ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಭಾರತದ ನಿರ್ಧಾರ ಬಗ್ಗೆ ಚರ್ಚೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗುಪ್ತ ಸಭೆಯನ್ನು ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ, ” ಕಾಶ್ಮೀರದ ಬಗೆಗಿನ ನಿರ್ಧಾರ ಸಂಪೂರ್ಣ ಆಂತರಿಕವಾದುದು” ಎಂದು ಪುನರುಚ್ಛರಿಸಿದೆ.
ಪಾಕಿಸ್ಥಾನದ ಆಪ್ತ ಚೀನಾದ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕಾಶ್ಮೀರ ವಿಷಯದ ಬಗ್ಗೆ ಚರ್ಚೆ ನಡೆಸಲು ಗುಪ್ತ ಸಭೆಯನ್ನು ಶುಕ್ರವಾರ ನಡೆಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಮತ್ತು ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು, “ಕಾಶ್ಮೀರದ ಮೇಲೆ ಪ್ರಸ್ತುತ ವಿಧಿಸಲಾಗಿರುವ ಎಲ್ಲಾ ನಿರ್ಬಂಧಗಳನ್ನು ಕ್ರಮೇಣ ತೆಗೆದುಹಾಕಲು ಸರ್ಕಾರ ಬದ್ಧವಾಗಿದೆ ಮತ್ತು ಅಲ್ಲಿ ಸಹಜ ಸ್ಥಿತಿಯನ್ನು ತರಲು ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ” ಎಂದು ಹೇಳಿದ್ದಾರೆ.
“ಚಿಕಿತ್ಸೆ ನೀಡುವ ಬದಲು ರೋಗ ಬಾರದಂತೆ ತಡೆಗಟ್ಟುವುದೇ ಮೇಲು. ನಾವು ತೆಗೆದುಕೊಂಡ ಕ್ರಮಗಳು ತಡೆಗಟ್ಟುವಿಕೆಯ ಕ್ರಮವಾಗಿದೆ. ಈ ಪ್ರಯತ್ನಗಳು ಕೆಲವೊಮ್ಮೆ ನಿರ್ಬಂಧಗಳಿಗೆ ಕಾರಣವಾಗುತ್ತವೆ. ಆದರೆ ಕಾಶ್ಮೀರದಲ್ಲಿ ಇದುವರೆಗೆ ಒಂದೂ ಸಾವು ಸಂಭವಿಸಿಲ್ಲ” ಎಂದು ಅಕ್ಬರುದ್ದೀನ್ ವಿಶ್ವಸಂಸ್ಥೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನಮ್ಮ ನಿರ್ಧಾರದಲ್ಲಿ ಯಾವುದೇ ಬಾಹ್ಯ ಪ್ರಭಾವಗಳಿಲ್ಲ, ಭಾರತ ಸರ್ಕಾರ ಮತ್ತು ನಮ್ಮ ಸಂಸತ್ತು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರಗಳು ಉತ್ತಮ ಆಡಳಿತವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿವೆ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿನ ನಮ್ಮ ಜನರಿಗೆ ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಫಲ ಸಿಗುವಂತೆ ಮಾಡುವುದು ನಮ್ಮ ಉದ್ದೇಶ” ಎಂದಿದ್ದಾರೆ.
ಪಾಕಿಸ್ಥಾನಕ್ಕೆ ತಿರುಗೇಟು ನೀಡಿರುವ ಅಕ್ಬರುದ್ದೀನ್, “ಇಸ್ಲಾಮಾಬಾದ್ ಭಯೋತ್ಪಾದನೆಯನ್ನು ನಿಲ್ಲಿಸಿ ಮಾತುಕತೆಯನ್ನು ಆರಂಭಿಸಬೇಕು. ತನ್ನ ನೆಲದ ವಾಸ್ತವತೆಯನ್ನು ಮುಚ್ಚಿಟ್ಟು ಪಾಕಿಸ್ಥಾನ ಬೇರೆಯವರಿಗೆ ಉಪದೇಶ ನೀಡುತ್ತಿದೆ. ಒಂದು ರಾಷ್ಟ್ರವಾದ ಪಾಕಿಸ್ಥಾನ ಮತ್ತು ಅದರ ನಾಯಕರು ಭಾರತದಲ್ಲಿ ಹಿಂಸಾಚಾರವನ್ನು ಹರಡಲು ‘ಜಿಹಾದ್’ ಪರಿಭಾಷೆಯನ್ನು ಬಳಸುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.