ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾಗಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 24ನೇ ಭಾನುವಾರದ ಶ್ರಮದಾನವನ್ನು ಅಳಕೆ- ಡೊಂಗರಕೇರಿ ಪರಿಸರದಲ್ಲಿ ಆಯೋಜಿಸಲಾಗಿತ್ತು. ದಿನಾಂಕ 19-5-2019 ರಂದು ಬೆಳಿಗ್ಗೆ 7-30 ಕ್ಕೆ ಕುದ್ರೋಳಿ ನೂತನ ಮಾರುಕಟ್ಟೆಯ ಮುಂಭಾಗದಲ್ಲಿ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಉದ್ಯಮಿ ರಮೇಶ್ ಮಲ್ಯ ಶ್ರಮದಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕುದ್ರೋಳಿ ಗಣೇಶ್ ಮಾತನಾಡಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿ ಭಾನುವಾರ ಬೃಹತ್ ಸಂಖ್ಯೆಯ ಸ್ವಯಂಸೇವಕರು ಸ್ವಚ್ಛತೆಗಾಗಿ ದುಡಿಯುತ್ತಿರುವುದೇ ಒಂದು ಸೋಜಿಗ. ಮಂಗಳೂರಿನ ಪ್ರತಿಯೊಬ್ಬರು ಜವಾಬ್ದಾರಿಯಿಂದ ವರ್ತಿಸಬೇಕಿದೆ. ನಮ್ಮ ನಮ್ಮ ವಠಾರವನ್ನು, ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು ಅತ್ಯಂತ ಅವಶ್ಯಕ. ಸ್ವಚ್ಛತೆಯಲ್ಲಿ ಬೃಹತ್ ಕಾರ್ಯವನ್ನು ಮಾಡಬೇಕೆಂದಿಲ್ಲ ಅದರೆ ಎಲ್ಲರೂ ತಮ್ಮಿಂದಾದ ಅಳಿಲು ಸೇವೆ ಸಲ್ಲಿಸಿದರೇ ಅದುವೇ ಮಹಾನ್ ಕಾರ್ಯವಾಗಿ ಪರಿವರ್ತಿತವಾಗುತ್ತದೆ. ಸಣ್ಣಪುಟ್ಟ ಕೆಲಸಗಳನ್ನು ಶ್ರದ್ದೆಯಿಂದ ನಿರ್ವಹಿಸಿದಾಗ ಯಶಸ್ಸು ದೊರೆಯುತ್ತದೆ. ಯಾವ ಕೆಲಸವೂ ಕೀಳಲ್ಲ. ಮಂಗಳೂರು ಇಂದು ಸ್ವಚ್ಛತೆಯಲ್ಲಿ ದಾಪುಗಾಲು ಹಾಕುತ್ತಿದ್ದರೆ ಅದಕ್ಕೆ ರಾಮಕೃಷ್ಣ ಮಿಷನ್ನಿನ ಕಾರ್ಯಕರ್ತರ ಅಪಾರ ಶ್ರಮ ಹಾಗೂ ಬದ್ಧತೆಗಳು ಕಾರಣವಾಗಿವೆ. ಇವರಿಗೆಲ್ಲ ನಾಗರಿಕ ಸಮಾಜದ ಪರವಾಗಿ ಕೃತಜ್ಞತೆಗಳು ಸಲ್ಲಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮನಪಾ ಪರಿಸರ ಅಭಿಯಂತರ ಮಧು ಮನೋಹರ್, ಡಾ. ಧನೇಶ ಕುಮಾರ್, ಹರೀಶ್ ಪ್ರಭು, ಮಾಧವ ಸುವರ್ಣ, ಜಯರಾಜ್ ಜಿ ಎನ್, ಭರತ್ ಸದಾನಂದ, ತಿಲಕ ರಾಜೇಶ್, ಜಯಶ್ರೀ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಸ್ವಚ್ಛತೆ: ಸ್ವಯಂಸೇವಕರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ನಿರ್ದೇಶನದಂತೆ ಪ್ರಮುಖವಾಗಿ ಎರಡು ಸ್ಥಳಗಳಲ್ಲಿ ಶ್ರಮದಾನವನ್ನು ಹಮ್ಮಿಕೊಂಡರು. ಮೊದಲಿಗೆ ಅಳಕೆ ಪರಿಸರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಮಾರುಕಟ್ಟೆ ಹಾಗೂ ಅದರ ಮುಂಭಾಗವನ್ನು ಸ್ವಚ್ಛಗೊಳಿಸಿದರು. ಮಾರುಕಟ್ಟೆ ಎದುರಿನ ಜಾಗೆಯಲ್ಲಿ ಅನೇಕ ದಿನಗಳಿಂದ ಕಸ, ತ್ಯಾಜ್ಯ, ಕಲ್ಲು, ಮಣ್ಣುಗಳ ರಾಶಿ ಹಾಗೂ ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲಗಳು ಒಟ್ಟು ಅಲ್ಲಿನ ಪರಿಸರಕ್ಕೆ ಕಪ್ಪುಚುಕ್ಕೆಯಂತ್ತಿತ್ತು. ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸ್ವಯಂ ಸೇವಕರು ಹಾಗೂ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿನ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮುಕುಂದ ಕಾಮತ್, ಸೌರಜ್ ಮಂಗಳೂರು, ರವಿ ಕೆ. ಆರ್., ಮಸಾಹಿರೊ, ಕಿರಣ ಫರ್ನಾಂಡಿಸ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದರು. ಮತ್ತೊಂದು ತಂಡ ಡೊಂಗರಕೇರಿ ಭೋಜರಾವ್ ಲೇನ್ನಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು. ಭೋಜರಾವ್ ಲೇನ್ನಲ್ಲಿರುವ ಮೂಲೆಯೊಂದರಲ್ಲಿ ಪ್ರತಿದಿನವೂ ರಾಶಿರಾಶಿ ತ್ಯಾಜ್ಯವನ್ನು ಸಾರ್ವಜನಿಕರು ತಂದು ಸುರಿಯುತ್ತಿದ್ದರು. ಪರಿಣಾಮವಾಗಿ ಇಡೀ ರಸ್ತೆ ಹಾಗೂ ಅಲ್ಲಿನ ಪರಿಸರ ಅಸಹ್ಯ ಹುಟ್ಟಿಸುತ್ತಿತ್ತು. ಈ ದಿನದ ಶ್ರಮದಾನದಲ್ಲಿ ಸಂದೀಪ್ ಕೋಡಿಕಲ್ ನೇತೃತ್ವದ ಸ್ವಯಂಸೇವಕರ ತಂಡ ಒಂದು ಟಿಪ್ಪರ್ನಷ್ಟು ತ್ಯಾಜ್ಯವನ್ನು ಅಲ್ಲಿಂದ ತೆಗೆದು ಸ್ವಚ್ಛಗೊಳಿಸಿದ್ದಾರೆ. ಇದೀಗ ಆ ಜಾಗೆಯಲ್ಲಿ ಅಲಂಕಾರಿಕ ಗಿಡಗಳುಳ್ಳ ಕುಂಡಗಳನ್ನಿರಿಸಲಾಗಿದೆ. ಇನ್ನು ಆ ಸ್ಥಳವನ್ನು ಸ್ವಚ್ಛ ಸ್ಥಳವಾಗಿ ಕಾಪಾಡಲು ಸ್ವಚ್ಛತಾ ಯೋಧರ ಪಡೆ ಕಣ್ಗಾವಲಿಡಲಿದೆ. ಕೊನೆಯದಾಗಿ ಇದೇ ಪರಿಸರದಲ್ಲಿರುವ ಬಸವನಗುಡಿ ರಸ್ತೆ, ನೆಹರು ಅವೆನ್ಯೂ ರಸ್ತೆ ಹಾಗೂ ಅಳಕೆ 2ನೇ ಅಡ್ದರಸ್ತೆ ಎಂಬ ಮೂರು ನಾಮಫಲಕಗಳನ್ನು ನವೀಕರಿಸಲಾಗಿದೆ. ಅಭಿಯಾನದ ಪ್ರಮುಖ ದಿಲ್ರಾಜ್ ಆಳ್ವ ಶ್ರಮದಾನದ ನೇತೃತ್ವ ವಹಿಸಿಕೊಂಡಿದ್ದರು.
80 ಸ್ಥಳಗಳಲ್ಲಿದ್ದ ಗಿಡಗಳ ನಿರ್ವಹಣೆ: ಸುಮಾರು 80 ತ್ಯಾಜ್ಯ ಬಿಸಾಡುವ ಸ್ಥಳಗಳನ್ನು ಗುರುತಿಸಿ, ಸ್ವಚ್ಛಗೊಳಿಸಿ ಆ ಸ್ಥಳದಲ್ಲಿ ಹೂಗಿಡಗಳನ್ನು ಹಾಗೂ ಅಲಂಕಾರಿಕ ಗಿಡಗಳ ಕುಂಡಗಳನ್ನು ಇಟ್ಟು ಆ ಜಾಗೆಯಲ್ಲಿ ಯಾರು ಕಸ ಮತ್ತೆ ಸುರಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಕಡುಬೇಸಿಗೆಯ ಈ ದಿನಗಳಲ್ಲಿ ಕೆಲವು ಗಿಡಗಳು ಸೊರಗುತ್ತಿರುವ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ನಗರಾದ್ಯಂತ ಸ್ವಚ್ಛ ಮಂಗಳೂರು ಕಾರ್ಯಕರ್ತರು ಅಲ್ಲಲ್ಲಿ ಇಟ್ಟಿರುವ ಗಿಡಗಳಿಗೆ ನಿತ್ಯವೂ ನೀರನ್ನೆರೆದು ಪೋಷಿಸುತ್ತಿದ್ದಾರೆ. ಹಾಗೆಯೇ ಒಣಗಿರುವ ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ನೆಡುವ ಕಾರ್ಯ ಮಾಡುತ್ತಿದ್ದಾರೆ. ಮಧುಚಂದ್ರ ಆಡ್ಯಂತಾಯ, ಕಮಲಾಕ್ಷ ಪೈ, ವಿಠಲದಾಸ್ ಪ್ರಭು, ಸರಿತಾ ಶೆಟ್ಟಿ, ಕೋಡಂಗೆ ಬಾಲಕೃಷ್ಣ ನಾಕ್, ಶಿವು ಪುತ್ತೂರು ಮತ್ತಿತರ ಸ್ವಯಂಸೇವಕರು ಅಲ್ಲಲ್ಲಿ ಇರುವ ಗಿಡಗಳ ಸಂರಕ್ಷಣೆ ಮಾಡುತ್ತಿದ್ದಾರೆ.
50 ವೇಸ್ಟ್ಬಿನ್ಗಳ ವಿತರಣೆ: ಕಳೆದ ವಾರ ಚಾಲನೆ ನೀಡಲಾಗಿದ್ದ ಕಸದ ಬುಟ್ಟಿಗಳ ವಿತರಣೆಗೆಯ ಮುಂದುವರೆದ ಭಾಗವಾಗಿ ಕಸದ ಬುಟ್ಟಿಗಳನ್ನು ನಗರದ ಸಣ್ಣ ವ್ಯಾಪಾರಿಗಳಿಗೆ ವಿತರಿಸುವ ಕಾರ್ಯ ಮುಂದುವರೆದಿದೆ. ನಾಗುರಿ, ಪಡೀಲ್, ಲ್ಯಾಂಡ್ ಲಿಂಕ್ಸ್, ಕುದ್ರೋಳಿ, ಅಳಕೆ ಪ್ರದೇಶದ ಆಯ್ದ ಅಂಗಡಿಗಳಿಗೆ ಕಸದ ಬುಟ್ಟಿಗಳನ್ನು ವಿತರಿಸಲಾಯಿತು. ಜೊತೆಗೆ ಸ್ವಚ್ಛತೆಯ ಬಗ್ಗೆ ಅವರಿಗೆ ಅರಿವು ಮೂಡಿಸಲಾಯಿತು. ತದನಂತರ ಗ್ರಾಹಕರಿಗೂ ಕಸವನ್ನು ಬುಟ್ಟಿಗೆ ಹಾಕುವಂತೆ ಮನವೊಲಿಸಬೇಕಾಗಿ ಅಂಗಡಿ ಮಾಲೀಕರಿಗೆ ವಿನಂತಿಸಲಾಯಿತು. ಪುನೀತ್ ಪೂಜಾರಿ ಹಾಗೂ ಸುಧೀರ್ ವಾಮಂಜೂರು ಕಸದ ಬುಟ್ಟಿಗಳನ್ನು ವಿತರಿಸಿದರು. ಈ ಸ್ವಚ್ಛತಾ ಅಭಿಯಾನದ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.