ಮಂಗಳೂರು : ಶೈಕ್ಷಣಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿ ಇತ್ತೀಚೆಗಷ್ಟೆ ಬೆಳ್ಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ ನಗರದ ಕೊಡಿಯಾಲಬೈಲಿನ ಪ್ರತಿಷ್ಠಿತ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಈ ದಿನ ಗಣರಾಜ್ಯೋತ್ಸವ ಹಾಗೂ ಪಾಲಕರ ದಿನಾಚರಣೆಯನ್ನು ಅತ್ಯಂತ ಸಂಭ್ರಮೊಲ್ಲಾಸದಿಂದ ಆಚರಿಸಲಾಯಿತು. ಕರ್ನಾಟಕ ಬ್ಯಾಂಕಿನ ಡಿ.ಜಿ.ಎಂ. ಶ್ರೀ ವಾದಿರಾಜ ಕೆ.ಎ. ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ದೇಶದ ಏಕತೆ, ಸಮಗ್ರತೆ ಹಾಗೂ ಪ್ರಗತಿಗಾಗಿ ಪ್ರತಿಯೊಬ್ಬರೂ ಸಮರ್ಪಣಾ ಭಾವದಿಂದ ದುಡಿಯಬೇಕು. ಅದೇ ರೀತಿ ದೇಶಕ್ಕೆ ಸ್ವಾತಂತ್ರ್ಯ ತಂದಿತ್ತ ಹಾಗೂ ಸಂವಿಧಾನ ರಚನೆಗೈದ ಹಿರಿಯರನ್ನು ಸದಾ ಸ್ಮರಿಸಬೇಕಾದುದು ನಮ್ಮ ಕರ್ತವ್ಯ ಎಂಬುದಾಗಿ ಮಾನ್ಯ ಅತಿಥಿಗಳು ಈ ಸಂದರ್ಭದಲ್ಲಿ ನುಡಿದರು.
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ನಾಡಿನ ಪ್ರಜೆಗಳಾದ ನಮಗೆ ನಮ್ಮ ಹಕ್ಕುಗಳಿರುವಂತೆ ದೇಶವನ್ನು ಬಲಶಾಲಿಯಾಗಿಸಲು ಅಗತ್ಯ ಕರ್ತವ್ಯಗಳನ್ನು ಕೂಡಾ ನಿಭಾಯಿಸುವ ಹೊಣೆಗಾರಿಕೆಯಿದೆ. ನಮ್ಮ ವಿದ್ಯಾ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂತಹ ಜವಾಬ್ಧಾರಿಯುತ ಸತ್ಪ್ರಜೆಗಳಾಗಿ ದೇಶದ ಕೀರ್ತಿಯನ್ನು ಬೆಳಗಲಿ ಎಂಬುದಾಗಿ ಪ್ರೊ| ಎಂ.ಬಿ.ಪುರಾಣಿಕರು ಈ ಸಂದರ್ಭದಲ್ಲಿ ಅಭಿಪ್ರಾಯವಿತ್ತರು.
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಕಲ್ಲೂರಾಯರು, ವಿಶ್ವಸ್ಥರಾದ ಶ್ರೀ ಪ್ರದೀಪ ಕುಮಾರ ಕಲ್ಕೂರಾ, ಶ್ರೀ ಎಚ್. ಸೀತಾರಾಮ್, ಎಸ್.ಕೆ.ಡಿ.ಬಿ. ಅಸೋಶಿಯೇಶನ್ನಿನ ಕಾರ್ಯದರ್ಶಿ ಶ್ರೀ ಸುಧಾಕರ ರಾವ್ ಪೇಜಾವರ, ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ, ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿ, ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಮಹಬಲೇಶ್ವರ ಭಟ್, ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀ ಬಾಲಕೃಷ್ಣ ಭಾರದ್ವಾಜ್, ಶಿಕ್ಷಣ ತಜ್ಞ, ಸಂಪನ್ಮೂಲ ವ್ಯಕ್ತಿಯಾದ ಸಾಣೂರಿನ ಸರಕಾರಿ ಕಾಲೇಜು ಪ್ರಾಂಶುಪಾಲ ಶ್ರೀ ಸೂರ್ಯನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾಲಯದ ವಿದ್ಯಾರ್ಥಿನಿ ಕು| ಅಕ್ಷರ ಸ್ವಾಗತಗೈದರೆ, ಕು| ಕೃಷ್ಣ ಅತಿಥಿಗಳ ಪರಿಚಯಗೈದಳು. ಮಾ| ಅನಿರುದ್ಧ ಧನ್ಯವಾದ ಸಮರ್ಪಣೆಗೈದರೆ ವಿದ್ಯಾರ್ಥಿನಿ ಕು| ಪ್ರಾಂಜಲಿ ಗಣರಾಜ್ಯೋತ್ಸವದ ಮಹತ್ವವನ್ನು ಕುರಿತು ಭಾಷಣಗೈದಳು. ವಿದ್ಯಾಲಯದ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಸಂದರ್ಭನುಸಾರ ಪ್ರಾರ್ಥನೆ, ಧ್ವಜಗೀತೆ, ರಾಷ್ಟ್ರಗೀತೆ, ದೇಶಭಕ್ತಿಗೀತೆಗಳನ್ನು ಹಾಡಿದರು. ವಂದೇ ಮಾತರಂ ಗೀತೆ ಗಾಯನದ ಬಳಿಕ ವಿದ್ಯಾಲಯದ ಸಭಾ ವೇದಿಕೆಯಲ್ಲಿ ಪ್ರತೀ ವರ್ಷದಂತೆ ಪಾಲಕರ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಪ್ರೊ| ಎಂ.ಬಿ.ಪುರಾಣಿಕರು ಪ್ರಸ್ತಾವನೆಗೈದರು. ಸಂಪನ್ಮೂಲ ವ್ಯಕ್ತಿ ಶ್ರೀ ಬಿ.ವಿ. ಸೂರ್ಯನಾರಾಯಣ ಪಾಲಕರನ್ನು ಉದ್ಧೇಶಿಸಿ ವಿಶೇಷ ಉಪನ್ಯಾಸವಿತ್ತರು. ಬಳಿಕ ಹೆತ್ತವರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮನೋರಂಜನಾ ಸ್ಪರ್ಧೆಗಳು ನಡೆಯಿತು. ಖ್ಯಾತ ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ ತಮ್ಮ ಕಲಾ ಪ್ರದರ್ಶನದಿಂದ ಎಲ್ಲರನ್ನು ರಂಜಿಸಿದರು. ವಿದ್ಯಾಲಯದ ಉಪ-ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಬಳಗ ಸಹಕಾರವಿತ್ತರು. ಭೋಜನದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.