ಮಧೂರು: ಸನಾತನ ರಾಷ್ಟ್ರದ ಪ್ರಾಚೀನ ಮೌಲ್ಯಗಳ ಆಗರವಾದ ವೇದ, ಉಪನಿಷತ್, ಪುರಾಣಗಳ ಸಾರ ಸಂಗ್ರಹವಾದ ಶ್ರೀಮದ್ ಭಗವದ್ಗೀತೆಯ ಬಗೆಗೆ ಅಪಸ್ವರ ಎತ್ತುವುದು ಭೂಷಣವಲ್ಲ. ಸಕಲ ಜೀವರಾಶಿಗಳಿಗೂ ಸನ್ಮಾರ್ಗದ ಬೆಳಕನ್ನು ತೋರಿದ ಗೀತೆಯ ಬಗೆಗೆ ಹುಂಬ ಹೇಳಿಕೆಗಳನ್ನು ವೈಭವೀಕರಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ದಾರಿ ತಪ್ಪುವ ಯುವ ಜನರು ಹಾಗೂ ನೋವುಂಡ ಜನರ ಅರಿವಿಗೆ ಮಾಡುವ ಯತ್ನಗಳು ಶ್ಲಾಘನೀಯವೆಂದು ಕುಂಬಳೆ ಸೀಮೆಯ ನಾಲ್ಕು ಪ್ರಧಾನ ಕ್ಷೇತ್ರಗಳಲ್ಲೊಂದಾದ ಪ್ರಥಮ ಪೂಜನೀಯ ಮಧೂರು ಶ್ರೀಮಹಾಗಣಪತಿ ದೇವಸ್ಥಾನದ ಪ್ರಬಂಧಕ ಎಚ್.ಗೋಪಾಲಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಬ್ರಿಗೇಡ್, ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಭಾನುವಾರ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವವ್ಯಾಪಿ ಭಗವದ್ಗೀತೆಯ ಸಂದೇಶ ಸಾರುವ ನೂತನ ಕಿರು ಹೊತ್ತಗೆ ’ಸುಡುವುದು ದೇಹ ಆತ್ಮವಲ್ಲ’ ಕೃತಿಯನ್ನು ಪತ್ರಕರ್ತ ಪುರುಷೋತ್ತಮ ಭಟ್ ಕೆ. ಯವರಿಗೆ ನೀಡಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಎಸೆದ ಕಲ್ಲುಗಳನ್ನು ಬಳಸಿ ಅರಮನೆಗೆ ಅಡಿಪಾಯ ಮಾಡಿಕೊಳ್ಳಬೇಕೆನ್ನುವ ಚಕ್ರವರ್ತಿ ಸೂಲಿಬೆಲೆಯವರ ಚಿಂತನೆಯಂತೆ ಯುವ ಬ್ರಿಗೇಡ್ ಜಿಲ್ಲಾ ಘಟಕ ಹಮ್ಮಿಕೊಂಡ ಭಗವದ್ಗೀತಾ ಅಭಿಯಾನ ಅಪೂರ್ವವಾದುದು. ಯುವ ಸಮೂಹಕ್ಕೆ ಗೀತೆಯ ಬೆಳಕು ಇನ್ನಷ್ಟು ಪ್ರಖರವಾಗಿ ಮುಟ್ಟುವಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳು ಯಶಸ್ವಿಯಾಗಲೆಂದು ಅವರು ಹಾರೈಸಿದರು.
ಮಧೂರು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯರು ಕಿರುಹೊತ್ತಗೆಯನ್ನು ಶ್ರೀ ಮಹಾಗಣಪತಿಯ ಪದತಲದಲ್ಲಿರಿಸಿ ಪ್ರಾರ್ಥನೆಗೈದು ಶುಭ ಹಾರೈಸಿದರು.
ಯುವಬ್ರಿಗೇಡ್ ಯುವ ಸಮೂಹಕ್ಕೆ ಪ್ರಚುರಪಡಿಸುತ್ತಿರುವ ವಿವಿಧ ಆಯಾಮಗಳ ಸೇವೆಗಳು ಸ್ತುತ್ಯರ್ಹ. ಭಾರತದ ಕಣ್ಣಾಗಿ, ವಿಶ್ವದ ಎಲ್ಲಾ ಧರ್ಮಗ್ರಂಥಗಳಿಗೂ ಅಡಿಪಾಯವಾಗಿರುವ ಭಗವದ್ಗೀತೆಯ ತತ್ವಾದರ್ಶಗಳ ಬೆಳಕು ನೀಡುವ ಕೆಲಸ ನಿರಂತರವಾಗಿರಲೆಂದು ಕೃತಿಯನ್ನು ಸ್ವೀಕರಿಸಿ ಪತ್ರಕರ್ತ ಪುರುಷೋತ್ತಮ ಭಟ್ ಕೆ ಹಾರೈಸಿದರು.
ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಮುಖಂಡ ಯೋಗೀಶ್ ಎಂ.ಆರ್, ಮುರಳೀಧರನ್ ಪರಕ್ಕಿಲ, ಯುವ ಬ್ರಿಗೇಡ್ ಕಾರ್ಯಕರ್ತರಾದ ಹರೀಶ್ ಬಳಕ್ಕ, ಶ್ಯಾಮ್ ಕಶ್ಯಪ್ ವಳಕ್ಕುಂಜ, ಮಹೇಶ್ ಕೆ.ವಿ ಮಂಜೇಶ್ವರ, ವಿನಯಕೃಷ್ಣ ಭಟ್ ವರ್ಕಾಡಿ, ರಾಮಚಂದ್ರ ಬಲ್ಲಾಳ್ ನಾಟೆಕಲ್ಲು, ವಿನಯಕೃಷ್ಣ ಮಂಜೇಶ್ವರ, ವಜ್ರೇಜ್ ಮಂಜೇಶ್ವರ, ಪ್ರಸನ್ನಕುಮಾರ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.