
ತಮಿಳುನಾಡಿನ ಟುಟಿಕೋರಿನ್ (ಈಗ ಅಧಿಕೃತವಾಗಿ ತೂತುಕುಡಿ ಎಂದು ಕರೆಯಲಾಗುತ್ತದೆ) ನಲ್ಲಿರುವ ಕೋರಲ್ ಮಿಲ್‌ನ ಕಾರ್ಮಿಕರು ಫೆಬ್ರವರಿ 27, 1908 ರಂದು ಉತ್ತಮ ವೇತನಕ್ಕಾಗಿ ಹೋರಾಟ ನಡೆಸಿ ಕೈಗಾರಿಕೆಯಿಂದ ಹೊರನಡೆದರು. ಮುಷ್ಕರ ಮುಗಿಯುವ ಹೊತ್ತಿಗೆ, ಅವರು ಬ್ರಿಟಿಷ್ ರಾಜ್‌ನ ವಿಶ್ವಾಸವನ್ನೇ ಅಲುಗಾಡಿಸಿದ್ದರು. ಬ್ರಿಟಿಷ್ ಒಡೆತನದ ಹತ್ತಿ ಗಿರಣಿಯೊಳಗೆ ಪ್ರತಿಭಟನೆಯಾಗಿ ಪ್ರಾರಂಭವಾದದ್ದು ಶೀಘ್ರದಲ್ಲೇ ಟುಟಿಕೋರಿನ್‌ನಾದ್ಯಂತ ಕಾರ್ಮಿಕರು, ವಕೀಲರು, ವ್ಯಾಪಾರಿಗಳು, ರೈತರು ಮತ್ತು ಸಾಮಾನ್ಯ ನಾಗರಿಕರನ್ನು ಒಂದುಗೂಡಿಸಿತು. ಆ ಒಗ್ಗೂಡುವಿಕೆಯನ್ನು ಸಾಧ್ಯವಾಗಿಸಿದ ವ್ಯಕ್ತಿ ವಿ.ಒ. ಚಿದಂಬರಂ ಪಿಳ್ಳೈ (ವಿ.ಒ.ಸಿ. ಎಂದೂ ಕರೆಯುತ್ತಾರೆ) – ಒಬ್ಬ ಪ್ರಸಿದ್ಧ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ವಕೀಲ ಮತ್ತು ತಮಿಳುನಾಡಿನ ಉದ್ಯಮಿ – ಅವರ ನಾಯಕತ್ವವು ಸ್ಥಳೀಯ ಕಾರ್ಮಿಕ ವಿವಾದವನ್ನು ವಸಾಹತುಶಾಹಿ ಸರ್ಕಾರಕ್ಕೆ ಬಿಕ್ಕಟ್ಟಾಗಿ ಪರಿವರ್ತಿಸಿತು.
ಕೋರಲ್ ಮಿಲ್‌ನ ಮುಖ್ಯ ಗುಮಾಸ್ತ ಸುಬ್ರಹ್ಮಣ್ಯ ಶಿವ, ಕಾರ್ಖಾನೆಯ ಕಠಿಣ ವಾಸ್ತವಗಳನ್ನು ಚಿದಂಬರಂ ಪಿಳ್ಳೈ ಅವರಿಗೆ ರಹಸ್ಯವಾಗಿ ವಿವರಿಸಿದರು. 14 ಗಂಟೆಗಳ ಕೆಲಸದ ದಿನಗಳು, ಬಾಲ ಕಾರ್ಮಿಕ ಪದ್ಧತಿ, ಕಡಿಮೆ ವೇತನ, ಕಳಪೆ ನೈರ್ಮಲ್ಯ, ವೈದ್ಯಕೀಯ ಆರೈಕೆಯ ಅನುಪಸ್ಥಿತಿ ಮತ್ತು ಕಾರ್ಮಿಕ ಕಾನೂನುಗಳ ನಿಯಮಿತ ನಿರ್ಲಕ್ಷ್ಯದ ಬಗ್ಗೆ ತಿಳಿಸಿದರು. ಸುಮಾರು 1,700 ಕಾರ್ಮಿಕರು, ಅವರಲ್ಲಿ ಸುಮಾರು 59 ಪ್ರತಿಶತ ಹದಿಹರೆಯದವರು, ಪ್ರತಿದಿನ ಈ ಅಮಾನವೀಯ ಪರಿಸ್ಥಿತಿಗಳನ್ನು ಸಹಿಸಿಕೊಂಡಿದ್ದರು. ಅವರ ದುಃಸ್ಥಿತಿಯನ್ನು ಅರಿತುಕೊಂಡು ಚಿದಂಬರಂ ಪಿಳೈ ಅವರು ತಮ್ಮ ಹೋರಾಟವನ್ನು ಕೈಗೆತ್ತಿಕೊಂಡು, ವ್ಯಾಪಕ ಬೆಂಬಲವನ್ನು ಪ್ರೇರೇಪಿಸಿದ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಶೀಘ್ರದಲ್ಲೇ, ವ್ಯಾಪಾರಿಗಳು, ವಕೀಲರು, ಭೂಮಾಲೀಕರು ಮತ್ತು ರೈತರು ಕಾರ್ಮಿಕರ ಜೊತೆ ಸೇರಿ ಸಮಾವೇಶಗಳನ್ನು ನಡೆಸಿದರು.
ಫೆಬ್ರವರಿ 27, 1908 ರಂದು ಮುಷ್ಕರದ ದಿನ ಬಂದೇ ಬಿಟ್ಟಿತ್ತು, ಆಗ ಕಾರ್ಮಿಕರು ತಮ್ಮ ಉಪಕರಣಗಳನ್ನು ತ್ಯಜಿಸಿ ಮುಷ್ಕರ ನಡೆಸಿದರು. “ವಂದೇ ಮಾತರಂ” ಮತ್ತು “ಸ್ವರಾಜ್ಯಂ” ನಂತಹ ಘೋಷಣೆಗಳನ್ನು ಎತ್ತಿದ್ದರು, ಅವರ ಬೇಡಿಕೆಗಳು ನೇರವಾಗಿದ್ದವು: ಕಡಿಮೆ ಕೆಲಸದ ಸಮಯ, ಹೆಚ್ಚಿನ ವೇತನ ಮತ್ತು ಉತ್ತಮ ಚಿಕಿತ್ಸೆ. ಬ್ರಿಟಿಷ್ ಆಡಳಿತವು ಈ ಬೆಳವಣಿಗೆಗಳನ್ನು ಬಹಳ ಹತ್ತಿರದಿಂದ ನೋಡಿತು. ಅದು ಕೇವಲ ಒಂದು ಕೈಗಾರಿಕಾ ವಿವಾದವಾಗಿರಲಿಲ್ಲ. ಬದಲಾಗಿ, ಅದು ಸಮಾಜದ ಬಹು ಅಂಶಗಳನ್ನು ಜಗತ್ತಿಗೆ ತಿಳಿಯುವಂತೆ ಮಾಡಿತು, ಈ ಹೋರಾಟ ಇತರ ಪ್ರದೇಶಗಳಿಗೆ ಹರಡಿದರೆ, ಅದು ಭಾರತದಾದ್ಯಂತ ಇದೇ ರೀತಿಯ ಚಳುವಳಿಗಳಿಗೆ ಪ್ರೇರಣೆ ನೀಡಬಹುದು ಎಂಬ ಭಯವನ್ನು ಬ್ರಿಟಿಷರಲ್ಲಿ ಉಂಟುಮಾಡಿತು.
ಹೀಗಾಗಿ, ಬ್ರಿಟಿಷ್ ಆಡಳಿತವು ಮುಷ್ಕರವನ್ನು ಹತ್ತಿಕ್ಕಲು ಹತಾಶ ಪ್ರಯತ್ನಗಳನ್ನು ಮಾಡಿತು. ಬ್ರಿಟಿಷ್ ಏಜೆಂಟರು ಮನೆ ಮನೆಗೆ ತೆರಳಿ ಕಾರ್ಮಿಕರನ್ನು ಕಾರ್ಖಾನೆಗೆ ಹಿಂತಿರುಗುವಂತೆ ಒತ್ತಾಯಿಸಿದರು. ಬ್ರಿಟಿಷ್ ಸಾಮ್ರಾಜ್ಯದ ಹಲವಾರು ಉದ್ಯೋಗಿಗಳು ಪ್ರತಿಭಟನೆಯನ್ನು ಕೈಬಿಡುವಂತೆ ಮನವೊಲಿಸುವ ಪ್ರಯತ್ನಗಳನ್ನು ಮಾಡಿದರು. ಮನವೊಲಿಕೆ ವಿಫಲವಾದಾಗ, ಒತ್ತಡ ಮತ್ತು ಬೆದರಿಕೆಗಳು ಬಂದವು, ಆದರೆ ಕಾರ್ಮಿಕರು ಮಣಿಯಲು ನಿರಾಕರಿಸಿದರು. ವಿ.ಒ. ಚಿದಂಬರಂ ಪಿಳ್ಳೈ ಅವರ ನಾಯಕತ್ವದಿಂದ ಪ್ರೇರಿತರಾದ ಅವರು, ತಮ್ಮ ಬೇಡಿಕೆಗಳನ್ನು ಸ್ವೀಕರಿಸುವವರೆಗೆ ಹಿಂತಿರುಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಮುಷ್ಕರವು ದೃಢವಾಗಿ ನಡೆಯಿತು, ಆಡಳಿತ ಮಂಡಳಿಯು ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿತು. ಮಾರ್ಚ್ 6, 1908 ರಂದು, ಅಂತಿಮವಾಗಿ ಒಂದು ಮಾತುಕತೆ ನಡೆಯಿತು. ಗಿರಣಿಯ ಮುಖ್ಯ ಗುಮಾಸ್ತರು ಆಡಳಿತ ಮಂಡಳಿಯು ಮಾತುಕತೆಗೆ ಸಿದ್ಧವಾಗಿದೆ ಎಂದು ಚಿದಂಬರಂ ಪಿಳೈ ಅವರಿಗೆ ತಿಳಿಸಿದರು. ಕಾರ್ಮಿಕರ ಪ್ರತಿನಿಧಿಗಳೊಂದಿಗೆ, ಅವರು ಕಂಪನಿ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದರು. ಮಾತುಕತೆಗಳು ಗಮನಾರ್ಹ ವಿಜಯದಲ್ಲಿ ಕೊನೆಗೊಂಡಿತು. ಆಡಳಿತ ಮಂಡಳಿಯು ವೇತನವನ್ನು ಹೆಚ್ಚಿಸಲು, ಕೆಲಸದ ಸಮಯವನ್ನು ಕಡಿಮೆ ಮಾಡಲು ಮತ್ತು ಕಾರ್ಮಿಕರಿಗೆ ಭಾನುವಾರ ರಜೆ ನೀಡಲು ಒಪ್ಪಿಕೊಂಡಿತು. ಕಾರ್ಮಿಕರಿಗೆ, ಇದು ಘನತೆಗೆ ಸಂದ ಜಯವಾಗಿತ್ತು.
ಕೋರಲ್ ಮಿಲ್ ಮುಷ್ಕರವು ವಿ.ಒ. ಚಿದಂಬರಂ ಪಿಳ್ಳೈ ಅವರಂತಹ ರಾಷ್ಟ್ರೀಯತಾವಾದಿ ನಾಯಕರು ವರ್ಗ ಮತ್ತು ವೃತ್ತಿಪರ ರೇಖೆಗಳನ್ನು ಮೀರಿ ಜನರನ್ನು ಸಾಮಾನ್ಯ ಕಾರಣಕ್ಕಾಗಿ ಒಗ್ಗೂಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿತು. ವಸಾಹತುಶಾಹಿ ಸರ್ಕಾರವು ಅಂತಹ ನಾಯಕತ್ವವನ್ನು ನಿಯಂತ್ರಿಸದೆ ಬೆಳೆಯಲು ಸಾಧ್ಯವಿಲ್ಲ ಎಂದು ಭಾವಿಸಿ ವಿ.ಒ. ಚಿದಂಬರಂ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿತು. ಮೂರು ದಿನಗಳ ನಂತರ ಕ್ರಮ ಕೈಗೊಳ್ಳುವ ಅವಕಾಶ ಬಂದೇ ಬಿಟ್ಟಿತು. ವಿ.ಒ. ಚಿದಂಬರಂ ಪಿಳ್ಳೈ ಮಾರ್ಚ್ 9, 1908 ರಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ, ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಯಿತು. ಅವರ ಬಂಧನವು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು, ವಸಾಹತುಶಾಹಿ ಆಡಳಿತವು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವ ಮೂಲಕ ಕ್ರೂರವಾಗಿ ನಿಗ್ರಹಿಸಿತು, ನಾಲ್ಕು ಜನರನ್ನು ಕೊಂದಿತು. ಪ್ರತಿಭಟನೆಗಳನ್ನು ನಿಗ್ರಹಿಸಲಾಯಿತು, ಮತ್ತು ವಿ.ಒ. ಚಿದಂಬರಂ ಪಿಳ್ಳೈ 1912 ರವರೆಗೆ ಜೈಲಿನಲ್ಲಿದ್ದರು; ಆದರೂ ಒಂದು ಸ್ಥಳೀಯ ಮುಷ್ಕರ ಕೂಡ ಸಾಮ್ರಾಜ್ಯವನ್ನು ಅಲುಗಾಡಿಸುವ ಸಾಮರ್ಥ್ಯವನ್ನು ಹೊಂದಿತ್ತು ಎಂಬುದನ್ನು ಈ ಘಟನೆ ನಮಗೆ ನೆನಪಿಸಿಕೊಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



