
1843ರ ಫೆಬ್ರವರಿ ತಿಂಗಳಲ್ಲಿ ನಡೆದ ಆ ಒಂದು ಘಟನೆ ಇಡೀ ಕಲ್ಕತ್ತಾವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ಕಲ್ಕತ್ತಾದಲ್ಲಿ ಹಿಂದೂ ಕಾಲೇಜಿನ ಅತ್ಯಂತ ಪ್ರತಿಭಾವಂತ, ಸರ್ವರಿಂದಲೂ ಹೊಗಳಲ್ಪಡುತ್ತಿದ್ದ ವಿದ್ಯಾರ್ಥಿ ಮಧುಸೂದನ ದತ್ತ ಒಂದು ದಿನ ಇದ್ದಕ್ಕಿಂತೆ ಕಾಲೇಜು ಆವರಣದಿಂದ ಕಣ್ಮರೆಯಾಗಿ, ಮರುದಿನ ಅವರು ಕಾಣಿಸಿಕೊಂಡಿದ್ದು ಹಳೆಯ ಮಿಷನ್ ಚರ್ಚ್ನ ಒಳಗೆ – ಅದು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷೆ ಪಡೆಯುತ್ತಾ. ಈ ಸೂಕ್ಷ್ಮ ಘಟನೆ ಕಲ್ಕತ್ತಾದ ಸಮಾಜವನ್ನು ಇಬ್ಭಾಗ ಮಾಡಿತು. ಸಂಪ್ರದಾಯವಾದಿ ಸಮಾಜಕ್ಕೆ ಈ ಘಟನೆ ದಂಗುಬಡಿದಂತಾಯಿತು. ಆದರೆ ಪಾಶ್ಚಾತ್ಯ ಶಿಕ್ಷಣ ಪಡೆದ ಹೊಸ ಪೀಳಿಗೆಗೆ ಇದು ಸ್ವಾತಂತ್ರ್ಯದ, ಹೊಸ ಆಶಾವಾದದ ಸಂಕೇತವಾಯಿತು. ಆದರೆ ಮಧುಸೂದನರ ಸ್ವಂತ ಬರಹಗಳು ಮತ್ತು ಚರ್ಚ್ ಸಂರಕ್ಷಿಸಿರುವ ಆ ಕಾಲದ ನೈಜ ಸಾಕ್ಷ್ಯಗಳು, ಭಾರೀ ಭರವಸೆಗಳೊಂದಿಗೆ ಕ್ರಿಶ್ಚಿಯನ್ ಮತವನ್ನು ಸ್ವೀಕರಿಸಿದ್ದ ಪ್ರತಿಭಾವಂತ ಹಿಂದೂ ಯುವಕನ ನಿಜ ಜೀವನದ ದುರಂತವನ್ನು ಬಹಿರಂಗಪಡಿಸುತ್ತದೆ.
ಆ ಹಿಂದೂ ಯುವಕ ಬೇರೆ ಯಾರೂ ಅಲ್ಲ ಬಂಗಾಳದ ಪ್ರಸಿದ್ಧ ಕವಿ, ಬರಹಗಾರ ಮಧುಸೂದನ್ ದತ್ತ ಅವರು ಮೈಕೆಲ್ ಮಧುಸೂಧನ್ ದತ್ತ ಆದ ಕಥೆ.
ದತ್ತ ಅವರ ಧಿಡೀರ್ ಮತಾಂತರ ಕೇವಲ ಆಧ್ಯಾತ್ಮಿಕ ಪ್ರೇರಣೆಯಿಂದ ಆಗಿರಲಿಲ್ಲ, ಅವಕಾಶವನ್ನು ಪಡೆಯುವ ಪ್ರಯತ್ನವೂ ಆಗಿತ್ತು ಎಂಬುದನ್ನು ಅವರೇ ಮಾತುಗಳೇ ತಿಳಿಸುತ್ತವೆ.
“ನನ್ನ ಹೃದಯದಲ್ಲಿ ಒಂದೇ ಆಸೆ ಇದೆ. ನಾನು ಇಂಗ್ಲೆಂಡ್ಗೆ ಹೋಗಬೇಕು. ಅದು ಸಾಧ್ಯವಾಗದಿದ್ದರೆ ನನ್ನ ಇರುವಿಕೆ ನಾಶವಾಗಬೇಕು” ಎಂದು ಮತಾಂತರಕ್ಕೂ ಮುನ್ನ ಅವರನ್ನು ಸಂದರ್ಶಿಸಿದ್ದ ರೆವರೆಂಡ್ ಕೆ. ಎಂ. ಬ್ಯಾನರ್ಜಿಯಾ ಮುಂದೆ ಮಧುಸೂಧನ ದತ್ತ ಹೇಳಿದ್ದರು. ಅವರಿಗೆ ಕ್ರಿಶ್ಚಿಯನ್ ಆಗುವ ಆಸೆಗಿಂತ ಇಂಗ್ಲೆಂಡ್ ತಲುಪುವ ಆಕಾಂಕ್ಷೆಯೇ ಹೆಚ್ಚಾಗಿತ್ತು ಎಂಬುದು ಇದರಲ್ಲಿ ಸ್ಪಷ್ಟವಾಗುತ್ತದೆ. ಕಟ್ಟುನಿಟ್ಟಾದ ಸಂಪ್ರದಾಯವಾದಿ ಹಿಂದೂ ಕುಟುಂಬದ ಬಂಧನ, ಅನಿವಾರ್ಯವಾಗಿ ಬರುತ್ತಿದ್ದ ಹಿಂದೂ ವಿವಾಹದ ಪ್ರಸ್ತಾಪಗಳು ಅವರಲ್ಲಿ ಭಯ ಹುಟ್ಟಿಸಿತ್ತು. ಇವೆಲ್ಲವೂಗಳಿಂದ ತಪ್ಪಿಸಿಕೊಳ್ಳಲು ಮತಾಂತರ ಒಂದು ದಾರಿಯಂತೆ ಅವರಿಗೆ ಕಂಡಿತು.
ಆರಂಭದಲ್ಲಿ ಚರ್ಚ್ ಅವರನ್ನು ತುಂಬ ಆದರದಿಂದ ಸ್ವೀಕರಿಸಿತು ಮತ್ತು ಪ್ರೋತ್ಸಾಹಿಸಿತು. ಓಲ್ಡ್ ಮಿಷನ್ ಚರ್ಚ್ನಲ್ಲಿ ಆರ್ಚ್ಡೀಕನ್ ಡೀಲ್ಟ್ರಿ ಅವರೇ ಮಧುಸೂಧನ ದತ್ತನಿಗೆ ದೀಕ್ಷೆಯನ್ನು ನೀಡಿದರು. ಈ ವೇಳೆ ಸಮಾಜದ ಆಕ್ರೋಶ ಭುಗಿಲೆದ್ದು ಅನಾಹುತ ನಡೆಯಬಹುದೆಂಬ ಕಾರಣದಿಂದ ಚರ್ಚ್ ನ ಹೊರಗೆ ಶಸ್ತ್ರ ಸಜ್ಜಿತ ಕಾವಲುಗಾರರನ್ನು ನಿಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಸ್ವತಃ ಮಧುಸೂದನ್ ರಚಿಸಿದ ಹಾಡನ್ನು ಸಹ ಸಭೆಯಲ್ಲಿ ಹಾಡಲಾಗಿತ್ತು. ನಂತರ, ರೆವ್. ಮಾರ್ಟನ್ ಅವರು ಈ ಮತಾಂತರವನ್ನು ಸಮರ್ಥಿಸುವ ಒಂದು ಕರಪತ್ರವನ್ನು ಕೂಡ ಪ್ರಕಟಿಸಿದರು.
ಮತಾಂತರದ ಬಳಿಕ ಮೊದಲ ಕೆಲವು ದಿನಗಳು ಸುಂದರವಾಗಿ ಕಳೆದವು. ಸ್ವಲ್ಪ ಸಮಯದವರೆಗೆ, ಚರ್ಚ್ ಅವರಿಗೆ ಆಶ್ರಯ ನೀಡಿತು. ಕೆಲವು ಕಾಲದವರೆಗೆ ದತ್ತ ಅವರಿಗೆ ರಾಜಾಥಿತ್ಯ ದೊರೆಯಿತು. ಮೊದಲು ಡೀಲ್ಟ್ರಿ ಅವರ ಮನೆಯಲ್ಲಿ, ನಂತರ ರೆವ್. ವ್ಯಾಟಿಕನ್ ಬಳಿ, ಮತ್ತು ನಂತರ ರೆವ್. ಥಾಮಸ್ ಸ್ಮಿತ್ ಅವರ ಬಳಿ (ಅವರು ಮಧುಸೂದನ್ಗೆ ಶೇಕ್ಸ್ಪಿಯರ್ ಕಲಿಸಿದರು) ಅವರು ತಂಗಿದರು. ಚರ್ಚ್ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿತು, ಸೌಲಭ್ಯಗಳನ್ನು ನೀಡಿತು. ಇದೆಲ್ಲವೂ ಮಧುಸೂದನರಿಗೆ ಒಂದು ಹೊಸ ಅನುಭವ, ಕರುಣಾಮಯಿ ಸಮುದಾಯ ಸಿಕ್ಕಂತೆ ಅವರಿಗೆ ಭಾಸವಾಯಿತು, ತನಗೆ ಬೆಂಬಲ ನೀಡುವ ಹೊಸ ಸಮುದಾಯವನ್ನು ಪ್ರವೇಶಿಸಿದ್ದೇನೆ ಎಂಬ ಅವರ ನಂಬಿಕೆಯನ್ನು ಇದು ಮತ್ತಷ್ಟು ಬಲಪಡಿಸಿತು. ಆದರೆ ಚರ್ಚ್ನ ಈ ಆರಂಭಿಕ ಉತ್ಸಾಹ ಬಹುಬೇಗನೆ ತಣ್ಣಗಾಯಿತು.
ಯಾಕೆಂದರೆ ಬಿಷಪ್ಸ್ ಕಾಲೇಜಿನಲ್ಲಿ ಅವರನ್ನು ಯಾವುದೇ ವಿಶೇಷ ತರಬೇತಿ ಅಥವಾ ಆರ್ಥಿಕ ಬೆಂಬಲವಿಲ್ಲದೆ ಸಾಮಾನ್ಯ ವಿದ್ಯಾರ್ಥಿಯಾಗಿ ಮಾತ್ರ ಸೇರಿಸಲಾಯಿತು. ಅವರು ಶೀಘ್ರವೇ ಜನಾಂಗೀಯ ತಾರತಮ್ಯವನ್ನು ಎದುರಿಸಲಾರಂಭಿಸಿದರು, ಮೂಲ ಕ್ರೈಸ್ಥರಿಗೆ ವೈನ್ ಸೇರಿದಂತೆ ಉಡುಗೆ ಮತ್ತು ಊಟದಲ್ಲಿ ಸವಲತ್ತುಗಳನ್ನು ನೀಡಲಾಗುತ್ತಿತ್ತು ಆದರೆ ಮಧುಸೂದನ್ ಸೇರಿದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಅವುಗಳನ್ನು ನಿರಾಕರಿಸಲಾಯಿತು. ಮಧುಸೂದನರ ತೀವ್ರ ವಿರೋಧದ ನಂತರವಷ್ಟೇ ಕಾಲೇಜು ನಿಯಮವನ್ನು ಬದಲಾಯಿಸಿತು. ಅವರು ಕಲ್ಪಿಸಿಕೊಂಡ ಕ್ರಿಶ್ಚಿಯನ್ ಸಮಾನತೆ ಆಚರಣೆಯಲ್ಲಿ ಅಲ್ಲ ಅಸ್ತಿತ್ವದಲ್ಲೇ ಇರಲಿಲ್ಲ ಎಂಬುದು ಬಹುಶಃ ಅಲ್ಲಿ ಅವರಿಗೆ ಅನುಭವಕ್ಕೆ ಬಂದಿರಬಹುದು.
ಆರ್ಥಿಕವಾಗಿಯೂ ಸಹ, ಅವರನ್ನು ಕೈಬಿಡಲಾಯಿತು. ಇನ್ನು ಮತಾಂತರದ ಬಳಿಕ ಅವರ ತಂದೆಯೂ ಕೂಡ ಮಧುಸೂದನರಿಗೆ ಕೊಡುತ್ತಿದ್ದ ಹಣವನ್ನು ನಿಲ್ಲಿಸಿದರು. ಇಷ್ಟೆಲ್ಲಾ ಆದರೂ ಚರ್ಚ್ ಒಂದು ಪೈಸೆಯ ಸಹಾಯವನ್ನು ಮಾಡಲಿಲ್ಲ. ಅವರಿಗೆ ಯಾವುದೇ ಮೂಲದಿಂದ ಯಾವುದೇ ಸಹಾಯ ಸಿಗಲಿಲ್ಲ. ಜೀವನೋಪಾಯವಿಲ್ಲದೆ, ಬದುಕಿನ ಹೋರಾಟಕ್ಕಾಗಿ ಅವರು ಅಂತಿಮವಾಗಿ ಕಲ್ಕತ್ತಾವನ್ನು ತೊರೆದು “ತಮ್ಮ ಅದೃಷ್ಟವನ್ನು ಪರೀಕ್ಷಿಸಲು ” ಮದ್ರಾಸ್ಗೆ ಪ್ರಯಾಣಿಸಿದರು. ಅವರ ಮತಾಂತರವನ್ನು ಬೆಂಬಲಿಸಿದ ಚರ್ಚ್ ಅವರು ಬಡತನವನ್ನು ಎದುರಿಸಿದಾಗ ಯಾವುದೇ ರಚನಾತ್ಮಕ ಬೆಂಬಲವನ್ನು ನೀಡದೆ , ಅವರು ಏಕಾಂಗಿಯಾಗಿ ಬದುಕುವಂತೆ ಮಾಡಿತು. ಈ ನಿರಾಶೆ, ನಿರೀಕ್ಷೆ ಮತ್ತು ವಾಸ್ತವದ ನಡುವಿನ ಕಠಿಣ ಅಂತರವೇ ಅವರ ಉಳಿದ ಜೀವನವನ್ನು ರೂಪಿಸಿತು.
ಕ್ರಿಶ್ಚಿಯನ್ ಧರ್ಮವು ಘನತೆ, ಸಮೃದ್ಧಿ ಮತ್ತು ಯುರೋಪ್ಗೆ ಪ್ರಯಾಣಿಸುವ ಅವಕಾಶವನ್ನು ನೀಡುತ್ತದೆ ಎಂದು ನಂಬಿ ಹಿಂದೂ ಕುಟುಂಬದ ಬೆಂಬಲ, ಬಂಗಾಳದ ಬೌದ್ಧಿಕ ವಲಯದ ಗೌರವ, ಸಾಮಾಜಿಕ ಸ್ಥಾನಮಾನ ಇವೆಲ್ಲವನ್ನೂ ತ್ಯಜಿಸಿ ಬಂದ ಹಿಂದೂ ಕಾಲೇಜಿನ ಸ್ಟಾರ್ ವಿದ್ಯಾರ್ಥಿಗೆ ಕ್ರಿಶ್ಚಿಯನ್ ಸಮಾಜವು ಕೇವಲ ಕ್ರಾಸ್, ಬೈಬಲ್ ನೀಡಿತೇ ಹೊರತು ನಿಜವಾದ ಬೆಂಬಲವನ್ನಲ್ಲ. ಹೀಗೆ ಅದೃಷ್ಟ ಪರೀಕ್ಷೆಯನ್ನರಸಿ ಮದ್ರಾಸ್ಗೆ ಬಂದು ಮದುವೆಯಾಗಿ, ನಾಲ್ಕು ಮಕ್ಕಳ ಜವಾಬ್ದಾರಿಯನ್ನು ಹೊತ್ತ ದತ್ತ ಅವರಿಗೆ ಆರ್ಥಿಕ ಭಾರ ಹೆಚ್ಚುತ್ತಾ ಹೋಯಿತು. ಆದರೂ ಮತಾಂತರಕ್ಕೆ ಕಾರಣವಾಗಿದ್ದ ತಮ್ಮ ಕನಸನ್ನು ಅವರು ನನಸಾಗಿಸಿಕೊಂಡರು. ಕೊನೆಗೂ ಅವರು ತಮ್ಮ ಕನಸಿನ ಲಂಡನ್ ತಲುಪಿದರು. ಆದರೆ ಅಲ್ಲೂ ಅವರಿಗೆ ಅವಕಾಶಗಳು ದೊರೆಯಲಿಲ್ಲ. ಅವರು ಗಳಿಸಿದ ಎಲ್ಲವನ್ನೂ ದುಂದುವೆಚ್ಚ ಮಾಡಿ, ಸಾಲದ ಹೊರೆಯೊಂದಿಗೆ ಮತ್ತೆ ಭಾರತಕ್ಕೆ ಮರಳಿದರು.
ಒಂದು ವೇಳೆ ಅವರು ಹಿಂದೂವಾಗಿಯೇ ಉಳಿದಿದ್ದರೆ ಕುಟುಂಬದ ಆಸರೆ – ಬೆಂಬಲ, ಬಂಗಾಳದ ಬೌದ್ಧಿಕ ಜಗತ್ತಿನ ಪ್ರಶಂಸೆ-ಗೌರವ, ಸಮಾಜದ ಆದರ – ಇವೆಲ್ಲವೂ ಅವರ ಜೊತೆಯಲ್ಲಿರುತ್ತಿತ್ತು. ಆದರೆ ಮಧುಸೂದನರು ಆರಿಸಿದ ದಾರಿಯೇ ಬೇರೆಯಾಗಿತ್ತು. ಆ ದಾರಿಯಲ್ಲಿ ಕನಸುಗಳು ಹಾರಾಡಿದವು, ಆಸೆಗಳು ಹುಟ್ಟಿದವು – ಆದರೆ ಕೊನೆಗೆ ಒಂಟಿತನ, ನಿರಾಶೆ ಮತ್ತು ಅಪಾರ ನೋವು ಮಾತ್ರ ಉಳಿದವು. ಭರವಸೆಯೊಂದಿಗೆ ಹೊಸ ನಂಬಿಕೆಯನ್ನು ಸ್ವೀಕರಿಸಿದ ಪ್ರತಿಭೆ, ಚರ್ಚ್ ಬೆಂಬಲವಿಲ್ಲದೆ ನರಕಯಾತನೆ ಅನುಭವಿಸಿತು ಮತ್ತು ಅವರ ಆಯ್ಕೆಯ ಪರಿಣಾಮಗಳು ಅವರು ಕಳೆದುಕೊಂಡ ಜೀವನಕ್ಕಿಂತ ಹೆಚ್ಚು ಆಳವಾಗಿ ಅವರನ್ನು ಕಾಡುತ್ತಿದ್ದವು. ಹೀಗಾಗಿ ಬಂಗಾಳದ ನವಜಾಗೃತಿಯ ಅತ್ಯಂತ ಹೃದಯವಿದ್ರಾವಕ ಕಥೆಗಳಲ್ಲಿ ಒಂದಾಗಿರುವ ಮೈಕೆಲ್ ಮಧುಸೂದನ ದತ್ತರ ಜೀವನ ಇಂದಿಗೂ ನಮ್ಮನ್ನು ಕಾಡುತ್ತದೆ. ಯಾವುದೋ ಆಸೆಗಾಗಿ ಮತಾಂತರಗೊಂಡು ಸ್ವ ಧರ್ಮವನ್ನು ತ್ಯಾಗ ಮಾಡಿದರೂ ಬಯಸಿದ್ದು ಸಿಗದೆ ದತ್ತ ಜೀವನ ಮುಗಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


