×
Home About Us Advertise With s Contact Us

ಸಿಎಂ ಯೋಗಿ ಆದಿತ್ಯನಾಥರಿಂದ ‘ಐ ಬಾಟ್ ದ ಮೋಂಕ್ಸ್ ಫೆರಾರಿ’ ಪುಸ್ತಕ ಬಿಡುಗಡೆ

ಮಂಗಳೂರು : ಇಂದಿನ ಯುಗದಲ್ಲಿ ನಮ್ಮ ಯುವಜನತೆ ಜೀವನದಲ್ಲಿ ಹೆಚ್ಚಾಗಿ ತಾಮಸ ಗುಣಗಳನ್ನು ಅಳವಡಿಸಿಕೊಂಡು ಸಮಾಜ ವಿಮುಖಿಯಾದಂತಹ ಮಾರ್ಗವನ್ನು ಅನುಸರಿಸುತ್ತಿರುವುದು ಆತಂಕಕಾರಿಯಾದ ವಿಷಯ. ತಾಮಸ ಗುಣ ಎಂಬುದು (ಸಂಸ್ಕೃತದಲ್ಲಿ ತಮಸ್ ಎಂದರೆ ಕಾವಳ ಅಥವಾ ಅಂಧಕಾರ ಎಂದರ್ಥ) ಸಾಂಖ್ಯಾ ಹಿಂದೂ ತತ್ವ ವಿದ್ಯಾಲಯದ ಪ್ರಕಾರ ಒಂದು ಮುಖ್ಯವಾದ ಶಾರೀರಿಕ ಹಾಗೂ ಮಾನಸಿಕ ಪರಿಕಲ್ಪನೆಯಾಗಿದೆ. ಇದರೊಂದಿಗೆ ಇತರ ಎರಡು ಮುಖ್ಯ ಪರಿಕಲ್ಪನೆಗಳೆಂದರೆ ರಜಸ್ (ನಿಕೃಷ್ಟ ಚಟುವಟಿಕೆಗಳು) ಹಾಗೂ ಸತ್ವ (ಪರಿಶುದ್ಧ, ಉತ್ಕೃಷ್ಟ ಚಟುವಟಿಕೆಗಳು). ತಾಮಸಿಕ ಗುಣಗಳುಳ್ಳ ವ್ಯಕ್ತಿಯು ಸ್ವಾರ್ಥಿಯಾಗಿಯೂ, ಅಸಂತೃಪ್ತನಾಗಿಯೂ ಹಾಗೂ ಲೌಕಿಕ ವಿಷಯಾಸಕ್ತನಾಗಿಯೂ ಇರುತ್ತಾನೆ. ಯೋಗಾಭ್ಯಾಸದಿಂದ ಮೇಲ್ಕಂಡ ಮೂರೂ ಗುಣಗಳನ್ನು ಒಬ್ಬ ಯೋಗಿಯಾದವನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು.

ಈ ಗಹನವಾದ ವಿಚಾರವನ್ನು ಗಮನದಲ್ಲಿ ಇರಿಸಿಕೊಂಡು ಡಾ|ಅನಂತ ಪ್ರಭು ಜಿ. ರವರು ‘ಐ ಬಾಟ್ ದ ಮೋಂಕ್ಸ್ ಫೆರಾರಿ’ ಎಂಬ ಕೃತಿಯಲ್ಲಿ ನಮ್ಮ ಯುವಜನತೆಗೆ ಲೌಕಿಕ, ಅಲೌಕಿಕ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಆಕರ್ಷಣೀಯವಾಗಿ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ.

ಈ ಕೃತಿಯಲ್ಲಿರುವ ಮಹತ್ವದ ಮಾಹಿತಿಗಳು ನಮ್ಮ ಯುವಜನತೆ ಜೀವನದ ಸಾರವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ಚೆನ್ನಾಗಿ ಅರ್ಥೈಸಿಕೊಳ್ಳುವಲ್ಲಿ ಸಫಲವಾಗುತ್ತದೆ. ಇಡೀ ಪ್ರಪಂಚವು ಒಂದೇ ಎನ್ನುವಂತಹ ವಿಶಿಷ್ಟ ಭಾವನೆಯನ್ನು ಓದುಗರಲ್ಲಿ ಮೂಡಿಸುತ್ತದೆ. ಇನ್ನಷ್ಟು ಆಳದಲ್ಲಿ ಮನುಜನ ಮೂಲ ಒಂದೇ ಎಂಬಂತಹ ತಿಳುವಳಿಕೆಯನ್ನು ಈ ಕೃತಿ ನೀಡುತ್ತದೆ. ಮನುಷ್ಯ ಹಾಗೂ ಪ್ರಕೃತಿಯ ಸಂಬಂಧ ವರ್ಣನಾತೀತ. ಬಗೆದಷ್ಟು ಮನುಷ್ಯರೆಲ್ಲರೂ ಬಂಧುಗಳೇ ಎಂಬಂತಹ ಅರಿವನ್ನು ಈ ಕೃತಿ ನಿರೂಪಿಸುತ್ತಾ ಸಾಗುತ್ತದೆ. ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಮೂಲ ಪರಿಕಲ್ಪನೆಯೊಂದಿಗೆ ಈ ಕೃತಿ ವಿಶಿಷ್ಟವಾಗಿ ಮೂಡಿ ಬಂದಿದೆ.

ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಲಹೆಗಾರ ಹಾಗೂ ಅಸೋಸಿಯೆಟ್ ಪ್ರೊಫೆಸರ್ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ನ ಡಾ. ಅನಂತ್ ಪ್ರಭು ಜಿ. ಬರೆದಿರುವ ಈ ಕೃತಿಯ ಸಂಪೂರ್ಣ ಪ್ರಾಯೋಜಕತ್ವವನ್ನು ಕರ್ನಾಟಕ ಸರಕಾರದ ಮಾಜಿ ಮಂತ್ರಿಗಳಾದಂತಹ ಶ್ರೀ ಕೃಷ್ಣ ಜೆ. ಪಾಲೆಮಾರ್ ರವರು ವಹಿಸಿದ್ದು, ಶ್ರೀ ರಾಮಚಂದ್ರ ಸ್ವಾಮೀಜಿಯವರಿಂದ ಪ್ರೇರಿತವಾಗಿರುತ್ತದೆ. ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಶ್ರೀ ಸಂಜಯ್ ಸಹಾಯ್ ರವರು ಈ ಕೃತಿಗೆ ಮುನ್ನುಡಿಯನ್ನು ಬರೆದಿರುತ್ತಾರೆ. ಚಿತ್ರಗಳನ್ನು ಕಲಾವಿದ ಲಕ್ಷ್ಮೀನಾರಾಯಣ್ ರವರು ಮಾಡಿದ್ದು, ಶ್ರೀಯುತ ಲಿನ್ ಮಿಸ್ಕಿತ್ ರವರು ಪ್ರೂಫ್ ರೀಡಿಂಗ್ ಮಾಡಿರುತ್ತಾರೆ. ಈ ಕೃತಿಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ್ ಹಾಗೂ ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದ ಮಹರಾಜ್ ರವರ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆ ಸಮಾರಂಭದಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ವೇದವ್ಯಾಸ ಕಾಮತ್, ಸಂಜಯ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಅರ್ನವ ಎಂಬ ಹದಿಹರೆಯದ ಹುಡುಗನೊಬ್ಬನು ಇತರ ಹುಡುಗರಂತೆ ತನ್ನ ಜೀವನದಲ್ಲಿ ಒಂದು ಮಹತ್ವಾಕಾಂಕ್ಷೆ ಹಾಗೂ ಗುರಿಯನ್ನು ಹೊಂದಿರುತ್ತಾನೆ. ತನ್ನ ವಿದ್ಯಾರ್ಥಿ ಜೀವನದಲ್ಲಿ ಶಾಲೆ, ಶಿಕ್ಷಣ ಹಾಗೂ ಪೋಷಕರ ಜೊತೆಗೆ ತನ್ನ ಗುರಿ ತಲುಪುವಲ್ಲಿ ಅನೇಕ ಕಷ್ಟಗಳಿದ್ದರೂ ಅವುಗಳನ್ನೆಲ್ಲಾ ತನ್ನ ಉನ್ನತ ಮಟ್ಟದ ಮನೋಬಲದಿಂದ ಯಶಸ್ಸು ಗಳಿಸುತ್ತಾನೆ.

ಆ ಹುಡುಗ ವಿದ್ಯಾಭ್ಯಾಸದಲ್ಲಿ ಮೊದಲಿಗನಾಗಿದ್ದು ಐಐಟಿ ಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ಪ್ರೀತಿಯಲ್ಲಿ ಸೋಲನ್ನು ಅನುಭವಿಸಿ, ಗೂಗಲ್ ಕಂಪನಿಯಲ್ಲಿ ಉದ್ಯೋಗ ಪಡೆಯುವ ಹಾಗೂ ಉನ್ನತಮಟ್ಟದ ಜೀವನ ಮಾಡುವ ಹಂಬಲದಲ್ಲಿ ಸಫಲನಾಗುತ್ತಾನೆ.

ಆದರೆ ಒಂದು ದಿನ ಆತನು ತನ್ನ ಮಹದಾಸೆಯಾದ ಫೆರಾರಿ ಕಾರನ್ನು ಖರೀದಿಸಿದ ನಂತರ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ. ಪರಿಸ್ಥಿತಿಯ ಸಂಕಷ್ಟಗಳಿಗೆ ಸಿಲುಕಿ ಮಾನಸಿಕ ನೆಮ್ಮದಿಗೋಸ್ಕರ ಒಂದು ಪ್ರವಾಸ ಮಾಡಲು ತೀರ್ಮಾನಿಸುತ್ತಾನೆ.

ಮುಂದೇನಾಯ್ತು?

ಡಾ. ಆನಂತ್ ಪ್ರಭು ಜಿ. ಯವರು ಆ ಹದಿಹರೆಯದ ಹುಡುಗನು ತನ್ನ ಪ್ರತಿಭೆ ಹಾಗೂ ಜ್ಞಾನದಿಂದ ಜೀವನದಲ್ಲಿ ಮುಂದುವರಿಯುವಂತಹ ಒಂದು ಕಥೆಯನ್ನು ಸಾದರಪಡಿಸುತ್ತಿದ್ದಾರೆ. ಐ ಬಾಟ್ ದ ಮಾಂಕ್ಸ್ ಫೆರಾರಿ ಎನ್ನುವ ಕಥೆಯು ಲೌಕಿಕ ಹಾಗೂ ಆಧ್ಯಾತ್ಮಿಕ ವಿಷಯಗಳನ್ನು ಅಳವಡಿಸಿ ರಚಿಸಿರುವಂತಹ ಮನುಷ್ಯನ ಜೀವನ ಯಾತ್ರೆಯಾಗಿರುತ್ತದೆ.

ಈ ಪುಸ್ತಕದ ವ್ಯಾಪಾರದಿಂದ ಬಂದ ಹಣವನ್ನು ಆರ್ಥಿಕವಾಗಿ ಹಿಂದುಳಿದ ಹಾಗು ಅನಾಥ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಳಸಲಾಗುವುದು. ಈ ಪುಸ್ತಕವು ಡಿಸೆಂಬರ್ 2017 ರಿಂದ ಎಲ್ಲಾ ಪ್ರತಿಷ್ಟಿತ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಹಸ್ತಾಕ್ಷರ ಮಾಡಿರುವ ಈ ಪುಸ್ತಕದ ನೂರು ಪ್ರತಿಗಳನ್ನು ಯಾರಾದರು ಖರೀದಿಸಲು ಇಚ್ಚಿಸಿದಲ್ಲಿ ಕೆಳಗಿನ ಲಿಂಕನ್ನು ಸಂದರ್ಶಿಸಬಹುದು. ಅವರಿಗೆ ನವೆಂವರ್ 2017 ರಲ್ಲಿ ಪುಸ್ತಕಗಳನ್ನು ನೀಡಲಾಗುವುದು.

Website link: https://www.instamojo.com/Annanth/i-bought-the-monks-ferrari/

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top