ನಮೋ ನಮಃ..
ಇಲ್ಲಿಯವರೆಗೆ ಸಂಸ್ಕೃತದ ಫಲ, ಪುಷ್ಪ, ವೃಕ್ಷ, ಛಾತ್ರೋಪಕರಣ, ಮನೆಯ ವಸ್ತುಗಳು ಮುಂತಾದ ಸರಳ ಶಬ್ದಗಳನ್ನು ಕಲಿತಿದ್ದೀರಿ. ಸಂಸ್ಕೃತಭಾಷೆಯ ವ್ಯವಹಾರಕ್ಕೆ ಈ ಶಬ್ದಗಳು ಬಹಳ ಮುಖ್ಯವಾಗಿವೆ. ಪುನಃ ಪುನಃ ಓದಿ, ಅಭ್ಯಾಸ ಮಾಡಿ.
ನೀವೆಲ್ಲರೂ ಸಂಸ್ಕೃತವನ್ನು ಆಸಕ್ತಿಯಿಂದ ಕಲಿಯುತ್ತಿದ್ದೀರಿ ಎಂದುಕೊಳ್ಳುತ್ತೇನೆ. ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವವನು ಬುದ್ದಿವಂತ. ಸಂಸ್ಕೃತವನ್ನು ಕಲಿಯುವೆನೆಂದು ಸಂಕಲ್ಪ ಮಾಡಿದ್ದೀರಿ. ಆ ಸಂಕಲ್ಪವನ್ನು ನೆರವೇರಿಸುವಲ್ಲಿ ನೀವು ಕಟಿಬದ್ಧರಾಗಿರಬೇಕು.
ಈಗ ಸಂಸ್ಕೃತಭಾಷೆಯಲ್ಲಿ ಪರಿಚಯ ಮಾಡಿಕೊಳ್ಳುವುದು ಹೇಗೆಂಬುದನ್ನು ನೋಡೋಣ…
ಮಮ ಪರಿಚಯಃ – ನನ್ನ ಪರಿಚಯ
ಸಂಸ್ಕೃತದಲ್ಲಿ “ತವ ನಾಮ ಕಿಮ್” ಅಂದರೆ ನಿನ್ನ ಹೆಸರೇನು ? ಎಂದರ್ಥ.
“ತವ ನಾಮ ಕಿಮ್ ?” ಎಂಬ ಪ್ರಶ್ನೆ ಪುಲ್ಲಿಂಗ ಹಾಗೂ ಸ್ತ್ರೀಲಿಂಗ ಶಬ್ದಗಳಿಗೆ ಅನ್ವಯಿಸುತ್ತದೆ.
ಉದಾಹರಣೆಗೆ..
ಪ್ರಶ್ನೆ : ತವ ನಾಮ ಕಿಮ್ ?
ಉತ್ತರ : ಮಮ ನಾಮ ಮಾಧವಃ
ಪ್ರಶ್ನೆ – ತವ ನಾಮ ಕಿಮ್ ?
ಉತ್ತರ – ಮಮ ನಾಮ ಸೀತಾ
ಹಾಗೇ ಬೇರೆ ವಿಧದಲ್ಲೂ “ನಿನ್ನ ಹೆಸರೇನು ?” ಎಂದು ಕೇಳಬಹುದು..
ಪ್ರಶ್ನೆ : “ಭವತಃ ನಾಮ ಕಿಮ್ ?” – ನಿನ್ನ ಹೆಸರೇನು..?
ಇದು ಕೇವಲ ಬಾಲಕರಿಗೆ/ಪುರುಷರಿಗೆ..
ಉತ್ತರ : ಮಮ ನಾಮ ಹರೀಶಃ/ಸತೀಶಃ/ಹರಿಃ/ಗುರುಃ/ವಿವೇಕಃ/ನವೀನಃ ಹೀಗೆ…
ಪ್ರಶ್ನೆ : “ಭವತ್ಯಾಃ ನಾಮ ಕಿಮ್ ?” ನಿನ್ನ ಹೆಸರೇನು..?
ಇದು ಕೇವಲ ಬಾಲಕಿಯರಿಗೆ/ಮಹಿಳೆಯರಿಗೆ…
ಉತ್ತರ : ಮಮ ನಾಮ ಲತಾ/ಮಾಲಾ/ಕವಿತಾ/ಗೌರೀ/ಸರಸ್ವತೀ ಹೀಗೆ..
ಹಾಗೇ ನಿಮ್ಮ ವೃತ್ತಿಯ ಪರಿಚಯವನ್ನೂ ಮಾಡಿಕೊಳ್ಳಿ…
ಅಹಂ ಅಧ್ಯಾಪಕಃ
ಅಹಂ ಗೃಹಿಣೀ
ಅಹಂ ಅಭಿಯಂತಾ – ಇಂಜನೀಯರ್
ಅಹಂ ವೈದ್ಯಃ
ಅಹಂ ಚಾಲಕಃ
ಅಹಂ ನಿರ್ವಾಹಕಃ
ಅಹಂ ಕಾರ್ಮಿಕಃ
ಅಹಂ ವಿದ್ಯಾರ್ಥೀ
ಅಹಂ ವಿದ್ಯಾರ್ಥಿನೀ ಹೀಗೆ ಹೀಗೆ….
ಅಭ್ಯಾಸ
ಸತೀಶಃ – ಭವತಃ ನಾಮ ಕಿಮ್ ?
ರಮೇಶಃ – ಮಮ ನಾಮ ರಮೇಶಃ | ಅಹಂ ಅಧ್ಯಾಪಕಃ ಅಸ್ಮಿ |
ಸತೀಶಃ – ಭವತಃ ನಾಮ ಕಿಮ್ ?
ರಮೇಶಃ – ಮಮ ನಾಮ ರಮೇಶಃ | ಅಹಮ್ ಅಭಿಯಂತಾ ಅಸ್ಮಿ |
ಸತೀಶಃ – ಭವತ್ಯಾಃ ನಾಮ ಕಿಮ್ ?
ಲತಾ – ಮಮ ನಾಮ ಲತಾ | ಅಹಂ ಗೃಹಿಣೀ ಅಸ್ಮಿ |
ಲತಾ – ಭವತ್ಯಾಃ ನಾಮ ಕಿಮ್ ?
ಮಾಲಾ – ಮಮ ನಾಮ ಮಾಲಾ | ಅಹಂ ವಿದ್ಯಾರ್ಥಿನೀ ಅಸ್ಮಿ |
ಸಂಸ್ಕೃತವ್ಯಾಕರಣಸ್ಯ ಪರಿಚಯಃ (ಸಂಸ್ಕೃತವ್ಯಾಕರಣದ ಪರಿಚಯ)
ಸಂಸ್ಕೃತದಲ್ಲಿ ಮೂರು ಲಿಂಗಗಳಿವೆ..
ಪುಲ್ಲಿಂಗ , ಸ್ತ್ರೀಲಿಂಗ ಹಾಗೂ ನಪುಂಸಕಲಿಂಗ..
ಪುಲ್ಲಿಂಗ – ಪುಲ್ಲಿಂಗ ಶಬ್ದಗಳ ಕೊನೆಯಲ್ಲಿ ಸಾಮಾನ್ಯವಾಗಿ ವಿಸರ್ಗ : ಅಂದರೆ ಎರಡು ಬಿಂದುಗಳಿರುತ್ತವೆ..
ಉದಾಹರಣೆಗೆ – ರಾಮಃ , ಹರಿಃ , ಮುಕುಂದಃ , ಕವಿಃ , ಹರೀಶಃ , ಗುರುಃ , ಸಾಧುಃ ಹೀಗೆ…
ಸ್ತ್ರೀಲಿಂಗದ ಶಬ್ದಗಳ ಅಂತಿಮ ಅಕ್ಷರಗಳು “ಆ” ಅಥವಾ “ಈ” ಆಗಿರುತ್ತವೆ
ಉದಾಹರಣೆಗೆ : ಸುಧಾ ಎಂದು ಬರೆಯುವಾಗ , ಸ್+ಉ+ಧ್+ಆ ಇಲ್ಲಿ ಅಂತಿಮ ವರ್ಣ(ಅಕ್ಷರ) – ಆ
ಗೌರೀ ಎಂದು ಬರೆಯುವಾಗ , ಗ್+ಔ+ರ್+ಈ ಅಂತಿಮ ವರ್ಣ – ಈ
ಸಾಮಾನ್ಯವಾಗಿ , ಆ ಮತ್ತು ಈ ಅಂತ್ಯದಲ್ಲಿರುವ ಪದಗಳು ಸ್ತ್ರೀಲಿಂಗ ಪದಗಳು..
ಉದಾಹರಣೆಗೆ – ಮಾಲಾ , ನದೀ , ಸುಮುಖೀ , ಜಯಂತೀ , ರಮಾ , ಸೀತಾ , ಪಾರ್ವತೀ, ಮರುದ್ವತೀ ಇತ್ಯಾದಿಗಳು..
ನಪುಂಸಕಲಿಂಗ-
ಸಾಮಾನ್ಯವಾಗಿ ಪದದ ಕೊನೆಯಲ್ಲಿ ಅರ್ಧಮಕಾರ(ಮ್) ಎಂದಿದ್ದರೆ ಅದು ನಪುಂಸಕಲಿಂಗ..
ಉದಾಹರಣೆಗೆ – ವನಮ್ , ಫಲಮ್ , ಕುಸುಮಮ್ , ಪತ್ರಮ್ , ಪುಷ್ಪಮ್ , ಉದ್ಯಾನಮ್ ಇತ್ಯಾದಿಗಳು….
ಅಭ್ಯಾಸಃ
ಈ ಪದಗಳನ್ನು ಪುಲ್ಲಿಂಗ , ಸ್ತ್ರೀಲಿಂಗ , ನಪುಂಸಕಲಿಂಗಗಳಾಗಿ ವಿಂಗಡಿಸಿ –
ಸಿಂಹಃ , ಅಶ್ವಃ , ಲತಾ , ನಯನಮ್ , ಕುಬೇರಃ , ಚಂದ್ರ , ಭಾನುಃ , ಅಧ್ಯಾಪಿಕಾ ,
ಶಸ್ತ್ರಮ್ , ಮುಖಮ್ , ವಾಟಿಕಾ , ಗುಹಾ , ಗ್ರೀವಾ , ವಸುಧಾ , ಗೋಪೀ , ಗೀತಾ ,
ವಸ್ತ್ರಮ್ , ಗೃಹಮ್ , ಪುಸ್ತಕಮ್ , ಮಾರ್ಗಃ , ಮಂಡೋದರೀ ಇತ್ಯಾದಿ.
सुभाषितम् – ಸುಭಾಷಿತಮ್
नरस्याभरणं रूपम्
रूपस्याभरणं गुणः ।
गुणस्याभरणं ज्ञानम्
ज्ञानस्याभरणं क्षमा ॥
“ನರಸ್ಯಾಭರಣಂ ರೂಪಮ್
ರೂಪಸ್ಯಾಭರಣಂ ಗುಣಃ |
ಗುಣಸ್ಯಾಭರಣಂ ಜ್ಞಾನಮ್
ಜ್ಞಾನಸ್ಯಾಭರಣಂ ಕ್ಷಮಾ ||”
ಭಾವಾರ್ಥಃ – ಮನುಷ್ಯನಿಗೆ ರೂಪವೇ (ಸೌಂದರ್ಯ) ಆಭರಣ. ರೂಪಕ್ಕೆ ಸದ್ಗುಣಗಳೇ ಆಭರಣ. ಸದ್ಗುಣಗಳಿಗೆ ಜ್ಞಾನವೇ ಆಭರಣ. ಜ್ಞಾನಕ್ಕೆ ಕ್ಷಮೆಯೇ ಆಭರಣ. ಮನುಷ್ಯನಿಗೆ ಕೇವಲ ರೂಪವೊಂದಿದ್ದರೆ ಸಾಲದು, ಸದ್ಗುಣ, ಜ್ಞಾನ ಹಾಗೂ ಕ್ಷಮಾಗುಣಗಳೂ ಸಹ ಇರಬೇಕೆಂದು ಈ ಸುಭಾಷಿತ ತಿಳಿಸುತ್ತದೆ.
“ಶುಭಂ ಭೂಯಾತ್”
ಪುನಃ ಮಿಲಾಮಃ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.