ತೆಹ್ರಾನ್ : ಇರಾನಿನ ಚಾಬಾಹರ್ ಬಂದರನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಇರಾನ್ ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳು ಹೆಚ್ಚಿನ ಮಹತ್ವ ಪಡೆಯಲಿದೆ.
ಇರಾನಿನ ದಕ್ಷಿಣ ಭಾಗದಲ್ಲಿರುವ ಚಾಬಾಹರ್ ಬಂದರನ್ನು ಅಭಿವೃದ್ಧಿ ಪಡಿಸಲು ಸುಮಾರು 500 ದಶಲಕ್ಷ ಡಾಲರ್ ವೆಚ್ಚದ ಒಪ್ಪಂದವನ್ನು ಭಾರತವು ಇರಾನಿನೊಂದಿಗೆ ಮಾಡಿಕೊಂಡಿದೆ. ಈ ಬಂದರಿನ ಒಪ್ಪಂದದಿಂದ ಅಫ್ಘಾನಿಸ್ಥಾನ ಮತ್ತು ಯುರೋಪ್ಗೆ ಭಾರತ ನೇರ ಸಂಪರ್ಕವನ್ನು ಸಾಧಿಸಬಹುದು. ಅದೂ ಕೂಡಾ ಪಾಕಿಸ್ಥಾನದ ಯಾವುದೇ ಸಹಾಯವಿಲ್ಲದೇ. ಇರಾನಿನೊಂದಿಗೆ ಭೂಮಾರ್ಗ ಮತ್ತು ಸಮುದ್ರಮಾರ್ಗದ ಮೂಲಕ ಸರಕುಗಳನ್ನು ಸಾಗಿಸಲು ಚಾಬಾಹರ್ ಬಂದರ್ ಅಭಿವೃದ್ಧಿ ಒಪ್ಪಂದ ಅತೀ ಮಹತ್ವದ್ದಾಗಿದೆ. ಈಗಾಗಲೇ ಅಫ್ಘಾನಿಸ್ಥಾನಕ್ಕೆ ಸರಕುಗಳನ್ನು ಸಾಗಿಸಲು ಪಾಕಿಸ್ಥಾನ ಅವಕಾಶ ನೀಡುತ್ತಿಲ್ಲ. ಇದೀಗ ಪಾಕಿಸ್ಥಾನದ ಸಹಾಯವಿಲ್ಲದೆ ಉಭಯ ದೇಶಗಳ ನಡುವಿನ ವ್ಯವಹಾರಗಳು ಸರಾಗವಾಗಲಿದೆ.
ಭಾರತ ಮತ್ತು ಇರಾನಿನ ನಡುವೆ ಸಾರಿಗೆ ಕಾರಿಡಾರ್, ರೈಲು ಮಾರ್ಗ ನಿರ್ಮಾಣ, ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ, ಸಾಂಸ್ಕೃತಿಕ ವಿಚಾರ ವಿನಿಮಯ ಸೇರಿದಂತೆ 12 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದ್ದು, ಭಯೋತ್ಪಾದನೆ ಮಟ್ಟ ಹಾಕುವ ಕುರಿತು ಎರಡೂ ದೇಶಗಳು ಒಮ್ಮತ ವ್ಯಕ್ತಪಡಿಸಿವೆ.
ಅಟಲ್ ಬಿಹಾರಿ ವಾಜಪೇಯಿ ಅವರ ನಂತರ 15 ವರ್ಷಗಳ ಬಳಿಕ ತೆರಳಿದ ದೇಶದ ಮೊದಲ ಪ್ರಧಾನಿಯಾಗಿ ಮೋದಿಯವರು ಇರಾನಿಗೆ ಭೇಟಿ ನೀಡಿದ್ದು, ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಮಾತನಾಡಿರುವ ಮೋದಿ, ಇದು ಹೊಸ ಅಧ್ಯಾಯದ ಪ್ರಾರಂಭ. ಉಭಯ ದೇಶಗಳ ಇತಿಹಾಸ ಸೃಷ್ಟಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಉಭಯ ದೇಶಗಳ ನಡುವೆ ಶಾಂತಿ ಮತ್ತು ಸಮೃದ್ಧಿಯು ಹೆಚ್ಚಿ, ಇದು ಜನರ ಜೀವನದಲ್ಲಿ ಧನಾತ್ಮಕ ರೀತಿಯಲ್ಲಿ ಪ್ರಭಾವ ಬೀರಿ ಆರ್ಥಿಕ ಸಂಬಂಧಗಳನ್ನು ಗಾಢವಾಗಿಸುತ್ತದೆ ಎಂದಿದ್ದಾರೆ.
ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ಮಾತನಾಡಿ, ಭಾರತದೊಂದಿಗಿನ ಒಪ್ಪಂದಗಳಿಂದ ಉಭಯ ದೇಶಗಳ ಆರ್ಥಿಕ ಸಂಬಂಧ ಗಟ್ಟಿಯಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.