ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಅಂಗವಾಗಿ 2ನೇ ವಾರದ ಸ್ವಚ್ಛತಾ ಕಾರ್ಯಕ್ರಮ ದಿನಾಂಕ 12-11-2017 ರಂದು ಹಂಪನಕಟ್ಟೆಯಲ್ಲಿ ಜರುಗಿತು. ಬೆಳಿಗ್ಗೆ 7.30 ಕ್ಕೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯದಲ್ಲಿ ಪೂರ್ವ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಹಾಗೂ ಪೂರ್ವ ಸಂಸದೆ ಶ್ರೀಮತಿ ತೇಜಸ್ವಿನಿ ಗೌಡ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ನಂತರ ಶ್ರೀಮತಿ ತೇಜಸ್ವಿನಿ ಗೌಡ ಅವರು ಭಾಗವಹಿಸಿದ ಸ್ವಯಂಸೇವಕರಿಗೆ ಶುಭಹಾರೈಸಿ ಹಾಗೂ ರಾಮಕೃಷ್ಣ ಮಿಷನ್ ಸ್ವಚ್ಛತಾ ಕೈಂಕರ್ಯವನ್ನು ರಾಷ್ಟ್ರಕಟ್ಟುವ ನೈಜ ಕೈಂಕರ್ಯವೆಂದು ಬಣ್ಣಿಸಿದರು. ಶ್ರೀಮತಿ ಭಾರತಿ ಶೆಟ್ಟಿ ಮಾತನಾಡಿ ಸ್ವಚ್ಛ ಭಾರತವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಆ ನಿಟ್ಟಿನಲ್ಲಿ ಮಂಗಳೂರಿನ ಜನರಿಗೆ ರಾಮಕೃಷ್ಣ ಮಿಷನ್ ಮಾರ್ಗದರ್ಶನ ಮಾಡಿ ಅವಕಾಶ ಕಲ್ಪಿಸಿಕೊಟ್ಟಿರುವುದು ಅಭಿನಂದನೀಯ ಎಂದರು. ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸ್ವಾಮಿ ಜಿತಕಾಮಾನಂದಜಿ ಹಾಗೂ ಗಣ್ಯರು ಸ್ವತಃ ಪೊರಕೆ ಹಿಡಿದು ಬೀದಿಗಳನ್ನು ಗುಡಿಸಿದರು. ಜೊತೆ ಜೊತೆಗೆ ಕಾರ್ಯಕರ್ತರು ಅಭಿಯಾನದ ಮುಖ್ಯ ಸಂಯೋಜಕ ಶ್ರೀ ದಿಲ್ ರಾಜ್ ಆಳ್ವ ಮಾರ್ಗದರ್ಶನದಂತೆ ಆರು ಗುಂಪುಗಳನ್ನು ರಚಿಸಿಕೊಂಡು ಸ್ವಚ್ಛತಾ ಕೈಂಕರ್ಯ ಪ್ರಾರಂಭಿಸಿದರು. ಸ್ವಚ್ಛ ಮಂಗಳೂರು ತಂಡದ ಹಿರಿಯ ಕಾರ್ಯಕರ್ತರಾದ ಶ್ರೀ ವಿಠಲ್ ದಾಸ್ ಪ್ರಭು ಹಾಗೂ ಶ್ರೀ ಕೊಡಂಗೆ ಬಾಲಕೃಷ್ಣ ನಾಯ್ಕ್ ನಿವೇದಿತಾ ಬಳಗದ ಸದಸ್ಯರನ್ನು ಮುನ್ನಡೆಸಿ ಹಂಪಣಕಟ್ಟೆಯ ವಿಶ್ವವಿದ್ಯಾನಿಲಯದ ಎದುರಿನ ರಸ್ತೆ ಹಾಗೂ ಕಾಲ್ದಾರಿಯನ್ನು ಶುಚಿ ಮಾಡಿದರು.
ಕಳೆದ ವರ್ಷ ವಿಶ್ವವಿದ್ಯಾನಿಲಯ ಆವರಣ ಗೋಡೆಯನ್ನು ಸುಂದರ ಕಲಾಕೃತಿಗಳಿಂದ ಅಂದಗೊಳಿಸಲಾಗಿತ್ತು. ಈ ಬಾರಿಯ ಮಳೆಗಾಲದಲ್ಲಿ ಅವುಗಳಿಗೆ ಅಲ್ಲಲ್ಲಿ ಪಾಚಿ ಹಿಡಿದು ಅಂದಗೆಟ್ಟಿದ್ದವು. ಇಂದು ಅವುಗಳನ್ನು ಶ್ರೀ ಸತೀಶ್ ಮೂಡಿಗೆರೆ ಸಹಿತ ಹಿಂದೂ ವಾರಿಯರ್ಸ್ ತಂಡದ ಸದಸ್ಯರು ನೀರು ಹಾಕಿ ತಿಕ್ಕಿ ತೊಳೆದು ಪಾಚಿ ತೆಗೆದು ಸ್ವಚ್ಛಗೊಳಿಸಿದ್ದಾರೆ. ಅದೇ ರೀತಿ ವೆನ್ ಲಾಕ್ ಆಸ್ಪತ್ರೆಯ ಮುಂಭಾಗದ ಆವರಣ ಗೋಡೆಯನ್ನು ಶ್ರೀ ಅಂಬಾ ಮಹೇಶ್ವರಿ ಭಜನಾ ಮಂಡಳಿಯ ಯುವಕರು ಶ್ರೀ ಉಮಾನಾಥ್ ಕೋಟೆಕಾರ್ ಜೊತೆಗೂಡಿ ಸ್ವಚ್ಛ ಮಾಡಿದರು.
ಶ್ರೀ ಎಸ್ ಎಂ ಕುಶೆ ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಕೌಟ್ಸ್ ಗೈಡ್ಸ್ ಸ್ವಯಂ ಸೇವಕರು ಪ್ರಾಧ್ಯಾಪಕ ಶ್ರೀ ಪ್ರತಿಮ ಕುಮಾರ್ ನಿರ್ದೇಶನದಲ್ಲಿ ಅಂಗಡಿ ವರ್ತಕರನ್ನು ಭೇಟಿ ಮಾಡಿ, ಕರಪತ್ರ ನೀಡಿ ಶುಚಿತ್ವದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಕೈಗೊಂಡರು.
ಡಾ. ರಾಜೇಂದ್ರ ಪ್ರಸಾದ್, ಲೆಕ್ಕ ಪರಿಶೋಧಕ ಶ್ರೀ ಶಿವಕುಮಾರ್, ಶ್ರೀ ಕೆ ವಿ ಸತ್ಯನಾರಾಯಣ ಸೇರಿದಂತೆ ಸುಮಾರು 150 ಜನ ಕಾರ್ಯಕರ್ತರು ಬೆಳಿಗ್ಗೆ 7.30 ರಿಂದ 10 ಗಂಟೆಯ ತನಕ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಶ್ರಮದಾನದ ಬಳಿಕ ಎಲ್ಲ ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ದಕ್ಷಿಣ ಕನ್ನಡ ಅಭಿಯಾನದ ಪ್ರಯುಕ್ತ ಇಂದು ಸುಮಾರು ಐವತ್ತು ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಸ್ವಚ್ಛತೆಗೆ ಬೇಕಾದ ಸಲಕರಣೆಗಳು, ಟೀಶರ್ಟ್ಗಳು, ಬ್ಯಾನರ್ ಮತ್ತಿತರ ಸಾಮಗ್ರಿಗಳನ್ನು ಹಾಗೂ ಎಲ್ಲ ಸ್ವಯಂ ಸೇವಕರಿಗೆ ಉಪಾಹಾರದ ವ್ಯವಸ್ಥೆಯನ್ನೂ ರಾಮಕೃಷ್ಣ ಮಿಷನ್ ವತಿಯಿಂದ ಒದಗಿಸಿಲಾಗಿತ್ತು. ದ.ಕ. ಜಿಲ್ಲಾ ಪಂಚಾಯತ್ ಸ್ವಚ್ಛ ದಕ್ಷಿಣ ಕನ್ನಡ ಅಭಿಯಾನಕ್ಕೆ ಸಹಕಾರ ನೀಡುತ್ತಿದೆ. ಈ ಅಭಿಯಾನಕ್ಕೆ ಎಂಆರ್ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.