
ಮಿಲಿಟರಿ ಗುಪ್ತಚರವನ್ನು ಯುದ್ಧಭೂಮಿಯಲ್ಲಿ ಹೇಗೆ ಪ್ರಯೋಜನಕಾರಿಯಾಗಿ ಪರಿವರ್ತಿಸಬೇಕೆಂದು ಭಾರತೀಯ ಸೈನ್ಯಕ್ಕೆ ಕಲಿಸಿದವರಲ್ಲಿ ಒಬ್ಬರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ. ಜನವರಿ 28 ರಂದು ಭಾರತದ ಮೊದಲ ಕಮಾಂಡರ್-ಇನ್-ಚೀಫ್ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ಬಗೆಗಿನ ಒಂದು ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡುವ ಪ್ರಯತ್ನ ನಡೆಸಿದ್ದೇವೆ.
ಅದು 1947-48ರ ಭಾರತ-ಪಾಕಿಸ್ಥಾನ ಯುದ್ಧದ ಸಮಯ, ಕಾರಿಯಪ್ಪ ಅವರು ಝೋಜಿ ಲಾ ಪಾಸ್ನಾದ್ಯಂತ ಕಿತ್ತುಹೋದ M5 ಸ್ಟುವರ್ಟ್ ಲೈಟ್ ಟ್ಯಾಂಕ್ಗಳನ್ನು ನಿಯೋಜಿಸುವ ಅಸಾಧಾರಣ ನಿರ್ಧಾರವನ್ನು ತೆಗೆದುಕೊಂಡು ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದರು. ಹೊಸದಾಗಿ ಸ್ವತಂತ್ರಗೊಂಡಿದ್ದ ಸಂದರ್ಭದಲ್ಲೇ ಅತ್ಯಂತ ಕಠಿಣ ಮಿಲಿಟರಿ ಪರೀಕ್ಷೆಗೆ ಭಾರತ ಒಳಗಾಗಿದ್ದ ಸಮಯದಲ್ಲಿ ಕಾರಿಯಪ್ಪ ಅವರು ಆಧುನಿಕ ಯುದ್ಧದಲ್ಲಿ ಅತ್ಯಂತ ದಿಟ್ಟ ಮಿಲಿಟರಿ ಚಿಂತನೆಯೊಂದಕ್ಕೆ ಝೋಜಿ ಲಾದ ಅತಿ ಕಠಿಣ ಭೂಪ್ರದೇಶವನ್ನು ವೇದಿಕೆಯನ್ನಾಗಿ ಪರಿವರ್ತಿಸಿದರು. ಅವರ ಈ ಅದ್ಭುತ ಮಿಲಿಟರಿ ಆಲೋಚನೆ ಯುದ್ಧಭೂಮಿಯಲ್ಲಿ ನಿರ್ಣಾಯಕ ಕ್ರಮವಾಗಿ ಹೇಗೆ ರೂಪಾಂತರಗೊಂಡಿತು, ಪಾಕಿಸ್ತಾನಕ್ಕೆ ಹೇಗೆ ದೊಡ್ಡ ಮಟ್ಟದಲ್ಲಿ ಸಾವುನೋವುಗಳನ್ನು ಉಂಟುಮಾಡಿತು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕು
1948 ರ ಮಧ್ಯಭಾಗದ ವೇಳೆಗೆ, ಲಡಾಖ್ನಲ್ಲಿ ಪರಿಸ್ಥಿತಿ ಭೀಕರವಾಗಿತ್ತು. ಪಾಕಿಸ್ತಾನಿ ದಾಳಿಕೋರರು ಕಾಶ್ಮೀರ ಕಣಿವೆಯನ್ನು ಲಡಾಖ್ಗೆ ಸಂಪರ್ಕಿಸುವ ಪ್ರಮುಖ ಪರ್ವತ ಕಣಿವೆಯಾದ ಝೋಜಿ ಲಾವನ್ನು ವಶಪಡಿಸಿಕೊಂಡಿದ್ದರಯ, ಇದು ಭಾರತದ ಪ್ರದೇಶಕ್ಕೆ ಪ್ರವೇಶವನ್ನೇ ಮುಚ್ಚಿಹಾಕಿತ್ತು. ಝೋಜಿ ಲಾದಲ್ಲಿನ ಭೂಪ್ರದೇಶವು ಕಠಿಣವಾಗಿದ್ದರಿಂದ 77 ನೇ ಪ್ಯಾರಾಚೂಟ್ ಬ್ರಿಗೇಡ್ನ ಹಿಂದಿನ ಪದಾತಿ ದಳದ ದಾಳಿಗಳು ವಿಫಲವಾಗಿದ್ದವು. 11,500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಕುಳಿತಿದ್ದ ಝೋಜಿ ಲಾ ಪಾಸ್ ಆಳವಾದ ಹಿಮದಿಂದ ಉಸಿರುಗಟ್ಟುವ ವಾತಾವರಣ ಹೊಂದಿತ್ತು, ಹಿಮಪಾತದಿಂದ ಜರ್ಜರಿತವಾಗಿತ್ತು. ಮನುಷ್ಯರು ಅಲ್ಲಿ ನಡೆದಾಡಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇತ್ತು. ಕಿರಿದಾದ ಪರ್ವತ ಟ್ರ್ಯಾಕ್ನಲ್ಲಿ ಕೇವಲ ಒಂದು ಬಾರಿ ಮಾತ್ರ ಚಲಿಸಬಹುದಾದ ಅವಕಾಶ ಇತ್ತು, ಇದರಿಂದಾಗಿ ಪಡೆಗಳು ಎತ್ತರದ ಪ್ರದೇಶದಲ್ಲಿ ಶತ್ರುಗಳ ಗುಂಡಿನ ದಾಳಿಗೆ ಒಡ್ಡಿಕೊಳ್ಳಬೇಕಾಯಿತು. ಆಮ್ಲಜನಕದ ಮಟ್ಟಗಳು ಕಡಿಮೆಯಾಗಿದ್ದವು, ವಾಹನಗಳ ಚಲನೆ ಸ್ಥಗಿತಗೊಂಡವು ಮತ್ತು ಫಿರಂಗಿಗಳ ಅಳವಡಿಕೆ ಬಹುತೇಕ ಅಸಾಧ್ಯವಾಗಿತ್ತು.
ಆದರೆ ಪಶ್ಚಿಮ ಕಮಾಂಡ್ನ ಆಗಿನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದ ಕಾರಿಯಪ್ಪ ಈ ಸವಾಲುಗಳ ವಿರುದ್ಧ ಕೈಚೆಲ್ಲಿ ಕುಳಿತುಕೊಳ್ಳಲು ನಿರಾಕರಿಸಿದರು. ಬದಲಾಗಿ, ಅದನ್ನು ಒಂದು ಅವಕಾಶವಾಗಿ ನೋಡಿದರು. ಶತ್ರುಗಳು 11,500 ಅಡಿ ಎತ್ತರದಲ್ಲಿ ಮಿಲಿಟರಿ ಟ್ಯಾಂಕ್ಗಳನ್ನು ನಿರೀಕ್ಷಿಸುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು . ಹೀಗಾಗಿ ಅವರು ಟ್ಯಾಂಕ್ಗಳನ್ನು ಶತಾಯ ಗತಾಯ ಅಲ್ಲಿ ನಿಯೋಜಿಸಲೇ ಬೇಕು ಎಂಬ ಹಠಕ್ಕೆ ಬಿದ್ದರು. ಅಂತಹ ನಿಯೋಜನೆಯು ಪಾಕಿಸ್ತಾನದ ಪ್ರತಿರೋಧವನ್ನು ಛಿದ್ರಗೊಳಿಸುವಷ್ಟು ಮಾನಸಿಕ ಆಘಾತವನ್ನುಂಟು ಮಾಡುತ್ತದೆ ಎಂದು ಅವರಿಗೆ ತಿಳಿದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಜನರಲ್ ಕೆ.ಎಂ. ಕಾರಿಯಪ್ಪ ಆಪರೇಷನ್ ಡಕ್ ಅನ್ನು ಆಪರೇಷನ್ ಬೈಸನ್ ಎಂದು ಮರುನಾಮಕರಣ ಮಾಡಲು ಆದೇಶಿಸಿದರು, ಇದರಲ್ಲಿ “ಬೈಸನ್” ಎಂಬ ಪದವು ಕ್ರೂರ ಶಕ್ತಿ, ಮುಂದಕ್ಕೆ ಚಲಿಸುವ ಆವೇಗ ಮತ್ತು ತಡೆಯಲಾಗದ ದಾಳಿಯನ್ನು ಸಂಕೇತಿಸುತ್ತದೆ.
ಜನರಲ್ ಕಾರಿಯಪ್ಪ ಅವರ ಯೋಜನೆಯ ಹಿಂದೆ ಧೈರ್ಯಶಾಲಿ ಯುದ್ಧ ತಂತ್ರವಿತ್ತು. ಪೂರ್ಣ ಗಾತ್ರದ ಟ್ಯಾಂಕ್ಗಳು ಎಂದಿಗೂ ಜೋಜಿ ಲಾವನ್ನು ಒಂದೇ ಬಾರಿಗೆ ಏರಲು ಸಾಧ್ಯವಿಲ್ಲದ ಕಾರಣ, ಅವರು 7 ನೇ ಅಶ್ವದಳದ M5 ಸ್ಟುವರ್ಟ್ ಲೈಟ್ ಟ್ಯಾಂಕ್ಗಳ ಭಾಗಗಳನ್ನು ಬೇರ್ಪಡಿಸಲು ಆದೇಶಿಸಿದರು. ತೂಕವನ್ನು ಕಡಿಮೆ ಮಾಡಲು ಟುರೆಟ್ಸ್ (ತಿರುಗುವ ಗನ್ ವಿಭಾಗ) ಎಂದು ಕರೆಯಲ್ಪಡುವ ಅವುಗಳ ಭಾರವಾದ ಮೇಲ್ಭಾಗಗಳನ್ನು ತೆಗೆದುಹಾಕಲಾಯಿತು. ನಂತರ ಟ್ಯಾಂಕ್ಗಳನ್ನು ಸಾಮಾನ್ಯ ಬ್ರೆನ್ ಗನ್ ವಾಹಕಗಳಂತೆ ಕಾಣುವಂತೆ ಮಾಡಲಾಯಿತು. ಇದರಿಂದ ಶತ್ರುಗಳಿಗೆ ಯಾವ ರೀತಿಯ ಅನುಮಾನವೂ ಬರುವುದಿಲ್ಲ ಎಂಬುದನ್ನು ಖಚಿತಪಡಿಸಲಾಯಿತು. ರಾತ್ರಿಯಲ್ಲಿ ಸದ್ದಿಲ್ಲದೆ ಚಲಿಸಿದ ಈ ಕಿತ್ತುಹಾಕಿದ ಟ್ಯಾಂಕ್ಗಳನ್ನು ಮದ್ರಾಸ್ ಸ್ಯಾಪ್ಪರ್ಸ್ ಕೆತ್ತಿದ ಕಿರಿದಾದ ಎಂಟು ಕಿಲೋಮೀಟರ್ ಯುದ್ಧ ಟ್ರ್ಯಾಕ್ ಮೂಲಕ ತುಂಡು ತುಂಡಾಗಿ ಸಾಗಿಸಲಾಯಿತು. ಪಾಸ್ನ ತಳವನ್ನು ತಲುಪಿದ ನಂತರ, ಟ್ಯಾಂಕ್ಗಳನ್ನು ಮತ್ತೆ ಜೋಡಿಸಿ ಯುದ್ಧಕ್ಕೆ ಸಿದ್ಧಪಡಿಸಲಾಯಿತು. ಅಖ್ನೂರ್ನಿಂದ 445 ಕಿಲೋಮೀಟರ್ಗಳಿಗಿಂತ ಹೆಚ್ಚು ದೂರ ಸಾಗಿಸಲಾಯಿತು, ಟ್ಯಾಂಕ್ಗಳನ್ನು ಸೇತುವೆಗಳಾದ್ಯಂತ ತಿರುಗಿಸಿ ಬಾಲ್ಟಾಲ್ ಬಳಿ ಮರೆಮಾಡಲಾಯಿತು.
1 ನವೆಂಬರ್ 1948 ರಂದು, ಕಾರಿಯಪ್ಪನವರ ತಂತ್ರಗಾರಿಗೆ ಅನಾವರಣಗೊಂಡಿತು. ಹಿಮಬಿರುಗಾಳಿಗಳು ಉಲ್ಬಣಗೊಳ್ಳುತ್ತಿದ್ದಂತೆ, ಭಾರತೀಯ ಟ್ಯಾಂಕ್ಗಳು ಇದ್ದಕ್ಕಿದ್ದಂತೆ ಜೋಜಿ ಲಾದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದವು. ಪಾಕಿಸ್ತಾನಿ ಮಿಲಿಟರಿ ದಿಗ್ಭ್ರಮೆಗೊಂಡಿತು. ಅಜೇಯವೆಂದು ಭಾವಿಸಲಾದ ಪಾಕ್ ಬಂಕರ್ಗಳನ್ನು ನೇರವಾಗಿ ಟ್ಯಾಂಕ್ ಮೂಲಕ ಗುಂಡು ಹಾರಿಸಿ ಪುಡಿಮಾಡಲಾಯಿತು, ಈ ಪ್ರತಿದಾಳಿಯನ್ನು ಎಂದಿಗೂ ಊಹಿಸದ ಶತ್ರುಗಳಲ್ಲಿ ಭೀತಿ ಹರಡಿತು. ಮಧ್ಯಾಹ್ನದ ಹೊತ್ತಿಗೆ, ಗುಮ್ರಿ ಜಲಾನಯನ ಪ್ರದೇಶವನ್ನು ಭಾರತೀಯ ಸೈನಿಕರಿಗೆ ಸುರಕ್ಷಿತಗೊಳಿಸಲಾಯಿತು. ವಾರಗಳಲ್ಲಿ, ಭಾರತೀಯ ಪಡೆಗಳು ದ್ರಾಸ್ ಮೂಲಕ ದಾಳಿಕೋರರನ್ನು ಹಿಂದಕ್ಕೆ ತಳ್ಳಿ ಲೇಹ್ನಿಂದ ಮುಂದಕ್ಕೆ ಚಲಿಸಿ ಅಲ್ಲಿದ್ದ ಪಡೆಗಳೊಂದಿಗೆ ಸಂಪರ್ಕ ಸಾಧಿಸಿ, ಲಡಾಖ್ ಮೇಲೆ ಭಾರತದ ಹಿಡಿತವನ್ನು ಪುನಃಸ್ಥಾಪಿಸಿದವು. ಕಾರ್ಯಾಚರಣೆಯ ಉದ್ದಕ್ಕೂ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಭಾರೀ ನಷ್ಟವನ್ನುಂಟುಮಾಡಿತು, 54 ಜನರನ್ನು ಕೊಂದು 91 ಜನರನ್ನು ಗಾಯಗೊಳಿಸಲಾಯಿತು.
ಕಾರಿಯಪ್ಪ ಅವರ ಶಕ್ತಿ ಕೇವಲ ಆಜ್ಞೆಯಲ್ಲಿ ಅಲ್ಲ, ಬದಲಾಗಿ ದೂರದೃಷ್ಟಿಯಲ್ಲಿ ಅಡಗಿದೆ ಎಂಬುದನ್ನು ಆಪರೇಷನ್ ಬೈಸನ್ ಸಾಬೀತುಪಡಿಸಿತು. ಭೂಪ್ರದೇಶವನ್ನು ಅಳವಾಗಿ ಅಧ್ಯಯನ ಮಾಡುವುದು, ಶತ್ರುಗಳ ಯೋಚನೆಗಳನ್ನು ಗ್ರಹಿಸುವುದು ಮತ್ತು ಯುದ್ಧದ ನಿಯಮಗಳನ್ನು ಪುನಃ ಬರೆಯುವ ಧೈರ್ಯ ಕಾರಿಯಪ್ಪರಿಗೆ ಸಾಧ್ಯವಾಗಿತ್ತು. ಇಂದು ಭಾರತವು ತನ್ನ ಮೊದಲ ಫೀಲ್ಡ್ ಮಾರ್ಷಲ್ ಅನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಆಪರೇಷನ್ ಬೈಸನ್ನಲ್ಲಿ ಅವರ ಚತುರ ಚಿಂತನೆಯ ಸ್ಪಷ್ಟತೆಯು ಇತಿಹಾಸದ ಹಾದಿಯನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಶಾಶ್ವತ ಪುರಾವೆಯಾಗಿ ನಿಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


