ಮಂಗಳೂರು : ಅಗರಿ ಶ್ರೀನಿವಾಸ ಭಾಗವತರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಅವರ ಸುಪುತ್ರರಾದ ಸುಪ್ರಸಿದ್ಧ ಭಾಗವತರಾದ ಅಗರಿ ರಘುರಾಮ ಭಾಗವತರು, ಪ್ರಸಂಗಕರ್ತರಾದ ಅಗರಿ ಭಾಸ್ಕರ್ ರಾವ್, ಹಾಗೂ ಅವರ ಮೊಮ್ಮಕ್ಕಳಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಗೃಹಪಯೋಗಿ ಮಾರಾಟ ಸಂಸ್ಥೆಯಾದ ” ಅಗರಿ ಎಂಟರ್ಪ್ರೈಸ್ ” ನ ಮಾಲಕರಾದ ಅಗರಿ ರಾಘವೇಂದ್ರ ರಾವ್ , ವಾದಿರಾಜ್ ರಾವ್ ರವರು ಸ್ಥಾಪಿಸಿದ ” ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಸಮಿತಿ ಸುರತ್ಕಲ್ ” ಮೂಲಕ 2006 ರಿಂದ ಪ್ರತೀ ವರ್ಷ ಹಿರಿಯ ಕಲಾವಿದರನ್ನು ಗುರುತಿಸಿ ” ಅಗರಿ ಪ್ರಶಸ್ತಿ ” ನೀಡಿ ಸಂಮಾನಿಸುವ ಯೋಜನೆ ಹೊಂದಿದ್ದಾರೆ. 2017 ನೇ ಸಾಲಿನ ” ಅಗರಿ ಪ್ರಶಸ್ತಿ ” ಗೆ ಯಕ್ಷಗಾನದ ಸುಪ್ರಸಿದ್ಧ ಅರ್ಥಧಾರಿ, ಬರಹಗಾರ ಹಾಗೂ ವಿಮರ್ಶಕರಾದ ಡಾ.ಪ್ರಭಾಕರ ಜೋಶಿಯವರು ಆಯ್ಕೆಯಾಗಿದ್ದಾರೆ.
ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ (ರಿ) ಗೋವಿಂದದಾಸ್ ಕಾಲೇಜ್ ಸುರತ್ಕಲ್ ಹಾಗೂ ದುರ್ಗಾ ಮಕ್ಕಳ ಮೇಳ , ಕಟೀಲು ಇವರ ಸಹಕಾರದಲ್ಲಿ ದಿನಾಂಕ 01.04.2018 ರಂದು ಕಟೀಲಿನ ಸರಸ್ವತಿ ಸದನದಲ್ಲಿ ಈ ಸಾಲಿನ ” ಸಂಸ್ಮರಣೆ – ಸಂಮಾನ – ಅಗರಿ ನಾಮಸ್ಮರಣೆ – ತಾಳಮದ್ದಳೆ ” ಕಾರ್ಯಕ್ರಮ ನಡೆಯಲಿದೆ.
ದಿ. ಅಗರಿ ಶ್ರೀನಿವಾಸ ಭಾಗವತರು ಪ್ರಾತಃ ಸ್ಮರಣೀಯರೆನಿಸಿಕೊಂಡ ಕಲಾವಿದರು. 22.05.1906 ರಲ್ಲಿ ಜನಿಸಿದ ಅಗರಿಯವರು ಬಾಲ್ಯದಲ್ಲೇ ಅಪ್ರತಿಮ ಪ್ರತಿಭೆ ಹೊಂದಿದವರು. ಕೇವಲ 18 ರ ಪ್ರಾಯದಲ್ಲೇ ಭಾಗವತರಾಗಿ ತೊಡಗಿಸಿಕೊಂಡು ಅಪಾರ ಸಿದ್ಧಿ ಗಳಿಸಿದ ರಂಗ ನಿರ್ದೇಶಕರೂ ಹೌದು. 1997 ರ ತನಕ 91 ಸಂವತ್ಸರಗಳ ಕಾಲದ ಬದುಕಿನಲ್ಲಿ 5 ದಶಕಗಳಿಗೂ ಮಿಕ್ಕಿಮೂಲ್ಕಿ , ನಾರಾವಿ, ಕದ್ರಿ , ಕೊಲ್ಲೂರು , ಪಣಂಬೂರು, ಧರ್ಮಸ್ಥಳ, ಕೂಡ್ಲು , ಕುಂಡಾವು , ಸುರತ್ಕಲ್ , ಮಂತ್ರಾಲಯ , ಸುಂಕದಕಟ್ಟೆ ,ಮುಂಡ್ಕೂರು ಮುಂತಾದ ಮೇಳಗಳಲ್ಲಿ ಯಕ್ಷರಂಗದ ತಿರುಗಾಟ ನಡೆಸಿದ ಅನುಭವಿಗಳು .” ಶಿಸ್ತಿನ ರಂಗ ನಿರ್ದೇಶಕರು ” ಎಂದೇ ಪ್ರಸಿದ್ಧರಾಗಿದ್ದ ಅಗರಿಯವರು 75 ಕ್ಕೂ ಮಿಕ್ಕಿ ಪೌರಾಣಿಕ ಪ್ರಸಂಗಗಳನ್ನು ಕಂಠಪಾಟ ಹೊಂದಿದ್ದರು. ಬಾಲ್ಯದಲ್ಲೇ ಛಂದಃಶಾಸ್ತ್ರದಲ್ಲಿ ಅದ್ಭುತ ಹಿಡಿತ ಹೊಂದಿದ್ದ ಅಗರಿಯವರು ಯಕ್ಷರಂಗದಲ್ಲಿ 25,000 ಕ್ಕೂ ಹೆಚ್ಚು ಭಾರಿ ಪ್ರದರ್ಶನಗೊಂಡು ವಿನೂತನ ದಾಖಲೆ ನಿರ್ಮಿಸಿದ ಶ್ರೀದೇವಿ ಮಹಾತ್ಮೆ ಅಲ್ಲದೇ ಬಪ್ಪನಾಡು ಕ್ಷೇತ್ರಮಹಾತ್ಮೆ , ಕಟೀಲು ಕ್ಷೇತ್ರ ಮಹಾತ್ಮೆ , ತಿರುಪತಿ ಕ್ಷೇತ್ರ ಮಹಾತ್ಮೆ , ಶ್ರೀದೇವಿ ಲಲಿತೋಪಖ್ಯಾನ , ಭರತೇಶ ವೈಭವ , ಶಿವ ಲೀಲಾರ್ಣವ , ಧನಗುಪ್ತ ಮಹಾಬಲಿ , ಭಗವಾನ್ ಬುದ್ಧ , ತುಳುನಾಡ ಸಿರಿ ಮುಂತಾದ ಮೌಲಿಕ ಯಕ್ಷಗಾನ ಪ್ರಸಂಗಗಳನ್ನು ಯಕ್ಷರಂಗಕ್ಕೆ ಅರ್ಪಿಸಿದ್ದಾರೆ. ಆಶುಕವಿಗಳಾಗಿದ್ದು, ರಂಗದಲ್ಲೇ ಹಲವಾರು ಪ್ರಸಂಗಗಳನ್ನು, ಪದ್ಯಗಳನ್ನು ರಚಿಸಿದ್ದರೂ, ಅವೆಲ್ಲವೂ ಅಪ್ರಕಟಿತವಾಗಿರುವ ಕಾರಣ ಇದೊಂದು ಯಕ್ಷರಂಗಕ್ಕೆ ದೊಡ್ಡ ನಷ್ಟವೇ ಸರಿ. ಶಿಸ್ತನ್ನು ಕಟ್ಟುನಿಟ್ಟಾಗಿ ರಂಗದಲ್ಲಿ ಅನುಷ್ಠಾನಗೊಳಿಸಿ , ಪ್ರದರ್ಶನಗಳು ಯಶಸ್ವಿಯಾಗುವಂತೆ ನಿರ್ದೇಶಿಸುವ ವಿಶಿಷ್ಟ ಚಾಕಚಕ್ಯತೆ ಅಗರಿಯವರದ್ದು. ಎಲ್ಲಾ ಯಕ್ಷಗಾನ ಪ್ರಸಂಗಗಳ ” ನಡೆ ” ಸಂಪೂರ್ಣವಾಗಿ ಅರಿತಿದ್ದ ಕಾರಣ ಅಗರಿಯವರ ಪದ್ಯಕ್ಕೆ ಅರ್ಥ ಹೇಳಿದ ಅಥವಾ ವೇಷ ಮಾಡಿದ ಕಲಾವಿದರು ಪುಣ್ಯವಂತರು ಎಂಬ ಭಾವನೆ ಆ ಕಾಲದಲ್ಲಿತ್ತು.
ಪ್ರಶಸ್ತಿ ಸನ್ಮಾನಿತರ ಕುರಿತು ಪರಿಚಯ
ಡಾ.ಪ್ರಭಾಕರ ಜೋಷಿ :
ಡಾ. ಪ್ರಭಾಕರ ಜೋಷಿಯವರು ವರ್ತಮಾನ ಕಾಲದ ಹಿರಿಯ ಅರ್ಥಧಾರಿ ಹಾಗೂ ವಿಮರ್ಶಕರು. ಯಕ್ಷರಂಗದ ಅಗ್ರಪಂಕ್ತಿಯ ಕಲಾವಿದರೆಂದು ಗುರುತಿಸಿಕೊಂಡಿರುವ ಡಾ.ಜೋಷಿಯವರು ಶೇಣಿಯುಗ ಹಾಗೂ ಪ್ರಸ್ತುತ ಕಲಾವಿದರ ನಡುವಿನ ಕೊಂಡಿಯಾಗಿದ್ದಾರೆ. ಅಗರಿ ಶ್ರೀನಿವಾಸ ಭಾಗವತರೊಂದಿಗೆ ಒಡನಾಟ ಹೊಂದಿದ್ದು , ಅಗರಿಯವರೊಂದಿಗೆ ನೂರಾರು ಕೂಟಗಳಲ್ಲಿ ಅರ್ಥ ಹೇಳಿದವರು .ಯಕ್ಷಗಾನದಲ್ಲೇ ಅಪಾರ ಸಾಧನೆ ಮಾಡಿ ” ಡಾಕ್ಟರೇಟ್ ” ಪಡೆದ ಹಿರಿಯ ಕಲಾವಿದರೂ ಹೌದು. ಯಕ್ಷಗಾನದ ಯಾವುದೇ ಜಿಜ್ಞಾಸೆಗಳಿಗೆ ಸಮರ್ಥವಾಗಿ ಉತ್ತರಿಸಬಲ್ಲ ಅನುಭವೀ ವಿದ್ವಾಂಸರು.
ವೃತ್ತಿಯಲ್ಲಿ ಕಾಲೇಜಿನ ಪ್ರಾಚಾರ್ಯರಾಗಿದ್ದು ನಿವೃತ್ತರಾಗಿರುವ ಡಾ. ಜೋಷಿಯವರ ಅರ್ಥಗಾರಿಕೆ ಯಕ್ಷಗಾನ ಅಭಿಮಾನಿಗಳಿಗೆ ರಸಕವಳ. ರಾಮಾಯಣ, ಮಹಾಭಾರತ, ಶಾಸ್ತ್ರ, ಉಪನಿಷತ್, ಸಮಕಾಲೀನ ಸಾಹಿತ್ಯ, ಸಂಸ್ಕೃತ ಶ್ಲೋಕಗಳ ಸಮರ್ಥ ಬಳಕೆಗಳಿಂದ ಯಾವುದೇ ಪಾತ್ರಗಳನ್ನೂ ನಿರ್ವಹಿಸಬಲ್ಲ ಅಪ್ರತಿಮ ಕಲಾವಿದರು. ಹಲವಾರು ಪುಸ್ತಕಗಳ ಲೇಖಕರಾಗಿ, ಸುಪ್ರಸಿದ್ಧ ಪತ್ರಿಕೆಗಳಲ್ಲಿ ಬರಹಗಾರರಾಗಿ ಯಕ್ಷಗಾನೀಯ ವಿಚಾರಗಳನ್ನು ಮಂಡಿಸಿರುವ ಡಾ. ಜೋಷಿಯವರು ಅದ್ಭುತ ಭಾಷಣಕಾರರು.
ಸಾವಿರಾರು ಯಕ್ಷಗಾನ ಸಂಬಂಧೀ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಅವಲೋಕನಕಾರರಾಗಿ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿರುವ ಡಾ.ಜೋಷಿಯವರಿಗೆ ” ಅಗರಿಪ್ರಶಸ್ತಿ ” ಅವರ ಸಾಧನೆಯ ತುರಾಯಿಗೆ ಇನ್ನೊಂದು ಗರಿಯಾಗಿದೆ. ಡಾ. ಜೋಷಿಯವರ ಸಮಕಾಲೀನ ಸುಪ್ರಸಿದ್ಧ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರ ಘನ ಅಧ್ಯಕ್ಷತೆಯಲ್ಲಿ ಕಟೀಲಿನ ಅಸ್ರಣ್ಣ ಬಂಧುಗಳ ಆಶೀರ್ವಚನದೊಂದಿಗೆ, ಡಾ.ಚಿನ್ನಪ್ಪ ಗೌಡ, ಸುಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್, ಶ್ರೀಪತಿ ಭಟ್, ಎಂ.ಶಾಂತರಾಮ ಕುಡ್ವರ ಉಪಸ್ಥಿತಿಯಲ್ಲಿ ಜರಗಲಿರುವ ಈ ಕಾರ್ಯಕ್ರಮದಲ್ಲಿ ಡಾ.ಜೋಷಿಯವರಿಗೆ ಪ್ರತಿಷ್ಠಿತ ” ಅಗರಿ ಪ್ರಶಸ್ತಿ ” ನೀಡಿ ಗೌರವಿಸಲಾಗುವುದು .ಕಟೀಲಿನ ಅನುವಂಶಿಕ ಅರ್ಚಕರಾದ ವಿದ್ವಾನ್ ಶ್ರೀ ಶ್ರೀಹರಿ ನಾರಾಯಣದಾಸ ಅಸ್ರಣ್ಣರು ಅಭಿನಂದನಾ ಭಾಷಣ ಮಾಡಲಿದ್ದಾರೆ.
ರವಿಚಂದ್ರ ಕನ್ನಡಿಕಟ್ಟೆ :
ಮೂಡಬಿದಿರೆಯಲ್ಲಿ ಕಳೆದ ವರ್ಷದಲ್ಲಿ ಜರಗಿದ ” ಅಗರಿಪ್ರಶಸ್ತಿ ” ಪ್ರದಾನ ಸಂದರ್ಭದಲ್ಲಿ ಪ್ರವರ್ತಕರಾದ ಅಗರಿ ರಾಘವೇಂದ್ರ ರಾವ್ ರವರು ಮುಂದಿನ ವರ್ಷದಲ್ಲಿ ಅಗರಿ ಶೈಲಿಯನ್ನು ಹೆಚ್ಚು ಭಾರಿ ಬಳಕೆ ಮಾಡುವ ಭಾಗವತರಿಗೆ ” ಗೌರವ ಸಂಮಾನ ಪ್ರಶಸ್ತಿ ” ನೀಡುವುದಾಗಿ ಘೋಷಿಸಿದ್ದರು. ಪ್ರೇಕ್ಷಕರೇ ಈ ಕುರಿತು ಮಾಹಿತಿ ನೀಡಬೇಕೆಂದು ವಿನಂತಿಸಿದ್ದರು. ಅದರಂತೇ ಈ ಸಾಲಿನ ” ಗೌರವ ಸಂಮಾನ ಪ್ರಶಸ್ತಿ ” ಗೆ ಸುಪ್ರಸಿದ್ಧ ಯುವ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆಯವರು ಆಯ್ಕೆಯಾಗಿದ್ದಾರೆ .04.10.1980 ರಲ್ಲಿ ಧರ್ಮಣ್ಣ ಸಾಲಿಯಾನ್ – ಸುಶೀಲಾ ದಂಪತಿಗಳ ಸುಪುತ್ರ ರಾಗಿ ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆಯಲ್ಲಿ ಜನಿಸಿದ ರವಿಚಂದ್ರ ಕನ್ನಡಿಕಟ್ಟೆಯವರು ಮೂಲತಃ ಯಕ್ಷಗಾನ ವೇಷಧಾರಿಗಳು. ಸುರತ್ಕಲ್ ಮೇಳದಲ್ಲಿ ಪ್ರಾರಂಭದಲ್ಲಿ ಪುಂಡುವೇಷಧಾರಿಯಾಗಿ ಯಕ್ಷರಂಗ ಪ್ರವೇಶಿಸಿದವರು .ಆದರೆ ರವಿಚಂದ್ರರಲ್ಲಿ ದೈವದತ್ತವಾಗಿ ಒಲಿದಿದ್ದ ಸುಶ್ರಾವ್ಯ ಕಂಠವನ್ನು ಗುರುತಿಸಿದವರು ಅಂದಿನ ಸುರತ್ಕಲ್ ಮೇಳದ ಸುಪ್ರಸಿದ್ಧ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು .ಗಣಪತಿ ಭಟ್ಟರು ರವಿಚಂದ್ರರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, ಭಾಗವತನಾಗುವ ವೇದಿಕೆ ನಿರ್ಮಿಸಿದರು. ಏಳು ವರ್ಷಗಳ ಕಾಲ ಕಠಿಣ ಪರಿಶ್ರಮದಿಂದ ಕನ್ನಡಿಕಟ್ಟೆಯವರು ಭಾಗವತಿಕೆಯ ಸಂಪೂರ್ಣ ಪಟ್ಟು ಕರಗತ ಮಾಡಿಕೊಂಡು, ಗುರುಗಳೊಂದಿಗೇ ಮಂಗಳಾದೇವಿ ಮೇಳದಲ್ಲಿ ತಿರುಗಾಟ ಆರಂಭಿಸಿದರು . ಇಂದಿಗೂ ರವಿಚಂದ್ರ ಕನ್ನಡಿಕಟ್ಟೆಯವರು ಗುರುಗಳೊಂದಿಗೇ ಹನುಮಗಿರಿ ಮೇಳದಲ್ಲಿ ತಿರುಗಾಟದಲ್ಲಿದ್ದಾರೆ . ಇಂದಿನ ಯುವಜನತೆಯನ್ನು ಯಕ್ಷಗಾನದತ್ತ ಸೆಳೆಯಲು ಸುಪ್ರಸಿದ್ಧ ಯುವ ಭಾಗವತರಾದ ಪಟ್ಲ ಸತೀಶ ಶೆಟ್ಟರು ಪ್ರಧಾನ ಕಾರಣರಾದರೆ ,ಈ ನಿಟ್ಟಿನಲ್ಲಿ ಕನ್ನಡಿಕಟ್ಟೆಯವರ ಕಾಣಿಕೆಯೂ ಗಮನಾರ್ಹ.
ಅಭಿಮಾನಿವೃಂದದಿಂದ ” ಗಾನಸುರಭಿ ” ಬಿರುದಾಂಕಿತರಾದ ಕನ್ನಡಿಕಟ್ಟೆಯವರು ಇಂದು ಅತೀ ಬೇಡಿಕೆಯ ಯುವ ಭಾಗವತರಲ್ಲಿ ಓರ್ವರು. ಆಟ – ಕೂಟಗಳೆರಡರಲ್ಲೂ ಸಮಾನ ಬೇಡಿಕೆ ಹೊಂದಿದವರು . ಪದ್ಯಾಣ ಭಾಗವತರು ಸುರತ್ಕಲ್ ಮೇಳದಲ್ಲಿ ಅಗರಿ ರಘುರಾಮ ಭಾಗವತರೊಂದಿಗೆ ಸಹ ಭಾಗವತರಾಗಿದ್ದ ಕಾರಣ ” ಅಗರಿಶೈಲಿ ” ಯನ್ನು ಚೆನ್ನಾಗಿ ಕರಗತ ಮಾಡಿಕೊಂಡವರು. ಪದ್ಯಾಣರು ಇಂದಿಗೂ ಅಗರಿಶೈಲಿಯನ್ನು ತಮ್ಮ ಭಾಗವತಿಕೆಯಲ್ಲಿ ಕೆಲವಾರು ಪದ್ಯಗಳಲ್ಲಿ ಅಳವಡಿಸಿಕೊಳ್ಳುತ್ತಾರೆ .ಇದರಿಂದ ಪ್ರೇರಿತಗೊಂಡ ಕನ್ನಡಿಕಟ್ಟೆಯವರೂ ತಮ್ಮ ಭಾಗವತಿಕೆಯಲ್ಲಿ ನಾಲ್ಕೈದು ಪದ್ಯಗಳನ್ನಾದರೂ ಅಗರಿಶೈಲಿಯಲ್ಲೇ ಹಾಡುವ ಪರಿಪಾಟ ಹೊಂದಿದ್ದಾರೆ .ಈ ಮಾನದಂಡದ ಆಧಾರದಲ್ಲಿ ಈ ವರ್ಷ ಅಗರಿ ಶೈಲಿಯನ್ನು ಹೆಚ್ಚು ಪ್ರಸ್ತುತ ಪಡಿಸಿದ್ದಾರೆ ಎಂಬ ನೆಲೆಯಲ್ಲಿ ಕನ್ನಡಿಕಟ್ಟೆಯವರಿಗೆ ” ಅಗರಿ ಗೌರವ ಪ್ರಶಸ್ತಿ ” ನೀಡಲು ಪ್ರವರ್ತಕರು ನಿರ್ಧರಿಸಿದ್ದಾರೆ. ಇಂಪಾದ ಸ್ವರ ಮಾಧುರ್ಯ, ಸ್ಪಷ್ಟ ಉಚ್ಛಾರ, ಕಾಲಗತಿಯನ್ನನುಸರಿಸಿ ರಾಗಗಳ ಬಳಕೆ , ಸಂದರ್ಭ, ರಸಭಾವವನ್ನು ಲಕ್ಷಿಸಿ ರಾಗಗಳ ಸಂಯೋಜನೆ – ಎಲ್ಲವೂ ಕನ್ನಡಿಕಟ್ಟೆಯವರ ಭಾಗವತಿಕೆಯಲ್ಲಿ ಮೇಳೈಸಿರುವ ಅಂಶಗಳು.
ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ವಿರಳ ಭಾಗವತರಲ್ಲಿ ಕನ್ನಡಿಕಟ್ಟೆಯವರು ಗುರುತಿಸಿಕೊಂಡಿದ್ದಾರೆ . ಈ ನಿಟ್ಟಿನಲ್ಲಿ ಕನ್ನಡಿಕಟ್ಟೆಯವರ ಆಯ್ಕೆ ಸಂದರ್ಭೋಚಿತವೇ ಹೌದು. ಸುರತ್ಕಲ್ , ಮಂಗಳಾದೇವಿ , ಎಡನೀರು , ಹೊಸನಗರ ಮೇಳಗಳಲ್ಲಿ ತಿರುಗಾಟ ನಡೆಸಿರುವ ಕನ್ನಡಿಕಟ್ಟೆಯವರು ಪ್ರಸ್ತುತ ಹನುಮಗಿರಿ ಮೇಳದಲ್ಲಿ ಭಾಗವತರಾಗಿ ಪ್ರಸಿಧ್ದರಾಗಿದ್ದಾರೆ .ಇಷ್ಟೂ ಮೇಳಗಳಲ್ಲೂ ತಮ್ಮ ಗುರುಗಳಾದ ಪದ್ಯಾಣ ಗಣಪತಿ ಭಟ್ಟರೊಂದಿಗೇ ತಿರುಗಾಟ ನಡೆಸಿದ ಹೆಗ್ಗಳಿಕೆ ಕನ್ನಡಿಕಟ್ಟೆಯವರದ್ದು .
ಕಳೆದ 12 ವರ್ಷಗಳಿಂದ ಅಗರಿ ಸಂಸ್ಮರಣೆ , ಅಗರಿ ಪ್ರಶಸ್ತಿ ಪ್ರದಾನ ಮುಂತಾದ ಚಟುವಟಿಕೆಗಳಿಂದ ಯಕ್ಷಗಾನ ವಲಯಗಳಲ್ಲಿ ಗುರುತಿಸಿಕೊಂಡಿರುವ ” ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಸಮಿತಿ ” ಯ ಈ ವರ್ಷದ ಕಾರ್ಯಕ್ರಮ 12 ನೇ ವರ್ಷದ್ದಾಗಿದೆ. ಕಳೆದ 11 ವರ್ಷಗಳಿಂದಲೂ ಸುಪ್ರಸಿದ್ಧ ಯಕ್ಷಗಾನ ಕಲಾವಿದರನ್ನು ಸಂಮಾನಿಸಿ ” ಅಗರಿ ಪ್ರಶಸ್ತಿ” ನೀಡಿ ಗೌರವಿಸಿದ ಹಿನ್ನೆಲೆ ಈ ಸಮಿತಿಯದ್ದು. ಈ ಭಾರಿಯ ಕಾರ್ಯಕ್ರಮದಲ್ಲಿ ಅಗರಿ ಶ್ರೀನಿವಾಸ ಭಾಗವತರರ ” ಸಂಸ್ಮರಣಾ ಭಾಷಣ “ವನ್ನು ಯಕ್ಷಗಾನ ವಿಮರ್ಶಕ, ಬರಹಗಾರರಾದ ಎಂ .ಶಾಂತರಾಮ ಕುಡ್ವಾ, ಮೂಡಬಿದಿರೆ ಇವರು ನೆರವೇರಿಸಲಿದ್ದಾರೆ . ಕಾರ್ಯಕ್ರಮದ ಅಂಗವಾಗಿ ಪೂರ್ವಾರ್ಧದಲ್ಲಿ ಅಗರಿ ಶೈಲಿಯ ಗಾನವೈಭವ ಹಾಗೂ ಸಭಾ ಕಾರ್ಯಕ್ರಮದ ಬಳಿಕ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ” ಬೃಹ್ಮಕಪಾಲ ” ತಾಳಮದ್ದಳೆ ಕೂಟ ಜರಗಲಿದೆ.
ಲೇಖನ : ಎಂ.ಶಾಂತರಾಮ ಕುಡ್ವ, ಮೂಡಬಿದಿರೆ. ಮೊಬೈಲ್ : 9448858613
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.