News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 7th September 2024


×
Home About Us Advertise With s Contact Us

ಬದುಕು ಬದಲಿಸ ಬಹುದು… ನಾಡ ತಳಿ ಗೋವು ಜೊತೆ ಇದ್ದಾಗ

Gouri1

”ಎಂಕು ಒಂಜಿ ಸಮಾಧಾನ ’ ಗೌರಿ ಲೆತ್ತೊಂದು ಪೋಪಾಳು ”[ನನಗೆ ಒಂದು ಸಮಾಧಾನ, ಗೌರಿ ತೆಕ್ಕೊಂಡು ಹೋಗ್ತಾಳೆ] ಗೌರಿ … ಕಾಸರಗೋಡಿನ ವಿಶಿಷ್ಟ ಗೋವಿನ ತಳಿ. ಶಾಂತಕ್ಕಳ ನೆಚ್ಚಿನ ಸಂಗಾತಿ. ಶಾಂತಕ್ಕಳ ಬಳಿ ಇರುವ ಒಂದೇ ಒಂದು sಸ್ವತ್ತು. ಅದು ಬಂದ ಮೇಲೆ ಅವರ ಬದುಕ್ಕಲ್ಲಿ ಒಂದು ಬದಲಾವಣೆಯ ಪರ್ವ ನಿಧಾನವಾಗಿ ಆರಂಭವಾಗಿದೆಯಂತೆ.

ಶಾಂತಾ ಮತ್ತು ಬಾಲಕೃಷ್ಣ ಶೆಟ್ಟಿ ದಂಪತಿಗಳು ಮೂಲತಃ ಕಾಸರಗೋಡಿನವರಲ್ಲ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಿ. ಸಿ. ರೋಡಿನವರು. ವಿಶೇಷ ವಿದ್ಯಾಭ್ಯಾಸ ಇಲ್ಲದ ದಂಪತಿಗಳಿಗೆ ಕಾಸರಗೋಡಿನಲ್ಲಿ ಆಶ್ರಯ ನೀಡಿದವರು. ಮಕ್ಕಳ ತಜ್ಞ ಡಾ. ಎಸ್.ವಿ. ಆರ್. ಶರ್ಮರವರು. ಬಾಲಕೃಷ್ಣ ಶೆಟ್ಟಿಯವರು ಟೈಲರಿಂಗ್ ವೃತ್ತಿಯಲ್ಲಿದ್ದರೆ ಶಾಂತಕ್ಕ ವೈದ್ಯರಲ್ಲಿಗೆ ಬರುವ ರೋಗಿಗಳಿಗೆ ಟೋಕನ್ ನೀಡುವ ಉಪವೃತ್ತಿಯನ್ನು ಮಾಡುತ್ತಿದ್ದಾರೆ.

”ತೆಂಗಿನಕಾಯಿ ಕೊಯ್ಯಲು ಬಂದ ಬೇಳ ಊರಿನ ಸೋಜಾರಲ್ಲಿ ಊರಿನ ಹೆಣ್ಣು ಕರು ಒಂದು ಬೇಕಾಗಿತ್ತು ಎಂದು ತಿಳಿಸಿದೆ. ಅವರು ಉಪಕರಿಸಿದರು. ಅವಳೇ ನಮ್ಮ ಗೌರಿ. ಈಗ ಅವಳಿಗೆ ಮೂರು ವರ್ಷ. ಹೆಣ್ಣು ಕರು ಲಕ್ಷ್ಮೀಗೆ ಒಂಬತ್ತು ತಿಂಗಳು. ಈಗಲೂ ಸುಮಾರು ಎರಡು ಲೀಟರ್ ನಮ್ಮ ಉಪಯೋಗ ಆಗಿ ದಿನಕ್ಕೆ ಹಾಲು ನೀಡುತ್ತಾಳೆ. ಮಗ ನಿಖಿಲ್ ಎರಡನೇ ಕ್ಲಾಸು, ಮಗಳು ಸಿಂಚನ ಎಂಟನೆ ಕ್ಲಾಸು. ಅವರ ವಿದ್ಯಾಭ್ಯಾಸಕ್ಕೆ ಹಾಲು ಮಾರಿ ಹೊಂದಿಸಿಕೊಳ್ಳುತ್ತಿದ್ದೇನೆ .” ಎನ್ನುತ್ತಾ ವಿವರಿಸುವ ಶಾಂತಕ್ಕನ ಕಣ್ಣಲ್ಲಿ ಗೌರಿ ದೇವರಂತೆ ಕಾಣುತ್ತಿದ್ದಾಳೆ. ಬದುಕಿಗೆ ಆಸರೆಯಾದ ದಷ್ಟಪುಷ್ಟವಾದ ಗೌರಿ ಮೇಲೆ ದನದ ವ್ಯಾಪಾರಿಗಳಿಗೆ ದೃಷ್ಟಿಯಂತೆ.

’ನನಿಗೆ ಆರಂಭದಲ್ಲಿ ಹೂ ಗಿಡ ಅಂದರೆ ಪ್ರಾಣ. ಹಾಗೆ ಅದಕ್ಕೆ ಗೊಬ್ಬರಕ್ಕೆ ಅಂತ ಕರು ಸಾಕುವ ಮನಸ್ಸಾಯಿತು. ಆದರೆ ಇವಳು ಬಂದ ಮೇಲೆ ನನ್ನ ಮನೆಗ ಬೇಕಾದ ತರಕಾರಿ ಧಾರಾಳ ಆಗುತ್ತಿದೆ. ಬೆಂಡೆ, ಬದನೆ, ನುಗ್ಗೆ, ಹೀರೆಕಾಯಿ, ಅಲಸಂದೆ, ತೊಂಡೆ, ಪಡುವಲ ಆಗುತ್ತಿದೆ. ಒಂದು ಸಮಾಧಾನ ಮೂಡುತ್ತಿದೆ. ನಮಗೆ ಬೇರೆ ಯಾವ ಸೊತ್ತು ಇಲ್ಲ. ಡಾಕ್ಟ್ರು ಮನೆ ಬಾಡಿಗೆ ವಿನಾಯಿತಿ ನೀಡಿದ ಕಾರಣ ಹೀಗಿದ್ದೇವೆ. ಇಬ್ಬರು ದೇವರಂತೆ ನಮಿಗೆ.’

ಶಾಂತಕ್ಕನ ಪತಿ ಬಾಲಕೃಷ್ಣ ಶೆಟ್ಟರು ಸೆಗಣಿ ತೆಗೆಯುವುದು ಇತ್ಯಾದಿ ಕೆಲಸದಲ್ಲಿ ಸಹಕರಿಸಿದರೆ ಉಳಿದ ಕರು ಲಕ್ಷ್ಮೀಯ ಉಸ್ತುವಾರಿ ಮಕ್ಕಳದ್ದು. ’ಸೆಖೆಗಾಲದಲ್ಲಿ ನಾವಿರುವ ಮಹಾಜನ ಕೌಂಪೌಂಡಿನ ಹುಲ್ಲು ಸಾಕಾಗುವುದಿಲ್ಲ. ಕಾಸರಗೊಡಿನ ನಗರದ ಬಸ್ ಸ್ಟ್ಯಾಂಡ್ ಸಮೀಪ ಕೋಟೆಕಣಿಯಿಂದ ಗೋಣಿಯಲ್ಲಿ ಹುಲ್ಲು ತುಂಬಿಸಿ ಬಸ್ಸಲ್ಲಿ ನಮ್ಮ ವಿದ್ಯಾನಗರಕ್ಕೆ ತರುತ್ತೇನೆ. ಬಸ್ಸಿನವರು ಪುಣ್ಯಕ್ಕೆ ಕಿರಿಕಿರಿ ಮಾಡುವುದಿಲ್ಲ. ಹತ್ತಿರದ ಮನೆಯವರಾದ ಡಾ ಆಶಕ್ಕ ಮೆಡಿಕಲ್ ಶಾಪಿನವರಾದ ಶೈಲಕ್ಕ,ನಮ್ಮ ಡಾಕ್ಟ್ರ ಮಡದಿ ಆರತಿಯಕ್ಕ ಅವರ ಮನೆಯ ಉಳಿಕೆ ಗಳನ್ನೂ ನೀಡುತ್ತಾರೆ ಹಾಗೆ ಸಾಕಲು ಕಷ್ಟ ಇಲ್ಲ .ಮಹಾಬಲಣ್ಣ ಅವರ ಕೌಂಪೌಂಡಿನಲ್ಲಿ ಹೆರೆದ ಹುಲ್ಲು ಗೌರಿಗಾಗಿ ನೀಡುತ್ತಾರೆ ’ಶಾಂತಕ್ಕ ಸಾಕುವಿಕೆಯ ವಿವರಣೆ ನೀಡಿದರು.

ಮಕ್ಕಳಿಗೋ ಕರು ಲಕ್ಷ್ಮೀ ಎಂದರೆ ಅಚ್ಚು ಮೆಚ್ಚು ಅದರ ಕುತ್ತಿಗೆ ಹಿಡಿದು ಆಡುವುದು .ಹಗ್ಗ ಹಿಡಿದು ಮೇಯಿಸುವುದು ಇಷ್ಟವಂತೆ. ಕರುವಿನ ಬ್ರೌನ್ ಬಣ್ಣ ಖುಷಿಯಂತೆ .. ಗೌರಿ ಕೊಮ್ಬಲ್ಲಿ ತಿವಿದರೆ ಅಂತ ಹೆದರಿಕೆಯಂತೆ.

ಶಾಂತಕ್ಕಳಿಗೆ ಕಾಸರಗೋಡಿನ ಗಿಡ್ಡ ತಳಿಯ ವೈಜ್ಞಾನಿಕ ಮೇಲ್ಮೆ ಅರಿಯದು. ಆದರೆ ಅವರ ತಿಳುವಳಿಕೆ, ಸಾಕಾಣಿಕೆ, ಗೋ ಪ್ರೀತಿಗೆ ಎಣೆ ಇಲ್ಲ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top