ಬೆಂಗಳೂರು: ಮತದಾನದಲ್ಲಿ ಅಕ್ರಮದ ಆರೋಪ ಮಾಡುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನವರು ಬಿಹಾರದಲ್ಲಿ ಮತದಾರರಪಟ್ಟಿ ವಿಶೇóಷ ಸಮಗ್ರ ಪರಿಷ್ಕರಣೆಯನ್ನು ಯಾಕೆ ವಿರೋಧಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶ- ರಾಜ್ಯದಲ್ಲಿ ಅಕ್ರಮಗಳು ನಡೆದಿವೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ; ನಕಲಿ ಮತದಾರರು ಆ ಪಟ್ಟಿಯಲ್ಲಿದ್ದರು ಎಂದು ಅನೇಕ ವಿಷಯಗಳನ್ನು ನಿನ್ನೆ ರಾಹುಲ್ ಗಾಂಧಿಯವರು ದೇಶದ ಜನತೆಯ ಮುಂದೆ ತೆರೆದಿಟ್ಟಿದ್ದಾರೆ ಎಂದು ವಿವರಿಸಿದರು.
ರಾಹುಲ್ ಗಾಂಧಿಯವರ ಹೇಳಿಕೆಯ ನಂತರದಲ್ಲಿ ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ಸಿನ ಹಿರಿಯ ನಾಯಕರು ಮೂರ್ಖರಂತೆ ಮಾತನಾಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಲೋಕಸಭೆಯನ್ನು ವಿಸರ್ಜನೆ ಮಾಡಬೇಕು ಎಂದು ಮನಬಂದಂತೆ ಮೂರ್ಖರಂತೆ ಮಾತನಾಡಿದ್ದಾರೆ ಎಂದರು.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಚುನಾವಣಾ ಅಕ್ರಮಗಳಾಗಿವೆ ಎಂದು ಆರೋಪಿಸಿದ್ದು, ಈ ವಿಷಯದಲ್ಲಿ ಈಗಾಗಲೇ ಅರವಿಂದ ಲಿಂಬಾವಳಿಯವರಿಗೆ ತಿಳಿಸಿದ್ದೇವೆ. ಅವರು ಪತ್ರಿಕಾಗೋಷ್ಠಿ ಮೂಲಕ ಸಂಪೂರ್ಣ ಮಾಹಿತಿ ನೀಡುತ್ತಾರೆ. ಅಕ್ರಮ ಮತದಾರರು, ನಕಲಿ ಮತದಾರರ ವಿಷಯ ಇಟ್ಟುಕೊಂಡೇ ಚುನಾವಣಾ ಆಯೋಗ ಮತಪಟ್ಟಿ ವಿಶೇಷ ಪರಿಷ್ಕರಣೆ ಮಾಡುತ್ತದೆ. ಅಕ್ರಮದ ಆರೋಪ ಮಾಡುವ ರಾಹುಲ್ ಗಾಂಧಿಯವರು, ಕಾಂಗ್ರೆಸ್ಸಿನವರು ಬಿಹಾರದಲ್ಲಿ ಅದನ್ನು ಯಾಕೆ ವಿರೋಧಿಸುತ್ತಾರೆ ಎಂದು ಪ್ರಶ್ನಿಸಿದರು.
2005ರಲ್ಲಿ ಡಾ.ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿಯಾಗಿದ್ದಾಗ, ಮಮತಾ ಬ್ಯಾನರ್ಜಿ ಅವರು ಸಂಸದರಾಗಿದ್ದು, ಎನ್ಡಿಎಯಲ್ಲಿದ್ದರು. ಆಗ ಲೋಕಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಲದಲ್ಲಿ ಬಾಂಗ್ಲಾ ದೇಶದಿಂದ ಬಂದ ಅಕ್ರಮ ವಲಸಿಗರು ಆ ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿದ್ದಾರೆ; ಇದರ ಕುರಿತು ಚರ್ಚೆ ಆಗಲಿ ಎಂದು ಪ್ರಸ್ತಾಪಿಸಿದ್ದರು. ಸ್ಪೀಕರ್ ಸೋಮನಾಥ ಚಟರ್ಜಿ ಅವರು, ಮಮತಾ ಬ್ಯಾನರ್ಜಿ ಅವರ ಮುಖದ ಮೇಲೆ ಪೇಪರ್ ಬಿಸಾಡಿ, ಅವರನ್ನು ಅಮಾನತು ಮಾಡಿದ್ದರು ಎಂದು ವಿಜಯೇಂದ್ರ ಗಮನ ಸೆಳೆದರು. ರಾಹುಲ್ ಗಾಂಧಿಯವರಿಗೆ ಇದು ಮರೆತು ಹೋಗಿದೆಯೇ ಎಂದು ಕೇಳಿದರು.
ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 16 ಸೀಟ್ ಪಡೆಯಲಿದೆ ಎಂದು ಎಲ್ಲ ಸರ್ವೇಗಳು ಹೇಳಿದ್ದವು ಎಂದು ರಾಹುಲ್ ಗಾಂಧಿಯವರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ 16 ಸ್ಥಾನ ಪಡೆಯಲಿದೆ ಎಂದು ಯಾವ ಸರ್ವೇಗಳೂ ಹೇಳಿಲ್ಲ ಎಂದು ತಿಳಿಸಿದರು. 16 ಸೀಟು ಗೆಲ್ಲಲಿದೆ ಎಂದು ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ಸಿನ ಮೂರ್ಖರು ಹೇಳಿರಬೇಕು ಎಂದರು.
ಹಿಂದೆ ಬಿಜೆಪಿ 2019ರಲ್ಲಿ ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಿದ್ದಾಗ ರಾಜ್ಯದಿಂದ 25 ಸಂಸದರನ್ನು ಬಿಜೆಪಿ ಕಳಿಸಿಕೊಟ್ಟಿತ್ತು. ಈ ಬಾರಿ ಬಿಜೆಪಿ- ಜೆಡಿಎಸ್ ಸೇರಿ ಕಡಿಮೆ ಸ್ಥಾನ ಪಡೆದಿವೆ. ಹಾಗಿದ್ದರೆ ಅಕ್ರಮ ಆಗಿದೆ ಎಂದು ಬಿಜೆಪಿ ಹೇಳಬೇಕೇ ಎಂದು ಕೇಳಿದರು. ಸಂಜೆ 5ರಿಂದ 6 ಗಂಟೆವರೆಗೆ ಅತಿ ಹೆಚ್ಚು ಮತದಾನದ ಕುರಿತು ರಾಹುಲ್ ಗಾಂಧಿ ಹೇಳಿದ್ದಾರೆ. ಹಾಗಿದ್ದರೆ ಅವರೇನು ಮೊದಲ ಬಾರಿ ಸಂಸದರಾಗಿದ್ದಾರಾ? ಬಿಸಿಲು ಕಡಿಮೆ ಇರುವ ಕಾರಣ ದೇಶಾದ್ಯಂತ ಸಂಜೆ 5ರಿಂದ 6 ಗಂಟೆವರೆಗೆ ಬಿರುಸಿನ ಮತದಾನ ನಡೆಯುವುದು ಸಹಜ. ಎಲ್ಲ ಪಕ್ಷದವರು ಮತದಾರರ ಮನೆಗೆ ಹೋಗಿ ಮತ ಹಾಕಿಸಲು ಶ್ರಮಿಸುತ್ತಾರೆ ಎಂದು ವಿವರಿಸಿದರು.
ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದವರು, ಸೋಲಿನ ಹತಾಶೆಯಿಂದ ಮಾತನಾಡಿದ್ದಾರೆ. ಇವತ್ತು ರಾಹುಲ್ ಗಾಂಧಿಯವರು ಬೆಂಗಳೂರಿಗೆ ಬಂದು ಆರ್ಭಟ ಮಾಡಿ ಹೋಗಲಿದ್ದಾರೆ. ಇದು ಸೋಲಿನ ಹತಾಶೆಯಿಂದ ಮತದಾರರಿಗೆ ಮಾಡುವ ಅಪಮಾನವೇ ಹೊರತು ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ನುಡಿದರು. ಚುನಾವಣೆ ಮುಗಿದು ಫಲಿತಾಂಶ ಬಂದು 45 ದಿನಗಳೊಳಗೆ ಲಿಖಿತವಾಗಿ ಆಕ್ಷೇಪ ಸಲ್ಲಿಸಬೇಕಿತ್ತು. ಬೆಂಗಳೂರು ಸೆಂಟ್ರಲ್ನ ಸೋತ ಕಾಂಗ್ರೆಸ್ ಅಭ್ಯರ್ಥಿ ಪ್ರಶ್ನೆ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷವು ಇವತ್ತು ಮೂರ್ಖರ ಪಕ್ಷವಾಗಿದೆ ಎಂದು ವಿಜಯೇಂದ್ರ ಅವರು ಪ್ರಶ್ನೆಗೆ ಉತ್ತರಿಸಿದರು.
ಮಹದೇವಪುರದ ಕುರಿತು ಮಾತನಾಡುವ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಗರಿಷ್ಠ ಅಲ್ಪಸಂಖ್ಯಾತರಿರುವ ಚಾಮರಾಜಪೇಟೆ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟು ನಕಲಿ ಮತದಾರರಿದ್ದಾರೆ ಎಂದು ಪರಿಶೀಲಿಸಲಿ; ಆ ಕುರಿತು ಚರ್ಚೆಗೆ ಬರಲಿ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಸಂಸತ್ತಿನಲ್ಲಿ ಎದುರಿಸಲು ತಾಕತ್ತಿಲ್ಲ; ಜ್ವಲಂತ ಸಮಸ್ಯೆ ಕುರಿತು ಇವರು ಮಾತನಾಡುವುದಿಲ್ಲ ಎಂದು ಟೀಕಿಸಿದರು. ಪ್ರಧಾನಿ ಆಗುವ ರಾಹುಲ್ ಗಾಂಧಿಯವರ ಕನಸು ಕನಸಾಗಿಯೇ ಇರಲಿದೆ ಎಂದು ನುಡಿದರು. ಇವರ ಹೇಳಿಕೆಯಲ್ಲಿ- ನಿಲುವಿನಲ್ಲಿ ದ್ವಂದ್ವ ಇದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.