
ಮಣಿಪುರದ ಗುಡ್ಡಗಾಡುಗಳಲ್ಲಿ, ನೀಲಿ ಮೋಡಗಳ ನಡುವೆ ಜನಿಸಿದ್ದಳು ರಾಣಿ ಗೈಡಿನ್ಲು. ಆಕೆ ಕೇವಲ 13 ವರ್ಷದ ಹುಡುಗಿ, ಆದರೆ ಅವಳ ಹೃದಯದಲ್ಲಿ ಶತಮಾನಗಳ ಪೂರ್ವಜರ ನಂಬಿಕೆಯ ಬೆಂಕಿ ಉರಿಯುತ್ತಿತ್ತು. ಆ ಅವಧಿಯಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಆಗಮನವು ನಾಗಾ ಜನಾಂಗದ ಆಧ್ಯಾತ್ಮಿಕ ಜಗತ್ತನ್ನು ಅಲುಗಾಡಿಸಿತ್ತು. ಸಾಂಪ್ರದಾಯಿಕ ಧರ್ಮ, ಸಂಸ್ಕೃತಿ, ಗುರುತು – ಎಲ್ಲವೂ ಅಳಿವಿನ ಅಂಚಿಗೆ ಬಂದು ನಿಂತಿತ್ತು. ಆ ಸಂಕಷ್ಟದಲ್ಲಿ ಗೈಡಿನ್ಲು ಹೆರಾಕಾ ಚಳುವಳಿಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಳು. ಆ ಚಳುವಳಿಯು ಕೇವಲ ಧಾರ್ಮಿಕ ಪುನರುಜ್ಜೀವನವಲ್ಲ. ಅದು ಜನರ ಗುರುತಿನ ರಕ್ಷಣೆ, ಸಂಸ್ಕೃತಿಯ ಸಂರಕ್ಷಣೆಯ ಹೋರಾಟವಾಗಿತ್ತು.
ಹೆರಾಕಾ ಚಳುವಳಿಯ ಬೆಳಕು
ಹೆರಾಕಾ – ಅಂದರೆ ‘ಶುದ್ಧ’ ಅಥವಾ ‘ಪವಿತ್ರ’. ಇದು ತಿಂಗ್ಕಾವೊ ರಾಗ್ವಾಂಗ್ ಎಂಬ ಏಕದೇವೋಪಾಸಣೆ (ಮೊನೊಥೀಸ್ಟಿಕ್)ಯ ನಂಬಿಕೆ. ಶತಮಾನಗಳ ಹಳೆಯ ನಾಗಾ ಆಧ್ಯಾತ್ಮಿಕ ಪದ್ಧತಿಗಳನ್ನು ಪುನಃ ಜೀವಂತಗೊಳಿಸಿ, ಸಣ್ಣ ದೇವರುಗಳಿಗೆ ಮಾಡುತ್ತಿದ್ದ ಬಲಿಗಳನ್ನು ತ್ಯಜಿಸಿ, ಶುದ್ಧ ಏಕದೇವಾರಾಧನೆಗೆ ಒತ್ತು ನೀಡಿದ ಚಳುವಳಿ ಇದು. ಇದನ್ನು ಆರಂಭಿಸಿದವರು ಗೈಡಿನ್ಲುವಿನ ಸೋದರಸಂಬಂಧಿ ಹೈಪೌ ಜಡೋನಾಂಗ್. 1920ರ ದಶಕದಲ್ಲಿ ಬ್ರಿಟಿಷ್ ಆಡಳಿತದ ತೆರಿಗೆಗಳು, ಬಲವಂತದ ಕೆಲಸಗಳು ಮತ್ತು ಮಿಷನರಿಗಳ ಮತಾಂತರ ಒತ್ತಡಗಳ ವಿರುದ್ಧ ಇದು ಜನ್ಮತಾಳಿತು. ಜಡೋನಾಂಗ್ ತನ್ನ ಜನರನ್ನು ಒಗ್ಗೂಡಿಸಿ, “ನಮ್ಮ ಪೂರ್ವಜರ ದಾರಿ ತಪ್ಪಿದು” ಎಂದು ಸಾರಿದರು. ಆದರೆ 1931ರ ಆಗಸ್ಟ್ 29ರಂದು ಬ್ರಿಟಿಷರು ಜಡೋನಾಂಗ್ರನ್ನು ಬಂಧಿಸಿ, ನಾಟಕೀಯ ವಿಚಾರಣೆಯ ನಂತರ ಗಲ್ಲಿಗೇರಿಸಿದರು. ಆಗ ಕೇವಲ 16 ವರ್ಷದ ಗೈಡಿನ್ಲು ಮುಂದೆ ಬಂದಳು. ಆಕೆಯ ಕಣ್ಣುಗಳಲ್ಲಿ ಭಯವಿರಲಿಲ್ಲ; ಬದಲಿಗೆ ದೃಢ ನಿಶ್ಚಯವಿತ್ತು. “ನಮ್ಮ ಧರ್ಮವನ್ನು ಕಳೆದುಕೊಂಡರೆ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತೇವೆ; ಸಂಸ್ಕೃತಿಯನ್ನು ಕಳೆದುಕೊಂಡರೆ ನಾವು ಯಾರೆಂದೇ ಮರೆಯುತ್ತೇವೆ” ಎಂದು ಆಕೆ ಹೇಳಿದ ಮಾತುಗಳು ಇಂದಿಗೂ ನಾಗಾ ಜನರ ಗುಂಡಿಗೆಯಲ್ಲಿ ಕಂಪಿಸುತ್ತಿವೆ.
ಯುವ ರಾಣಿಯ ಹೋರಾಟ
ಗೈಡಿನ್ಲು ಹಳ್ಳಿಯಿಂದ ಹಳ್ಳಿಗೆ ಸಂಚರಿಸಿ ಜನರನ್ನು ಎಚ್ಚರಿಸಿದಳು. ಮಿಷನರಿಗಳು ಶಿಕ್ಷಣ, ಆರೋಗ್ಯ ಸೇವೆಗಳ ಮೂಲಕ ಮತಾಂತರ ಮಾಡುತ್ತಿದ್ದರು ಎಂಬುದನ್ನು ಆಕೆ ತಿಳಿದಿದ್ದಳು. ಅವರ ಮೂಲ ಉದ್ದೇಶ ಸಂಸ್ಕೃತಿಯ ಮೇಲಿನ ದಾಳಿಯೆಂಬುದು ಆಕೆಗೆ ಅರಿವಾಗಿತ್ತು. ಇದಕ್ಕಾಗಿಯೇ ಆಕೆ ತನ್ನ ಜನರನ್ನು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು, ಕಿವಿಯೋಲೆಗಳನ್ನು ಧರಿಸಲು, ಹಳೆಯ ಕೇಶವಿನ್ಯಾಸವನ್ನು ಕಾಪಾಡಿಕೊಳ್ಳಲು ಪ್ರೇರೇಪಿಸಿದಳು. “ನಮ್ಮ ಬಟ್ಟೆಗಳನ್ನು ನೋಡಿ ನೀವು ನನ್ನನ್ನು ಗುರುತಿಸುತ್ತೀರ. ಅದಿಲ್ಲದಿದ್ದರೆ ನಾವು ಒಬ್ಬರನ್ನೊಬ್ಬರು ನಾಗಾ ಜನಾಂಗದವರು ಎಂದು ಹೇಗೆ ತಿಳಿಯುವುದು?” ಎಂದು ತನ್ನ ಯುವ ಸಮುದಾಯಕ್ಕೆ ಆಕೆ ಕೇಳಿದ ಮಾತು ಆಕೆಯ ದಾರ್ಶನಿಕತೆಯನ್ನು ತೋರಿಸುತ್ತದೆ.1960ರಲ್ಲಿ ಆಕೆ ‘ಕ್ವೀನ್ ಪಾರ್ಟಿ’ ಅಥವಾ ‘ಜೆಲಿಯಾಂಗ್ರೋಂಗ್ ಪಾರ್ಟಿ’ಯನ್ನು ಸ್ಥಾಪಿಸಿದಳು. ಇದು ಸುಮಾರು 400 ಸಶಸ್ತ್ರ ಸ್ವಯಂಸೇವಕರು ಮತ್ತು ಸಾವಿರಾರು ಬೆಂಬಲಿಗರನ್ನು ಹೊಂದಿತ್ತು. ಹೆರಾಕಾ ನಂಬಿಕೆಯನ್ನು ಬಲಪಡಿಸಲು, ಮತಾಂತರ ಒತ್ತಡಗಳನ್ನು ಎದುರಿಸಲು ಇದು ಸಾಮಾಜಿಕ-ಆಡಳಿತ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಿತು. ಆಕೆಯ ನೇತೃತ್ವದಲ್ಲಿ ಹೆರಾಕಾ ಚಳುವಳಿಯು ಬ್ರಿಟಿಷ್ ಆಡಳಿತದ ವಿರುದ್ಧ ಮಾತ್ರವಲ್ಲ, ಮಿಷನರಿ ಪ್ರಭಾವದ ವಿರುದ್ಧವೂ ದೃಢವಾಗಿ ನಿಂತಿತು.
ಸ್ವಾತಂತ್ರ್ಯದ ನಂತರವೂ…
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಆಕೆಯ ಹೋರಾಟ ಜನರ ಗಮನೆ ಸೆಳೆಯಿತು. ಜವಾಹರಲಾಲ್ ನೆಹರು ಆಕೆಯನ್ನು ಭೇಟಿಯಾಗಿ ‘ರಾಣಿ’ ಎಂಬ ಬಿರುದು ನೀಡಿದರು – ‘ಬೆಟ್ಟಗಳ ಮಗಳು’ ಎಂದು ಕರೆದರು. ಆದರೆ ಆಕೆಯ ಹೋರಾಟ ಮುಗಿದಿರಲಿಲ್ಲ. ಕ್ರಿಶ್ಚಿಯನ್ ಮತಾಂತರದಿಂದ ಹೆರಾಕಾ ಸಂಪ್ರದಾಯವನ್ನು ರಕ್ಷಿಸಲು ಆಕೆ ಮತ್ತಷ್ಟು ಮುಂದುವರಿದು ಹೋರಾಡಿದಳು.
1993ರಲ್ಲಿ ಆಕೆ ನಮ್ಮನ್ನು ಅಗಲಿರಬಹುದು, ಆದರೆ ಆಕೆಯ ಚಳುವಳಿ ಇಂದಿಗೂ ಜೀವಂತವಾಗಿದೆ. ರಾಣಿ ಗೈಡಿನ್ಲು ಕೇವಲ ಸ್ವಾತಂತ್ರ್ಯ ಹೋರಾಟಗಾರ್ತಿಯಲ್ಲ; ಆಕೆ ನಾಗಾ ಜನರ ಆತ್ಮದ ರಕ್ಷಕಿ. ಯುವತಿಯೊಬ್ಬಳು ತನ್ನ ಜನರ ಗುರುತನ್ನು ಉಳಿಸಲು ಮಾಡಿದ ಹೋರಾಟ – ಅದು ಭಾರತದ ಇತಿಹಾಸದ ಅತ್ಯಂತ ಸ್ಫೂರ್ತಿದಾಯಕ ಕಥೆಗಳಲ್ಲಿ ಒಂದು. ಆಕೆಯ ಮಾತುಗಳು ಇಂದಿಗೂ ಗುಂಡಿಗೆಯಲ್ಲಿ ಘರ್ಜಿಸುತ್ತವೆ: “ಧರ್ಮವನ್ನು ಕಳೆದುಕೊಂಡರೆ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತೇವೆ; ಸಂಸ್ಕೃತಿಯನ್ನು ಕಳೆದುಕೊಂಡರೆ ನಮ್ಮನ್ನೇ ನಾವು ಕಳೆದುಕೊಳ್ಳುತ್ತೇವೆ.” ಆ ಮಹಾನ್ ರಾಣಿಗೆ ನಮ್ಮದೊಂದು ಸೆಲ್ಯೂಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


