
ಅದು 1943ರ ಒಂದು ಕಗ್ಗತ್ತಲೆಯ ರಾತ್ರಿ. ಅಂಡಮಾನ್ನ ಸೆಲ್ಯುಲಾರ್ ಜೈಲಿನ ಕಟ್ಟಕಡೆಯ ಕೋಣೆಯಲ್ಲಿ, ಕಬ್ಬಿಣದ ಸಾಲುಗಳ ಹಿಂದೆ, ಒಬ್ಬಳು ಯುವತಿ ನಿಂತಿದ್ದಳು. ಅವಳ ದೇಹದ ಮೇಲೆಲ್ಲಾ ಗಾಯಗಳು, ರಕ್ತದ ಕಲೆಗಳು. ಬ್ರಿಟಿಷ್ ಅಧಿಕಾರಿ ರೋಷದಿಂದ ಕೂಗಿದ, “ನೇತಾಜಿ ಎಲ್ಲಿ ಅಡಗಿದ್ದಾರೆ? ಹೇಳು, ಇಲ್ಲವೇ ಇಂದು ನಿನ್ನ ಕೊನೆಯ ದಿನ!” ಅವಳು ನಿಧಾನವಾಗಿ ತನ್ನದೆಯತ್ತ ಬೊಟ್ಟು ಮಾಡಿ ನಗುತ್ತಾ ಹೇಳಿದಳು: “ನೇತಾಜಿ ಇಲ್ಲಿಯೇ ಇದ್ದಾರೆ… ನನ್ನ ಹೃದಯದಲ್ಲಿ. ಅವರನ್ನು ಹೊರತೆಗೆಯಬೇಕಾದರೆ, ನನ್ನ ಹೃದಯವನ್ನೇ ಸೀಳಬೇಕು!”. ಆ ಮಾತು ಕೇಳಿ ಅಧಿಕಾರಿ ಕುಪಿತಗೊಂಡ, ಕೆಂಡದಂತಹ ಕಬ್ಬಿಣದ ಉಪಕರಣವನ್ನು ಕುಲುಮೆಯಿಂದ ತೆಗೆದು ಅವಳ ಎದೆಗೆ ಒತ್ತಿಯೇ ಬಿಟ್ಟ. ಚರ್ಮ ಸುಟ್ಟಿತು, ನೋವಿನಿಂದ ಆಕೆ ನರಳಾಡಿದಳು ಆದರೆ ಅವಳ ತುಟಿಯಿಂದ ಒಂದೇ ಒಂದು ಮಾತೂ ಹೊರಬರಲಿಲ್ಲ. ಆ ಯುವತಿಯ ಹೆಸರೇ ನೀರಾ ಆರ್ಯ. ಭಾರತದ ಮೊದಲ ಮಹಿಳಾ ಗೂಢಾಚಾರಿಣಿ ಎಂಬ ಹೆಗ್ಗಳಿಕೆ ಪಡೆದವಳು. ಪದಗಳಿಗೆ ಮೀರಿದ ತ್ಯಾಗ ಮಾಡಿದವಳು. ಅವಳ ಈ ತ್ಯಾಗದ ಹಿಂದೆ ಧೈರ್ಯವಿದೆ, ಶೋಕವಿದೆ. ಮಿಗಿಲಾಗಿ ದೇಶಭಕ್ತಿಯಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗೆಗಿನ ಸಮರ್ಪಣೆ ಇದೆ. ಅಷ್ಟಕ್ಕೂ ಆಕೆ ಭಾರತದ ಮೊದಲ ಗೂಢಾಚಾರಿಣಿಯಾಗಿ ಸಾಹಸ ಮೆರೆದಿದ್ದು ಹೇಗೆ ಎಂಬುದರ ಹಿಂದೆಯೂ ಒಂದು ರೋಚಕ ಕಥೆ ಇದೆ.
ನೇತಾಜಿ ಪ್ರೇರಣೆಯಿಂದ ಭಾರತಕ್ಕೆ ಸಿಕ್ಕಳು ಮೊದಲ ಮಹಿಳಾ ಗೂಢಾಚಾರಿಣಿ
ಉತ್ತರ ಪ್ರದೇಶದ ಶ್ರೀಮಂತ ಕುಟುಂಬದಲ್ಲಿ 1902ರ ಮಾರ್ಚ್ 5 ರಂದು ಜನಿಸಿದ್ದ ಆಕೆಯನ್ನು ದೇಶಭಕ್ತಿಯ ಜ್ವಾಲೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಝಾದ್ ಹಿಂದ್ ಫೌಜ್ನ ರಾಣಿ ಝಾನ್ಸಿ ರೆಜಿಮೆಂಟ್ನತ್ತ ಕೊಂಡೊಯ್ಯಿತು. ಆದರೆ ಆಕೆಯ ತಂದೆ ಚಿಕ್ಕ ವಯಸ್ಸಲ್ಲೇ ಅವಳ ವಿವಾಹವನ್ನು ಬ್ರಿಟಿಷ್ ಸೇನೆಯ ಸಿಐಡಿ ಇನ್ಸ್ಪೆಕ್ಟರ್ ಶ್ರೀಕಾಂತ್ ಜೈ ರಂಜನ್ ದಾಸ್ ಅವರೊಂದಿಗೆ ನೆರವೇರಿಸಿದ್ದರು. ಆರಂಭದಲ್ಲಿ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು, ಆದರೆ ಬರು ಬರುತ್ತಾ ಅದು ದೇಶಭಕ್ತಿಯ ಪರೀಕ್ಷೆಯಾಗಿ ಪರಿವರ್ತನೆಗೊಂಡಿತು. ನೀರಾ ಅವರು ರಹಸ್ಯವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಝಾದ್ ಹಿಂದ್ ಫೌಜ್ನ ರಾಣಿ ಝಾನ್ಸಿ ರೆಜಿಮೆಂಟ್ಗೆ ಸೇರಿದರು. ಅಲ್ಲಿಂದ ಅವರ ಜೀವನದಲ್ಲಿ ತ್ಯಾಗದ ಅಧ್ಯಾಯಗಳು ಆರಂಭವಾದವು. ಒಂದು ದಿನ, ಶ್ರೀಕಾಂತ್ ಅವರು ನೀರಾ ಅವರನ್ನು ಹಿಂಬಾಲಿಸಿ ರಹಸ್ಯ ಸಭೆಯ ಸ್ಥಳಕ್ಕೆ ತಲುಪಿ ನೇತಾಜಿ ಅವರ ಮೇಲೆ ಗುಂಡು ಹಾರಿಸಿಯೇ ಬಿಟ್ಟರು. ಆದರೆ ಗುರಿ ತಪ್ಪಿ ನೇತಾಜಿ ಅವರ ಚಾಲಕನನ್ನು ಈ ಗುಂಡು ತಲುಪಿತ್ತು ಆತ ಅಲ್ಲೇ ಅಸುನೀಗಿದ. ಈ ಸಂದರ್ಭದಲ್ಲಿ ತನ್ನ ದೇಶ ಮತ್ತು ನಾಯಕನನ್ನು ರಕ್ಷಿಸುವ ಸಲುವಾಗಿ ನೀರಾ ಕಿಂಚಿತ್ತೂ ಹಿಂದೆ ಮುಂದೆ ನೋಡದೆ ಕಠಿಣ ನಿರ್ಧಾರವನ್ನು ತೆಗೆದುಕೊಂಡೇ ಬಿಟ್ಟಳು – ತನ್ನ ಪತಿಯನ್ನು ಚಾಕುವಿನಿಂದ ಇರಿದು ಕೊಂದು ಹಾಕಿದಳು. ಆಕೆಯ ಈ ಕಾರ್ಯ ಅವಳ ವೈಯಕ್ತಿಕ ಜೀವನದ ಅತ್ಯಂತ ಕರಾಳ ಭಾಗವಾಗಿತ್ತು. ಆದರೆ ನೇತಾಜಿ ಅವರು ಅಕೆಯ ಧೈರ್ಯಕ್ಕೆ ಮೆಚ್ಚಿ, ಅವಳನ್ನು ಆಝಾದ್ ಹಿಂದ್ ಫೌಜ್ನ ಮೊದಲ ಮಹಿಳಾ ಗೂಢಚಾರಿಕೆಯಾಗಿ ನೇಮಿಸಿದರು. ಅವಳನ್ನು “ನೀರಾ-ನಾಗಿನಿ” ಎಂದು ಕರೆದರು. ನೀರಾ ನಾಗಿನಿ ಎಂದರೆ ಸರ್ಪಗಳ ರಾಣಿಯಂತೆ ತೀಕ್ಷ್ಣಮತಿ ಎಂದು. ಇಲ್ಲಿಂದ ಗೂಢಾಚಾರಿಣಿಯಾಗಿ ಆಕೆ ಜೀವನದ ಗತಿ ಬದಲಾಯಿತು. ಸಾಹಸ, ಧೈರ್ಯ ಆಕೆಯ ಗುರುತಾಯಿತು.
ಗೂಢಾಚಾರಣಿಯಾಗಿ ನೀರಾ ಮಾಡಿದ ಸಾಹಸಕ್ಕೆ ಮಿತಿಯೇ ಇಲ್ಲ
ಗೂಢಚರ್ಯೆಯಲ್ಲಿ ನೀರಾ ಅವರು ಸರಸ್ವತಿ ರಾಜಮಣಿ ( INAನ ಮಿಲಿಟರಿ ಇಂಟೆಲಿಜೆನ್ಸ್ ವಿಭಾಗದಲ್ಲಿ ಕೆಲಸ ಮಾಡಿದ ವೀರಾಂಗನೆ) ಅವರ ಜೊತೆಗೂಡಿ ಕೆಲಸ ಮಾಡಿದರು. ಇಬ್ಬರೂ ಹುಡುಗರ ವೇಷ ಧರಿಸಿ ಬ್ರಿಟಿಷ್ ಅಧಿಕಾರಿಗಳ ಮನೆಗಳು ಮತ್ತು ಶಿಬಿರಗಳಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಾಣಿಕೆ ಮಾಡಿದರು. ಒಂದು ಬಾರಿ ಅವರ ಸಹೋದ್ಯೋಗಿ ದುರ್ಗಾಮಲ್ಲ ಗೋರ್ಖಾ ಅವರು ಬ್ರಿಟಿಷರ ಕೈಗೆ ಸಿಕ್ಕಿಬಿದ್ದಾಗ, ನೀರಾ ಮತ್ತು ಸರಸ್ವತಿ ತೃತೀಯ ಲಿಂಗಿಗಳಂತೆ ವೇಷ ಧರಿಸಿ ಜೈಲಿಗೆ ನುಗ್ಗಿ, ಮಾದಕ ದ್ರವ್ಯ ಕೊಟ್ಟು ಕಾವಲುಗಾರರನ್ನು ಮೂರ್ಛೆ ಹೋಗುವಂತೆ ಮಾಡಿ ಅವರನ್ನು ರಕ್ಷಿಸಿದರು. ಆದರೆ ತಪ್ಪಿಸಿಕೊಳ್ಳುವಾಗ ಸರಸ್ವತಿ ಅವರ ಕಾಲಿಗೆ ಗುಂಡು ತಗುಲಿತ್ತು. ಮೂರು ದಿನಗಳ ಕಾಲ ಕಾಡಿನ ಮರದ ಮೇಲೆ ಅಡಗಿಕೊಂಡು ಅವರು ತಮ್ಮ ಪ್ರಾಣ ಉಳಿಸಿಕೊಂಡರು. ನೇತಾಜಿ ಅವರು ಅವರ ಸಾಹಸಕ್ಕೆ ಮೆಚ್ಚಿ ನೀರಾ ಅವರನ್ನು ಕ್ಯಾಪ್ಟನ್ ಮತ್ತು ಸರಸ್ವತಿ ಅವರನ್ನು ಲೆಫ್ಟಿನೆಂಟ್ ಆಗಿ ನೇಮಿಸಿದರು. ನೀರಾ ಅವರಿಗೆ ನೇತಾಜಿ ಅವರ ಭದ್ರತೆಯ ಜವಾಬ್ದಾರಿಯನ್ನೂ ನೀಡಲಾಯಿತು.
ಬ್ರಿಟಿಷರ ಕೈಗೆ ಸಿಕ್ಕಿಬಿದ್ದಾಗ ನೀರಾ ಅನುಭವಿಸಿದ ಯಾತನೆ ಅತಿ ಘೋರ
ಗೂಢಾಚಾರಿಣಿಯಾಗಿ ಬ್ರಿಟಿಷರ ವಿರುದ್ಧ ಮಾಹಿತಿಗಳನ್ನ ಸಂಗ್ರಹಿಸಿ ಆಜಾದ್ ಹಿಂದ್ ಫೌಜ್ಗೆ ತಲುಪಿಸುತ್ತಿದ್ದ ನೀರಾ ಒಂದು ದಿನ ಬ್ರಿಟಿಷರ ಕೈಗೆ ಸಿಕ್ಕಿ ಬೀಳಬೇಕಾದ ಪರಿಸ್ಥಿತಿ ಬಂದೇ ಬಿಟ್ಟಿತು. ಬ್ರಿಟಿಷರು ಆಕೆಯನ್ನು ಕಾಲಾಪಾನಿ ಜೈಲಿನಲ್ಲಿ ವರ್ಷಗಳ ಕಾಲ ಇಟ್ಟು ಕ್ರೂರ ಚಿತ್ರಹಿಂಸೆಯನ್ನು ನೀಡಿದರು. ಪ್ರತಿ ಶಿಕ್ಷೆಯನ್ನು ಆಕೆ ಸಹಿಸಿಕೊಂಡಲೇ ಹೊರತು ನೇತಾಜೀ ಅವರ ಕಾರ್ಯಾಚರಣೆಯ ಬಗೆಗಿನ ರಹಸ್ಯವನ್ನು ಆಕೆ ಬಾಯಿ ಬಿಡಲಿಲ್ಲ. ನೇತಾಜಿ ಅವರು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಒತ್ತಡ ಹೇರಿ ತೀವ್ರ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡಲಾಯಿತು. ಆಕೆ “ನೇತಾಜಿ ನನ್ನ ಹೃದಯದಲ್ಲಿ ಇದ್ದಾರೆ” ಎಂದಾಗ, ಜೈಲರ್ ಅವಳ ಎದೆಗೆ ಬೆಂಕಿಯಿಂದ ಬರೆ ಎಳೆದು ಸ್ತನಗಳನ್ನು ವಿಕೃತಗೊಳಿಸುವ ಪ್ರಯತ್ನ ಮಾಡಿದ್ದ. ಆದರೂ ಆಕೆ ಎದೆಗುಂದದೆ ಅಚಲವಾಗಿ ದೇಶಭಕ್ತಿ ಮೆರೆದಿದ್ದಳು. ಸ್ವಾತಂತ್ರ್ಯದ ನಂತರ 1947 ರಲ್ಲಿ ಆಕೆಯು ಜೈಲಿನಿಂದ ಬಿಡುಗಡೆಯಾದಳು.
ಅಪ್ರತಿಮ ತ್ಯಾಗ ಮಾಡಿದರೂ ಪುರಸ್ಕಾರ ಮನ್ನಣೆ ಪಡೆಯಲಿಲ್ಲ
ನೀರಾ ಆರ್ಯ ಸಿರಿವಂತ ಕುಟುಂಬದಲ್ಲಿ ಜನಿಸಿದಳು. ಆದರೆ ದೇಶಕ್ಕಾಗಿ ಆಕೆ ತುಳಿದಿದ್ದು ಸಂಘರ್ಷದ ಹಾದಿಯನ್ನು. ಸ್ವಾತಂತ್ರ್ಯ ಬಂದ ಬಳಿಕವೂ ಆಕೆ ಸರ್ಕಾರದಿಂದ ಯಾವುದೇ ಗೌರವವನ್ನು ಪಡೆಯಲಿಲ್ಲ. ಅದಕ್ಕೆ ಆಕೆ ಬಯಸಿದವಳೂ ಅಲ್ಲ. ಹೈದರಾಬಾದ್ನಲ್ಲಿ ಬಡತನದಲ್ಲಿ ಹೂವು ಮಾರಾಟ ಮಾಡಿ ಜೀವನ ನಡೆಸಿದಳು. ಸರ್ಕಾರಿ ಪಿಂಚಣಿ ಬೇಡವೆಂದು ನಿರಾಕರಿಸಿದಳು. 1998ರಲ್ಲಿ ಆಕೆ ಇಹಲೋಕ ತ್ಯಜಿಸಿ ಅಮರಳಾಗಿ ಉಳಿದಳು..
ನೀರಾ ಆರ್ಯ ಕಥೆ ಕೇವಲ ಧೈರ್ಯದ ಕಥೆಯಲ್ಲ. ಅದು ದೇಶಕ್ಕಾಗಿ ಪ್ರೀತಿ, ಕುಟುಂಬ, ಗೌರವ ಎಲ್ಲವನ್ನೂ ತ್ಯಾಗ ಮಾಡಿದ ವೀರ ಮಹಿಳೆಯ ಕಥೆ. ಆಕೆಯ ಜೀವನಗಾಥೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ತ್ಯಾಗವನ್ನು ಎತ್ತಿ ತೋರಿಸುತ್ತದೆ. ಅವಳ ಜೀವನವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ತ್ಯಾಗದ ಅತ್ಯುನ್ನತ ಉದಾಹರಣೆಯಾಗಿದೆ. ಪತಿ, ಕುಟುಂಬ, ದೇಹದ ಗೌರವ, ಸುಖೀ ಜೀವನ – ಎಲ್ಲವನ್ನೂ ದೇಶಕ್ಕಾಗಿ ಬಲಿಕೊಟ್ಟ ಅವಳು, ತನ್ನ ಹೃದಯದಲ್ಲಿ ನೇತಾಜಿಯನ್ನು ಹೊತ್ತುಕೊಂಡು ಕಾಲಾಪಾನಿಯ ಕಗ್ಗತ್ತಲೆಯಲ್ಲಿ ಧೈರ್ಯದಿಂದ ನಿಂತಳು. ಅವಳ ರಕ್ತದಿಂದ ಬರೆದ ಜೀವನ ಕಥೆ ಇತಿಹಾಸದಲ್ಲಿ ದೀರ್ಘಕಾಲ ಮರೆಯಾಗಿದ್ದವು, ಆದರೆ ಇಂದು ಅವುಗಳು ಮತ್ತೆ ಬೆಳಕಿಗೆ ಬಂದಿವೆ – ಸ್ಮಾರಕಗಳು, ಪುಸ್ತಕಗಳು, ಚಲನಚಿತ್ರಗಳ ಮೂಲಕ. ಸ್ವಾತಂತ್ರ್ಯವು ಕೇವಲ ಯುದ್ಧಭೂಮಿಯಲ್ಲಿ ಗೆದ್ದದ್ದಲ್ಲ, ಅದು ಅನೇಕ ಅನಾಮಧೇಯ ಹೃದಯಗಳು ಸಹಿಸಿದ ನೋವುಗಳಿಂದ ನಿರ್ಮಿತವಾಯಿತು. ಅವಳಂತಹ ವೀರಾಂಗನೆಯರ ತ್ಯಾಗವಿಲ್ಲದಿದ್ದರೆ ಇಂದಿನ ಭಾರತವಿರುತ್ತಿರಲಿಲ್ಲ. ಅವಳ ಕಥೆಯು ಶಾಶ್ವತವಾಗಿ ಉಳಿಯಲಿ – ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೇತಾಜಿಯಂತೆಯೇ ಧೈರ್ಯ ಮತ್ತು ನಿಷ್ಠೆಯ ದೀಪವಾಗಿ ಉರಿಯಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


