
1839 ಜೂನ್ 27ರಂದು ಮಹಾರಾಜ ರಣಜಿತ್ ಸಿಂಗ್ ಅವರ ನಿಧನದೊಂದಿಗೆ ಭಾರತೀಯ ಉಪಖಂಡದ ಅತ್ಯಂತ ಶಕ್ತಿಶಾಲಿ ಸಾಮ್ರಾಜ್ಯವಾದ ಸಿಖ್ ಸಾಮ್ರಾಜ್ಯ ಕುಸಿಯಲು ಆರಂಭವಾಯಿತು. ಖರಕ್ ಸಿಂಗ್, ನೌ ನಿಹಾಲ್ ಸಿಂಗ್ ಮತ್ತು ಶೇರ್ ಸಿಂಗ್ ಅವರಂತಹ ರಾಜರು ಬಂದರೂ ಸಾಮ್ರಾಜ್ಯವನ್ನು ಉಳಿಸಲು ಸಾಧ್ಯವಾಗಲಿಲ್ಲ.
ಆದ್ದರಿಂದ ರಣಜಿತ್ ಸಿಂಗ್ ಅವರ ಕಿರಿಯ ಮಗ ದುಲೀಪ್ ಸಿಂಗ್ ಅವರನ್ನು 1843ರಲ್ಲಿ ಕೇವಲ ಐದು ವರ್ಷದ ವಯಸ್ಸಿನಲ್ಲಿ ಮಹಾರಾಜರನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು. ಅವರ ತಾಯಿ ಮಹಾರಾಣಿ ಜಿಂದ್ ಕೌರ್ ಅವರು ರಾಜಪ್ರತಿನಿಧಿಯಾಗಿ ಆಗಿ ಕಾರ್ಯನಿರ್ವಹಿಸಿದರು.
ಆದರೆ 1845-46ರ ಮೊದಲ ಆಂಗ್ಲ-ಸಿಖ್ ಯುದ್ಧದ ನಂತರ ಬ್ರಿಟಿಷರು ಮಹಾರಾಣಿ ಜಿಂದ್ ಕೌರ್ ಅವರನ್ನು ಗಡೀಪಾರು ಮಾಡಿದರು. ಇದರಿಂದ ಸಣ್ಣ ಮಹಾರಾಜ ಏಕಾಂಗಿಯಾದರು. 1849ರ ಎರಡನೇ ಆಂಗ್ಲ-ಸಿಖ್ ಯುದ್ಧದ ನಂತರ ಪಂಜಾಬ್ ಅನ್ನು ಬ್ರಿಟಿಷರು ವಶಪಡಿಸಿಕೊಂಡರು. ಅಲ್ಲದೇ ಹನ್ನೊಂದು ವರ್ಷದ ದುಲೀಪ್ ಸಿಂಗ್ ಅವರನ್ನು ತಮ್ಮ ಸಾಮ್ರಾಜ್ಯವನ್ನು ತ್ಯಾಗ ಮಾಡುವಂತೆ ಒತ್ತಾಯಿಸಲಾಯಿತು.
ಸಿಂಹಾಸನ ಕಳೆದುಕೊಂಡ ದುಲೀಪ್ ಸಿಂಗ್ ಅವರನ್ನು ಬ್ರಿಟಿಷ್ ಪಾಲಕತ್ವದಡಿ ಇರಿಸಲಾಯಿತು. ಇದು ವಸಾಹತುಶಾಹಿ ಭಾರತದಲ್ಲಿ ಸಂಸ್ಕೃತಿ ಮತ್ತು ರಾಜಕೀಯವಾಗಿ ಅತ್ಯಂತ ದೊಡ್ಡ ಅಸ್ಮಿತೆಯ ನಾಶದ ಪ್ರಯತ್ನವಾಗಿತ್ತು.
ಬ್ರಿಟಿಷ್ ಪಾಲಕತ್ವ
ಬ್ರಿಟಿಷರು ದುಲೀಪ್ ಸಿಂಗ್ ಅವರನ್ನು ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಸರ್ಜನ್ ಡಾ. ಜಾನ್ ಲೋಗಿನ್ ಅವರ ಪಾಲನೆಗೆ ಒಪ್ಪಿಸಿದರು. ಆಸಕ್ತಿಕರ ಸಂಗತಿಯೆಂದರೆ, ಲೋಗಿನ್ ಅವರಿಗೆ ಎರಡು ಮಹತ್ವದ ಜವಾಬ್ದಾರಿಗಳನ್ನು ನೀಡಲಾಗಿತ್ತು – ಯುವ ಮಹಾರಾಜರ ಪಾಲನೆ ಮತ್ತು ಸಿಖ್ ಸಾಮ್ರಾಜ್ಯದ ಅಮೂಲ್ಯ ರತ್ನ ಕೋಹಿನೂರ್ ವಜ್ರದ ಕಾವಲು.
ಶೀಘ್ರದಲ್ಲೇ ದುಲೀಪ್ ಸಿಂಗ್ ಅವರನ್ನು ಲಾಹೋರ್‌ನಿಂದ ಫತೇಗಢ್‌ಗೆ ಕರೆದೊಯ್ದು ಕಠಿಣ ನಿಗಾ ಇಡಲಾಯಿತು. ಅವರನ್ನು ಸ್ವಂತ ಜನರಿಂದ ದೂರವಿಡಲಾಯಿತು. ಬ್ರಿಟಿಷ್ ಅಧಿಕಾರಿಗಳು ಅನುಮತಿಸಿದ ಕೆಲವೇ ಸೇವಕರನ್ನು ಹೊರತುಪಡಿಸಿ ಬೇರೆ ಯಾವುದೇ ಭಾರತೀಯರನ್ನು ಭೇಟಿ ಮಾಡುವಂತೆ ನಿಷೇಧಿಸಲಾಯಿತು. ಇದರಿಂದ ಅವರು ತಮ್ಮ ಭಾಷೆ, ಸಂಪ್ರದಾಯ ಮತ್ತು ಕುಟುಂಬದಿಂದ ದೂರವಾದರು.
ಕ್ರಮೇಣ ದುಲೀಪ್ ಸಿಂಗ್ ಬ್ರಿಟಿಷ್ ಸಂಸ್ಕೃತಿಯನ್ನು ಅಳವಡಿಸಿಕೊಳ್ಳತೊಡಗಿದರು. ಸಿಖ್ ಧಾರ್ಮಿಕ ಗ್ರಂಥಗಳ ಬದಲು ಬೈಬಲ್ ಅವರ ದೈನಂದಿನ ಜೀವನದಲ್ಲಿ ಪ್ರವೇಶಿಸಿತು. ಡಾ. ಲೋಗಿನ್ ಅವರು ಅವರಿಗೆ ಕ್ರಿಶ್ಚಿಯನ್ ಬೋಧನೆಗಳನ್ನು ಪರಿಚಯಿಸಿದರು. 1853ರಲ್ಲಿ, ಹದಿನೈದು ವರ್ಷ ತುಂಬುವ ಮುನ್ನವೇ ದುಲೀಪ್ ಸಿಂಗ್ ಅವರು ಗವರ್ನರ್ ಜನರಲ್ ಲಾರ್ಡ್ ಡಲ್‌ಹೌಸಿ ಅವರ ಅನುಮತಿಯೊಂದಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದರು.
ಇಂಗ್ಲೆಂಡ್‌ನಲ್ಲಿ ಜೀವನ
ಮುಂದಿನ ವರ್ಷ ದುಲೀಪ್ ಸಿಂಗ್ ಅವರನ್ನು ಇಂಗ್ಲೆಂಡ್‌ಗೆ ಕರೆದೊಯ್ದರು. ರಾಣಿ ವಿಕ್ಟೋರಿಯಾ ಅವರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರು ರಾಜಕುಟುಂಬದ ಆಗಂತುಕರಾಗಿ ಬೆಳೆದರು. ಬ್ರಿಟಿಷ್ ಕ್ರೌನ್‌ಗೆ ನಿಷ್ಠೆ ಉಳಿಸಿಕೊಂಡಿದ್ದಕ್ಕೆ ವರ್ಷಕ್ಕೆ £25,000 ಪೆನ್ಷನ್ ನೀಡಲಾಯಿತು. ಅವರನ್ನು ಕ್ಯಾಸಲ್‌ಗಳಲ್ಲಿ ವಾಸಿಸುವಂತೆ ಮಾಡಲಾಯಿತು, ಹೈಲ್ಯಾಂಡ್ ಉಡುಪು ಧರಿಸುವಂತೆ ಮಾಡಲಾಯಿತು ಮತ್ತು ಅವರಿಗೆ “ಪರ್ತ್‌ಶೈರ್‌ನ ಕಪ್ಪು ರಾಜಕುಮಾರ” ಎಂಬ ಅಡ್ಡಹೆಸರನ್ನು ನೀಡಲಾಯಿತು.
ಆದರೆ ಬಾಹ್ಯ ವೈಭವದ ನಡುವೆಯೂ ದುಲೀಪ್ ಸಿಂಗ್ ಅವರ ಮನಸ್ಸು ತವರಿನತ್ತ ಎಳೆಯುತ್ತಿತ್ತು. ಅವರು ಗಡೀಪಾರಾದ ತಾಯಿಯೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದರು, ಆದರೆ ಬ್ರಿಟಿಷ್ ಅಧಿಕಾರಿಗಳು ಅವರ ಪತ್ರಗಳನ್ನು ತಡೆದರು. ಅಂತಿಮವಾಗಿ 1861 ಜನವರಿಯಲ್ಲಿ ಕಲ್ಕತ್ತಾದ ಸ್ಪೆನ್ಸ್ ಹೋಟೆಲ್‌ನಲ್ಲಿ ಮಹಾರಾಜ ದುಲೀಪ್ ಸಿಂಗ್ ಅವರು ತಮ್ಮ ತಾಯಿ ಮಹಾರಾಣಿ ಜಿಂದ್ ಕೌರ್ ಅವರನ್ನು ಭೇಟಿ ಮಾಡಿದರು. ಬ್ರಿಟಿಷರು ಹೇರಿದ ಹನ್ನೆರಡು ವರ್ಷಗಳ ವಿರಹ ಅಂತ್ಯವಾಯಿತು.
ದುಲೀಪ್ ಸಿಂಗ್ ಅವರು ತಾಯಿಯನ್ನು ಬಿಡದೆ ಇಂಗ್ಲೆಂಡ್‌ಗೆ ಕರೆದೊಯ್ದರು. ಅಲ್ಲಿ ತಾಯಿಯು ತನ್ನ ಕೊನೆಯ ದಿನಗಳಲ್ಲಿ ಮಗನಲ್ಲಿ ಮರೆಯಾಗಿದ್ದ ಸಿಖ್ ಅಸ್ಮಿತೆ, ಪರಂಪರೆ ಮತ್ತು ತಂದೆಯ ಸಾಮ್ರಾಜ್ಯದ ಬಗ್ಗೆ ಹೆಮ್ಮೆಯನ್ನು ಮರುಜಾಗೃತಗೊಳಿಸಿದರು.
ಆದರೂ ಮಹಾರಾಜ ದುಲೀಪ್ ಸಿಂಗ್ ಅವರ ಜೀವನವು ಬ್ರಿಟಿಷ್ ಸಾಮ್ರಾಜ್ಯದ ಕೈಗೆ ಸಿಕ್ಕು ದಿಕ್ಕು ದೆಸೆಯಿಲ್ಲದಂತಾಯಿತು. ಅವರ ಸಾಂಸ್ಕೃತಿಕ ಬೇರುಗಳನ್ನು ಕತ್ತರಿಸಲಾಯಿತು. ಇದು ಒಬ್ಬ ರಾಜನ ದುಃಖಮಯ ಅಂತ್ಯವೇ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



