
ಗುಡದೂರು: ಪಂಚ ಗ್ಯಾರಂಟಿಗಳೇ ರಾಜ್ಯದ ಅಭಿವೃದ್ಧಿ ಎಂಬಂತೆ ರಾಜ್ಯದ ಕಾಂಗ್ರೆಸ್ ಸರಕಾರ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ. ಬರಗಾಲದ ಕಾರಣ 5 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ.
ನವಲಿ ಜಲಾಶಯ, ನಂದವಡಿ ಏತ ನೀರಾವರಿ ಆಗಬೇಕೆಂದು ಆಗ್ರಹಿಸಿ, ಬರ, ರೈತರ ಆತ್ಮಹತ್ಯೆ ಹಾಗೂ ರೈತ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ 3ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆಯು ಗುಡದೂರಿನಿಂದ ಬೆಳಿಗ್ಗೆ ಆರಂಭವಾಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಡಿನ ರೈತರ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಲು, ಬರಗಾಲದ ಪರಿಸ್ಥಿತಿ ಕುರಿತು ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದರು.
ಹೊಸಪೇಟೆ ಡ್ಯಾಮಿನಲ್ಲಿ 31 ಟಿಎಂಸಿ ಹೂಳು ತುಂಬಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಡಿಪಿಆರ್ ಗೆ ಹಣ ಕೊಟ್ಟಿದ್ದರು; ನವಲಿ ಸಮಾನಾಂತರ ಜಲಾಶಯಕ್ಕೆ ಆದ್ಯತೆ ನೀಡಲು ಪ್ರಯತ್ನ ಮಾಡಿದ್ದರು ಎಂದು ಗಮನ ಸೆಳೆದರು. 190ಕ್ಕೂ ಹೆಚ್ಚು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರಿಗೆ ರೈತರ ಬಗ್ಗೆ ಕಾಳಜಿಯೂ ಇಲ್ಲ. ಹೋರಾಟದ ಹಿನ್ನೆಲೆಯೂ ಇಲ್ಲ. ಗ್ರಾಮೀಣ ಭಾಗದ ರೈತರ ಸಮಸ್ಯೆ ಏನೆಂದು ಅರ್ಥ ಮಾಡಿಕೊಳ್ಳಲು ಆಗಿಲ್ಲ. ಹಿಂದೆ ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವರಾದುದರಿಂದ ರೈತರ ಸಂಕಷ್ಟಕ್ಕೆ ಸಮಯ ಕೊಡಲು ಆಗಿಲ್ಲ ಎಂದು ನುಡಿದರು. ರಿಯಲ್ ಎಸ್ಟೇಟ್ ಕಡೆ ಹೆಚ್ಚು ಗಮನ ಕೊಡುವ ಮುಖ್ಯಮಂತ್ರಿಗಳು ಅದರಲ್ಲಿ ಶೇ 25ರಷ್ಟಾದರೂ ಸಮಯವನ್ನು ಈ ನಾಡಿನ ಅನ್ನದಾತನ ಬಗ್ಗೆ ಗಮನಿಸಬೇಕು. ಬರಗಾಲ ಭೀಕರವಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಆಗ್ರಹಿಸಿದರು.
ದಲಿತರ ಅಭಿವೃದ್ಧಿಗಾಗಿ ಬಳಕೆ ಆಗಬೇಕಾದ ಎಸ್‍ಸಿಪಿ, ಟಿಎಸ್‍ಪಿ ಹಣವನ್ನು ಬೇರೆ ಬೇರೆ ಇಲಾಖೆಗಳಿಗೆ ಬಳಸುತ್ತಿದ್ದಾರೆ. ದಲಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸದ ಸರಕಾರ ಇದಾಗಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಸರಕಾರದ ಅಧಿಕಾರದ 3 ವರ್ಷಗಳಲ್ಲಿ ಕರ್ನಾಟಕದಲ್ಲಿ 3655 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು 294 ರೈತರು, ರಾಯಚೂರು ಜಿಲ್ಲೆ 160ಕ್ಕೂ ಹೆಚ್ಚು, ಬೀದರ್- 220ಕ್ಕೂ ಹೆಚ್ಚು, ಕೊಪ್ಪಳ ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 937 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆಯವರು ಈ ವಿಚಾರವನ್ನು ಗಮನಿಸಬೇಕೆಂದು ತಿಳಿಸಿದರು.
ರಾಯಚೂರು ಭಾಗದಲ್ಲಿ ಖರೀದಿಸಿದ ಜೋಳಕ್ಕೆ 145 ಕೋಟಿ ಮೊತ್ತ ಬಾಕಿ ಇದೆ ಎಂದು ರೈತ ಮೋರ್ಚಾ ಅಧ್ಯಕ್ಷ ನಡಹಳ್ಳಿಯವರು ಹೇಳಿದ್ದಾರೆಂದು ಗಮನ ಸೆಳೆದರು. ಹೈನುಗಾರಿಕೆಗೆ ಯಡಿಯೂರಪ್ಪ ಅವರ ನೇತೃತ್ವದ ಹಿಂದಿನ ಬಿಜೆಪಿ ಸರಕಾರವು ಸಹಾಯಧನ ನೀಡುತ್ತಿತ್ತು. ಕಾಂಗ್ರೆಸ್ ಸರಕಾರ ಆ ಸಹಾಯಧನವನ್ನೂ ನೀಡದೇ ಸಂಕಷ್ಟದಲ್ಲಿರುವ ರೈತರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



