟಿಷರು ಅವನೀಂದ್ರನಾಥ ಟ್ಯಾಗೋರರು ರಚಿಸಿದ ಭಾರತಮಾತೆಯ ಭಾವಚಿತ್ರವನ್ನು ನಿಷೇಧಿಸುತ್ತಾರೆ. ಭಾರತಮಾತೆಯ ಪರಿಕಲ್ಪನೆಯೇ ಆಗ ಅಷ್ಟೊಂದು ಪ್ರಭಾವಶಾಲಿಯಾಗಿತ್ತು. ಅತ್ಯಂತ ನಿಷ್ಠಾವಂತ ಸ್ವಯಂಸೇವಕರನ್ನು ಒಳಗೊಂಡ ಜಗತ್ತಿನ ಪ್ರಬಲ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇಂದಿಗೂ ಕೂಡಾ ಅದೇ ಭಾರತ ಮಾತೆಯೇ ದಿವ್ಯ ಸ್ಪೂರ್ತಿ. ಆದರೆ, 2014ರಲ್ಲಿ, ನರೇಂದ್ರ ಮೋದಿಯವರು ಹೇಳಿದಾಗ ಪಶ್ಚಿಮ ಬಂಗಾಳದ ಜನ ಭಾರತ್ ಮಾತಾ ಎಂಬ ಶಬ್ದವನ್ನು ಉತ್ತರಿಸುವುದಕ್ಕೆ ಸಹ ಹಿಂದೇಟು ಹಾಕಿದರು. ಆಶ್ಚರ್ಯವಲ್ಲವೇ! ಭಾರತಕ್ಕೆ ಸ್ವಾತಂತ್ರ್ಯ ಬಂದು ಕೆಲವು ದಶಕಗಳು ಸಂದು ಹೋದರೂ ಕೂಡ ಭಾರತಮಾತೆಯ ಹೆಸರಿಗಿರುವ ವಿದೇಶಿ ಪ್ರೇರಿತ ಅಸ್ಪೃಶ್ಯತೆ ತೊಲಗಿಯೇ ಇರಲಿಲ್ಲ. ಆದರೆ ಇಂದು ಮನೋಧರ್ಮಗಳು, ಸಂದರ್ಭಗಳು ಪೂರ್ಣ ಪ್ರಮಾಣದಲ್ಲಿ ಪಲ್ಲಟಗೊಂಡಿವೆ. “ಭಾರತ್ ಮಾತಾ” ಹಾಗೂ “ಜೈ ಶ್ರೀ ರಾಮ್” ಪದಗಳು ಅಲ್ಲಿನ ಜನರ ನಾಲಗೆಯಲ್ಲಿ ಲೀಲಾಜಾಲವಾಗಿ ಕುಣಿಯುವಂತಾಗಿದೆ. ಅಲ್ಲಿನ ಜನರ ಹೃದಯದ ಭಾವೋದ್ದೀಪಕವಾಗಿದೆ. ರಾಷ್ಟ್ರೀಯ ಭಾವನೆಗೆ ಪ್ರಚೋದಕವಾಗಿದೆ. ನಮ್ಮ ಪರಂಪರೆ ನೀಡಿದ ಕಲ್ಪವೃಕ್ಷದ ಪರಮ ಫಲವಾಗಿದೆ, ಪ್ರಸಾದವಾಗಿದೆ. ಆದರೆ ಈ ಜೈಶ್ರೀರಾಮ್ ಘೋಷಣೆಗಳಿಂದ ಕೆರಳಿದ ಮಮತಾ ಬ್ಯಾನರ್ಜಿ ಕಾರಿನಿಂದಿಳಿದು ಪಶ್ಚಿಮಮೇದಿನಿ ಪುರದಲ್ಲಿ ಘೋಷಣೆ ಕೂಗುವವರೊಂದಿಗೆ ಜಗಳಕ್ಕೆ ನಿಂತರು. ಅಷ್ಟೇ ಅಲ್ಲ,” ಅವರೆಲ್ಲರೂ ಜೈಶ್ರೀರಾಮ್ ಕೂಗುವುದರ ಮೂಲಕ ತನಗೆ ಅವಮಾನ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.!
ಅಮಿತ್ ಶಾ ರೋಡ್ ಶೋದಲ್ಲಿ ಕಲ್ಕತ್ತಾದಲ್ಲಿ ಮೇ 14 ರಂದು, ಆರೆಸ್ಸೆಸ್ ಹಾಗೂ ತೃಣಮೂಲದ ವಿದ್ಯಾರ್ಥಿ ವಿಭಾಗದವರಿಗೆ ಪರಸ್ಪರ ಹೊಯ್ ಕೈ ಉಂಟಾಯಿತು. ತೃಣಮೂಲ ಕಾರ್ಯಕರ್ತರು ರೋಡ್ ಶೋ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಆಗ ಮೆರವಣಿಗೆ ಕಲ್ಕತ್ತಾ ವಿಶ್ವವಿದ್ಯಾಲಯ ತಲುಪಿತ್ತು. ಅವರು ಸೃಷ್ಟಿಸಿದ ದೊಂಬಿಗಳಿಂದಾಗಿ, ವಿದ್ಯಾಸಾಗರ ಕಾಲೇಜಿನ ಗೇಟು ಮುರಿದು ಈಶ್ವರಚಂದ್ರ ವಿದ್ಯಾಸಾಗರ ಪ್ರತಿಮೆಗೆ ಹಾನಿಯಾಯಿತು. ಮಮತಾ ಬ್ಯಾನರ್ಜಿ “ಅದನ್ನು ಸರಿಪಡಿಸುವುದಿಲ್ಲ” ಎಂಬ ಹೇಳಿಕೆ ಕೊಟ್ಟರು! ಆದರೆ ಚುನಾವಣಾ ಸಂದರ್ಭದಲ್ಲೂ ಕೂಡ ತಾನು ಹೋದಲ್ಲೆಲ್ಲಾ ಕೇಸರಿ ದ್ವಜ ಹಿಡಿದುಕೊಂಡ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಹೋರಾಟಗಾರರನ್ನು ಬಂಗಾಳದ ಬೀದಿಬೀದಿಗಳಲ್ಲಿ ಕಣ್ತುಂಬಿಸಿಕೊಳ್ಳಬೇಕಾಯಿತು.!
ಇದರಿಂದ ಆಕೆ ರೇಗಿ ಹೋಗಿದ್ದರೂ, ಇದು ಪಶ್ಚಿಮ ಬಂಗಾಳದ ಜನಪ್ರಿಯ ಸ್ಥಿತಿ ಆಗುತ್ತಾ ಇದೆ ಎಂದು ಮನವರಿಕೆ ಮಾಡಿಕೊಂಡ ಆಕೆ, ತನ್ನ ಕಾರ್ಯಕರ್ತರಿಗೆ ತುಸು ಹಿಂದುತ್ವವನ್ನು ಆವಾಹಿಸಿಕೊಂಡು, ಹಿಂದುತ್ವದ ಛದ್ಮವೇಷ ಧರಿಸುವಂತೆ ರಹಸ್ಯ ಸೂಚನೆಗಳನ್ನು ಕೊಟ್ಟಳು. ಆದರೆ ಅವೆಲ್ಲಾ ಬದಲಾವಣೆಗಳು 2014ರ ಚುನಾವಣೆಯ ನಂತರದಲ್ಲಿ, ಕೂಡಲೇ ಆರಂಭಗೊಂಡು ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿತ್ತು. ಆದರೆ ಮಮತಾ ಬ್ಯಾನರ್ಜಿಗೆ ತನ್ನ ಅತಿಯಾದ ಆತ್ಮವಿಶ್ವಾಸದ ಹಾಗೂ ಅಹಂಕಾರದ ಕಾರಣದಿಂದ ಅದು ಅರಿವಿಗೆ ಬರಲಿಲ್ಲ. ಅಹಂಕಾರವೆಂಬುದು ವಿವೇಕವನ್ನು ಹೊಸಕಿ ಹಾಕುತ್ತದೆ ಎಂದು ವಿವೇಕಿಗಳು ಹೇಳಿಲ್ಲವೇ? ಯಾರಿಗೇ ಆದರೂ, ಯಾವುದೇ ಪಕ್ಷದಲ್ಲಿದ್ದರೂ ಕೂಡ. ಆಕೆಗೆ ತನ್ನ ಅಹಂಕಾರದ ಮೇಲೆ, ಅಂದರೆ ತಾನು ಶಕ್ತಿಯೆಂದು ತಿಳಿದುಕೊಂಡ ಅಹಂಕಾರದ ಮೇಲೆ, ಅತಿಯಾದ ನಂಬಿಕೆ ಇತ್ತು! ಅಲ್ಲಿ ಬಿಜೆಪಿಯ ಕೊಂಡಿಯಾಗಿದ್ದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತರಾದ ಕೈಲಾಸ್ ವಿಜಯ ವರ್ಗಿಯ ಹಾಗೂ ಶಿವಪ್ರಕಾಶ್ ಎಂಬವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳನ್ನು ಪಶ್ಚಿಮಬಂಗಾಳದಲ್ಲಿ ಬೇರೂರುವಂತೆ ಮಾಡಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳವನ್ನು ಸಶಕ್ತ ಗೊಳಿಸಿದರು.
ಕಳೆದ 5 ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 3000 ಶಾಖೆಗಳನ್ನು ಅಲ್ಲಿ ಆರಂಭಿಸಿದರು. ಅನೇಕ ಶಾಲೆಗಳನ್ನು ಹಳ್ಳಿ ಪ್ರದೇಶಗಳಲ್ಲಿ ಆರಂಭಿಸಿದರು. ವಿದ್ಯಾರ್ಥಿಗಳನೇಕರು ಶಾಖೆಗಳಲ್ಲಿ ಭಾಗವಹಿಸಲು ತೊಡಗಿದರು. ಇಷ್ಟೆಲ್ಲಾ ಆದರೂ ಸುಬ್ರತಾ ಮುಖರ್ಜಿ ಎಂಬ ಮಮತಾ ಬ್ಯಾನರ್ಜಿ ಆಪ್ತ ಸಲಹೆಗಾರ” ಬಂಗಾಳವು ಧರ್ಮದ ಆಧಾರದಲ್ಲಿ ನಡೆಸುವ ರಾಜಕೀಯವನ್ನು ಸ್ವೀಕರಿಸುವುದಿಲ್ಲ” ಎಂದು ಪರೋಕ್ಷವಾಗಿ ಬಿಜೆಪಿಯ ಪರಾಭವದ ಭವಿಷ್ಯ ನುಡಿದಿದ್ದ! ಆದರೆ ಬಿಜೆಪಿಯು ಅಲ್ಲಿನ 74000 ಮತದಾನದ ಭೂತಗಳಲ್ಲಿ ನಿರ್ವಹಣೆಗೆ ಬಹಳ ಹಿಂದೆಯೇ ನಾಯಕರನ್ನು ಅಲ್ಲಿಗೆ ಕರೆಸಿಕೊಂಡಿತ್ತು. ಒಡಿಶಾದ ಸುರೇಶ್ ಪೂಜಾರಿ ಎಂಬ ಕಾರ್ಯದರ್ಶಿಯನ್ನು ಬಂಗಾಳದ ಪಶ್ಚಿಮ ಜಿಲ್ಲೆಗಳಿಗೆ ನೇಮಿಸಿತ್ತು ಹಾಗೂ ರಾಮಲಾಲ್ ಎಂಬವರು ತಳಮಟ್ಟದಲ್ಲಿ ಸಂಘ ಪರಿವಾರದೊಂದಿಗೆ ಹೊಂದಿಸಲು ಮತ್ತೆ ಮತ್ತೆ ಭೇಟಿ ನೀಡುತ್ತಿದ್ದರು. ರಾಷ್ಟ್ರೀಯ ವ್ಯವಸ್ಥಾಪಕರಾದ ಅರವಿಂದ ಮೆನನ್ ಚುನಾವಣಾ ತಯಾರಿಯ ಜವಾಬ್ದಾರಿ ತೆಗೆದುಕೊಂಡು, ಅಮಿತ್ ಶಾಗೆ ಅಲ್ಲಿನ ತಯಾರಿಯ ನೇರ ವರದಿಯನ್ನು ನೀಡುತ್ತಿದ್ದರು. ಅದೇ ಸಂದರ್ಭಕ್ಕೆ ಸರಿಯಾಗಿ ತೃಣಮೂಲದಿಂದ ಪರಿತ್ಯಜಿಸಿ ಬಂದ ಮುಕುಲ್ ರಾಯ್ ಚುನಾವಣಾ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸುವಲ್ಲಿ ಅರವಿಂದ ಮೆನನ್ಗೆ ನೆರವಾದರು. ಮೆನನ್ ಉತ್ತರ ಬಂಗಾಳವನ್ನು ಮೊದಲಾಗಿ ಕೇಂದ್ರೀಕರಿಸಿ, ಡಾರ್ಜಿಲಿಂಗ್ನಿಂದ ಮಾಲ್ಡಾವರೆಗೆ ಬಿಜೆಪಿ ಹಾಗೂ ಸಂಘವನ್ನು ಜೋಡಿಸಿಕೊಂಡು ಪ್ರಚಾರ ನಡೆಸಿದ್ದರು.
ಉತ್ತರ ಬಂಗಾಳದ ರಾಯಿಗಂಜ್ ಪ್ರದೇಶದಲ್ಲಿ 47 ಶೇಕಡಾ ಮತದಾರರು ಹಿಂದೂಗಳು, 53 ಶೇಕಡಾ ಮತದಾರರು ಮುಸ್ಲಿಮರು. ಪೋಲೀಸ್ ಗುಂಡೇಟಿಗೆ ಇಬ್ಬರು ಎಬಿವಿಪಿ ಕಾರ್ಯಕರ್ತರು ಸೆಪ್ಟೆಂಬರ್ನಲ್ಲಿ ಮೃತರಾದಾಗ ಅಲ್ಲಿನ ಹಿಂದೂಗಳು ಆಕ್ರೋಶಗೊಂಡಿದ್ದರು. ಮತ್ತೊಂದು ಹಿಂಸಾಚಾರದಲ್ಲಿ ಮತ್ತೆರಡು ಸಾವುಗಳು ಸಂಭವಿಸಿದವು, ಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರ ಸ್ಥಾನಗಳು ತೆರವಾದಾಗ ಆ ಜಾಗಕ್ಕೆ ಇಬ್ಬರು ಉರ್ದು ಶಿಕ್ಷಕರನ್ನು ಅಲ್ಲಿನ ರಾಜ್ಯ ಸರ್ಕಾರ ನೇಮಿಸಿದ ಕಾರಣಕ್ಕೆ. ಸ್ಥಳೀಯರು ಮುಂದಕ್ಕೆ ತನಿಖೆಗೆ ಅಗತ್ಯ ಬೀಳಬಹುದೆಂದು, ಆ ಕಾರಣಕ್ಕೆ ಶವಗಳನ್ನು ದಹಿಸದೇ, ಹೂಳುವುದಕ್ಕೆ ನಿರ್ಧರಿಸಿದರು. ಸುಜನ ದಾಸ್ ಎಂಬ ಸ್ಥಳೀಯ ಬಿಜೆಪಿ ನಾಯಕರು ಇದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ರಾಯಿಗಂಜ್ನ ಬಿಜೆಪಿ ಅಭ್ಯರ್ಥಿಯಾಗಿದ್ದ ದೇವಶ್ರೀ ಚೌದ್ರಿ ” ಯಾರೇ ಆದರೂ ನೀವು ಮತ ಚಲಾಯಿಸುವುದನ್ನು ತಡೆಯಲು ಬಂದರೆ ಅವರನ್ನು ಲಾಠಿಯಿಂದ ಓಡಿಸಿ” ಎಂದು ಬಜಿತ್ ಪುರದಲ್ಲಿ ನಡೆದ ಜಾಥಾ ಒಂದರಲ್ಲಿ ಹೇಳಿದ್ದರು. ” ದೀದಿ ನಮಗೆ ಅನುಕೂಲವಾಗಿಲ್ಲ , ಅವಳು ಹಿಂದೂಗಳನ್ನು ನಂಬುವುದಿಲ್ಲ. ರಾಜ್ಯದ ವಿಧಾನಸಭಾ ಚುನಾವಣೆಗಳಲ್ಲಿ ನಮ್ಮನ್ನು ಮತದಾನ ಮಾಡಲು ಬಿಡುವುದಿಲ್ಲ. ಇದರ ವಿರುದ್ಧ ನಾವು ಹೋರಾಡುವುದಕ್ಕೆ ನಿರ್ಧರಿಸಿದ್ದೇವೆ. ಬಜರಂಗದಳ ಸಹಕರಿಸುತ್ತಿದೆ” ಎಂದು ಅಲ್ಲಿನ ಬಾಗ್ದಾಮೂರ್ ಹಳ್ಳಿಯ ಜಾನಪದ ಹಾಡುಗಾರ ರತನ್ ದಾಸ್ ಹೇಳಿದ್ದರು. ಇದು ನೋಟು ಅಮಾನ್ಯೀಕರಣ, ತೆರಿಗೆ ನೀತಿ – ಇವು ಯಾವುದರಿಂದಲೂ ಅಲ್ಲಿನ ಕಾರ್ಮಿಕ ವರ್ಗ ತಳಮಳಗೊಂಡಿರಲಿಲ್ಲವೆಂದು ಸಾಬೀತುಪಡಿಸುತ್ತದೆ. ಧಾರ್ಮಿಕ ಭಾವನೆಯು ಹಾಗೂ ರಾಷ್ಟ್ರೀಯ ಭಾವನೆಯ ಬೇರುಗಳು ಸೃಷ್ಟಿಸಿದ ವಿಶಾಲ ವೃಕ್ಷದ ನೆರಳಿನ ಅಡಿಯಲ್ಲಿ ಎಲ್ಲದರ ಬೇಗೆಯನ್ನು ಮರೆಯುವಂತೆ ಆಯಿತು. ಎಲ್ಲಾ ಕಷ್ಟನಷ್ಟಗಳನ್ನು ಜನತೆ ಮರೆತು ಹೊಸ ಯುಗಕ್ಕೆ ನಾಂದಿ ಹಾಡುವಂತೆ ಅವರನ್ನು ಚಿತಾವಣೆಗೊಳಿಸಿತ್ತು. ಈ ರೀತಿಯ ಪರಿವರ್ತನೆಯ ಭಾವನೆಗಳು, ಹೊಸ ದಾರಿಯ ಯೋಚನೆಗಳು ಅಲ್ಲಿನ ಜನರಲ್ಲಿ ಎಂದೋ ಕಾಣಿಸಿಕೊಳ್ಳಲಾರಂಭಿಸಿದ್ದವು. ಅದರಲ್ಲೂ, 2018ರ ಪಂಚಾಯತ್ ಚುನಾವಣೆಗಳಲ್ಲಿ ತೃಣ ಮೂಲದ ಕಾರ್ಯಕರ್ತರು ಅಲ್ಲಿನ ಹಿಂದೂಗಳ ಮತದಾರರ ಗುರುತಿನ ಚೀಟಿಗಳನ್ನು ಬಲಾತ್ಕಾರವಾಗಿ ಕಸಿದುಕೊಂಡಾಗ ಜ್ವಾಲಾಮುಖಿಯಾಗಿ ಒಳಗೊಳಗೆ ಕುದಿಯಲಾರಂಭಿಸಿತ್ತು. ಇಂತಹ ಸಂಕಟಮಯ ಸಂದರ್ಭಗಳಲ್ಲಿ, ಬಿಜೆಪಿ ನೀಡಿದ ಬೆಂಬಲ ಹಾಗೂ ಸಹಕಾರಗಳು ಅಲ್ಲಿನ ಜನರ ಹೃದಯ ಸಾಮ್ರಾಜ್ಯವನ್ನು ಗೆಲ್ಲಲು ಕಾರಣವಾಯಿತು. ಬಿಜೆಪಿ ಆಗಲೇ ಗೆದ್ದು ಆಗಿತ್ತು. ಎಲ್ಲಾ ಪ್ರಯತ್ನಗಳು ಮತಗಳಾಗಿ ಪರಿವರ್ತನೆಗೊಳ್ಳುವುದು ಎಂದು ದೇವಶ್ರೀ ಚೌದರಿ ನಂಬಿದ್ದರು. ಇರುವ ಒಟ್ಟು ಏಳು ಕ್ಷೇತ್ರಗಳಲ್ಲಿ, ಆರು ಕ್ಷೇತ್ರಗಳಲ್ಲಿ ಹೆಚ್ಚಿನ ಅಂತರದಿಂದ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. “ಬಿಜೆಪಿ ಮತ್ತು ಅದರ ಮಿತ್ರ ಸಂಘಟನೆಗಳು ಲಾಠಿಗಳನ್ನು ನೀಡಿದ್ದರಿಂದ, ಈಗ ನಾವು ಮರಳಿ ಹೊಡೆಯುವ ಶಕ್ತಿ ಹೊಂದಿರುವುದರಿಂದ, ನಮಗೆ ಪ್ರೇರಣೆ ನೀಡಿದೆ” ಎಂದು ಬಂಗಾಳದ ಬಹಳ ಜನ ಹೊಗಳುತ್ತಿದ್ದರು.
ಸಿ ಪಿ ಐ ಸಂಸದ ಮಹಮ್ಮದ್ ಸಲೀಂ, ತೃಣಮೂಲದ ಕನ್ನಯ್ಯ ಲಾಲ್, ಕಾಂಗ್ರೆಸ್ನ ದೀಪಾ ದಾಸ್ ಮುನ್ಶಿ – ಇವರುಗಳ ವಿರುದ್ಧ ತಮ್ಮದೇ ಮೇಲುಗೈ ಇದೆಯೆಂಬ ವಿಶ್ವಾಸದಲ್ಲಿ ಇದ್ದರು. ಮೊದಲಿನಿಂದಲೂ ಮಮತಾ ಪರವಾಗಿ ಮತ ಚಲಾಯಿಸುತ್ತಿದ್ದ ಮುಸ್ಲಿಮರು ಕೂಡ ದೀದಿಯ ವಿರುದ್ಧ ಸಿಡಿದೆದ್ದರು.
ಬಿಜೆಪಿಯ ದೃಢ ಹಾಗೂ ನಿಷ್ಠುರವಾದ ನಡೆಗಳಿಂದ ಇತರ ಪಕ್ಷಗಳಿಗೂ ಅನುಕೂಲವಾಗಿತ್ತು 2014ರ ಚುನಾವಣೆಗಳಲ್ಲಿ ತೃಣಮೂಲದ ದ್ವೇಷ ರಾಜಕಾರಣದಿಂದ ಪ್ರಚಾರ ನಡೆಸಲಾಗದೇ ಇದ್ದ ಪಕ್ಷಗಳಿಗೂ ಕೂಡ, ಈ ಸಲ ಪ್ರಚಾರ ನಡೆಸುವುದಕ್ಕೆ ಆದರೂ ಸಾಧ್ಯವಾಯಿತು. ಸಿಪಿಎಂ ನ ತಯುಬ್ ಇಸ್ಲಾಂ ಅವರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತೃಣಮೂಲದವರು ಮುಸ್ಲಿಂ ಮತಗಳನ್ನು ಬಾಚುವುದಕ್ಕಾಗಿ ಬಾಂಗ್ಲಾದೇಶದ ನಟ ಫೆರ್ಡಸ್ ಅಹಮದ್ ಅವನನ್ನು ಕರೆಸಿಕೊಂಡರು. ಅವರ ನಿರೀಕ್ಷೆಗೆ ವಿರುದ್ಧವಾಗಿ ಈ ನಡೆಯು ಹಿಂದೂಗಳಲ್ಲಿ ಮತ್ತಷ್ಟು ಕೂಡ ಒಗ್ಗಟ್ಟಾಗಬೇಕು ಎಂಬ ಇಚ್ಛಾಶಕ್ತಿಯನ್ನು ದೃಢಗೊಳಿಸುವ ಅದ್ಭುತ ಪರಿಣಾಮವನ್ನು ಉಂಟುಮಾಡಿತು. ನಮ್ಮನ್ನು ಯಾರಾದರೂ ಹಣಿಯಲು ಪ್ರಯತ್ನಿಸಿದರೆ ಆಗ ನಾವು ಮತ್ತಷ್ಟು ಶಕ್ತಿಯುತರಾಗಿ ತಿರುಗಿ ಬೀಳುವುದಿಲ್ಲವೇ ? ಹಾಗೆ. ಹೆಚ್ಚಿನ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಮಮತಾಳ ಜನಪ್ರಿಯತೆ ತಗ್ಗುತ್ತ ಹೋಗಿತ್ತು. ಕಾಂಗ್ರೆಸ್ ಮತ್ತು ತೃಣಮೂಲಗಳಿಗೆ ಹಂಚಿಹೋದ ಮುಸ್ಲಿಮರ ಮತಗಳಿಂದ ಬಿಜೆಪಿಗೆ ಲಾಭವೇ ಆಯಿತು, ಹಿಂದುಗಳ ಏಕೀಕರಣಕ್ಕೂ ಅನುಕೂಲವಾಯಿತು.
ಈ ವರ್ಷದ ಪಶ್ಚಿಮ ಬಂಗಾಳದ ಎಲ್ಲೆಡೆಗಳಲ್ಲಿ ಆಚರಿಸಲ್ಪಟ್ಟ ರಾಮನವಮಿಯ ವೈಭವವನ್ನು ಗಮನಿಸಿದರೆ ಕೇಸರಿಕರಣದ ಪ್ರಭಾವ ನಿಚ್ಚಳವಾಗಿ ಕಂಗೊಳಿಸುತ್ತಿತ್ತು. ಸಿಲಿಗುರಿ ಪ್ರದೇಶದಲ್ಲಿ ಲಕ್ಷಾಂತರ ಜನರು ಬೀದಿಗಿಳಿದರು, ರಾಮನವಮಿ ಆಚರಿಸಲೆಂದು ಮಾತ್ರವಲ್ಲ ಮಮತಾಳ ಆಡಳಿತವನ್ನು ಅಂತ್ಯಗೊಳಿಸುವುದಕ್ಕಾಗಿ ಎಂಬಂತಿತ್ತು. ಅರವಿಂದ ಮೆನನ್ ಎಂಬವರು ,”ಯಾವುದೇ ನಿಶ್ಚಿತ ಪಂಗಡಕ್ಕೆ ಒಳಗೊಂಡ ಪಾರ್ಟಿಗೆ ಸೇರಿದವರು ನಾವಲ್ಲ ಎಂಬ ಘೋಷಣೆಯನ್ನು ಮಾಡಿದರು”. “ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕೆಲಸಮಾಡುತ್ತಿದೆ ಬಂಗಾಳವು ಪರಿವರ್ತನೆಗಾಗಿ ಕಾದುಕುಳಿತಿದೆ” ಎಂಬ ಸಂದೇಶವನ್ನು ಕೊಟ್ಟರು. ರಾಮನವಮಿಯ ದಿನ ರಾಮನ ಘೋಷಣೆಯೊಂದಿಗೆ ಕಲ್ಕತ್ತಾದ ಬೀದಿಬೀದಿಗಳಲ್ಲಿ ಕೇಸರಿ ವಸ್ತ್ರ ತೊಟ್ಟ ಕಾರ್ಯಕರ್ತರ ದೊಡ್ಡ ದಂಡೇ ನೆರೆದಿತ್ತು.
ಈ ಎಲ್ಲಾ ಹೆಜ್ಜೆಗಳು, ಪಶ್ಚಿಮ ಬಂಗಾಳದ ಲೋಕಸಭೆಯ ವಿಜಯಯಾತ್ರೆಯ ಸಾಧನಾಪಥದಲ್ಲಿ ಹನುಮಂತನ ಸಾಗರೋಲ್ಲಂಘನದ ರೀತಿಯಲ್ಲಿ ನಡೆದ ಹೆಜ್ಜೆಗಳು ಆಗಿದ್ದವು. ಸವಾಲುಗಳು ಬಿಜೆಪಿಯನ್ನು ಪಶ್ಚಿಮ ಬಂಗಾಳದಲ್ಲಿ ಗಟ್ಟಿಗೊಳಿಸುವುದಕ್ಕೆ ಬಂದಿದೆಯೇನೋ ಎಂಬಂತೆ ಇತ್ತು. ಮುಂದಕ್ಕೆ ಭವಿಷ್ಯದಲ್ಲಿ ಕೇರಳದಲ್ಲೂ ಇದೇ ರೀತಿಯ, ಊಹಿಸುವುದಕ್ಕೆ ಸಾಧ್ಯವಿಲ್ಲದ ಪರಿವರ್ತನೆಯ ಸಾಧ್ಯತೆಯ ಕನಸನ್ನು ಕಾಣಬಹುದೇನೋ, ಒಂದು ಘಟ್ಟದಲ್ಲಿ ಅದು ನನಸಾಗಬಹುದು ಎಂಬಂತೆ ಪಶ್ಚಿಮಬಂಗಾಳದ ಜಯವು ಮಾರ್ಗದರ್ಶಿ ಆಗಿದೆ.
✍ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.